ಸಂಡೂರು: ಮಹನೀಯರ ಹೋರಾಟ, ತ್ಯಾಗ, ಬಲಿದಾನದಿಂದ ನಮಗೆ ಸ್ವಾತಂತ್ರ್ಯ ದೊರಕಿದೆ. 2047ಕ್ಕೆ ಸ್ವಾತಂತ್ರ್ಯ ದೊರೆತು 100 ವರ್ಷವಾಗಲಿದೆ. ಈ ವೇಳೆಗೆ ಭಾರತ ಅಭಿವೃದ್ಧಿ ಹೊಂದಿದ ರಾಷ್ಟ್ರವಾಗಬೇಕು. ದೇಶವನ್ನು ಅಭಿವೃದ್ಧಿ ಹೊಂದಿದ ರಾಷ್ಟ್ರವನ್ನಾಗಿಸಲು ಎಲ್ಲರೂ ಒಟ್ಟಾಗಿ ಶ್ರಮಿಸೋಣ. ದೇಶ ಮೊದಲು ಎಂಬ ಸಂಕಲ್ಪ ನಮ್ಮದಾಗಬೇಕು ಎಂದು ಶಾಸಕಿ ಅನ್ನಪೂರ್ಣಾ ಈ. ತುಕಾರಾಂ ಅಭಿಪ್ರಾಯಪಟ್ಟರು.

ಪಟ್ಟಣದ ಛತ್ರಪತಿ ಶಿವಾಜಿ ವಿದ್ಯಾಮಂದಿರದಲ್ಲಿ ಶನಿವಾರ ತಾಲೂಕು ಆಡಳಿತದ ವತಿಯಿಂದ ನಡೆದ 80ನೇ ಸ್ವಾತಂತ್ರ್ಯ ದಿನಾಚರಣೆ ಅಧ್ಯಕ್ಷತೆ ವಹಿಸಿ ಅವರು ಮಾತನಾಡಿದರು.

ದೇಶಕ್ಕೆ ಸ್ವಾತಂತ್ರ್ಯ ದೊರಕುವ ಮೊದಲೆ ಸಂಡೂರಿನಲ್ಲಿಯ ದೇವಾಲಯಗಳ ಪ್ರವೇಶಕ್ಕೆ ಎಲ್ಲ ಜಾತಿಯವರಿಗೆ ಮುಕ್ತ ಅವಕಾಶ ಕಲ್ಪಿಸಲಾಗಿತ್ತು. ನಾಡಿನ ಅಭಿವೃದ್ಧಿಗೆ ಬಳ್ಳಾರಿ ಜಿಲ್ಲೆ ಹಾಗೂ ಸಂಡೂರು ತಾಲೂಕು ತನ್ನದೇ ಆದ ಕೊಡುಗೆ ನೀಡಿರುವುದು ಹೆಮ್ಮೆಯ ವಿಷಯವಾಗಿದೆ. ಇಲ್ಲಿನ ಲಂಬಾಣಿ ಕಸೂತಿ ಕಲೆಗೆ ಜಿಐ ಮಾನ್ಯತೆ ದೊರೆತಿದೆ. ಇಲ್ಲಿನ ಅದಿರಿನಿಂದ ಉಕ್ಕು ತಯಾರಾಗಿ ನಾಡಿನೆಲ್ಲೆಡೆ ನಿರ್ಮಾಣ ಕಾರ್ಯಕ್ಕೆ ಬಳಕೆಯಾಗುತ್ತಿದೆ. ಗಾಂಧೀಜಿಯವರ ಹೆಜ್ಜೆ ಗುರುತುಗಳನ್ನು ನಾವು ಜಿಲ್ಲೆಯಲ್ಲಿ, ಸಂಡೂರಿನಲ್ಲಿ ಕಾಣಬಹುದಾಗಿದೆ. ಹೋರಾಟಗಾರರ ಆಶಯಗಳನ್ನು ಜೀವನದಲ್ಲಿ ಅಳವಡಿಸಿಕೊಂಡು ಅನುಸರಿಸಿದರೆ ಅದೇ ನಾವು ಅವರಿಗೆ ಕೊಡುವ ದೊಡ್ಡ ಗೌರವವಾಗಿದೆ ಎಂದರು.

