ರಕ್ತದಾನ ಪುಣ್ಯದ ಕಾರ್ಯ: ಶಾಸಕ ಶಿವರಾಮ ಹೆಬ್ಬಾರ

KannadaprabhaNewsNetwork | Published : Dec 5, 2024 12:32 AM

ಸಾರಾಂಶ

ರಕ್ತದಾನದಿಂದ ಅನೇಕರ ಜೀವ ಉಳಿಸಬಹುದು. ಅದು ಅತ್ಯಂತ ಪುಣ್ಯಸಮವಾದದ್ದು. ಆರೋಗ್ಯದ ಬಗ್ಗೆ ವಿದ್ಯಾರ್ಥಿಗಳು ಹೆಚ್ಚಿನ ಕಾಳಜಿ ವಹಿಸಬೇಕು.

ಯಲ್ಲಾಪುರ: ಆರೋಗ್ಯ ಪ್ರತಿಯೊಬ್ಬರಿಗೂ ಅತ್ಯಂತ ಮಹತ್ವದ್ದಾಗಿದೆ. ಆ ದೃಷ್ಟಿಯಲ್ಲಿ ನಮ್ಮ ಈ ಕಾಲೇಜಿನಲ್ಲಿ ಆರೋಗ್ಯ ಕೇಂದ್ರ ಸ್ಥಾಪಿಸುವ ಮೂಲಕ ಮಾದರಿ ಕೆಲಸವಾಗಿದೆ. ವಿದ್ಯಾರ್ಥಿಗಳಿಗೆ ಸ್ವಯಂಪ್ರೇರಿತ ರಕ್ತದಾನ ಮಾಡುವುದಕ್ಕೆ ಹೆಚ್ಚಿನ ಸಹಾಯಕಾರಿಯಾಗಿದೆ ಎಂದು ಶಾಸಕ ಶಿವರಾಮ ಹೆಬ್ಬಾರ ತಿಳಿಸಿದರು.ಡಿ. ೪ರಂದು ಪಟ್ಟಣದ ಸ.ಪ್ರ.ದ. ಕಾಲೇಜಿನ ಸಭಾಭವನದಲ್ಲಿ ಸ್ವಯಂಪ್ರೇರಿತ ರಕ್ತದಾನ ಶಿಬಿರ ಮತ್ತು ಜಾಗೃತಿ ಕಾರ್ಯಕ್ರಮ ಹಾಗೂ ಕಾಲೇಜಿನಲ್ಲಿ ನೂತನವಾಗಿ ಸ್ಥಾಪಿಸಿದ ಆರೋಗ್ಯ ಕೇಂದ್ರವನ್ನು ಉದ್ಘಾಟಿಸಿ, ಮಾತನಾಡಿದರು.ರಕ್ತದಾನದಿಂದ ಅನೇಕರ ಜೀವ ಉಳಿಸಬಹುದು. ಅದು ಅತ್ಯಂತ ಪುಣ್ಯಸಮವಾದದ್ದು. ಆರೋಗ್ಯದ ಬಗ್ಗೆ ವಿದ್ಯಾರ್ಥಿಗಳು ಹೆಚ್ಚಿನ ಕಾಳಜಿ ವಹಿಸಬೇಕು ಎಂದರು. ಅಧ್ಯಕ್ಷತೆ ವಹಿಸಿದ್ದ ಪ್ರಾಂಶುಪಾಲ ಡಾ. ಆರ್.ಡಿ. ಜನಾರ್ದನ್ ಮಾತನಾಡಿ, ರಕ್ತದಾನದ ಮಹತ್ವ ಮತ್ತು ಯುವಜನರಲ್ಲಿ ರಕ್ತದಾನದ ಜಾಗೃತಿ ಬಗ್ಗೆ ತಿಳಿಸಿದರು. ಸರ್ಕಾರಿ ಆಸ್ಪತ್ರೆಯ ತಜ್ಞ ವೈದ್ಯೆ ಡಾ. ಸೌಮ್ಯ ಕೆ.ವಿ. ಮಾತನಾಡಿ, ಯುವಜನರಲ್ಲಿ ರಕ್ತದಾನ ಮಾಡುವುದರ ಬಗ್ಗೆ ಮಾಹಿತಿ ನೀಡಿದರು. ಗ್ರೀನ್ ಕೇರ್ ಸಂಸ್ಥೆಯ ಪ್ರಧಾನ ಕಾರ್ಯದರ್ಶಿ ಜಿತೇಂದ್ರ ಕುಮಾರ್ ಆರ್.ಎಂ. ಮಾತನಾಡಿ, ಯುವಜನರಲ್ಲಿ ಜಾಗೃತಿ ಕಾರ್ಯಕ್ರಮಗಳನ್ನು ಮಾಡುವುದು ನಮ್ಮ ಸಂಸ್ಥೆಯ ಮುಖ್ಯ ಉದ್ದೇಶ ಎಂದರು. ಕ್ರಿಯೇಟಿವ್ ತರಬೇತಿ ಸಂಸ್ಥೆ ಯಲ್ಲಾಪುರದ ಮುಖ್ಯಸ್ಥ ಶ್ರೀನಿವಾಸ್ ಮುರ್ಡೇಶ್ವರ್ ಮಾತನಾಡಿ, ನಾವು ರಕ್ತದಾನ ಮಾಡಿ ನಮ್ಮವರಿಂದಲೂ ರಕ್ತದಾನ ಮಾಡಿಸುವುದು ನಮ್ಮ ಕರ್ತವ್ಯ ಎಂದರು. ಶಿರಸಿಯ ಸಂಕಲ್ಪ ಟ್ರಸ್ಟ್ ಅಧ್ಯಕ್ಷ ಕುಮಾರ ಪಟಗಾರ, ಗ್ರೀನ್ ಕೇರ್ ಸಂಸ್ಥೆಯ ನಿರ್ದೇಶಕರಾದ ಆಶಾ ಡಿಸೋಜಾ ಮತ್ತು ಗಜಾನನ ಭಟ್ಟ, ತಾಲೂಕು ಆಸ್ಪತ್ರೆಯ ರಕ್ತ ಶೇಖರಣ ಘಟಕದ ಮಹಾಂತೇಶ್ ಉಪಸ್ಥಿತರಿದ್ದರು. ಶಿಬಿರದಲ್ಲಿ ೫೦೦ಕ್ಕೂ ಹೆಚ್ಚು ಕಾಲೇಜು ವಿದ್ಯಾರ್ಥಿಗಳು ಮತ್ತು ಗ್ರೀನ್ ಕೇರ್ ಸಂಸ್ಥೆಯ ಕೌಶಲ್ಯ ವಿಕಾಸ ತರಬೇತಿಯ ವಿದ್ಯಾರ್ಥಿಗಳು ಭಾಗವಹಿಸಿದ್ದರು.

