ಆ್ಯಸಿಡ್‌ ಪೈಪ್‌ ಸ್ಫೋಟ : ಕಣ್ಣಿಗೆ ಗಂಭೀರ ಗಾಯ !

KannadaprabhaNewsNetwork |  
Published : Jul 11, 2025, 11:48 PM IST
ಹೈಡ್ರೋಕ್ಲೋರಿಕ್‌ ಆ್ಯಸಿಡ್‌ ಸಿಡಿದು ಗಾಯಗೊಂಡ ಕಾರ್ಮಿಕ | Kannada Prabha

ಸಾರಾಂಶ

ಕಡೇಚೂರು ಬಾಡಿಯಾಳ ಕೈಗಾರಿಕಾ ಪ್ರದೇಶದಲ್ಲಿನ ಕೆಮಿಕಲ್‌ ಕಂಪನಿಗಳಲ್ಲಿ ಅವಘಡಗಳ ಪಟ್ಟಿಯಲ್ಲಿ ಮತ್ತೊಂದು ಸೇರ್ಪಡೆಯಾದಂತಿದೆ. ಇಲ್ಲಿನ ಕಾರ್ಖಾನೆಯೊಂದರಲ್ಲಿ ನಿರ್ವಹಣೆ ವಿಭಾಗದ ಸಿಬ್ಬಂದಿಯೊಬ್ಬರಿಗೆ ಹೈಡ್ರೋಕ್ಲೋರಿಕ್‌ ಆ್ಯಸಿಡ್‌ ಪೈಪ್‌ ಸಿಡಿದು ಎರಡೂ ಕಣ್ಣುಗಳಿಗೆ ಗಂಭೀರ ಗಾಯಗಳಾಗಿರುವ ಘಟನೆ ಶುಕ್ರವಾರ ಮಧ್ಯಾಹ್ನ ಸುಮಾರಿಗೆ ನಡೆದಿದೆ.

- ಕನ್ನಡಪ್ರಭ ಮುಂದುವರೆದ ಸರಣಿ ಭಾಗ : 95

ಕನ್ನಡಪ್ರಭ ವಾರ್ತೆ ಯಾದಗಿರಿ/ಸೈದಾಪುರ

ಕಡೇಚೂರು ಬಾಡಿಯಾಳ ಕೈಗಾರಿಕಾ ಪ್ರದೇಶದಲ್ಲಿನ ಕೆಮಿಕಲ್‌ ಕಂಪನಿಗಳಲ್ಲಿ ಅವಘಡಗಳ ಪಟ್ಟಿಯಲ್ಲಿ ಮತ್ತೊಂದು ಸೇರ್ಪಡೆಯಾದಂತಿದೆ. ಇಲ್ಲಿನ ಕಾರ್ಖಾನೆಯೊಂದರಲ್ಲಿ ನಿರ್ವಹಣೆ ವಿಭಾಗದ ಸಿಬ್ಬಂದಿಯೊಬ್ಬರಿಗೆ ಹೈಡ್ರೋಕ್ಲೋರಿಕ್‌ ಆ್ಯಸಿಡ್‌ ಪೈಪ್‌ ಸಿಡಿದು ಎರಡೂ ಕಣ್ಣುಗಳಿಗೆ ಗಂಭೀರ ಗಾಯಗಳಾಗಿರುವ ಘಟನೆ ಶುಕ್ರವಾರ ಮಧ್ಯಾಹ್ನ ಸುಮಾರಿಗೆ ನಡೆದಿದೆ.

ಕೈಗಾರಿಕಾ ಪ್ರದೇಶದಲ್ಲಿನ ಶ್ರೇಯಾಕಾನ್‌ ಕೆಮಿಕಲ್ಸ್‌ ಪ್ರೈ. ಲಿ., ಎಂಬ ಕಂಪನಿಯಲ್ಲಿ ನಿರ್ವಹಣಾ ವಿಭಾಗದ ಸಿಬ್ಬಂದಿ, 38 ವರ್ಷದ ಶ್ರೀಕಾಂತ, ಶುಕ್ರವಾರ ಕರ್ತವ್ಯ ನಿರ್ವಹಿಸುತ್ತಿರುವ ವೇಳೆ ಏಕಾಏಕಿ ಹೈಡ್ರೋಕ್ಲೋರಿಕ್ ಆ್ಯಸಿಡ್‌ ಸರಬರಾಜಾಗುವ ಪೈಪ್‌ ಸಿಡಿದು, ಕಣ್ಣುಗಳಿಗೆ ರಾಸಾಯನಿಕ ಸಿಡಿದು ಗಾಯಗೊಂಡಿದ್ದಾರೆ. ಕೂಡಲೇ ಅವರನ್ನು ಸೈದಾಪುರದ ಸಮುದಾಯದ ಆರೋಗ್ಯ ಕೇಂದ್ರದಲ್ಲಿ ಕರೆತಂದು ಪ್ರಾಥಮಿಕ ಚಿಕಿತ್ಸೆ ನೀಡಿದ ವೈದ್ಯರು, ರಾಯಚೂರು ರಿಮ್ಸ್‌ ಗೆ ಶಿಫಾರಸ್ಸು ಮಾಡಿದ್ದಾರೆ. ಕಳೆದ ಒಂದೂವರೆ ವರ್ಷದಿಂದ ಈ ಕಂಪನಿಯಲ್ಲಿ ಕೆಲಸ ಮಾಡುತ್ತಿದ್ದ ಶ್ರೀಕಾಂತ, ಯಾವುದೇ ಸುರಕ್ಷತಾ ಸಲಕರಣೆಗಳನ್ನು ಧರಿಸಿದ್ದಿಲ್ಲ ಎನ್ನಲಾಗಿದೆ. ಯಾದಗಿರಿಯಲ್ಲಿ ಖಾಸಗಿ ಆಸ್ಪತ್ರೆಗೆ ಕರೆತಂದು, ಚಿಕಿತ್ಸೆ ಕೊಡಿಸಲಾಗುತ್ತಿದೆ ಎಂದು ಹೇಳಲಾಗಿದೆ.

