ಮಂಜುನಾಥ ಕೆ.ಎಂ.
ಹೊಸಪೇಟೆ : ಕರ್ನಾಟಕ, ಆಂಧ್ರಪ್ರದೇಶ, ತೆಲಂಗಾಣ ರಾಜ್ಯಗಳ ಕೋಟ್ಯಂತರ ಜನರ ಜೀವನಾಡಿ ತುಂಗಭದ್ರಾ ಜಲಾಶಯಕ್ಕೆ ಅಳವಡಿಸಿರುವ ನೂತನ 33 ಕ್ರಸ್ಟ್ ಗೇಟ್ (ಸ್ಟೀಲ್‌ವೇ ಗೇಟ್) ಲೋಕಾರ್ಪಣೆ ಕಾರ್ಯಕ್ರಮ ಗುರುವಾರ ಬೆಳಗ್ಗೆ 11 ಗಂಟೆಗೆ ಮೂರೂ ರಾಜ್ಯಗಳ ಮುಖ್ಯಮಂತ್ರಿಗಳು ಮತ್ತು ಕೇಂದ್ರ ನೀರಾವರಿ ಸಚಿವರ ಸಮ್ಮುಖದಲ್ಲಿ ಮುನಿರಾಬಾದ್‌ನಲ್ಲಿ ನೆರವೇರಲಿದೆ.
ಮುನಿರಾಬಾದ್‌ನ ಸರ್ಕಾರಿ ಹೈಸ್ಕೂಲ್ ಮೈದಾನದಲ್ಲಿ ಸಮಾವೇಶ ನಡೆಯಲಿದ್ದು, ಮುಖ್ಯಮಂತ್ರಿ ಡಿ.ಕೆ.ಶಿವಕುಮಾರ್, ಕೇಂದ್ರ ಜಲಶಕ್ತಿ ಸಚಿವ ಸಿ.ಆರ್.ಪಾಟೀಲ್, ಆಂಧ್ರ ಪ್ರದೇಶದ ಮುಖ್ಯಮಂತ್ರಿ ಎನ್.ಚಂದ್ರಬಾಬು ನಾಯ್ಡು, ತೆಲಂಗಾಣ ಮುಖ್ಯಮಂತ್ರಿ ಎ.ರೇವಂತ್ ರೆಡ್ಡಿ, ಮೂರೂ ರಾಜ್ಯಗಳ ಉಪ ಮುಖ್ಯಮಂತ್ರಿಗಳು, ಜಲಸಂಪನ್ಮೂಲ ಸಚಿವರು, ಕೇಂದ್ರ ಜಲಶಕ್ತಿ ಹಾಗೂ ರೈಲ್ವೆ ಖಾತೆ ರಾಜ್ಯ ಸಚಿವ ವಿ.ಸೋಮಣ್ಣ, ಕೇಂದ್ರ ಜಲಶಕ್ತಿ ಖಾತೆ ರಾಜ್ಯ ಸಚಿವ ರಾಜಭೂಷಣ ಚೌಧರಿ ಪಾಲ್ಗೊಳ್ಳಲಿದ್ದಾರೆ.
ಕಾರ್ಯಕ್ರಮದ ಹಿನ್ನೆಲೆಯಲ್ಲಿ ತುಂಗಭದ್ರಾ ಜಲಾಶಯವನ್ನು ಮದುವಣಗಿತ್ತಿಯಂತೆ ಅಲಂಕರಿಸಲಾಗಿದೆ. ತಳಿರು-ತೋರಣ ಹಾಗೂ ವಿದ್ಯುತ್ ದೀಪಾಲಂಕಾರದಿಂದ ಜಲಾಶಯ ರಾರಾಜಿಸುತ್ತಿದೆ. ಕಾರ್ಯಕ್ರಮದಲ್ಲಿ ಸುಮಾರು 30 ಸಾವಿರಕ್ಕೂ ಹೆಚ್ಚು ಜನರು ಪಾಲ್ಗೊಳ್ಳುವ ನಿರೀಕ್ಷೆ ಇದೆ. ಗಣ್ಯರು ವಿಶೇಷ ವಿಮಾನದ ಮೂಲಕ ಜಿಂದಾಲ್ ವಿಮಾನ ನಿಲ್ದಾಣಕ್ಕೆ ಆಗಮಿಸಿ, ಅಲ್ಲಿಂದ ನಾಲ್ಕು ಹೆಲಿಕಾಪ್ಟರ್ ಮೂಲಕ ಮುನಿರಾಬಾದ್‌ಗೆ ಆಗಮಿಸಿ, ಅಲ್ಲಿಂದ ರಸ್ತೆ ಮುಖಾಂತರ ಡ್ಯಾಂ ಸೈಟ್‌ಗೆ ತೆರಳಲಿದ್ದಾರೆ. ಮುನಿರಾಬಾದ್ ಆರಕ್ಷಕರ ಭದ್ರಕೋಟೆಯಾಗಿ ಪರಿಣಮಿಸಿದೆ.