ರಕ್ತದಾನ ಶಿಬಿರದಲ್ಲಿ ೫೪ ಶಿಬಿರಾರ್ಥಿಗಳು ರಕ್ತದಾನ ಮಾಡಿದರು. ಕಾರ್ಯಕ್ರಮದಲ್ಲಿ ಗ್ರೀನ್ ಕೇರ್ ಸಂಸ್ಥೆಯ ಕಾರ್ಯದರ್ಶಿ ಜಿತೇಂದ್ರ ಕುಮಾರ್ ಆರ್.ಎಂ. ಮತ್ತು ಸಂಕಲ್ಪ ಟ್ರಸ್ಟ್ ಶಿರಸಿಯ ಅಧ್ಯಕ್ಷ ಕುಮಾರ ಪಟಗಾರ, ಸರ್ಕಾರಿ ಪ್ರಥಮದರ್ಜೆ ಕಾಲೇಜು ಮತ್ತು ಕ್ರಿಯೇಟಿವ್ ಕಂಪ್ಯೂಟರ್ ಸಂಸ್ಥೆಯವರಿಗೆ ಶಾಸಕರ ಮೂಲಕ ಪ್ರಥಮ ಚಿಕಿತ್ಸಾ ಪೆಟ್ಟಿಗೆಗಳನ್ನು ಕೊಡಲಾಯಿತು. ಯುವ ರೆಡ್ ಕ್ರಾಸ್‌ನ ಸಂಚಾಲಕ ಶರತ್ ಕುಮಾರ್ ಕಾರ್ಯಕ್ರಮ ನಿರ್ವಹಿಸಿ, ವಂದಿಸಿದರು.

Share this article