ಕುಡಿಯುವ ನೀರಿಗೆ ಸಮಸ್ಯೆಯಾಗದಂತೆ ಕಾರ್ಯ ನಿರ್ವಹಿಸಿ: ಜಿಲ್ಲಾಧಿಕಾರಿ ಗುರುದತ್ತ ಹೆಗಡೆ

KannadaprabhaNewsNetwork |  
Published : Mar 25, 2024, 12:46 AM IST
ಪೊಟೋ: 24ಎಸ್‌ಎಂಜಿಕೆಪಿ01ಶಿವಮೊಗ್ಗ ಜಿಲ್ಲಾಧಿಕಾರಿ ಕಚೇರಿ ಸಭಾಂಗಣದಲ್ಲಿ ಶನಿವಾರ ಯೋಜಿಸಿದ್ದ ಕುಡಿಯುವ ನೀರು ಪೂರೈಕೆ ಹಾಗೂ ಬರ ನಿರ್ವಹಣೆ ಕುರಿತ ಸಭೆಯಲ್ಲಿ ಜಿಲ್ಲಾಧಿಕಾರಿ ಗುರುದತ್ತ ಹೆಗಡೆ ಮಾತನಾಡಿದರು. | Kannada Prabha

ಸಾರಾಂಶ

ಸಮಸ್ಯಾತ್ಮಕ ಗ್ರಾಮಗಳು ಮತ್ತು ವಾರ್ಡುಗಳ ಪಟ್ಟಿ ಈಗಾಗಲೇ ತಯಾರಿಸಿದ್ದೀರಿ. ಮತ್ತೆ ಇನ್ನೆಲ್ಲಿ ಕುಡಿಯುವ ನೀರಿನ ಸಮಸ್ಯೆ ಉದ್ಭವಿಸಬಹುದೆಂದು ಮತ್ತೊಮ್ಮೆ ಪರಿಶೀಲಿಸಬೇಕು. ಗ್ರಾಮೀಣ ಕುಡಿಯುವ ನೀರು ಇಲಾಖೆಯವರು ಇಒ, ತಹಸೀಲ್ದಾರರು ಇತರೆ ಅಧಿಕಾರಿಗಳ ಸಮನ್ವಯದೊಂದಿಗೆ ಪರಿಣಾಮಕಾರಿಯಾಗಿ ಬರ ನಿರ್ವಹಣೆಯಲ್ಲಿ ತೊಡಗಿಕೊಳ್ಳಬೇಕು.

ಕನ್ನಡಪ್ರಭ ವಾರ್ತೆ ಶಿವಮೊಗ್ಗ

ಮುಂದಿನ ದಿನಗಳಲ್ಲಿ ಜಿಲ್ಲಾದ್ಯಂತ 238 ಗ್ರಾಮಗಳು ಮತ್ತು ನಗರ ವ್ಯಾಪ್ತಿಯ 11 ವಾರ್ಡ್‌ಗಳಲ್ಲಿ ಕುಡಿಯುವ ನೀರಿಗೆ ಸಮಸ್ಯೆ ಎದುರಾಗಬಹುದೆಂದು ಗುರುತಿಸಿದ್ದು, ಅಧಿಕಾರಿಗಳು ಮುನ್ನೆಚ್ಚರಿಕೆ ಕ್ರಮ ಕೈಗೊಂಡು ಸಕ್ರಿಯವಾಗಿ ಕಾರ್ಯ ನಿರ್ವಹಿಸಬೇಕು ಎಂದು ಜಿಲ್ಲಾಧಿಕಾರಿ ಗುರುದತ್ತ ಹೆಗಡೆ ಖಡಕ್‌ ಸೂಚನೆ ನೀಡಿದರು.

ಇಲ್ಲಿನ ಜಿಲ್ಲಾಧಿಕಾರಿ ಕಚೇರಿ ಸಭಾಂಗಣದಲ್ಲಿ ಶನಿವಾರ ಆಯೋಜಿಸಿದ್ದ ಕುಡಿಯುವ ನೀರು ಪೂರೈಕೆ ಹಾಗೂ ಬರ ನಿರ್ವಹಣೆ ಕುರಿತ ಸಭೆಯಲ್ಲಿ ಮಾತನಾಡಿ, ಜಿಲ್ಲೆಯಲ್ಲಿ ಕುಡಿಯುವ ನೀರು ಒಂದು ದಿನವೂ ವ್ಯತ್ಯಯವಾಗದಂತೆ ತಾಲೂಕುಗಳ ಇಒಗಳು, ತಹಸೀಲ್ದಾರರು ಮತ್ತು ಸ್ಥಳೀಯ ಸಂಸ್ಥೆಗಳ ಮುಖ್ಯಾಧಿಕಾರಿಗಳು ಕ್ರಮ ವಹಿಸಬೇಕು ಎಂದು ತಿಳಿಸಿದರು.

