ಕೊಪ್ಪಳ: ಮುಖ್ಯಮಂತ್ರಿ ಜೂ. 25ರಂದು ಮುನಿರಾಬಾದ್ ಡ್ಯಾಂ ಕ್ರಸ್ಟ್ ಗೇಟ್ ಲೋಕಾರ್ಪಣೆ ಮಾಡುತ್ತಿದ್ದು, ಶಿಷ್ಟಾಚಾರದ ಕಾರ್ಯಕ್ರಮಕ್ಕಷ್ಟೇ ಸೀಮಿತರಾಗದೆ ತಾಲೂಕಿನ ಬಾಧಿತ ಹಳ್ಳಿಯ ಜನರನ್ನು ಭೇಟಿ ಮಾಡಿ, ಬಸಾಪುರ ಕೆರೆ ಹೋರಾಟ ಮತ್ತು ಕೊಪ್ಪಳ ನಗರದಲ್ಲಿ ಬಲ್ಡೋಟ ವಿರೋಧಿ ಹೋರಾಟ ಸ್ಥಳಕ್ಕೆ ಭೇಟಿ ಕೊಡಲಿ ಎಂದು ನಿವೃತ್ತ ಉಪನ್ಯಾಸಕ ಶಂಭುಲಿಂಗಪ್ಪ ಹೇಳಿದರು.

ನಗರದ ನಗರಸಭೆ ಆವರಣದಲ್ಲಿ 235 ದಿನಗಳಿಂದ ಕೊಪ್ಪಳ ಜಿಲ್ಲಾ ಬಚಾವೋ ಆಂದೋಲನ ಸಮಿತಿ ಹಾಗೂ ಪರಸರ ಹಿತರಕ್ಷಣಾ ವೇದಿಕೆಯ ಜಂಟಿ ನೇತೃತ್ವದಲ್ಲಿ ಜರುಗುತ್ತಿರುವ ಧರಣಿ ಉದ್ದೇಶಿಸಿ ಮಾತನಾಡಿದ ಅವರು, ಬಲ್ಡೋಟ ತಡೆಯುವ ಕುರಿತು ಕೊಪ್ಪಳ ಜನರ ಹೋರಾಟದ ಬೇಡಿಕೆಯನ್ನು ನನೆಗುದಿಗೆ ಹಾಕಿರುವ ಸರ್ಕಾರದ ಕ್ರಮ ಸರಿಯಲ್ಲ. ಮಾಜಿ ಮುಖ್ಯಮಂತ್ರಿ ಸಿದ್ದರಾಮಯ್ಯ ಅವರು ನಿರ್ಗಮನಕ್ಕೆ ಮುಂಚೆ ನಮಗೆ ನ್ಯಾಯ ಸಿಗುವ ನಿರೀಕ್ಷೆಯಲ್ಲಿ ಇದ್ದೆವು. ಈಗ ಡಿ.ಕೆ. ಶಿವಕುಮಾರ್ ಮುಖ್ಯಮಂತ್ರಿಯಾಗಿ ಅಧಿಕಾರ ಸ್ವೀಕರಿಸಿ ಮೊದಲ ಬಾರಿಗೆ ಜಿಲ್ಲೆಗೆ ಆಗಮಿಸುತ್ತಿದ್ದು, ಕೊಪ್ಪಳ ಜನರ ಪರವಾಗಿ ಹೋರಾಟದ ವೇದಿಕೆಯಿಂದ ಸ್ವಾಗತಿಸುತ್ತೇವೆ. ಜಿಲ್ಲೆಯ ಜ್ವಲಂತ ಸಮಸ್ಯೆಯಾದ ಕಾರ್ಖಾನೆಗಳ ಮಾಲಿನ್ಯ ತೊಡೆದು ಹಾಕಲು ಎರಡು ದಶಕವಾದರೂ ಆಗಲ್ಲ. ಇದರಿಂದ ತಾಲೂಕಿನ 30 ಸಾವಿರ ಎಕರೆ ಕೃಷಿ ಭೂಮಿ, 22 ಹಳ್ಳಿಗಳು ಮಾಲಿನ್ಯದಿಂದ ಹಾಳಾಗಿವೆ ಎಂದರು.

