ಮಸೀದಿ ಅಭಿವೃದ್ಧಿ ಹಣ ದುರ್ಬಳಕೆ ಮಾಡುವವರ ವಿರುದ್ಧ ಕ್ರಮ-ಸಚಿವ ಜಮೀರ್‌ ಅಹಮದ್‌ ಖಾನ್‌

KannadaprabhaNewsNetwork | Published : Sep 4, 2024 1:49 AM

ಸಾರಾಂಶ

ಮಸೀದಿ ಅಭಿವೃದ್ಧಿ ಅನುದಾನ ಸೇರಿ ಸಮುದಾಯದ ಕಲ್ಯಾಣಕ್ಕೆ ನೀಡುವ ಹಣ ದುರ್ಬಳಕೆ ಮಾಡಿದರೆ ಕಠಿಣ ಕ್ರಮ ಕೈಗೊಳ್ಳಲಾಗುವುದು ಎಂದು ಅಲ್ಪಸಂಖ್ಯಾತರ ಕಲ್ಯಾಣ ಹಾಗೂ ವಕ್ಫ್‌ ಸಚಿವ ಜಮೀರ್ ಅಹಮದ್ ಖಾನ್ ಎಚ್ಚರಿಕೆ ನೀಡಿದರು.

ಹಾವೇರಿ: ಮಸೀದಿ ಅಭಿವೃದ್ಧಿ ಅನುದಾನ ಸೇರಿ ಸಮುದಾಯದ ಕಲ್ಯಾಣಕ್ಕೆ ನೀಡುವ ಹಣ ದುರ್ಬಳಕೆ ಮಾಡಿದರೆ ಕಠಿಣ ಕ್ರಮ ಕೈಗೊಳ್ಳಲಾಗುವುದು ಎಂದು ಅಲ್ಪಸಂಖ್ಯಾತರ ಕಲ್ಯಾಣ ಹಾಗೂ ವಕ್ಫ್‌ ಸಚಿವ ಜಮೀರ್ ಅಹಮದ್ ಖಾನ್ ಎಚ್ಚರಿಕೆ ನೀಡಿದರು.ನಗರದ ಸಿದ್ದರಾಮೇಶ್ವರ ಸಮುದಾಯ ಭವನದಲ್ಲಿ ಮಂಗಳವಾರ ಆಯೋಜಿಸಿದ್ದ ಹಾವೇರಿ -ಗದಗ ಜಿಲ್ಲೆಗಳ ವಕ್ಫ್‌ ಅದಾಲತ್ ಉದ್ಘಾಟಿಸಿ ಅವರು ಮಾತನಾಡಿದರು. ವಕ್ಫ್‌ ಬೋರ್ಡ್ ಹಾಗೂ ಅಲ್ಪಸಂಖ್ಯಾತ ಕಲ್ಯಾಣ ಇಲಾಖೆಯಿಂದ ಮಸೀದಿ ಅಭಿವೃದ್ಧಿ, ಖಬಾರಸ್ತಾನ ನಿರ್ವಹಣೆ ಸೇರಿ ಸಮುದಾಯದ ಕಲ್ಯಾಣಕ್ಕೆ ನೀಡುವ ಅನುದಾನದ ಹಣ ದುರ್ಬಳಕೆ ಆಗುತ್ತಿರುವ ದೂರುಗಳು ಬಂದಿವೆ. ಅದೇ ರೀತಿ ಅನುದಾನ ಕೊಡಿಸಿದ್ದೇವೆ ಎಂದು ಲಂಚ ಪಡೆಯುತ್ತಿರುವ ಬಗ್ಗೆಯೂ ಮಾಹಿತಿ ಬಂದಿದ್ದು ಯಾವುದೇ ಕಾರಣಕ್ಕೂ ಇದನ್ನು ಸಹಿಸುವುದಿಲ್ಲ ಎಂದು ಹೇಳಿದರು.ಯಾರಾದರೂ ಲಂಚ ಕೇಳಿದರೆ ಮೊದಲು ಪೊಲೀಸ್ ಠಾಣೆಗೆ ದೂರು ನೀಡಿ ನನ್ನ ಗಮನಕ್ಕೆ ತನ್ನಿ. ಅವರನ್ನು ಜೈಲಿಗೆ ಹಾಕಿಸುವ ಕೆಲಸ ನಾನೇ ಮಾಡುತ್ತೇನೆ. ಯಾರೇ ಆಗಲಿ ಮುಲಾಜಿಲ್ಲದೆ ಕ್ರಮ ಕೈಗೊಳ್ಳಲಾಗುವುದು. ವಕ್ಫ್‌ ಆಸ್ತಿ ಉಳಿಸುವುದು ನಮ್ಮೆಲ್ಲರ ಕರ್ತವ್ಯ. ವಕ್ಫ್‌ ಬೋರ್ಡ್‌ನಿಂದ ಹದಿನೈದು ಜಿಲ್ಲೆಗಳಲ್ಲಿ ಮಹಿಳಾ ಕಾಲೇಜು ನಿರ್ಮಾಣಕ್ಕೆ ಯೋಜನೆ ರೂಪಿಸಲಾಗಿದೆ. ವಿಧಾನ ಪರಿಷತ್ ಸದಸ್ಯ ಅಬ್ದುಲ್ ಜಬ್ಬಾರ್ ಹಾಗೂ ವಕ್ಫ್‌ ಬೋರ್ಡ್ ಅಧ್ಯಕ್ಷ ಅನ್ವರ್ ಬಾಷಾ ಈ ಬಗ್ಗೆ ಹೆಚ್ಚು ಆಸಕ್ತಿ ವಹಿಸಿ ಕೆಲಸ ಮಾಡುತ್ತಿದ್ದಾರೆ ಎಂದರು.