ಸಮಸ್ಯಾತ್ಮಕ ಗ್ರಾಮಗಳು ಮತ್ತು ವಾರ್ಡುಗಳ ಪಟ್ಟಿ ಈಗಾಗಲೇ ತಯಾರಿಸಿದ್ದೀರಿ. ಮತ್ತೆ ಇನ್ನೆಲ್ಲಿ ಕುಡಿಯುವ ನೀರಿನ ಸಮಸ್ಯೆ ಉದ್ಭವಿಸಬಹುದೆಂದು ಮತ್ತೊಮ್ಮೆ ಪರಿಶೀಲಿಸಬೇಕು. ಗ್ರಾಮೀಣ ಕುಡಿಯುವ ನೀರು ಇಲಾಖೆಯವರು ಇಒ, ತಹಸೀಲ್ದಾರರು ಇತರೆ ಅಧಿಕಾರಿಗಳ ಸಮನ್ವಯದೊಂದಿಗೆ ಪರಿಣಾಮಕಾರಿಯಾಗಿ ಬರ ನಿರ್ವಹಣೆಯಲ್ಲಿ ತೊಡಗಿಕೊಳ್ಳಬೇಕು ಎಂದರು. ನೀರಿನ ಸಂಗ್ರಹಣೆಗಳು, ಜಲಾಶಯಗಳು, ಬಹುಗ್ರಾಮ ನೀರಿನ ಯೋಜನೆಗಳಡಿ ನೀರು ಪೋಲು ಮಾಡಬಾರದು. ನೀರಿನ ಬಳಕೆ ಕುರಿತು ಸಮರ್ಪಕವಾಗಿ ಯೋಜಿಸಿ ಅಧಿಕಾರಿಗಳು ಸಕ್ರಿಯವಾಗಿ ಕಾರ್ಯ ನಿರ್ವಹಿಸಿ ಎಂದು ತಿಳಿಸಿದರು.

ಜಾನುವಾರುಗಳಿಗೆ ಕುಡಿಯುವ ನೀರಿನ ಹೊಂಡ ನಿರ್ಮಿಸಿ:

ಜಿಲ್ಲೆಯಲ್ಲಿ 1139057 ಮೆಟ್ರಿಕ್ ಟನ್ ಮೇವು ಲಭ್ಯವಿದ್ದು, 42 ವಾರಗಳಿಗೆ ಸಾಕಾಗುವಷ್ಟು ಮೇವು ಲಭ್ಯತೆ ಇದೆ. ಮೇವಿನ ಕೊರತೆಯಾಗದಂತೆ ನೋಡಿಕೊಳ್ಳಲು ಮೇವು ಖರೀದಿಗೆ ಈಗಾಗಲೇ ಟೆಂಡರ್ ಕರೆಯಲಾಗಿದೆ. ಬೇಸಿಗೆಯಲ್ಲಿ ಜಾನುವಾರುಗಳಿಗೆ ಕುಡಿಯುವ ನೀರಿನ ಹೊಂಡ ಅಥವಾ ತೊಟ್ಟಿಗಳನ್ನು ನಿರ್ಮಿಸಿ ಸಹಕರಿಸಬೇಕು ಎಂದರು. ಯೂರಿಯಾ, ಡಿಪಿಎ, ಎಂಒಪಿ, ಎನ್‍ಪಿಕೆ ಕಾಂಪ್ಲೆಕ್ಸ್, ಎಸ್‍ಎಸ್‍ಪಿ ಸೇರಿ 138420 ಮೆಟ್ರಿಕ್‌ ಟನ್ ರಸಗೊಬ್ಬರ ಬೇಡಿಕೆ ಇದ್ದು ಒಟ್ಟು ಇಲ್ಲಿವರೆಗೆ 129818 ಮೆಟ್ರಿಕ್‌ ಟನ್ ಗೊಬ್ಬರ ವಿತರಿಸಲಾಗಿದೆ. 39943 ಮೆ.ಟನ್ ಉಳಿಕೆ ದಾಸ್ತಾನು ಇದ್ದು, ಪ್ರಸ್ತುತ ಯಾವುದೇ ಕೊರತೆ ಇಲ್ಲ ಎಂದರು.

ನರೇಗಾದಡಿ ಕೆಲಸ ನೀಡಿ:

ಮಹಾತ್ಮಾ ಗಾಂಧಿ ನರೇಗಾ ಯೋಜನೆಯಡಿ ಕಾರ್ಮಿಕರಿಗೆ ಕೆಲಸ ನೀಡಬೇಕು. ಬೇಸಿಗೆ ಅವಧಿಯಲ್ಲಿ ಅವರಿಗೆ ಹೆಚ್ಚಿನ ದಿನಗಳ ಕೆಲಸ ನೀಡುವಂತಾಗಬೇಕು. ಪಂಚಾಯಿತಿವಾರು ಕೆಲಸ ನೀಡಲು ಯೋಜಿಸಿಕೊಳ್ಳಬೇಕು. ಬೇಸಿಗೆಯಾದ್ದರಿಂದ ಬೆಳಿಗ್ಗೆ ಬೇಗ ಕೆಲಸ ನೀಡಿ ಬೇಗ ಮುಗಿಸುವಂತೆ ಕ್ರಮ ಕೈಗೊಳ್ಳಬೇಕು ಎಂದು ಸೂಚನೆ ನೀಡಿದರು.

