ಕೃಷಿ, ಕೈಗಾರಿಕೆ, ವಾಣಿಜ್ಯ, ಉದ್ಯಮದ ಅಭಿವೃದ್ಧಿ ದೃಷ್ಟಿಯಿಂದ ಮಹರಾಷ್ಟ್ರದ ವಿದರ್ಭ ಮಾದರಿಯಲ್ಲಿ ಹೂಡಿಕೆದಾರರನ್ನು ಆಕರ್ಷಿಸುವತ್ತ ಯೋಜನೆಗಳು ರೂಪಿಸುವ ಕೆಲಸಗಳಾಗಬೇಕಿದೆ.

ಹುಬ್ಬಳ್ಳಿ:

ಉತ್ತರ ಕರ್ನಾಟಕದ ಅಭಿವೃದ್ಧಿಗೆ ಕೈಗಾರಿಕೆ ಮತ್ತು ವಾಣಿಜ್ಯ ಕ್ಷೇತ್ರದಲ್ಲಿ ದೊಡ್ಡ ಗುರಿ ಹಾಗೂ ದೂರದೃಷ್ಟಿ ಅಗತ್ಯ ಎಂದು ಕಿರ್ಲೋಸ್ಕರ್‌ ಫೆರಸ್‌ ಇಂಡಸ್ಟ್ರೀಸ್‌ನ ವ್ಯವಸ್ಥಾಪಕ ನಿರ್ದೇಶಕ ರವೀಂದ್ರನಾಥ ಗುಮಾಸ್ತೆ ಹೇಳಿದರು.

ಇಲ್ಲಿನ ಜೆ.ಸಿ. ನಗರದ ಕರ್ನಾಟಕ ವಾಣಿಜ್ಯೋದ್ಯಮ ಸಂಸ್ಥೆಯ ಸಭಾಭವನದಲ್ಲಿ ಶನಿವಾರ ಹಮ್ಮಿಕೊಳ್ಳಲಾಗಿದ್ದ ಸಂಸ್ಥೆಯ 98ನೇ ಸಂಸ್ಥಾಪನ ದಿನಾಚರಣೆ ಹಾಗೂ ವಾಣಿಜ್ಯ ರತ್ನ ಪ್ರಶಸ್ತಿ ಪ್ರದಾನ ಸಮಾರಂಭದಲ್ಲಿ ಉಪನ್ಯಾಸಕರಾಗಿ ಪಾಲ್ಗೊಂಡು ಮಾತನಾಡಿದರು.

ಕೃಷಿ, ಕೈಗಾರಿಕೆ, ವಾಣಿಜ್ಯ, ಉದ್ಯಮದ ಅಭಿವೃದ್ಧಿ ದೃಷ್ಟಿಯಿಂದ ಮಹರಾಷ್ಟ್ರದ ವಿದರ್ಭ ಮಾದರಿಯಲ್ಲಿ ಹೂಡಿಕೆದಾರರನ್ನು ಆಕರ್ಷಿಸುವತ್ತ ಯೋಜನೆಗಳು ರೂಪಿಸುವ ಕೆಲಸಗಳಾಗಬೇಕಿದೆ. ಉತ್ತರ ಕರ್ನಾಟಕ ಎಲ್ಲ ಬಗೆಯ ಸಂಪನ್ಮೂಲ ಹೊಂದಿದ್ದರೂ, ಕೈಗಾರಿಕೆ, ವಾಣಿಜ್ಯ ಕ್ಷೇತ್ರದ ಬೆಳವಣಿಗೆ ಅಷ್ಟರಮಟ್ಟಿಗೆ ಆಗಿಲ್ಲ. ಈ ನಿಟ್ಟಿನಲ್ಲಿ ದೊಡ್ಡ ಗುರಿ ಮತ್ತು ದೂರದೃಷ್ಟಿಯೊಂದಿಗೆ ವಾಣಿಜ್ಯೋದ್ಯಮಿಗಳು, ಜನಪ್ರತಿನಿಧಿಗಳು ಪ್ರಯತ್ನಾಶೀಲರಾಗಿ ಮುನ್ನಡೆಯಬೇಕು ಎಂದು ಸಲಹೆ ನೀಡಿದರು.