ಕಡೇಚೂರು ಬಾಡಿಯಾಳ ಕೈಗಾರಿಕಾ ಪ್ರದೇಶದಲ್ಲಿನ ಕೆಮಿಕಲ್‌ ಕಂಪನಿಗಳಲ್ಲಿ ಕಾರ್ಮಿಕರ ಜೀವಕ್ಕೆ ಬೆಲೆ ಇಲ್ಲ, ಯಾವುದೇ ರಕ್ಷಣಾ ವ್ಯವಸ್ಥೆಗಳನ್ನು ನೀಡುವುದಿಲ್ಲ, ಅಪಾಯಕಾರಿ ರಾಸಾಯನಿಕ -ತ್ಯಾಜ್ಯ ಸಾಗಿಸುವ ವೇಳೆ ಕೆಲವೊಮ್ಮೆ ಅವಘಡಗಳು ಸಂಭವಿಸಿದ್ದಿವೆಯಾದರೂ, ಬೆಳಕಿಗೆ ಬರುವುದು ವಿರಳ. ಇಂತಹ ಘಟನೆಗಳು ಸಂಭವಿಸಿದ್ದಾಗ, ಪ್ರಕರಣ ಬಯಲಿಗೆ ಬರಬಾರದು ಎಂಬ ಕಾರಣಕ್ಕೆ ಅನೇಕ ಕಾರ್ಖಾನೆಗಳು ತೆಲಂಗಾಣದ ಮೆಹಬೂಬ್‌ ನಗರ ಹಾಗೂ ಮಕ್ತಾಲ್‌ ನಗರಕ್ಕೆ ಕಳುಹಿಸಿ, ತಮಗೆ ಪರಿಚಿತ ವೈದ್ಯರುಗಳ ಬಳಿ ಕಳುಹಿಸುತ್ತಾರೆ. ಇಂತಹ ಅಪಾಯಕಾರಿ ಪ್ರದೇಶಗಳಲ್ಲಿನ ಕೈಗಾರಿಕೆಗಳಲ್ಲಿ ಈ ರೀತಿಯ ಪ್ರಕರಣಗಳನ್ನು ಸಹಜ ಎಂದೆನ್ನುವ ಕೆಲವು ಕಂಪನಿಗಳು, ವಾಸ್ತವಾಂಶ ಬಯಲಾಗದಂತೆ ನೋಡಿಕೊಳ್ಳುತ್ತಾರೆ. ಕಾರ್ಮಿಕರನ್ನು ಕರೆತರುವ ಸ್ಥಳೀಯ ಮಧ್ಯವರ್ತಿಗಳು ಹಾಗೂ ಕೆಲ ಅಧಿಕಾರಿಗಳು ಶಾಮೀಲಾಗಿರುವುದರಿಂದ ಎಷ್ಟೋ ಪ್ರಕರಣಗಳು ದೂರು ದಾಖಲಾಗುವುದಿಲ್ಲ. ಕಂಪನಿ ವಿರುದ್ಧ ದೂರದಂತೆ ನೊಂದ ಅಥವಾ ಸಂತ್ರಸ್ತರ ಕುಟುಂಬಕ್ಕೆ ಒತ್ತಡ ಹೇರುತ್ತಾರೆ.

