ಎಕರೆಗಟ್ಟಲೆ ಕೃಷಿ ಭೂಮಿ ನಾಶ<bha>;</bha> ತುಂಬೆ ವೆಂಟೆಡ್ ಡ್ಯಾಂಗೆ ರೈತರ ಮುತ್ತಿಗೆ

KannadaprabhaNewsNetwork | Updated : Dec 27 2023, 01:32 AM IST

ಸಾರಾಂಶ

ತುಂಬೆ ವೆಂಟೆಡ್‌ ಡ್ಯಾಂನಿಂದ ನೀರು ಹರಿದು ಸುತ್ತಲಿನ ಎಕ್ರೆಗಟ್ಟಲೆ ಕೃಷಿ ಭೂಮಿಗೆ ಹಾನಿಯಾಗಿದ್ದು, ಇದನ್ನು ವಿರೋಧಿಸಿ ಹಾಗೂ ಸೂಕ್ತ ಪರಿಹಾರಕ್ಕೆ ಆಗ್ರಹಿಸಿ ರೈತರು ಹಾಗೂ ರೈತ ಸಂಘಟನೆ ಡ್ಯಾಂಗೆ ಮುತ್ತಿಗೆ ಹಾಕಿತು.

ಕನ್ನಡಪ್ರಭ ವಾರ್ತೆ ಬಂಟ್ವಾಳ

ತುಂಬೆ ವೆಂಟೆಡ್ ಡ್ಯಾಂನಿಂದ ನೀರು ಹರಿದು ಬರುವ ರಭಸಕ್ಕೆ ಕೆಳಭಾಗದ ಬಲ ಪಾರ್ಶ್ವದಲ್ಲಿರುವ ಎಕರೆಗಟ್ಟಲೆ ಕೃಷಿ ಭೂಮಿ ಕೊಚ್ಚಿ ಹೋಗಿ ರೈತರು ನಷ್ಟ ಅನುಭವಿಸಿದ್ದು ಸಂತ್ತಸ್ತರಿಗೆ ಸೂಕ್ತ ಪರಿಹಾರ ಹಾಗೂ ಪರ್ಯಾಯ ವ್ಯವಸ್ಥೆ ಒದಗಿಸಿಕೊಡುವಂತೆ ಆಗ್ರಹಿಸಿ ರೈತ ಸಂಘ ಹಸಿರು ಸೇನೆಯ ಜಿಲ್ಲಾಧ್ಯಕ್ಷ ಶ್ರೀಧರ ಶೆಟ್ಟಿ ನೇತೃತ್ವದಲ್ಲಿ ರೈತರು ಮಂಗಳವಾರ ತುಂಬೆ ವೆಂಟೆಡ್ ಡ್ಯಾಂಗೆ ಮುತ್ತಿಗೆ ಹಾಕಿದರು.

ಡ್ಯಾಂನ ಹತ್ತಿರವಿರುವ ನೀರು ಪೂರೈಕಾ ಕಚೇರಿಗೆ ಸಂತ್ರಸ್ತ ಆಕ್ರೋಶಿತ ರೈತರು ಬೀಗ ಜಡಿಯಲು ಮುಂದಾದಾಗ ಪೊಲೀಸರು ಹಾಗೂ ರೈತರ ನಡುವೆ ವಾಗ್ವಾದ, ತಳ್ಳಾಟದ ಹೈಡ್ರಾಮ ನಡೆಯಿತು.

ಡ್ಯಾಂನ ನೀರು ಸರಬರಾಜು ಸ್ಥಾವರಕ್ಕೆ ಬೀಗ ಜಡಿಯಲು ಮುಂದಾಗುತ್ತಿದ್ದಂತೆಯೇ ಪೊಲೀಸರು ಅರ್ಧದಲ್ಲೇ ಪ್ರತಿಭಟನಕಾರರನ್ನು ತಡೆದ ಪರಿಣಾಮ ತಳ್ಳಾಟ ಉಂಟಾಗಿ ಡ್ಯಾಂನವರೇ ಗೇಟಿಗೆ ಬೀಗ ಹಾಕಿ ರೈತರು ಒಳಪ್ರವೇಶಿಸದಂತೆ ತಡೆದರು. ಮಂಗಳೂರು ಮಹಾನಗರ ಪಾಲಿಕೆಯ ಆಯುಕ್ತರು ಸ್ಥಳಕ್ಕೆ ಬಂದು ಸಂತ್ರಸ್ತರ ಬೇಡಿಕೆಯನ್ನು ಪರಿಹರಿಸದೆ ಸ್ಥಳದಿಂದ ಕದಲುವುದಿಲ್ಲ ಎಂದು ಪಟ್ಟು ಹಿಡಿದ ರೈತರು ಸ್ಥಳದಲ್ಲೇ ದೊಡ್ಡ ಪಾತ್ರೆಗಳನ್ನು ಇಟ್ಟು, ಬೆಂಕಿ ಹಾಕಿ ಅಡುಗೆ ತಯಾರಿಸಲು ಆರಂಭಿಸಿದರು.

