ಅನಧಿಕೃತ ಗ್ಯಾಸ್‌ ರಿಫಿಲ್ಲಿಂಗ್‌ ವಿರುದ್ಧ ಕ್ರಮ

KannadaprabhaNewsNetwork | Published : May 18, 2025 1:23 AM
Follow Us

ಸಾರಾಂಶ

ಕನ್ನಡಪ್ರಭ ವಾರ್ತೆ ವಿಜಯಪುರ ವಿಜಯಪುರದಲ್ಲಿ ನಡೆಯುತ್ತಿರುವ ಅನಧಿಕೃತ ಗ್ಯಾಸ್ ರಿಫಿಲ್ಲಿಂಗ್ ಸ್ಥಳಗಳನ್ನು ಗುರುತಿಸಿ, ದಾಳಿ ನಡೆಸುವ ಮೂಲಕ ಅನಧಿಕೃತ ಗ್ಯಾಸ್ ರಿಫಿಲ್ಲಿಂಗ್‌ ಮಾಡುವವರ ಮೇಲೆ ಪ್ರಕರಣ ದಾಖಲಿಸಿ ಕಠಿಣ ಕ್ರಮ ಕೈಗೊಳ್ಳಬೇಕು ಎಂದು ಜಿಲ್ಲಾಧಿಕಾರಿ ಟಿ.ಭೂಬಾಲನ್ ಸೂಚನೆ ನೀಡಿದರು.

ಕನ್ನಡಪ್ರಭ ವಾರ್ತೆ ವಿಜಯಪುರ

ವಿಜಯಪುರದಲ್ಲಿ ನಡೆಯುತ್ತಿರುವ ಅನಧಿಕೃತ ಗ್ಯಾಸ್ ರಿಫಿಲ್ಲಿಂಗ್ ಸ್ಥಳಗಳನ್ನು ಗುರುತಿಸಿ, ದಾಳಿ ನಡೆಸುವ ಮೂಲಕ ಅನಧಿಕೃತ ಗ್ಯಾಸ್ ರಿಫಿಲ್ಲಿಂಗ್‌ ಮಾಡುವವರ ಮೇಲೆ ಪ್ರಕರಣ ದಾಖಲಿಸಿ ಕಠಿಣ ಕ್ರಮ ಕೈಗೊಳ್ಳಬೇಕು ಎಂದು ಜಿಲ್ಲಾಧಿಕಾರಿ ಟಿ.ಭೂಬಾಲನ್ ಸೂಚನೆ ನೀಡಿದರು. ನಗರದ ಜಿಲ್ಲಾಧಿಕಾರಿಗಳ ಕಚೇರಿ ಸಭಾಂಗಣದಲ್ಲಿ ಆಹಾರ, ನಾಗರಿಕ ಸರಬರಾಜು ಮತ್ತು ಗ್ರಾಹಕರ ವ್ಯವಹಾರಗಳ ಇಲಾಖೆ ಸಭೆಯಲ್ಲಿ ಅವರು ಮಾತನಾಡಿದರು. ಗೃಹ ಬಳಕೆ ಎಲ್ಪಿಜಿ ಗ್ಯಾಸ್ ಅನಧಿಕೃತವಾಗಿ ಅಟೋಗಳಿಗೆ, ಹೋಟೆಲಗಳಲ್ಲಿ, ಬೀದಿಬದಿ ಆಹಾರ ತಯಾರಿಕೆ ವ್ಯಾಪಾರಸ್ಥರು ಬಳಕೆ ಮಾಡುವುದು ಅಲ್ಲದೇ ವಾಣಿಜ್ಯೋದ್ಯಮ ಸಿಲಿಂಡರ್‌ಗಳಿಗೆ ಮರುಭರ್ತಿ ಮಾಡಿ ಮಾರಾಟ ಮಾಡುತ್ತಿರುವುದನ್ನು ನಿಯಂತ್ರಿಸಲು ಕಟ್ಟುನಿಟ್ಟಿನ ಕ್ರಮ ಕೈಗೊಳ್ಳೂವಂತೆ ಅವರು ಸಂಬಂಧಿಸಿದ ಅಧಿಕಾರಿಗಳಿಗೆ ಸೂಚನೆ ನೀಡಿದರು. ಅನಧಿಕೃತವಾಗಿ ಎಲ್ಪಿಜಿ ಬಳಕೆಯಿಂದ ಇತ್ತೀಚೆಗೆ ಒಂದು ಘಟನೆಯಲ್ಲಿ ೨೨ ವರ್ಷದ ವ್ಯಕ್ತಿ ಪ್ರಾಣ ಕಳೆದುಕೊಂಡಿರುವ ಕುರಿತು ವಿವರಿಸಿದ ಅವರು, ಆಯಾ ಸಂಬಂಧಿಸಿದ ಇಲಾಖೆಗಳು ತಮ್ಮ ಕಾರ್ಯವ್ಯಾಪ್ತಿಯ ಅಧಿಕಾರವನ್ನು ಬಳಸಿ ನಗರದಲ್ಲಿ ಅಕ್ರಮವಾಗಿ ಗೃಹಬಳಕೆ ಎಲ್ಪಿಜಿ ಗ್ಯಾಸ್‌ನ್ನು ಅಟೋಗಳಿಗೆ, ಹೋಟೆಲಗಳಲ್ಲಿ, ಬೀದಿಬದಿ ಆಹಾರ ತಯಾರಿಕೆ ವ್ಯಾಪಾರಸ್ಥರು ಬಳಕೆ ಮಾಡುವುದು ವಾಣಿಜ್ಯ ಬಳಕೆ ಸಿಲಿಂಡರಗಳಿಗೆ ಮರುಭರ್ತಿ ಮಾಡಿ ಕಾಳಸಂತೆಯಲ್ಲಿ ಮಾರಾಟ ಮಾಡುವುದನ್ನು ನಿಯಂತ್ರಿಸಬೇಕು. ಅನಧಿಕೃತ ಗ್ಯಾಸ್ ರಿಫಿಲ್ಲಿಂಗ್‌ ಸ್ಥಳಗಳನ್ನು ಪತ್ತೆ ಮಾಢಿ ಪಾಲಿಕೆ ವತಿಯಿಂದ ತೆರವುಗೊಳಿಸಿ, ಇಂತಹ ಸ್ಥಳಗಳ ವಿದ್ಯುತ್ ಸಂಪರ್ಕ ಕಡಿತಗೊಳಿಸುವಂತೆ ಸೂಚಿಸಿದರು.ನಗರದಲ್ಲಿ ೭ ಅಧಿಕೃತ ಗ್ಯಾಸ್ ಎಜೆನ್ಸಿಗಳು ಕಾರ್ಯನಿರ್ವಹಿಸುತ್ತಿದ್ದು, ಏಜೆನ್ಸಿಗಳೂ ಕಡ್ಡಾಯವಾಗಿ ನಿಯಮಗಳನ್ನು ಪಾಲಿಸಿ ಗ್ಯಾಸ್ ವಿತರಣೆಗೆ ಕ್ರಮ ವಹಿಸಬೇಕು. ನಿಯಮಗಳನ್ನು ಪಾಲಿಸದ ಏಜೆನ್ಸಿಗಳ ಮೇಲೆಯೂ ಸಹ ಪ್ರಕರಣ ದಾಖಲಿಸಿ ಲೈಸನ್ಸ್ ರದ್ಧತಿಗೆ ಕ್ರಮ ವಹಿಸಲಾಗುವುದು. ನಗರದಲ್ಲಿ ಯಾವ ಯಾವ ಸ್ಥಳಗಳಲ್ಲಿ ಅನಧಿಕೃತ ಗ್ಯಾಸ್ ರಿಫಿಲ್ಲಿಂಗ್‌ ಮಾಡಲಾಗುತ್ತಿದೆ ಎಂಬ ಕುರಿತು ಪರಿಶೀಲನೆ ನಡೆಸಿ, ಮಾಹಿತಿ ಒದಗಿಸಲು ಅಧಿಕಾರಿಗಳ ಸಮಿತಿ ರಚಿಸುವಂತೆ ತಿಳಿಸಿದರು.ಜಿಲ್ಲಾ ಪೊಲೀಸ್ ವರಿಷ್ಠಾಧಿಕಾರಿ ಲಕ್ಷಣ ನಿಂಬರಗಿ ಮಾತನಾಡಿ, ಅನಧಕೃತ ಗ್ಯಾಸ್ ರಿಪಿಲ್ಲಿಂಗ್‌ನಲ್ಲಿ ತೊಡಗಿದವರ ವಿರುದ್ಧ ಕ್ರಮ ಕೈಗೊಳ್ಳಲು ಪೊಲೀಸ್ ಇಲಾಖೆಯಿಂದ ಎಲ್ಲ ಸಹಕಾರ ನೀಡುವುದಾಗಿ ತಿಳಿಸಿದರು.

