ಕನ್ನಡಪ್ರಭ ವಾರ್ತೆ ಬಾದಾಮಿ
ಕನ್ನಡ ಭಾಷೆ ಕಲಿಕೆಗೆ ಕಠಿಣವಾದ ಭಾಷೆ. ಈ ಭಾಷೆಯಲ್ಲಿ ವಿದ್ಯಾರ್ಥಿಗಳು ಸಾಧನೆ ಮಾಡಿದ್ದಾರೆ. ನೂರಕ್ಕೆ ನೂರು ಸಾಧನೆ ಮಾಡುವುದು ಬಹಳ ಕಠಿಣವಾದ ಕೆಲಸ. ಆ ಕೆಲಸ ಮಾಡಲು ಗುರುಗಳು ಅವಿರತವಾಗಿ ಮಾರ್ಗದರ್ಶನ ಮಾಡಿದ್ದನ್ನು ಸ್ಮರಿಸಬೇಕಿದೆ ಎಂದು ಉಪನ್ಯಾಸಕ ಎಸ್.ಎಸ್. ಮೂಲಿಮನಿ ಹೇಳಿದರು.ಸೋಮವಾರ ಪಟ್ಟಣದ ಜಯನಗರದ ತಾಲೂಕು ಕನ್ನಡ ಸಾಹಿತ್ಯ ಭವನದಲ್ಲಿ ತಾಲೂಕು ಕಸಾಪ ಹಮ್ಮಿಕೊಂಡಿದ್ದ ಎಸ್.ಎಸ್.ಎಲ್.ಸಿ. ಪರೀಕ್ಷೆಯಲ್ಲಿ ಮಾತೃಭಾಷೆಯಲ್ಲಿ 125ಕ್ಕೆ 125 ಅಂಕ ಪಡೆದ ಪ್ರತಿಭಾವಂತ ವಿದ್ಯಾರ್ಥಿಗಳು ಮತ್ತು ಕನ್ನಡ ಭಾಷಾ ಶಿಕ್ಷಕರಿಗೆ ಸನ್ಮಾನ ಕಾರ್ಯಕ್ರಮ ಉದ್ಘಾಟಿಸಿ ಮಾತನಾಡಿದರು. ಸಾಧನೆ ಮಾಡಿರುವ ವಿದ್ಯಾರ್ಥಿಗಳ ಹಾಗೂ ಗುರುಗಳನ್ನು ಅಭಿನಂದಿಸಿದ್ದಕ್ಕಾಗಿ ತಾಲೂಕು ಕನ್ನಡ ಸಾಹಿತ್ಯ ಪರಿಷತ್ ತಾಲೂಕು ಘಟಕದ ಕಾರ್ಯವನ್ನು ಶ್ಲಾಘಿಸಿದರು.
ಕಸಾಪ ಪದಾಧಿಕಾರಿ ಶಿವಾನಂದ ಪೂಜಾರ ಮಾತನಾಡಿ, ಕನ್ನಡ ವಿಷಯದ ಬಗ್ಗೆ ಮಾತನಾಡಿದಷ್ಟು ಮಾನಸಿಕ ನೆಮ್ಮದಿ, ಸಂತಸ ಸಿಗುತ್ತದೆ. ಕಸ್ತೂರಿ ಕನ್ನಡದ ಕಂಪನ್ನು ಕನ್ನಡ ಸಾಹಿತ್ಯ ಪರಿಷತ್ತು ಹರಡುತ್ತಿದೆ ಎಂದು ಹೇಳಿದರು.ವಿಶೇಷ ಉಪನ್ಯಾಸ ನೀಡಿದ ಉಪನ್ಯಾಸಕ ವಿ.ಬಿ. ಸಣ್ಣಸಕ್ಕರಗೌಡರ, ಮನೆಯಲ್ಲಿ ಎಲ್ಲರೂ ಕನ್ನಡ ಬಳಸುತ್ತ ಮಾತೃಭಾಷೆಯ ಪ್ರೇಮವನ್ನು ಬೆಳೆಸಿಕೊಳ್ಳಬೇಕಿದೆ ಎಂದು ಅವರು, ಮಾತೃಭಾಷೆಯಾದ ಕನ್ನಡ ಅತ್ಯಂತ ಹಳೆಯ ಭಾಷೆ. ಈ ಭಾಷೆಗೆ ದೀರ್ಘಕಾಲದ ಇತಿಹಾಸವಿದೆ ಎಂದು ಹೇಳಿದರು.