ಸ್ಥಳಕ್ಕೆ ಮನಪಾ ಎಜಿನಿಯರ್ ನರೇಶ್ ಶಣೈ, ಬಂಟ್ವಾಳ ತಹಸೀಲ್ದಾರ್ ಎಸ್ ಬಿ. ಕೂಡಲಗಿ, ಉಪತಹಸೀಲ್ದಾರ್ ದಿವಾಕರ ಮುಗುಳಿ, ಮನಪಾ ಸಹಾಯಕ ಎಜಿನಿಯರ್ ಅಶ್ವಿನ್ ಮತ್ತಿತರರು ಭೇಟಿ ನೀಡಿ ರೈತರ ಮನವೊಲಿಸುವ ಪ್ರಯತ್ನ ನಡೆಸಿದರೂ ಜಗ್ಗದೆ ಪ್ರತಿಭಟನೆ ಮುಂದುವರಿಸಿದರು.

ರೈತ ಸಂಘದ ರಾಜ್ಯ ಪ್ರಧಾನ ಕಾರ್ಯದರ್ಶಿ ಮನೋಹರ ಶೆಟ್ಟಿ ನಡಿಕಂಬಳ ಗುತ್ತು, ಜಿಲ್ಲಾಧ್ಯಕ್ಷ ಶ್ರೀಧರ ಶೆಟ್ಟಿ ಬೈಲುಗುತ್ತು, ತಾಲೂಕು ಸಮಿತಿ ಅಧ್ಯಕ್ಷ ಸುಬ್ರಮಣ್ಯ ಭಟ್ ಮಂಜಿನಡ್ಕ, ಎನ್. ಇದಿನಬ್ಬ, ಜಿಲ್ಲಾ ಸಂಚಾಲಕ ದಯಾನಂದ ಶೆಟ್ಟಿ ಕುಳವೂರುಗುತ್ತು ಪ್ರತಿಭಟನಕಾರರನ್ನು ಉದ್ದೇಶಿಸಿ ಮಾತನಾಡಿ, ಮಂಗಳೂರು ಮಹಾನಗರ ನಗರ ಪಾಲಿಕೆ ನಿರ್ಲಕ್ಷದಿಂದ ರೈತರ ಎಕರೆಗಟ್ಟಲೆ ಜಮೀನು ನೀರಿಗೆ ಕೊಚ್ಚಿ ಹೋಗಿ ರೈತರ ನಷ್ಟ ಅನುಭವಿಸಿದ್ದು ನಷ್ಟ ಪರಿಹಾರ ಹಾಗೂ ಪರ್ಯಾಯ ವ್ಯವಸ್ಥೆ ಒದಗಿಸುವಂತೆ ಅನೇಕ ಭಾರಿ ಮನವಿ ಸಲ್ಲಿಸಿದರೂ ಸ್ಪಂದನೆ ನೀಡಿಲ್ಲ. ಇಲ್ಲಿನ ರೈತರ ಜ್ವಲಂತ ಸಮಸ್ಯೆಗೆ ಜನಪ್ರತಿನಿಧಿಗಳು ಅಧಿಕಾರಿಗಳು ಕರುಣೆ ತೋರಿಲ್ಲ ಎಂದು ಆರೋಪಿಸಿದರು.

ರೈತ ಸಂಘದ ಪ್ರಮುಖರಾದ ಮುರುವ ಮಹಾಬಲ ಭಟ್, ಸುದೇಶ್ ಮಯ್ಯ, ಭಾಸ್ಕರ, ದಿಲೀಪ್ ರೈ, ಮೊಯ್ದಿನಬ್ಬ, ಆಮ್ ಆದ್ಮಿ ಪಕ್ಷದ ಜಿಲ್ಲಾಧ್ಯಕ್ಷ ವಿಷುಕುಮಾರ್, ಕಾರ್ಯದರ್ಶಿ ಜನಾರ್ದನ ಬಂಗೇರ, ಮೊದಲಾದವರು ನೇತೃತ್ವದ ವಹಿಸಿದ್ದರು.

