ನಕಲಿ ಆಧಾರ್‌ ಬಳಸುವ ಅಸ್ಸಾಂ ಕಾರ್ಮಿಕರ ವಿರುದ್ಧ ಕ್ರಮ

KannadaprabhaNewsNetwork |  
Published : Aug 01, 2025, 11:45 PM IST
1ಎಚ್ಎಸ್ಎನ್3 : ಬೇಲೂರು ತಾಲ್ಲೂಕು ಆಡಳಿತ ವತಿಯಿಂದ ಜನಸ್ಪಂದನಾ ಪೂರ್ವಭಾವಿ ಸಭೆಯಲ್ಲಿ ತಹಸೀಲ್ದಾರ್ ಶ್ರೀಧರ್ ಕಂಕಣವಾಡಿ ಮಾತನಾಡಿದರು. | Kannada Prabha

ಸಾರಾಂಶ

ಮಲೆನಾಡು ಭಾಗದ ಅರೇಹಳ್ಳಿ ಮತ್ತು ಬಿಕ್ಕೋಡು ಹೋಬಳಿ ವ್ಯಾಪ್ತಿಯಲ್ಲಿನ ಕಾಫಿತೋಟಗಳಿಗೆ ಹೊರ ರಾಜ್ಯಗಳಿಂದ ಕೂಲಿಕಾರ್ಮಿಕರು ಹೆಚ್ಚಾಗಿ ಬರುತ್ತಿರುವ ಬಗ್ಗೆ ಮಾಹಿತಿ ಇದೆ. ಕಾಫಿ ತೋಟದಲ್ಲಿ ಕಾರ್ಯ ನಿರ್ವಹಿಸುವುದು ಹಾಗೂ ಮನೆ ಬಾಡಿಗೆ ಪಡೆಯುವಲ್ಲಿ ನಕಲಿ ಆಧಾರ್‌ ಕಾರ್ಡ್ ನೀಡುತ್ತಿರುವುದು ಗಮನಕ್ಕೆ ಬಂದಿದೆ. ಶೀಘ್ರದಲ್ಲಿ ಮಲೆನಾಡು ಭಾಗದಲ್ಲಿ ಕಾಫಿ ತೋಟದ ಮಾಲೀಕರ ಸಭೆ ನಡೆಸಿ ಈ ಬಗ್ಗೆ ಕಟ್ಟುನಿಟ್ಟಿನ ಸೂಚನೆ ನೀಡಲಾಗುವುದು ಎಂದು ತಿಳಿಸಿದರು.

