ಪ್ರಶಾಂತವಾದ ಒಂದು ಕೊಳದಲ್ಲಿ ಬಿದ್ದ ಕಲ್ಲು, ನೂರಾರು ತರಂಗಗಳನ್ನು ಉಂಟು ಮಾಡಿ ಬಿಡುತ್ತದೆ. ಹಾಗೆಯೇ ಜೀವನದಲ್ಲಿ ಬರುವಂತಹ ಯಾವುದಾದರೊಂದು ಸಣ್ಣ ವಿಷಯ, ಘಟನೆಗಳು ಸಹ ನಮ್ಮ ಮನಸ್ಸಿನಲ್ಲಿ ಅಶಾಂತಿಯ ನೂರಾರು ತರಂಗಗಳನ್ನು ಉಂಟು ಮಾಡಿ ಬಿಡುತ್ತದೆ. ಪರಮಾತ್ಮನ ಕುರಿತ ಅಚಲ ನಂಬಿಕೆಯಿಂದ, ಪರಮಾತ್ಮನ ನಾಮಸ್ಮರಣೆಯ ಅನುಸಂಧಾನ ಮಾಡಿದರೆ ನಮ್ಮ ಕೋಟಿ ಜನ್ಮದ ಪಾಪ ಕರ್ಮಗಳನ್ನು ಕಳೆದುಕೊಳ್ಳಲು ಸಾಧ್ಯ ಎಂದು ರಾಜ್ಯ ಚಿನ್ಮಯ ಮಿಷನ್‌ನ ಅಧ್ಯಕ್ಷರಾದ ಪೂಜ್ಯ ಸ್ವಾಮಿ ಬ್ರಹ್ಮಾನಂದ ಸರಸ್ವತಿರವರು ತಿಳಿಸಿದರು.
ಕನ್ನಡಪ್ರಭ ವಾರ್ತೆ ಶಿವಮೊಗ್ಗ
ಪ್ರಶಾಂತವಾದ ಒಂದು ಕೊಳದಲ್ಲಿ ಬಿದ್ದ ಕಲ್ಲು, ನೂರಾರು ತರಂಗಗಳನ್ನು ಉಂಟು ಮಾಡಿ ಬಿಡುತ್ತದೆ. ಹಾಗೆಯೇ ಜೀವನದಲ್ಲಿ ಬರುವಂತಹ ಯಾವುದಾದರೊಂದು ಸಣ್ಣ ವಿಷಯ, ಘಟನೆಗಳು ಸಹ ನಮ್ಮ ಮನಸ್ಸಿನಲ್ಲಿ ಅಶಾಂತಿಯ ನೂರಾರು ತರಂಗಗಳನ್ನು ಉಂಟು ಮಾಡಿ ಬಿಡುತ್ತದೆ. ಪರಮಾತ್ಮನ ಕುರಿತ ಅಚಲ ನಂಬಿಕೆಯಿಂದ, ಪರಮಾತ್ಮನ ನಾಮಸ್ಮರಣೆಯ ಅನುಸಂಧಾನ ಮಾಡಿದರೆ ನಮ್ಮ ಕೋಟಿ ಜನ್ಮದ ಪಾಪ ಕರ್ಮಗಳನ್ನು ಕಳೆದುಕೊಳ್ಳಲು ಸಾಧ್ಯ ಎಂದು ರಾಜ್ಯ ಚಿನ್ಮಯ ಮಿಷನ್‌ನ ಅಧ್ಯಕ್ಷರಾದ ಪೂಜ್ಯ ಸ್ವಾಮಿ ಬ್ರಹ್ಮಾನಂದ ಸರಸ್ವತಿರವರು ತಿಳಿಸಿದರು.ಶಿವಮೊಗ್ಗ ಹಳೇ ಅಂಚೆ ಕಚೇರಿ ರಸ್ತೆಯಲ್ಲಿರುವ ಚಿನ್ಮಯ ಮಿಷನ್ ಸತ್ಸಂಗ ಭವನದಲ್ಲಿ ನಡೆದ ನವೀಕೃತ ಚಿನ್ಮಯ ಮಿಷನ್ ಸತ್ಸಂಗ ಭವನದ ಲೋಕಾರ್ಪಣೆ ಕಾರ್ಯಕ್ರಮದ ದಿವ್ಯ ಸಾನ್ನಿಧ್ಯ ವಹಿಸಿ ಪೂಜ್ಯರು ಆಶೀರ್ವಚನ ನೀಡಿದರು. ಪೂಜ್ಯರು ತಮ್ಮ ಆಶೀರ್ವಚನದಲ್ಲಿ ಪ್ರತಿಯೊಬ್ಬರ ಮನಸ್ಸಿನಲ್ಲಿಯೂ ನೋವು, ಚಿಂತೆ, ಕೊಳಕು ಭಾವನೆಗಳು ತುಂಬಿಕೊಂಡಿರುತ್ತದೆ. ಇದು ಮನಸ್ಸಿನ ಸಹಜ ಪ್ರವೃತ್ತಿಯಾಗಿರುತ್ತದೆ. ಆ ಕೊಳಕು ಭಾವನೆಯಿಂದ ಮನಸ್ಸನ್ನು ಹೊರತರುವ ಉದ್ದೇಶದಿಂದಲೇ ನಾವು ಪೂಜೆ, ಜಪ ಮಾಡುವುದು. ಭಗವಂತನ ನಾಮ ಸ್ಮರಣೆಯಿಂದ ಮಾತ್ರ ನಾವು ನಮ್ಮ ಮನಸ್ಸನ್ನು ಪ್ರಶಾಂತವಾಗಿಟ್ಟು ಕೊಳ್ಳಲು ಸಾಧ್ಯ. ನಮ್ಮ ಅಂತಃಕರಣದ ಪರಿಶುದ್ಧತೆಯೇ ನಿಜ ಆಧ್ಯಾತ್ಮಿಕ ಸಾಧನೆಯಾಗಿದೆ ಎಂದು ಹೇಳಿದರು.