ಜಿಪಂ ಸಿಇಒ ಸ್ನೇಹಲ್ ಸುಧಾಕರ ಲೋಖಂಡೆ ಮಾತನಾಡಿ, ತಾಲೂಕು ಇಒಗಳು, ತಹಸೀಲ್ದಾರ್‌ಗಳು ಕುಡಿಯುವ ನೀರಿಗೆ ಸಂಬಂಧಿಸಿದಂತೆ ಯಾವುದೇ ಸಮಸ್ಯೆಗಳು ಬಾರದಂತೆ ಕ್ರಮ ವಹಿಸಬೇಕು. ಅಧಿಕಾರಿಗಳು ಸ್ವತಃ ಸಮಸ್ಯಾತ್ಮಕ ಗ್ರಾಮಗಳಿಗೆ ಭೇಟಿ ನೀಡಿ ಬಗೆಹರಿಸಬೇಕು. ಎನ್‍ಡಿಆರ್‌ಎಫ್ ಅನುದಾನ ಲಭ್ಯತೆ ಇದ್ದು , ಕುಡಿಯುವ ನೀರಿನ ಸಮಸ್ಯೆ ಇರುವೆಡೆ 24 ಗಂಟೆಯೊಳಗೆ ಪರಿಹಾರ ನೀಡಬೇಕು ಎಂದು ತಿಳಿಸಿದರು.

ಒಂದೇ ಒಂದು ಕುಟುಂಬ ಕೂಡ ಕುಡಿಯುವ ನೀರಿನ ಸಮಸ್ಯೆಯಿಂದ ಬಳಲುವಂತೆ ಆಗಬಾರದು. ಯಾವುದೇ ರೀತಿಯ ದೂರು ಬಾರದಂತೆ ಕುಡಿಯುವ ನೀರು ನಿರ್ವಹಿಸಬೇಕು. ಖಾಸಗಿ ಬೋರ್‌ವೆಲ್‌ಗಳ ಗುರುತಿಸಿದ್ದು, ಮುಂಗಡ ಒಪ್ಪಂದ ಬೇಗ ಮಾಡಿಕೊಳ್ಳಿರಿ ಎಂದು ಅಧಿಕಾರಿಗಳಿಗೆ ಸೂಚಿಸಿದರು

ಸಭೆಯಲ್ಲಿ ಜಿಲ್ಲಾ ಪೊಲೀಸ್ ವರಿಷ್ಠಾಧಿಕಾರಿ ಜಿ.ಕೆ.ಮಿಥುನ್ ಕುಮಾರ್, ಅಪರ ಜಿಲ್ಲಾಧಿಕಾರಿ ಸಿದ್ದಲಿಂಗ ರೆಡ್ಡಿ, ಉಪವಿಭಾಗಾಧಿಕಾರಿ ಯತೀಶ್‌ ಮತ್ತಿತರರಿ ದ್ದರು.

ಕುಡಿವ ನೀರು ನಿರ್ವಹಣೆಗೆ ಗಮನಹರಿಸಿ

ಚುನಾವಣಾ ನೀತಿ ಸಂಹಿತೆ ಕುಡಿಯುವ ನೀರಿನ ವ್ಯವಸ್ಥೆ ಮತ್ತು ಕಾಮಗಾರಿಗೆ ಅಡ್ಡಿಪಡಿಸಲ್ಲ. ಚುನಾವಣಾ ಕರ್ತವ್ಯದೊಂದಿಗೆ ಕುಡಿಯುವ ನೀರಿನ ನಿರ್ವಹಣೆಗೆ ಹೆಚ್ಚಿನ ಗಮನವನ್ನು ಅಧಿಕಾರಿಗಳು ನೀಡಬೇಕು. ಜೂನ್‍ವರೆಗೆ ಕುಡಿಯುವ ನೀರಿಗೆ ತೊಂದರೆ ಆಗದಂತೆ ಎಚ್ಚರಿಕೆ ವಹಿಸಬೇಕು. ಗ್ರಾಮ ಪಂಚಾಯ್ತಿ ಮಟ್ಟದಲ್ಲೇ ಟೆಂಡರ್ ಕರೆದು ಟ್ಯಾಂಕರ್‌ಗಳ ಮೂಲಕ ನೀರು ಸರಬರಾಜು ಮಾಡುಬಹುದಾಗಿದ್ದು ಪಿಡಿಒಗಳು ಕ್ರಮ ವಹಿಸಬೇಕು

ಗುರುದತ್ತ ಹೆಗಡೆ, ಜಿಲ್ಲಾಧಿಕಾರಿ

PREV

Recommended Stories

‘ಉದ್ಯೋಗದಲ್ಲಿ ಕನ್ನಡಿಗರಿಗೆ ಮೀಸಲು ತನ್ನಿ’ : ನಾರಾಯಣಗೌಡ
ಅಶೋಕ್ ನೇತೃತ್ವದಲ್ಲಿ ಟನಲ್ ರಸ್ತೆ ಸಮಿತಿ ರಚನೆಗೆ ಸಿದ್ಧ: ಡಿಕೆಶಿ