ಕನ್ನಡಪ್ರಭ ವಾರ್ತೆ ಬೇಲೂರು

ಮಲೆನಾಡು ಭಾಗದ ಕಾಫಿ ತೋಟಗಳಲ್ಲಿ ಕೆಲಸ ಮಾಡಲು ಅಸ್ಸಾಂ ಹಾಗೂ ಇತರೆ ರಾಜ್ಯದ ವಲಸೆ ಕಾರ್ಮಿಕರ ಸಂಖ್ಯೆ ಹೆಚ್ಚಾಗುತ್ತಿದ್ದು, ಮನೆ ಬಾಡಿಗೆ ನೀಡುವ ಸಂದರ್ಭದಲ್ಲಿ ನಕಲಿ ಆಧಾರ್ ಕಾರ್ಡ್ ಬಳಸಿದ್ದು ಕಂಡುಬಂದರೆ ಅಂತವರ ವಿರುದ್ಧ ಸೂಕ್ತ ಕ್ರಮ ಕೈಗೊಳ್ಳಲಾಗುವುದು ಎಂದು ತಹಸೀಲ್ದಾರ್‌ ಶ್ರೀಧರ್‌ ಕಂಕಣವಾಡಿ ಎಚ್ಚರಿಕೆ ನೀಡಿದರು.ಪಟ್ಟಣದ ತಾಲೂಕು ಕಚೇರಿ ಸಭಾಂಗಣ ನಡೆದ ಜನಸ್ಪಂದನಾ ಪೂರ್ವಭಾವಿ ಸಭೆಯಲ್ಲಿ ಮಾತನಾಡಿದ ಅವರು, ಮಲೆನಾಡು ಭಾಗದ ಅರೇಹಳ್ಳಿ ಮತ್ತು ಬಿಕ್ಕೋಡು ಹೋಬಳಿ ವ್ಯಾಪ್ತಿಯಲ್ಲಿನ ಕಾಫಿತೋಟಗಳಿಗೆ ಹೊರ ರಾಜ್ಯಗಳಿಂದ ಕೂಲಿಕಾರ್ಮಿಕರು ಹೆಚ್ಚಾಗಿ ಬರುತ್ತಿರುವ ಬಗ್ಗೆ ಮಾಹಿತಿ ಇದೆ. ಕಾಫಿ ತೋಟದಲ್ಲಿ ಕಾರ್ಯ ನಿರ್ವಹಿಸುವುದು ಹಾಗೂ ಮನೆ ಬಾಡಿಗೆ ಪಡೆಯುವಲ್ಲಿ ನಕಲಿ ಆಧಾರ್‌ ಕಾರ್ಡ್ ನೀಡುತ್ತಿರುವುದು ಗಮನಕ್ಕೆ ಬಂದಿದೆ. ಶೀಘ್ರದಲ್ಲಿ ಮಲೆನಾಡು ಭಾಗದಲ್ಲಿ ಕಾಫಿ ತೋಟದ ಮಾಲೀಕರ ಸಭೆ ನಡೆಸಿ ಈ ಬಗ್ಗೆ ಕಟ್ಟುನಿಟ್ಟಿನ ಸೂಚನೆ ನೀಡಲಾಗುವುದು ಎಂದು ತಿಳಿಸಿದರು.ಪ್ರತಿ ಮಾಸಿಕ ಮೊದಲ ಶನಿವಾರ ಜನಸ್ಪಂದನಾ ಸಭೆಯನ್ನು ಜಿಲ್ಲಾಧಿಕಾರಿಗಳ ಅದೇಶದ ಹಿನ್ನೆಲೆಯಲ್ಲಿ ನಡೆಸಲಾಗುತ್ತದೆ. ಅಂದು ಸಂಬಂಧಿಸಿದ ಇಲಾಖೆಯ ಅಧಿಕಾರಿಗಳು ಹಾಜರಿದ್ದು ಜನರ ಕುಂದುಕೊರತೆಗಳನ್ನು ಸ್ಥಳದಲ್ಲಿ ಬಗೆಹರಿಸಲು ಮುಂದಾಗಬೇಕಿದೆ ಎಂದರು. ಚನ್ನಕೇಶವಸ್ವಾಮಿ ದೇಗುಲ ಸಮೀಪ ಅಡ್ಡಾದಿಡ್ಡಿ ಪಾರ್ಕಿಂಗ್ ಸಮಸ್ಯೆ ಬಗ್ಗೆ ದೂರು ಬರುತ್ತಿದೆ. ದೇಗುಲ ಆಡಳಿತ ಹಾಗೂ ಪೊಲೀಸ್ ಇಲಾಖೆ ಸಮನ್ವಯದಿಂದ ಸಮಸ್ಯೆಯನ್ನು ಬಗೆಹರಿಸಲು ಮುಂದಾಗಬೇಕು. ವಿಷ್ಣು ಸಮುದ್ರ ಕೆರೆಯ ಬಳಿ ಇರುವ ಕಲ್ಯಾಣಿ ಸುತ್ತಮುತ್ತ ಸ್ವಚ್ಛತೆ ಇಲ್ಲ ಎಂದು ಭಕ್ತರು ಆರೋಪಿಸಿದ್ದು, ಶೀಘ್ರದಲ್ಲೇ ಈ ಬಗ್ಗೆ ಅಗತ್ಯ ಕ್ರಮ ಕೈಗೊಳ್ಳಬೇಕು ಎಂದು ಸಂಬಂಧಿಸಿದ ಅಧಿಕಾರಿಗಳಿಗೆ ಸೂಚನೆ ನೀಡಿದರು. ವಲಸೆ ಕಾರ್ಮಿಕರಿಂದಾಗಿ ಮಲೆನಾಡು ಭಾಗದಲ್ಲಿ ಬಾಲ್ಯವಿವಾಹ ಪ್ರಕರಣಗಳು ಹೆಚ್ಚಾಗುತ್ತಿವೆ. ಮುಂದಿನ ದಿನಗಳಲ್ಲಿ ಬಾಲ್ಯವಿವಾಹಕ್ಕೆ ಪ್ರಚೋದನೆ ನೀಡುವ ಸಂಬಂಧಿಕರು, ಪುರೋಹಿತರು, ಶಾಮಿಯಾನ, ಅಡಿಗೆ ಗುತ್ತಿಗೆದಾರರು ಹಾಗೂ ಅದಕ್ಕೆ ಜಾಗ ನೀಡುವ ಎಲ್ಲಾ ದೇಗುಲ, ಮಸೀದಿ, ಚರ್ಚು ಕಲ್ಯಾಣ ಮಂಟಪದ ಮಾಲೀಕರ ಮೇಲೆ ಮೊಕದ್ದಮೆ ದಾಖಲು ಮಾಡಲಾಗುವುದು. ಮದುವೆ ಸಂಬಂಧ ಮುಂದಿನ ದಿನಗಳಲ್ಲಿ ಕಡ್ಡಾಯವಾಗಿ ವಧು, ವರನ ವಿವಾಹ ನೋಂದಣಿ ಮಾಡಿಸಬೇಕು. ಇದನ್ನು ಮೀರಿ ಬಾಲ್ಯ ವಿವಾಹ ನಡೆಸಿದರೆ ಜೈಲು ಶಿಕ್ಷೆಗೆ ಗುರಿಯಾಗಬೇಕಾಗುತ್ತದೆ ಎಂದು ಎಚ್ಚರಿಕೆ ನೀಡಿದರು.