ನಕಲಿ ಲೋಕಾಯುಕ್ತ ಜಾಲದ ವಿರುದ್ಧ ಕ್ರಮ: ಡಿವೈಎಸ್ಪಿ ಗಾನಕುಮಾರಿ

KannadaprabhaNewsNetwork | Published : Apr 9, 2024 12:53 AM

ಸಾರಾಂಶ

ಲೋಕಾಯುಕ್ತ ಸಾರ್ವಜನಿಕ ಜನಸಂಪರ್ಕ ಸಭೆ ಬಿ.ಸಿ.ರೋಡಿನ ತಾಲೂಕು ಪಂಚಾಯಿತಿ ಸಭಾಂಗಣದಲ್ಲಿ ಸೋಮವಾರ ಲೋಕಾಯುಕ್ತ ಡಿ.ವೈ.ಎಸ್.ಪಿ. ಗಾನ ಕುಮಾರಿ ಅಧ್ಯಕ್ಷತೆಯಲ್ಲಿ ಜರುಗಿತು. ಒಟ್ಟು 8 ದೂರು ಅರ್ಜಿಗಳು ಜನಸಂಪರ್ಕ ಸಭೆಗೆ ಬಂದಿದ್ದು, ಎಲ್ಲಾ ಅರ್ಜಿದಾರರಿಗೆ ಅಧಿಕಾರಿಗಳು ಸ್ಪಂದಿಸಿದರು.

ಕನ್ನಡಪ್ರಭ ವಾರ್ತೆ ಬಂಟ್ವಾಳ

ಲೋಕಾಯುಕ್ತ ಸಾರ್ವಜನಿಕ ಜನಸಂಪರ್ಕ ಸಭೆ ಬಿಸಿರೋಡಿನ ತಾಲೂಕು ಪಂಚಾಯಿತಿ ಸಭಾಂಗಣದಲ್ಲಿ ಸೋಮವಾರ ಲೋಕಾಯುಕ್ತ ಡಿ.ವೈ.ಎಸ್.ಪಿ. ಗಾನ ಕುಮಾರಿ ಅಧ್ಯಕ್ಷತೆಯಲ್ಲಿ ಜರುಗಿತು.

ಈ ಸಂದರ್ಭ ಮಾತನಾಡಿದ ಅವರು, ಲೋಕಾಯುಕ್ತ ಇನ್‌ಸ್ಪೆಕ್ಟರ್‌ ಎಂದು ಹೇಳಿ ಅಧಿಕಾರಿಗಳಿಗೆ ಪೋನ್ ಮಾಡಿ ಹಣ ನೀಡುವಂತೆ ಒತ್ತಾಯ ಮಾಡುವ ಜಾಲವೊಂದು ಕಾರ್ಯಾಚರಿಸುವ ಬಗ್ಗೆ ಇಲಾಖೆಯ ಗಮನಕ್ಕೆ ಬಂದಿದೆ. ಉಳ್ಳಾಲದಲ್ಲಿ ಇಂತಹ ಪ್ರಕರಣ ನಡೆದು ಅವರ ಮೇಲೆ ಪ್ರಕರಣ ದಾಖಲಿಸುವ ಮೂಲಕ ಕಾನೂನು ಕ್ರಮ ಕೈಗೊಳ್ಳಲಾಗಿದೆ ಎಂದರು.

ಬೇರೆ ತಾಲೂಕಿನಲ್ಲಿ ಲೋಕಾಯುಕ್ತರ ಹೆಸರಿನಲ್ಲಿ ನಕಲಿ ಪೋನ್ ಕರೆಗಳು ಬಂದು‌ ಲಂಚಕ್ಕೆ ಬೇಡಿಕೆಯಿಟ್ಟರೆ ತಕ್ಷಣ ಇಲಾಖೆಯ ಗಮನಕ್ಕೆ ತರಬೇಕು. ಅವರ ಮೇಲೆ ಪ್ರಕರಣ ದಾಖಲಿಸಲಾಗುವುದು ಎಂದು ಅವರು‌ ತಿಳಿಸಿದರು.