ತಿಂಗಳ ಹಿಂದೆ, ಇಲ್ಲಿನ ಕಂಪನಿಯೊಂದರಲ್ಲಿ ಅಪಾಯಕಾರಿ ರಾಸಾಯನಿಕ ತಗುಲಿ ಕೈಕಾಲುಗಳ ಸುಟ್ಟು ಐವರು ಗಾಯಗೊಂಡಿದ್ದರು. ಇದರಲ್ಲಿ ಓರ್ವ ಕಿಶೋರ ಕಾರ್ಮಿಕ ಇದ್ದ ಅನ್ನೋದು ನಂತರದಲ್ಲಿ ಪತ್ತೆಯಾಗಿ, ಬಾಲಕಾರ್ಮಿಕ ಇಲಾಖೆ ದೂರು ದಾಖಲಿಸಿತ್ತು. ಅಚ್ಚರಿ ಎಂದರೆ, ಇಂತಹ ಪ್ರಕರಣಗಳಲ್ಲಿ ದೂರು ದಾಖಲಿಸುವಲ್ಲಿ ಮುಂದಾಗಬೇಕಾದ ಪೊಲೀಸರು, "ಹೀಗೆಲ್ಲಾ ದೂರು ಕೊಟ್ಟರೆ ಎಲ್ಲಾ ಕಂಪನಿಗಳು ಬಂದ್ ಮಾಡ್ಕೊಂಡು ಹೋಗ್ತವೆ.. " ಎಂದು ದೂರು ನೀಡಲು ಬಂದವರ ಮೇಲೆಯೇ ಗುರಾಯಿಸಿದ್ದರಂತೆ.

ಕಾರ್ಮಿಕರ ಇರುವಿಕೆ, ಸ್ಥಿತಿಗತಿ ಬಗ್ಗೆ ಕಾರ್ಮಿಕ ಇಲಾಖೆಯೂ ಮೌನಕ್ಕೆ ಶರಣಾದಂತಿದೆ. ಅನೇಕ ಪ್ರಕರಣಗಳು ಇಂತಹವರ ಮಧ್ಯಸ್ಥಿಕೆಯಿಂದಲೇ ಬೆಳಕಿಗೆ ಬಾರದೆ, ಹಳ್ಳ ಹಿಡಿದು, ಕಾರ್ಮಿಕರ ಬದುಕ ಹೀನಾಯಗೊಳಿಸಿವೆ. ಇಂತಹ ಕಂಪನಿಗಳಿಗೆ ವಿವಿಧ ರೀತಿಯ ಸಾಮಾನು ಸರಂಜಾಮುಗಳನ್ನು ಮಾರಾಟ ಮಾಡುವ ಇಲ್ಲಿನ ಸಣ್ಣಪುಟ್ಟ ಇಂಡಸ್ಟ್ರಿಗಳು, ವಿವಿಧ ಇಲಾಖೆಗಳ ಅಧಿಕಾರಿಗಳ ಬಂಧು ಬಳಗದವರದ್ದೇ ಆಗಿರುತ್ತಾವಾದ್ದರಿಂದ, ದೊಡ್ಡ ಕಂಪನಿಗಳ ವಿರುದ್ಧ ದನಿಯೆತ್ತಿದರೆ ತಮ್ಮ ಅಂಗಡಿ ವ್ಯಾಪಾರ ಬಂದ್ ಆಗುವ ಭೀತಿಯಿಂದ ಅಪಾಯಕಾರಿ ಘಟನೆಗಳು ಆಗಿಯೇ ಇಲ್ಲ ಎಂಬಂತೆ ನೋಡಿಕೊಳ್ಳುತ್ತಾರೆ.

ವಿಷಕಾರಿ ಗಾಳಿ ಹಾಗೂ ತ್ಯಾಜ್ಯ ದುರ್ನಾತದಿಂದ ಈ ಪ್ರದೇಶದ ಸುತ್ತಮುತ್ತಲ ವ್ಯಾಪ್ತಿಯ ಹದಿನೈದಕ್ಕೂ ಹೆಚ್ಚು ಹಳ್ಳಿಗಳಲ್ಲಿನ ಜನರ ಆರೋಗ್ಯದ ಮೇಲೆ ಅಡ್ಡ ಪರಿಣಾಮಗಳು, ಪರಿಸರ ಹಾಗೂ ಜಲಮೂಲಕ್ಕೆ ಹಾನಿಯ ಬಗ್ಗೆ ಆತಂಕ ಒಂದೆಡೆಯಾದರೆ, ಅಪಾಯಕಾರಿ ಕಾರ್ಖಾನೆಗಳಲ್ಲಿ ಕೆಲಸ ಮಾಡುತ್ತಿರುವ ಕಾರ್ಮಿಕರ ಬದುಕಿನ ಬಗ್ಗೆಯೂ ಆತಂಕ ಮೂಡಿಸಿದೆ. ಕಾರ್ಮಿಕರ ಕಲ್ಯಾಣಕ್ಕೆ ಕ್ರಮ ಕೈಗೊಳ್ಳಬೇಕಾದ ಇಲಾಖೆ ಮಲಗಿದಂತೆ ನಟಿಸುತ್ತಿದೆ, ಎಬ್ಬಿಸುವುದು ಕಷ್ಟ ಅಂತಾರೆ ಇಲ್ಲಿನ ಜನರು...

PREV

Recommended Stories

ಪ್ರೇಮದ ಇನ್ನೊಂದು ಹೆಸರೇ ಅಮೃತಾ ಪ್ರೀತಮ್
ಹೋಬೋ ಸೆಕ್ಷುಯಾಲಿಟಿ : ಒಂದು ಹಗುರ ಸಂಬಂಧದ ಕಥೆ!