ಸಾನ್ನಿಧ್ಯ ವಹಿಸಿದ್ದ ನವಗೃಹ ಹಿರೇಮಠದ ಶಿವಪೂಜಾ ಶಿವಾಚಾರ್ಯ ಸ್ವಾಮೀಜಿ ಮಾತನಾಡಿ, ಮಕ್ಕಳ ಪ್ರತಿಭೆ ಇದೇ ರೀತಿ ಬೆಳಗಲಿ ಕನ್ನಡ ಭಾಷೆ ಉಳಿಸಲಿ. ಕನ್ನಡ ಸಾಹಿತ್ಯ ಪರಿಷತ್ತು ಇದೇ ರೀತಿ ಇನ್ನಷ್ಟು ಕೆಲಸ ಮಾಡಲೆಂದು ಹಾರೈಸಿದರು. ನೂರಕ್ಕೆ ನೂರು ಸಾಧನೆ ಮಾಡಿದ ಎಲ್ಲ ವಿದ್ಯಾರ್ಥಿಗಳು ಹಾಗೂ ಸಾಧನೆಗೆ ಪ್ರೇರಣೆಯಾದ ಗುರುಗಳಿಗೆ ಕನ್ನಡ ಸಾಹಿತ್ಯ ಪರಿಷತ್ ವತಿಯಿಂದ ಸನ್ಮಾನಿಸಲಾಯಿತು. ವೇದಿಕೆ ಮೇಲೆ ತಾಲೂಕು ಕಸಾಪ ಅಧ್ಯಕ್ಷ ಬಿ.ಎಫ್. ಹೊರಕೇರಿ, ಗೌರವ ಕಾರ್ಯದರ್ಶಿ ಆರ್.ಎಂ. ಸಾರವಾಡ, ವಿ.ಎಸ್. ಶೆಟ್ಟರ ಉಪಸ್ಥಿತರಿದ್ದರು. ಕನ್ನಡ ಸಾಹಿತ್ಯ ಪರಿಷತ್ತಿನ ತಾಲೂಕು ಘಟಕಕ್ಕೆ ಕುಮಾರ ಪವಾಡಶೆಟ್ಟಿ ಹಾಗೂ ಶಿವಾನಂದ ಪೂಜಾರ ಅವರನ್ನು ಪುಷ್ಪ ಕೊಡುವುದರ ಮೂಲಕ ಸ್ವಾಗತಿಸಲಾಯಿತು. ಕಾರ್ಯಕ್ರಮದಲ್ಲಿ ಪಿ.ಎನ್. ಚಳಗೇರಿ, ಡಿ.ಬಿ. ಹಡಗಲಿ, ಅನಸೂಯ ಯಲಿಗಾರ, ಪಿ.ಟಿ. ನಿಲಗುಂದ, ಬಿ.ಎಸ್. ಅಬ್ಬಿಗೇರಿ, ಗಂಗಾಧರ ತಳವಾರ, ಶಿವಾನಂದ ಪೂಜಾರ ಇತರರು ಉಪಸ್ಥಿತರಿದ್ದರು. ತಾಲೂಕು ಕಸಾಪ ಅಧ್ಯಕ್ಷ ಬಿ.ಎಫ್. ಹೊರಕೇರಿ ಸ್ವಾಗತಿಸಿದರು. ಶಂಕ್ರಮ್ಮ ಕುಬಸದ ನಿರೂಪಿಸಿದರು. ಕುಮಾರ ಪವಾಡಶೆಟ್ಟಿ ವಂದಿಸಿದರು.