2024ರ ಆಗಸ್ಟ್‌ನಲ್ಲಿ ಕಳಚಿದ ಗೇಟ್:
73 ವರ್ಷಗಳ ಹಿಂದೆ ನಿರ್ಮಾಣವಾದ ತುಂಗಭದ್ರಾ ಜಲಾಶಯದ 19ನೇ ಕ್ರಸ್ಟ್ ಗೇಟ್ 2024ರ ಆಗಸ್ಟ್ 10 ರಂದು ರಾತ್ರಿ ದಿಢೀರನೇ ಕಳಚಿ ಬಿದ್ದು ನೀರಿನಲ್ಲಿ ಕೊಚ್ಚಿ ಹೋಯಿತು. ಜಲಾಶಯದಿಂದ ಅಪಾರ ಪ್ರಮಾಣದ ನೀರು ಪೋಲಾಯಿತು. ಬಳಿಕ ಜಲಾಶಯಗಳ ಗೇಟ್ ತಜ್ಞ ಕನ್ನಯ್ಯ ನಾಯ್ಡು ಅವರ ನೇತೃತ್ವದಲ್ಲಿ ಸ್ಟಾಪ್‌ಲಾಗ್ ಗೇಟ್ ಅಳವಡಿಸಿ ನೀರು ನಿಲ್ಲಿಸಲಾಯಿತು.
ಬಳಿಕ, ಎಲ್ಲ ಗೇಟ್‌ಗಳು ಶಿಥಿಲವಾಗಿದ್ದು ಬದಲಾಯಿಸಬೇಕು ಎಂದು ತಜ್ಞರ ಸಲಹೆ ಮೇರೆಗೆ 2025ರ ಡಿಸೆಂಬರ್ 12ರಂದು ಅಳವಡಿಕೆ ಕಾರ್ಯ ಆರಂಭಿಸಲಾಯಿತು. 121 ದಿನದಲ್ಲಿ ಅಂದರೆ, 2026ರ ಏಪ್ರಿಲ್ 25ಕ್ಕೆ ಎಲ್ಲ ಗೇಟ್‌ಗಳನ್ನು ಅಳವಡಿಸುವ ಕಾರ್ಯ ಪೂರ್ತಿಗೊಂಡಿತು. ಬಳಿಕ ಎಲ್ಲ ಗೇಟ್‌ಗಳ ಚೈನ್ ಸಹ ಹಳತಾಗಿದ್ದರಿಂದ ಅವನ್ನೂ ಬದಲಾಯಿಸಿದ್ದು, ಇದೀಗ ಎಲ್ಲ ಕಾಮಗಾರಿ ಮುಗಿದು ಲೋಕಾರ್ಪಣೆಗೆ ಸಜ್ಜುಗೊಂಡಿದೆ. ಗೇಟ್ ಬದಲಾವಣೆಗೆ ₹58 ಕೋಟಿ ವೆಚ್ಚವಾಗಿದ್ದು, ಮೂರು ರಾಜ್ಯಗಳು ತಮ್ಮ ಪಾಲಿನ ಮೊತ್ತ ನೀಡಿವೆ.
