ಕನ್ನಡಪ್ರಭ ವಾರ್ತೆ ರಾಣಿಬೆನ್ನೂರು
ಸಮಾಜದಲ್ಲಿ ಪರೋಪಕಾರ ಮಾಡುವವರು ತಮಗೆ ಅರಿವಿಲ್ಲದಂತೆ ಭಗವಂತನಿಗೆ ಪ್ರಿಯವಾಗಿರುತ್ತಾರೆ. ಆದ್ದರಿಂದ ಪ್ರತಿಯೊಬ್ಬರೂ ಪರೋಪಕಾರ ಮನೋಭಾವವನ್ನು ಜೀವನದಲ್ಲಿ ರೂಡಿಸಿಕೊಳ್ಳಬೇಕು. ಹೀಗಾದಲ್ಲಿ ಸಮಾಜ ಅಭಿವೃದ್ಧಿ ಹೊಂದಲು ಸಾಧ್ಯ ಎಂದು ಹುಬ್ಬಳ್ಳಿ ನೀಲಕಂಠೇಶ್ವರ ಮಠದ ಶ್ರೀಶೈಲಂ ಆದಿಪೀಠ ಸೂರ್ಯ ಸಿಂಹಾಸನಾದೀಶ್ವರ ಜಗದ್ಗುರು ಶಿವಶಂಕರ ಶಿವಾಚಾರ್ಯರು ನುಡಿದರು.ನಗರದ ಎರೇಕುಪ್ಪಿ ರಸ್ತೆಯ ನೀಲಕಂಠೇಶ್ವರ ದೇವಸ್ಥಾನದ ಆವರಣದ ಗಣೇಶ ಮಂಟಪದಲ್ಲಿ ಸೋಮವಾರ ಕುರುಹಿನ ಶೆಟ್ಟಿ ಸೇವಾ ಸಮಾಜ, ಕಾಕಿ ಜನಸೇವಾ ಸಂಸ್ಥೆ, ಜೆಸಿಐ ಸಂಸ್ಥೆ ಹಾಗೂ ಜೇಸಿಸ್ ಕ್ಷೇಮಾಭಿವೃದ್ಧಿ ಕ್ರೆಡಿಟ್ ಕೋ-ಅಪ್ ಸೊಸೈಟಿ ಸಂಯುಕ್ತಾಶ್ರಯದಲ್ಲಿ ಶ್ರೀ ನೀಲಕಂಠೇಶ್ವರ ದೇವಸ್ಥಾನದ ಕಾರ್ತಿಕೋತ್ಸವದ ಪ್ರಯುಕ್ತ ಏರ್ಪಡಿಸಲಾಗಿದ್ದ ಉಚಿತ ಸರ್ವಧರ್ಮ ಸಾಮೂಹಿಕ ವಿವಾಹ ಸಮಾರಂಭದ ಸಾನಿಧ್ಯ ವಹಿಸಿ ಅವರು ಮಾತನಾಡಿದರು. ದಾಂಪತ್ಯ ಜೀವನದಲ್ಲಿ ಹೊಂದಾಣಿಕೆ, ಪರಸ್ಪರ ಪ್ರೀತಿ ನಂಬಿಕೆಯೊಂದಿಗೆ ಜೀವನ ಸಾಗಿಸಬೇಕು. ಅಂದಾಗ ಮಾತ್ರ ಜೀವನ ಎಂಬ ಜಂಜಾಟದಲ್ಲಿ ಯಶಸ್ಸು ಕಾಣಲು ಸಾಧ್ಯವಾಗುತ್ತದೆ. ನವ ದಂಪತಿಗಳು ಮುಂದಿನ ದಿನಗಳಲ್ಲಿ ಮಕ್ಕಳಿಗೆ ಉತ್ತಮ ಶಿಕ್ಷಣ ಕೊಡಿಸುವುದರ ಜೊತೆಗೆ ಸಂಸ್ಕಾರವಂತರನ್ನಾಗಿ ಮಾಡಬೇಕು ಎಂದರು.