ಕಾಲಕ್ಕೆ ತಕ್ಕಂತೆ ಬದಲಾಗಿ:

ಕಳೆದ 30-40 ವರ್ಷಗಳ ಹಿಂದೆ ಗ್ರಾಮೀಣ ಭಾಗದಲ್ಲಿ ಶೇ.70ರಷ್ಟು ಜನಸಂಖ್ಯೆ ಇತ್ತು. ಅದಕ್ಕೆ ತಕ್ಕಂತೆ ಕೃಷಿ ಅವಲಂಬನೆಯೊಂದಿಗೆ ಶೇ. 70ರಷ್ಟು ಆರ್ಥಿಕತೆಯೂ ಇತ್ತು. ಆದರೀಗ ಗ್ರಾಮೀಣ ಭಾಗದ ಜನಸಂಖ್ಯೆ ಶೇ. 60ರಷ್ಟಿದ್ದರೂ ಆರ್ಥಿಕತೆ ಮಾತ್ರ ಶೇ.20 ಕುಸಿತವಾಗಿದೆ. ಗ್ರಾಮೀಣ ಭಾಗವನ್ನು ಆರ್ಥಿಕವಾಗಿ ಸದೃಢಗೊಳಿಸುವ ಕೆಲಸ ಮಾಡಬೇಕಿದೆ. ಈ ಭಾಗದಲ್ಲಿ ಕೈಗಾರಿಕೆ, ಉತ್ಪಾದನಾ ವಲಯ ವಿಸ್ತರಣೆ ಆಗಬೇಕಿದೆ. ಈ ನಿಟ್ಟಿನಲ್ಲಿ ಗ್ರಾಮೀಣ ಭಾಗದ ನಿವಾಸಿಗಳು ಸಹ ಕಾಲಕ್ಕೆ ತಕ್ಕಂತೆ ಬದಲಾಗಿ ಆರ್ಥಿಕವಾಗಿ ಸದೃಢವಾಗಬೇಕು ಎಂದರು.

ಕಾರ್ಯಕ್ರಮ ಉದ್ಘಾಟಿಸಿದ ಶಾಸಕ ಮಹೇಶ ಟೆಂಗಿನಕಾಯಿ, ಕರ್ನಾಟಕ ವಾಣಿಜ್ಯೋದ್ಯಮ ಸಂಸ್ಥೆ (ಕೆಸಿಸಿಐ) ಕೇವಲ ವ್ಯಾಪಾರಿಗಳ ಸಂಘಟನೆಯಾಗಿಯೇ ಉಳಿಯದೆ, ಉದ್ಯಮ, ವ್ಯಾಪಾರ ಹಾಗೂ ಸಮಾಜದ ವಿವಿಧ ಕ್ಷೇತ್ರಗಳ ಬೆಳವಣಿಗೆಗೆ ಮಾರ್ಗದರ್ಶನ ನೀಡುತ್ತಿರುವ ರಾಜ್ಯದ ಮಾದರಿ ಸಂಸ್ಥೆಯಾಗಿದೆ. ಕನಿಷ್ಠ ವೇತನ ಸಂಬಂಧ ಕೈಗಾರಿಕೆಗಳಿಗೆ ಎದುರಾಗಿರುವ ಸಮಸ್ಯೆ ಕುರಿತು ಅಧಿವೇಶನದಲ್ಲಿ ಪ್ರಬಲವಾಗಿ ಪ್ರಶ್ನಿಸಿ ಕೈಗಾರಿಕೆಗಳ ಪರವಾಗಿ ಧ್ವನಿ ಎತ್ತುವುದಾಗಿ ಭರವಸೆ ನೀಡಿದರು.