ನಮ್ಮ ಮನಸ್ಸಿನ ಎಲ್ಲಾ ಕೊಳಕು ಭಾವನೆಗಳನ್ನು ಹೊರಹಾಕಿ, ಪರಿಶುದ್ಧಭಾವ ಮತ್ತು ಕರ್ತವ್ಯ ಪ್ರಜ್ಞೆಯಿಂದ ನಮ್ಮ ಕೆಲಸ ಕಾರ್ಯಗಳನ್ನು ಮಾಡುತ್ತಾ ಸಾಗಬೇಕು. ಪ್ರತಿಫಲದ ಯಾವುದೇ ಆಶಾ ಭಾವನೆ ಇಲ್ಲದೆ, ಪರಮಾತ್ಮನಿಗೆ ಶರಣಾಗಿ ಜೀವನ ಸಾಗಿಸಬೇಕು. ನಿಸ್ವಾರ್ಥ ಭಾವದಿಂದ ಮಾಡುವ ನಮ್ಮ ಪ್ರತಿಯೊಂದು ಕಾರ್ಯವು ಪರಮಾತ್ಮನಿಗೆ ಸಲ್ಲಿಸುವ ಭಕ್ತಿ ಎಂದು ಭಾವಿಸಬೇಕು. ಕರ್ಮಫಲ ತ್ಯಾಗ ಮಾಡುವುದೇ ನಿಜಾರ್ಥದಲ್ಲಿ ಯೋಗ ಸಾಧನೆಯಾಗಿದೆ. ಯಾರು ಆ ರೀತಿಯಲ್ಲಿ ಯೋಗದ ಆಚರಣೆ ಮಾಡುತ್ತಾರೆಯೂ, ಅವರೇ ನಿಜವಾಗಿಯೂ ಯೋಗಿಗಳು ಎನಿಸಿಕೊಳ್ಳುತ್ತಾರೆ ಎಂದರು.ಸ್ವಾಮಿ ಚಿನ್ಮಯಾನಂದರು ಅಂತಹ ಯೋಗ ಜೀವನದಲ್ಲಿ ಸಾಗಿ ಲೋಕ ಹಿತ ಬಯಸಿದ ಮಹಾಸಂತ ಎನ್ನಿಸಿಕೊಂಡವರು ಎಂದು ತಿಳಿಸಿದರು. ಪೂಜೆ ಪ್ರಾರ್ಥನೆಯೊಂದಿಗೆ ಪ್ರಾರಂಭಗೊಂಡ ಸತ್ಸಂಗ ಕಾರ್ಯಕ್ರಮದಲ್ಲಿ ನವೀಕರಣಗೊಂಡ ಸತ್ಸಂಗ ಭವನದ ದಾನಿಗಳಾದ ಶ್ರೀಯತ ಕೃಷ್ಣ ಕುಮಾರರವರಿಗೆ ಅಭಿನಂದನೆ ಸಲ್ಲಿಸಲಾಯಿತು. ಕಾರ್ಯಕ್ರಮದಲ್ಲಿ ಚಿನ್ಮಯ ಮಿಷನ್ ಅಧ್ಯಕ್ಷರಾದ ರಮೇಶ್ ಅವಧಾನಿ, ಪೂಜ್ಯರಾದ ಕೃತ್ಮಾನಂದಜೀ, ಆದಿತ್ಯನಂದಜೀರವರು ಉಪಸ್ಥಿತರಿದ್ದರು.