ಸಮಾಜದಲ್ಲಿ ಸಾಮೂಹಿಕ ವಿವಾಹ ನಡೆಸುವುದರಿಂದ ಅನಗತ್ಯ ದುಂದು ವೆಚ್ಚಕ್ಕೆ ಕಡಿವಾಣ ಹಾಕಿದಂತಾಗುತ್ತದೆ. ದುಂದು ವೆಚ್ಚದಲ್ಲಿ ಮನೆ ಕಟ್ಟುವುದು, ಮದುವೆ ಮಾಡುವುದರಿಂದ ಬಡ ಹಾಗೂ ಮಧ್ಯ ವರ್ಗದ ಕುಟುಂಬಸ್ಥರು ಸಾಲದ ಸುಳಿಯಲ್ಲಿ ಸಿಲುಕಿಕೊಳ್ಳುತ್ತಿದ್ದಾರೆ. ಅವರ ಆರ್ಥಿಕ ಮಟ್ಟ ಸುಧಾರಣೆಗೆ ಇಂತಹ ಸಾಮೂಹಿಕ ವಿವಾಹಗಳು ಸಹಾಯಕಾರಿಯಾಗಿವೆ. ಈ ನಿಟ್ಟಿನಲ್ಲಿ ಎಲ್ಲ ಜಾತಿ-ಧರ್ಮದ ವಧು-ವರರ ವಿವಾಹ ಆಯೋಜನೆ ಮಾಡಿರುವ ಕಾಕಿ ಜನಸೇವಾ ಸಂಸ್ಥೆ ಕಾರ್ಯ ಶ್ಲಾಘನೀಯ ಎಂದರು.ಮಾಜಿ ಶಾಸಕ ಅರುಣಕುಮಾರ ಪೂಜಾರ ಮಾತನಾಡಿ, ಇಂತಹ ಸಾಮೂಹಿಕ ವಿವಾಹ ಕಾರ್ಯಕ್ರಮದಿಂದ ಬಡವರ ಆರ್ಥಿಕ ಹೊರೆಯನ್ನು ತಗ್ಗಿಸಿದಂತಾಗುತ್ತದೆ. ಈ ನಿಟ್ಟಿನಲ್ಲಿ ಸರಳ ವಿವಾಹಗಳಿಗೆ ಆದ್ಯತೆ ನೀಡುವುದು ಅಗತ್ಯವಾಗಿದೆ ಎಂದರು.
ಶನೈಶ್ಚರ ಹಿರೇಮಠದ ಶಿವಯೋಗಿ ಶಿವಾಚಾರ್ಯರು, ಬಿಜೆಪಿ ರಾಜ್ಯ ಘಟಕದ ಉಪಾಧ್ಯಕ್ಷ ಡಾ. ಬಸವರಾಜ ಕೇಲಗಾರ ಮಾತನಾಡಿದರು.ಕಾಕಿ ಜನಸೇವಾ ಸಂಸ್ಥೆ ಅಧ್ಯಕ್ಷ ಶ್ರೀನಿವಾಸ ಕಾಕಿ ಅಧ್ಯಕ್ಷತೆ ವಹಿಸಿದ್ದರು.
ಇದೇ ಸಂದರ್ಭದಲ್ಲಿ ಹತ್ತು ಜೋಡಿಗಳು ದಾಂಪತ್ಯ ಜೀವನಕ್ಕೆ ಕಾಲಿಟ್ಟರು. ಇದೇ ಸಂದರ್ಭದಲ್ಲಿ ಕಾಕಿ ಜನಸೇವಾ ಸಂಸ್ಥೆಯ ಎರಡು ಸದಸ್ಯರಿಗೆ ಲಕ್ಕಿ ಡ್ರಾ ಮೂಲಕ ನಿವೇಶನ ನೀಡಲಾಯಿತು.ನಗರಸಭೆ ಸದಸ್ಯ ಪ್ರಕಾಶ ಪೂಜಾರ, ಕುರುಹಿನಶೆಟ್ಟಿ ಸಮಾಜ ಅಧ್ಯಕ್ಷ ಹನುಮಂತಪ್ಪ ಅಮಾಸಿ, ಉಪಾಧ್ಯಕ್ಷ ಶಿವಾನಂದ ಸಾಲಗೇರಿ, ಕಾರ್ಯದರ್ಶಿ ಮಂಜುನಾಥ ಹೊಸಪೇಟೆ, ಹನುಮಂತಪ್ಪ ಕಾಕಿ, ಸಣ್ಣ ಹನುಮಂತಪ್ಪ ಕಾಕಿ, ರೂಪಾ ಕಾಕಿ, ಶೋಭಾ ಹೊಸಪೇಟೆ, ಕುಮಾರ ಶ್ಯಾವಿ, ಸಿದ್ದಪ್ಪ ಬೂದೂರ, ಶ್ರೀಧರ ಅಮಾಸಿ, ಗುಡದಯ್ಯ ಹಲಗೇರಿ, ವೆಂಕಟೇಶ ಕಾಕಿ, ಜೆಸಿಐ ಘಟಕದ ಅಧ್ಯಕ್ಷೆ ಲಕ್ಷ್ಮೀ ಅಡಕಿ, ಪ್ರಕಾಶ ಗಚ್ಚಿನಮಠ, ಆರ್.ಬಿ. ಪಾಟೀಲ, ನಾಗರಾಜ ಹೊಸಪೇಟೆ, ಲಿಂಗರಾಜ ಬೂದನೂರ, ಶಿವಾನಂದ ಬಗಾದಿ, ಕೋಟ್ರೇಶಪ್ಪ ಎಮ್ಮಿ ಮತ್ತಿತರರು ಇದ್ದರು.