ಸಂಸ್ಥಾಪಕ ದಿನಾಚರಣೆ ಸಮಿತಿ ಅಧ್ಯಕ್ಷ ಶಂಕರಣ್ಣ ಮುನವಳ್ಳಿ ಪ್ರಾಸ್ತಾವಿಕ ಮಾತನಾಡಿ, ಮುರಗಯ್ಯಸ್ವಾಮಿ ಜಂಗೀನ ಅವರ ಅತ್ಯಂತ ದೂರದೃಷ್ಟಿಯ ಫಲದಿಂದ ಕರ್ನಾಟಕ ವಾಣಿಜ್ಯೋದ್ಯಮ ಸಂಸ್ಥೆ ಸ್ಥಾಪನೆಗೊಂಡಿದೆ. 2000ರಲ್ಲಿ ತಾವು ಅಧ್ಯಕ್ಷರಾಗಿದ್ದ ವೇಳೆಯಿಂದ ಸಂಸ್ಥೆಯ ಸಂಸ್ಥಾಪಕರ ದಿನಾಚರಣೆ ಹಾಗೂ `ವಾಣಿಜ್ಯ ರತ್ನ'''''''''''''''' ಪ್ರಶಸ್ತಿಯ ಪ್ರದಾನ ಮಾಡಿ ಗೌರವಿಸಲಾಗುತ್ತಿದೆ ಎಂದರು.

ಕೆಸಿಸಿಐ ಅಧ್ಯಕ್ಷ ಜಿ.ಕೆ. ಆದಪ್ಪಗೌಡರ, ಉಪಾಧ್ಯಕ್ಷ ವೀರಣ್ಣ ಕಲ್ಲೂರ, ಸಂಸ್ಥೆ ಮಾಜಿ ಅಧ್ಯಕ್ಷರಾದ ವಿ.ಪಿ. ಲಿಂಗನಗೌಡರ, ಸಿ.ಬಿ. ಪಾಟೀಲ, ಎಂ.ಸಿ. ಹಿರೇಮಠ, ವಸಂತ ಲದವಾ, ರಮೇಶ ಪಾಟೀಲ, ಮಹೇಂದ್ರ ಲದ್ದಡ, ವಿನಯ ಜವಳಿ, ಎಸ್‌.ಪಿ. ಸಂಶಿಮಠ, ಗೌರವ ಕಾರ್ಯದರ್ಶಿ ಉದಯ ರೇವಣಕರ ಸೇರಿದಂತೆ ಹಲವರಿದ್ದರು.

6 ಜನರಿಗೆ ವಾಣಿಜ್ಯ ರತ್ನ ಪ್ರಶಸ್ತಿ ಪ್ರದಾನ:

ಕಾರ್ಯಕ್ರಮದಲ್ಲಿ ವಾಣಿಜ್ಯ, ಉದ್ದಿಮೆ ಕ್ಷೇತ್ರದಲ್ಲಿ ಗಣನೀಯ ಸಾಧನೆಗೈದ ಹುಬ್ಬಳ್ಳಿಯ ಗೋವಿಂದ ಜೋಶಿ, ಬ್ಯಾಡಗಿಯ ರಾಜಶೇಖರ ಎಸ್‌. ಮಾಗನೂರ, ನಂದಿಕೇಶ್ವರದ ಎಂ.ಬಿ. ಹಂಗರಗಿ, ಹುಬ್ಬಳ್ಳಿಯ ಶಾಂತಿಲಾಲ ಓಸ್ತವಾಲ, ಕಾಂತಿಲಾಲ ಎಂ. ಪುರೋಹಿತ, ಸವಣೂರನ ಸುಮಂತ ಆರ್‌. ಸಿಂಧೂರ ಅವರಿಗೆ "ವಾಣಿಜ್ಯ ರತ್ನ " ಪ್ರಶಸ್ತಿ ಪ್ರದಾನ ಮಾಡಲಾಯಿತು.