ಸ್ಥಳಕ್ಕೆ ಮನಪಾ ಆಯುಕ್ತ ಭೇಟಿ: ಪ್ರತಿಭಟನಾ ಸ್ಥಳಕ್ಕೆ ಮಂಗಳೂರು ಮನಪಾ ಆಯುಕ್ತ ಆನಂದ ಸಿ.ಎಲ್. ಭೇಟಿ ನೀಡಿ ಸಂತ್ರಸ್ತ ರೈತರ ಅಹವಾಲು ಆಲಿಸಿದರು. ತುಂಬೆಯ ಡ್ಯಾಂ ಬಳಿ ಶಾಶ್ವತ ತಡೆಗೋಡೆ ನಿರ್ಮಾಣ, ತುಂಬೆಯ ನೀರು ಶುದ್ಧೀಕರಣ ಘಟಕದಿಂದ ಹೊರಹೊಮ್ಮವ ಕೊಳಚೆ ನೀರಿನ ಹೂಳು ತುಂಬಿಕೊಂಡು ತೋಡು ಮುಚ್ಚಿಹೋಗಿರುವುದು, ರೈತರಿಗೆ ಮಾಹಿತಿ ನೀಡದೆ ೭ ಮೀಟರ್ ನೀರು ನಿಲ್ಲಿಸಿರುವುದು, ಒರತೆ ಪ್ರದೇಶಕ್ಕೂ ಪರಿಹಾರ ನೀಡಬೇಕು ಹಾಗೂ ಬೇಸಿಗೆಯಲ್ಲಿ ರೈತರಿಗೆ ಮಾಹಿತಿ ನೀಡದೆ ಪಂಪ್‌ಸೆಟ್‌ನ ವಿದ್ಯುತ್ ಸಂಪರ್ಕ ಕಡಿತಗೊಳಿಸುವ ಬಗ್ಗೆ ದೂರಿಕೊಂಡರು.

ರೈತರ ಸಮಸ್ಯೆಗೆ ಸ್ಪಂದಿಸಿದ ಆಯುಕ್ತರು ತಡೆಗೋಡೆ ನಿರ್ಮಾಣಕ್ಕೆ ಹಣ ಮೀಸಲಿಟಿದ್ದು ಕಾಮಗಾರಿಗೆ ಟೆಂಡರ್ ಕರೆಯಲಾಗಿದೆ. ಈ ವಾರದಿಂದಲೇ ಕಾಮಗಾರಿ ಆರಂಭಗೊಳ್ಳಲಿದ್ದು ೬೩ ಮೀಟರ್ ಹಾಗೂ ೫೭ ಮೀಟರ್ ಉದ್ದದ ಎರಡು ತಡೆಗೋಡೆ ನಿರ್ಮಿಸಲಾಗುವುದು, ಬಳಿಕ ಮಣ್ಣು ತುಂಬಿ ಜಮೀನನ್ನು ಯಥಾಸ್ಥಿತಿಗೆ ತರಲಾಗುವುದು ಎಂದು ಭರವಸೆ ನೀಡಿದರು. ತೋಟಗಾರಿಕೆ ಇಲಾಖೆಯಿಂದ ವರದಿ ಪಡೆದು, ಮೇಯರ್ ಜೊತೆ ಚರ್ಚೆ ನಡೆಸಿ ಅದರನ್ವಯ ಸೂಕ್ತ ಪರಿಹಾರ ನೀಡಲಾಗುವುದು, ಈಗ ಡ್ಯಾಂನಲ್ಲಿ ೬ ಮೀಟರ್ ಮಾತ್ರ ನೀರು ನಿಲ್ಲಿಸಿದ್ದು ಮುಂದಿನ ಮಾರ್ಚ್‌ನಲ್ಲಿ ೭ ಮೀಟರ್ ನೀರು ನಿಲ್ಲಿಸುವ ಅವಶ್ಯಕತೆ ಬಂದಾಗ ಮುಳುಗಡೆ ಜಮೀನಿನ ಸರ್ವೆ ನಡೆಸಲಾಗುವುದು ಹಾಗೂ ಶಾಶ್ವತ ಪರಿಹಾರದ ಬಗ್ಗೆ ಚರ್ಚಿಸಲಾಗುವುದು, ಶುದ್ಧೀಕರಣ ಘಟಕದ ಬಳಿ ತೋಡಿನಿಂದ ಹೂಳು ತೆಗೆಯುವ ಕಾರ್ಯ ಮಾಡಲಾಗುವುದು, ಬೇಸಿಗೆಯಲ್ಲಿ ನೀರಿನ ಅಭಾವ ಇದ್ದಾಗ ವಿದ್ಯುತ್ ಕಡಿತಗೊಳಿಸದೆ ರೈತರೊಂದಿಗೆ ಚರ್ಚಿಸಿ ಕ್ರಮ ಕೈಗೊಳ್ಳಲಾಗುವುದು ಎಂದರು.

ಬಂಟ್ವಾಳ ಗ್ರಾಮಾಂತರ ಸಿಐ ಶಿವಕುಮಾರ್ ನೇತೃತ್ವದಲ್ಲಿ ಪೊಲೀಸರು ಬಂದೋಬಸ್ತ್ ಏರ್ಪಡಿಸಿದ್ದರು. ಮುಂಜಾಗ್ರತಾ ಕ್ರಮವಾಗಿ ಹೆಚ್ಚುವರಿ ಪೊಲೀಸರನ್ನು‌ ನಿಯೋಜಿಸಲಾಗಿತ್ತು.

Share this article