ಮಂಗಳೂರು ಮಹಾನಗರ ಪಾಲಿಕೆಗೆ ನೀರು ಸರಬರಾಜು ‌ಮಾಡುವ ತುಂಬೆ ವೆಂಟೆಡ್ ಡ್ಯಾಂ ಮುಂಭಾಗದಲ್ಲಿ ಅಂದರೆ ನೇತ್ರಾವತಿ ‌ನದಿಯಲ್ಲಿ ಮರಳು ತುಂಬಿದ್ದು, ಮಳೆಗಾಲದಲ್ಲಿ ಇದರ ಪರಿಣಾಮವಾಗಿ ಡ್ಯಾಂ ಅಕ್ಕಪಕ್ಕದ ಕೃಷಿ ಭೂಮಿಗೆ ನೀರು ನುಗ್ಗಿ ಅಪಾರವಾಗಿ ಕೃಷಿ ನಷ್ಟವಾಗುತ್ತದೆ ಎಂಬ ದೂರು ಕೇಳಿಬಂತು.

ಈ ಬಗ್ಗೆ ಕೂಲಂಕಷವಾಗಿ ಪರಿಶೀಲಿಸಿ ಡ್ಯಾಂ ನ ಪಕ್ಕದಲ್ಲಿ ತುಂಬಿರುವ ಮರಳನ್ನು ಹೂಳೆತ್ತುವ ಕಾರ್ಯ ಇಲಾಖೆ ಮಾಡಬೇಕು, ಅ ಮೂಲಕ ಕೃಷಿಕರ ಕೃಷಿಯನ್ನು ಉಳಿಸಿಕೊಳ್ಳಲು ಅವಕಾಶ ಮಾಡಿಕೊಡಬೇಕು ಎಂದು ರೈತ ಸಂಘದ ಹೋರಾಟಗಾರ ಸುಬ್ರಹ್ಮಣ್ಯ ಭಟ್ ಮನವಿಯನ್ನು ಲೋಕಾಯುಕ್ತ ಅಧಿಕಾರಿಗಳಲ್ಲಿ ಮಾಡಿದ್ದರು ಎಂದು ತಹಸೀಲ್ದಾರ್ ಅರ್ಚನಾ ಭಟ್ ಅವರಲ್ಲಿ ಲೋಕಾಯುಕ್ತ ಇನ್‌ಸ್ಪೆಕ್ಟರ್‌ ಅಮಾನುಲ್ಲ ತಿಳಿಸಿದರು.

ತಹಸೀಲ್ದಾರ್ ಅರ್ಚನಾ ಭಟ್, ಇದು ಗಣಿ ಮತ್ತು ಭೂವಿಜ್ಞಾನ ಇಲಾಖೆಯ ವತಿಯಿಂದ ಆಗಬೇಕಾದ ಕಾರ್ಯವಾಗಿದ್ದು, ಡ್ಯಾಂ ನ ನಿರ್ವಹಣೆ ‌ಮಾಡುವ ಮಂಗಳೂರು ‌ಮಹಾನಗರ ಪಾಲಿಕೆ ಇದರ ಜವಬ್ದಾರಿಯಾಗಿದೆ. ಹಾಗಾಗಿ ಮಂಗಳೂರು ಮಹಾನಗರ ಪಾಲಿಕೆಗೆ ಹಾಗೂ ಗಣಿ ಮತ್ತು ಭೂ ವಿಜ್ಞಾನ ಇಲಾಖೆಯ ಗಮನಕ್ಕೆ ತಂದು ಸಮಸ್ಯೆ ಪರಿಹಾರಕ್ಕೆ ಕ್ರಮ ಕೈಗೊಳ್ಳುವ ಭರವಸೆ ನೀಡಿದರು.