ಅವಳಿ ನಗರದ ಭವಿಷ್ಯ ಮಂಕಾಗಿಸಲು ₹54 ಸಾವಿರ ಕೋಟಿ ಬೃಹತ್ ಬಂಡವಾಳ ಹೂಡಲು ಮುಂದಾದ ಬಲ್ಡೋಟ ಬಿಎಸ್‌ಪಿಎಲ್‌ ವಿರೋಧಿಸಿ, ಬಲ್ಡೋಟ ಎಐಎಸ್ಎಲ್ ಅಕ್ರಮವಾಗಿ ವಶಪಡಿಸಿಕೊಂಡ ನಗರ ಹತ್ತಿರದ 44.35 ಎಕರೆ ಬಸಾಪುರ ಕೆರೆಯನ್ನು ಹೈಕೋರ್ಟ್ ಆದೇಶದಂತೆ ಜನ, ಜಾನುವಾರು ನೀರು ಕುಡಿಯಲು ಮುಕ್ತಗೊಳಿಸಲು ಒತ್ತಾಯಿಸಿ, 2011ರಿಂದ ಬಲ್ಡೋಟ ಎಂಎಸ್‌ಪಿಎಲ್ ಪೆಲ್ಲೆಟೈಜೇಶನ್ ಘಟಕ ಬಂದ್ ಮಾಡಿ ಕೊಪ್ಪಳ ನಗರದ ಜನರ ಆರೋಗ್ಯ ಕಾಪಾಡಬೇಕೆಂದು ಆಗ್ರಹಿಸಿ ಅನಿರ್ದಿಷ್ಟಾವಧಿ ಧರಣಿ ನಡೆಯುತ್ತಿದೆ.

ತುಂಗಭದ್ರಾ ನೀರು ಬಳಸಿಕೊಂಡು ಕೊಪ್ಪಳ ತಾಲೂಕಿನ ಎಲ್ಲ ಗ್ರಾಮಗಳಿಗೆ ಏತ ನೀರಾವರಿ ಪ್ರಯೋಜನ ಪಡೆಯಬಹುದಿತ್ತು ಎಂದು ಹೇಳಿದರು.

ಧರಣಿಯಲ್ಲಿ ಗಾಯಕ ಸದಾಶಿವ ಪಾಟೀಲ್, ಪ್ರಕಾಶಕ ಡಿ.ಎಂ. ಬಡಿಗೇರ, ಸಂಚಾಲಕ ಮಲ್ಲಿಕಾರ್ಜುನ ಬಿ. ಗೋನಾಳ, ಮಹಾಂತೇಶ ಕೊತಬಾಳ, ಕಾವ್ಯಾ ಗಡಾದ, ನಾಗರತ್ನಾ ಮಾದಿನೂರು, ಮಾನವ ಬಂಧುತ್ವ ವೇದಿಕೆಯ ಭೀಮಪ್ಪ ಹವಳಿ, ರಂಗಕರ್ಮಿ ಲಕ್ಷ್ಮಣ ಪಿರಗಾರ, ನಟರಾಜ ಸವಡಿ, ಕೋಟೇಶ ಸಾಣಾಪುರ, ಶರಣು ಬಿ. ಓಜನಹಳ್ಳಿ, ರಾಜಶೇಖರ ಏಳುಬಾವಿ, ಮಹಾದೇವಪ್ಪ ಮಾವಿನಮಡು, ಮಖ್ಬುಲ್ ರಾಯಚೂರು, ಶಿವಪ್ಪ ಜಲ್ಲಿ, ಶಿವಪ್ಪ ಹಲಗೇರಿ, ಅನುಕುಮಾರ, ಬಸವರಾಜ ಹೂಗಾರ, ಯಮನೂರಪ್ಪ ಹಾಲಳ್ಳಿ ಬಸಾಪುರ, ಗಾಳೆಪ್ಪ ಪೂಜಾರ ಹೂವಿನಾಳ, ಮಂಜುನಾಥ ಕವಲೂರು ಇನ್ನಿತರರಿದ್ದರು.