ಆಹಾರ ಇಲಾಖೆ ಉಪನಿರ್ದೇಶಕ ವಿನಯಕುಮಾರ ಪಾಟೀಲ ಮಾತನಾಡಿ, ಪೋಲಿಸ್‌ ಇಲಾಖೆ ಸಹಾಯದೊಂದಿಗೆ ಹಾಗೂ ಖಚಿತ ಮಾಹಿತಿ ಮೇರೆಗೆ ನಗರದಲ್ಲಿ ೨೦೨೪ನೇ ನವೆಂಬರ ತಿಂಗಳಿನಿಂದ ಇಲ್ಲಿಯವರೆಗೆ ಒಟ್ಟು ೧೯ ಪ್ರಕರಣಗಳನ್ನು ದಾಖಲಿಸಿ ಸುಮಾರು ೧೪೬ ಸಿಲಿಂಡರ್‌ಗಳನ್ನು ಜಪ್ತಿ ಮಾಡಲಾಗಿದೆ ಎಂದು ಮಾಹಿತಿ ನೀಡಿದರು.ಸಭೆಯಲ್ಲಿ ಉಪ ವಿಭಾಗಾಧಿಕಾರಿ ಗುರುನಾಥ ದಡ್ಡೆ, ಪಾಲಿಕೆ ಆಯುಕ್ತ ವಿಜಯಕುಮಾರ ಮೆಕ್ಕಳಕಿ, ಡಿವೈಎಸ್ಪಿ ಬಸವರಾಜ ಯಲಿಗಾರ, ಪ್ರಾದೇಶಿಕ ಸಾರಿಗೆ ಅಧಿಕಾರಿ ವಸೀಮ ಬಾಬಾ ಸೇರಿ ಮುಂತಾದವರು ಇದ್ದರು.