ಕರವೇ ತಾಲೂಕು ಅಧ್ಯಕ್ಷ ಚಂದ್ರಶೇಖರ ಮಾತನಾಡಿ, ಇತ್ತೀಚಿನ ದಿನಗಳಲ್ಲಿ ಹೃದಯ ರೋಗದಿಂದ ಯುವಕರು ಬಲಿಯಾಗುತ್ತಿರುವ ಹಿನ್ನೆಲೆಯಲ್ಲಿ ಪಟ್ಟಣದಲ್ಲಿ ಹೋಟೆಲ್ ಮತ್ತು ಬೀದಿ ಹೋಟೆಲ್ ತಿಂಡಿಗಾಡಿಗಳಲ್ಲಿ ಆಹಾರ ಸುರಕ್ಷತೆ ಬಗ್ಗೆ ಸಭೆ ನಡೆಸಿ ಎಂದು ಮನವಿ ಮಾಡಿದರೂ ಆರೋಗ್ಯ ಇಲಾಖೆಯ ಅಧಿಕಾರಿಗಳು ಕ್ರಮಕೈಗೊಳ್ಳುತ್ತಿಲ್ಲ. ಪಟ್ಟಣದಲ್ಲಿ ಬೀದಿನಾಯಿಗಳ ಸಂಖ್ಯೆ ಹೆಚ್ಚಾಗಿದ್ದು, ಈ ಬಗ್ಗೆ ಮಾತನಾಡಿದರೆ ಪ್ರಾಣಿದಯಾ ಸಂಘದವರು ನಮ್ಮ ಮೇಲೆ ಕಿಡಿ ಕಾಡುತ್ತಾರೆ ಎಂದು ಆಕ್ರೋಶ ವ್ಯಕ್ತಪಡಿಸಿದರು.ಅರೇಹಳ್ಳಿ ಕಾಫಿ ಬೆಳೆಗಾರರ ಸಂಘದ ಉಪಾಧ್ಯಕ್ಷ ಮಂಜುನಾಥ ಶೆಟ್ಟಿ ಮಾತನಾಡಿ, ಅರೇಹಳ್ಳಿ ಭಾಗದಲ್ಲಿ ಅಸ್ಸಾಂ ಸೇರಿದಂತೆ ಇತರೆ ರಾಜ್ಯದ ವಲಸೆ ಕಾರ್ಮಿಕರ ಗುಂಪು ಹೆಚ್ಚಾಗುತ್ತಿದೆ. ಕೆಲ ಕಾಫಿ ತೋಟದ ಮಾಲೀಕರು ಹಾಗೂ ಸ್ಥಳೀಯರು ಮನೆ ಬಾಡಿಗೆ ಆಸೆಗೆ ತಮ್ಮ ಅನುಕೂಲಕ್ಕಾಗಿ ಸಣ್ಣಸಣ್ಣ ಕೊಠಡಿಗಳನ್ನು ನಿರ್ಮಿಸಿ ಬಾಡಿಗೆಗೆ ನೀಡುತ್ತಿದ್ದಾರೆ. ಒಬ್ಬನ ಹೆಸರಿನ ಆಧಾರ್‌ ಕಾರ್ಡ್ ಪಡೆದು 10 ಜನಕ್ಕೆ ಬಾಡಿಗೆ ನೀಡುತ್ತಿರುವುದು ಆತಂಕಕಾರಿ ಬೆಳವಣಿಗೆ ಆಗಿದೆ. ಇದೇ ರೀತಿ ಮುಂದುವರಿದಲ್ಲಿ ಅತ್ಯಾಚಾರ ಕಳ್ಳತನ ಸುಲಿಗೆಗೆ ದಾರಿಯಾಗುತ್ತದೆ ಎಂದರು.ಈ ಸಂದರ್ಭದಲ್ಲಿ ಆರಕ್ಷಕ ನಿರೀಕ್ಷಕ ರೇವಣ್ಣ, ಚನ್ನಕೇಶವಸ್ವಾಮಿ ದೇಗುಲ ಇಒ ಯೋಗೀಶ್, ಕರವೇ ಅಧ್ಯಕ್ಷ ಚಂದ್ರಶೇಖರ್‌, ಆರೋಗ್ಯ ಅಧಿಕಾರಿ ಡಾ. ವಿಜಯ್ ಸೇರಿದಂತೆ ಇನ್ನೂ ಮುಂತಾದವರು ಹಾಜರಿದ್ದರು.

PREV
Get the latest news from across Karnataka (ಕರ್ನಾಟಕ ನ್ಯೂಸ್)— breaking headlines, politics, local developments, crime reports, district updates, civic issues and more. Stay informed with Kannada Prabha’s real‑time Karnataka news coverage.

Recommended Stories

ರಸಗೊಬ್ಬರ ಬಳಕೆ ಕಡಿಮೆ ಮಾಡಿ : ಸಿಎಂ ಸಲಹೆ
''ತಾಕತ್ತು ಇದ್ದರೆ ನೋಟಿನಲ್ಲಿರುವ ಗಾಂಧೀಜಿಯವರ ಭಾವಚಿತ್ರವನ್ನು ತೆಗೆಯಲಿ''