ಕೇಂದ್ರದಿಂದ ದುರುದ್ದೇಶ: ಕೇಂದ್ರ ಸರ್ಕಾರ ವಕ್ಫ್‌ ಕಾಯ್ದೆಗೆ ತಿದ್ದುಪಡಿ ತರಲು ಮುಂದಾಗಿದ್ದು, ಇದು ದುರುದ್ದೇಶದಿಂದ ಕೂಡಿದೆ. ವಕ್ಫ್‌ ಆಸ್ತಿ ಸರ್ಕಾರದ್ದಲ್ಲ. ಅದು ಸಮುದಾಯದ್ದು. ಕಾಯ್ದೆ ತಿದ್ದುಪಡಿಗೆ ನಮ್ಮ ವಿರೋಧ ಇದೆ ಎಂದು ಹೇಳಿದರು.ಇದೇ ಸಂದರ್ಭದಲ್ಲಿ ಹಾವೇರಿ-ಗದಗ ಜಿಲ್ಲೆಯ 32 ಮಸೀದಿಗಳ ಅಭಿವೃದ್ಧಿ ಗೆ 8.50 ಕೋಟಿ ರು. ಅನುದಾನದ ಚೆಕ್ ವಿತರಿಸಲಾಯಿತು.ವಕ್ಫ್‌ ಬೋರ್ಡ್ ಅಧ್ಯಕ್ಷ ಅನ್ವರ್ ಬಾಷಾ, ಪರಿಷತ್ ಸದಸ್ಯ ಅಬ್ದುಲ್ ಜಬ್ಬಾರ್, ಮಾಜಿ ಸಂಸದ ಐ. ಜಿ. ಸನದಿ, ಮಾಜಿ ಶಾಸಕ ಅಜ್ಜಂಫೀರ್‌ ಖಾದ್ರಿ, ಐ.ಯು.ಪಠಾಣ ಇತರರು ಇದ್ದರು. ಸಮುದಾಯದ ಹೆಣ್ಣುಮಕ್ಕಳು ಮುಖ್ಯವಾಹಿನಿಗೆ ಬರಲಿ: ವಕ್ಫ್‌ ಆಸ್ತಿ ಸಂರಕ್ಷಣೆ ಮಾಡಿ ತಾಲೂಕಿಗೊಂದು ಸುಸಜ್ಜಿತ ಆಸ್ಪತ್ರೆ, ಜಿಲ್ಲೆಗೊಂದು ಮಹಿಳಾ ಕಾಲೇಜು ನಿರ್ಮಾಣ ಮಾಡುವ ಗುರಿ ಹೊಂದಲಾಗಿದೆ. ಅಲ್ಪಸಂಖ್ಯಾತರ ಹೆಣ್ಣುಮಕ್ಕಳು ಶಿಕ್ಷಣದಿಂದ ವಂಚಿತರಾಗಬಾರದು. ನಮ್ಮ ಸಮುದಾಯದ ಹೆಣ್ಣುಮಕ್ಕಳು ಕೇವಲ ಎಸ್ಸೆಸ್ಸೆಲ್ಸಿ ವರೆಗೂ ಕಲಿತು ಶಾಲೆ ಮೊಟಕುಗೊಳಿಸುತ್ತಿದ್ದಾರೆ. ಅವರಿಗೆ ಶಿಕ್ಷಣದ ಮಹತ್ವ ತಿಳಿಸಿ, ಶಿಕ್ಷಣ ಪಡೆಯುವ ಪಡೆದು ಸಮಾಜದ ಮುಖ್ಯವಾಹಿನಿಗೆ ತರಬೇಕಾಗಿದೆ ಎಂದು ಸಚಿವ ಜಮೀರ್‌ ಅಹ್ಮದ್‌ ಹೇಳಿದರು.

Share this article