ಪಾಣೆಮಂಗಳೂರು ‌ನಿವಾಸಿ ಸುದೇಶ್ ಮಯ್ಯ ಅವರಿಗೆ ಸೇರಿದ ಮನೆಯೊಂದರ ಬಾಬ್ತು ಕಟ್ಟಲಾದ ತೆರಿಗೆಗೆ ಅಧಿಕೃತ ರಶೀದಿಯನ್ನು ಪುರಸಭೆ ನೀಡದೆ ಸತಾಯಿಸುತ್ತಿರುವುದರ ಬಗ್ಗೆ ಲೋಕಾಯುಕ್ತಕ್ಕೆ ನೀಡಿದ ದೂರಿಗೆ ಸಂಬಂಧಿಸಿದಂತೆ ದೂರುದಾರರಿಗೆ ತೊಂದರೆ ನೀಡಿದೆ ಒಂದು ಗಂಟೆಯೊಳಗೆ ರಶೀದಿ ನೀಡುವಂತೆ ಅಧಿಕಾರಿ ಸೂಚಿಸಿದರು.

ಪುರಸಭಾ ಇಲಾಖೆಯ ವ್ಯಾಪ್ತಿಗೆ ಒಳಪಟ್ಟು ಕಾರ್ಯಚರಿಸುತ್ತಿರುವ ಬಿ.ಸಿ.ರೋಡಿನ ಖಾಸಗಿ‌ಬಸ್ ನಿಲ್ದಾಣದಲ್ಲಿರುವ ವಾಣಿಜ್ಯ ಸಂಕೀರ್ಣದಲ್ಲಿ ಕೋಣೆಯೊಂದನ್ನು ಆರ್ಥಿಕವಾಗಿ ಹಿಂದುಳಿದ ಮತ್ತು ಪರಿಶಿಷ್ಟ ಜಾತಿಗೆ ಸೇರಿದ ಗಂಗಾಧರ್ ಅವರಿಗೆ ನೀಡುವಂತೆ ನೀಡಿದ ಅರ್ಜಿಗೆ ಸ್ಪಂದನೆ ನೀಡಿಲ್ಲ. ಮತ್ತು ಅರ್ಜಿ ದಾರರ ಗಮನಕ್ಕೆ ತರದೆ ಟೆಂಡರ್ ಮಾಡಲಾಗಿದೆ ಎಂಬ ದೂರನ್ನು ‌ಲೋಕಾಯುಕ್ತಕ್ಕೆ ನೀಡಿದ್ದಾರೆ.

ಈ ದೂರಿಗೆ ಸಂಬಂಧಿಸಿದಂತೆ ಪುರಸಭೆಯ ಇಂಜಿನಿಯರ್ ಡೊಮೋನಿಕ್ ಡಿಮೆಲ್ಲೋ ಅವರಿಂದ ಮಾಹಿತಿ ಪಡೆದುಕೊಂಡರು.

ಒಟ್ಟು 8 ದೂರು ಅರ್ಜಿಗಳು ಜನಸಂಪರ್ಕ ಸಭೆಗೆ ಬಂದಿದ್ದು, ಎಲ್ಲಾ ಅರ್ಜಿದಾರರಿಗೆ ಅಧಿಕಾರಿಗಳು ಸ್ಪಂದಿಸಿದ್ದಾರೆ.

ಇನ್‌ಸ್ಪೆಕ್ಟರ್‌ಗಳಾದ ಅಮಾನುಲ್ಲ ಎ, ಚಂದ್ರಶೇಖರ್ ಕೆ.ಎನ್, ಚಂದ್ರಶೇಖರ್ ಸಿ.ಎಲ್, ಸಿಬ್ಬಂದಿ ಮಹೇಶ್, ಬಾಲರಾಜ್, ಗಂಗಣ್ಣ, ರುದ್ರೇಗೌಡ, ಪಂಪಣ್ಣ, ಇ‌.ಒ.ರಾಹುಲ್ ಕಾಂಬ್ಳೆ ಇದ್ದರು

Share this article