ತುಂಗಭದ್ರಾ ಜಲಾಶಯದಲ್ಲಿ ಸಂಗ್ರಹವಾಗುವ ನೀರನ್ನು ಕಾಲುವೆಗಳ ಮೂಲಕ ವಿಜಯನಗರ, ಬಳ್ಳಾರಿ, ಕೊಪ್ಪಳ, ರಾಯಚೂರು ಮತ್ತು ಆಂಧ್ರ ಮತ್ತು ತೆಲಂಗಾಣದ ಕರ್ನೂಲ್, ಮೆಹಬೂಬನಗರ, ಕಡಪ, ಅನಂತಪುರ ಜಿಲ್ಲೆಗಳಿಗೆ ಕುಡಿಯುವ ನೀರು, ಕೃಷಿ, ಕೈಗಾರಿಕೆಗಳಿಗೆ ಪೂರೈಸಲಾಗುತ್ತಿದೆ.
ನೆಹರು ಲೋಕಾರ್ಪಣೆ:
ಈ ಜಲಾಶಯವನ್ನು 1953ರ ಜುಲೈ 18ರಂದು ಅಂದಿನ ಪ್ರಧಾನಿ ಜವಾಹರಲಾಲ್ ನೆಹರು ಲೋಕಾರ್ಪಣೆ ಮಾಡಿದ್ದರು. ಅಂದಾಜು ₹17 ಕೋಟಿ ವೆಚ್ಚದಲ್ಲಿ ಜಲಾಶಯ ನಿರ್ಮಿಸಲಾಗಿತ್ತು. ಆ ವೇಳೆ ಸುಮಾರು 93 ಗ್ರಾಮಗಳು ಮುಳುಗಡೆಯಾಗಿದ್ದು, 55 ಸಾವಿರ ಜನರನ್ನು ಸ್ಥಳಾಂತರಿಸಲಾಗಿತ್ತು.
ತುಂಗಭದ್ರಾ ಜಲಾಶಯವು 133 ಟಿಎಂಸಿ ಅಡಿ ನೀರು ಶೇಖರಣಾ ಸಾಮರ್ಥ್ಯ ಹೊಂದಿದೆ. 2,441ಮೀಟರ್ ಉದ್ದ ಹಾಗೂ 49.38 ಮೀಟರ್ ಎತ್ತರ ಹಾಗೂ 378 ಚದರ ಕಿ.ಮೀ.ಪ್ರದೇಶ ವ್ಯಾಪ್ತಿಯಲ್ಲಿದೆ. 33 ಕ್ರಸ್ಟ್‌ಗೇಟ್‌ಗಳನ್ನು ಹೊಂದಿರುವ ರಾಜ್ಯದ ಅತಿದೊಡ್ಡ ಜಲಾಶಯ ಎಂಬ ಹೆಗ್ಗಳಿಕೆಯನ್ನು ಪಡೆದಿದೆ.
ಈ ಜಲಾಶಯದಿಂದ 17.33 ಲಕ್ಷ ಎಕರೆ (7.02 ಲಕ್ಷ ಹೆಕ್ಟರ್) ಪ್ರದೇಶಕ್ಕೆ ನೀರಾವರಿ ಸೌಲಭ್ಯ ಒದಗಿಸುತ್ತಿದ್ದು, ಅದರಲ್ಲಿ 9.26 ಲಕ್ಷ ಎಕರೆ (3.75 ಲಕ್ಷ ಹೆಕ್ಟರ್) ಕರ್ನಾಟಕ ವ್ಯಾಪ್ತಿಗೆ ಬರುತ್ತದೆ. 7.20 ಲಕ್ಷ ಎಕರೆ (2.91 ಲಕ್ಷ ಹೆಕ್ಟರ್) ಆಂಧ್ರಪ್ರದೇಶ ವ್ಯಾಪ್ತಿಗೆ ಮತ್ತು 0.87 ಲಕ್ಷ ಎಕರೆ (0.35 ಲಕ್ಷ ಹೆಕ್ಟರ್) ತೆಲಂಗಾಣ ವ್ಯಾಪ್ತಿಗೆ ಬರುತ್ತದೆ.