ಕ್ಷೇತ್ರದ ಸರ್ವಾಂಗೀಣ ಅಭಿವೃದ್ಧಿಗೆ ಶ್ರಮಿಸಲಾಗುತ್ತಿದೆ. ವಿದ್ಯಾರ್ಥಿಗಳು ಪುಸ್ತಕ ಅಗೆದು ತಮ್ಮ ಜ್ಞಾನವನ್ನು ಹೆಚ್ಚಿಸಿಕೊಳ್ಳಬೇಕು. ತಾಲೂಕಿನ 69 ಶಾಲೆಗಳಲ್ಲಿ ಎಲ್‌ಕೆಜಿ ಹಾಗೂ ಯುಕೆಜಿ ಆರಂಭಿಸಲಾಗಿದೆ. 22 ಪ್ರೌಢ ಶಾಲೆಗಳಲ್ಲಿ ಎಐ ಕೌಶಲ್ಯಾಧಾರಿತ ಶಿಕ್ಷಣಕ್ಕೆ ಕ್ರಮಕೈಗೊಳ್ಳಲಾಗಿದೆ. ಇಲ್ಲಿನ ಗಣಿ ಶಾಪವಾಗಬಾರದು. ಅದು ಬಂಡವಾಳವಾಗಬೇಕು. ಅಭಿವೃದ್ಧಿ ಪರಿಸರ ಸಂರಕ್ಷಣೆಯೊಂದಿಗೆ ಸಾಗಬೇಕು. ಬಾಲ್ಯ ವಿವಾಹ ಸಂಪೂರ್ಣವಾಗಿ ನಿಲ್ಲಬೇಕು. ರೈತರನ್ನು ಗೌರವಿಸುವುದು, ಸ್ವಚ್ಛತೆ ಕಾಪಾಡುವುದು, ತೆರಿಗೆ ಪಾವತಿಸುವುದು, ಪರಿಸರ ಸಂರಕ್ಷಣೆ ಮುಂತಾದವುಗಳು ರಾಷ್ಟ್ರಭಕ್ತಿಯೇ. ದೇಶದ ಏಕತೆ, ಸಮಗ್ರತೆ, ಸಮಾನತೆಯನ್ನು ಸಂರಕ್ಷಿಸಿ, ಸದೃಢ ರಾಷ್ಟ್ರ ನಿರ್ಮಾಣಕ್ಕೆ ಎಲ್ಲರೂ ಶ್ರಮಿಸೋಣ ಎಂದರು.

ಧ್ವಜಾರೋಹಣ ನೆರವೇರಿಸಿ ಮಾತನಾಡಿದ ತಹಸೀಲ್ದಾರ್ ಜಿ. ಅನಿಲ್‌ಕುಮಾರ್, ಇದು ಹೋರಾಟಗಾರರ ತ್ಯಾಗ, ಬಲಿದಾನ ಹಾಗೂ ದೇಶದ ಸಾಧನೆಯನ್ನು ಸ್ಮರಿಸುವ ದಿನ. ಸ್ವಾತಂತ್ರ್ಯ ನಂತರದಲ್ಲಿ ವಿವಿಧ ಕ್ಷೇತ್ರಗಳಲ್ಲಿ ಅಗಾಧವಾದ ಪ್ರಗತಿ ಸಾಧಿಸಿದೆ. ದೇಶವನ್ನು ವಿಕಸಿತ, ಶಕ್ತಿಶಾಲಿ ಹಾಗೂ ಸಮೃದ್ಧ ರಾಷ್ಟ್ರವನ್ನಾಗಿಸುವ ಜವಾಬ್ದಾರಿ ಎಲ್ಲರದ್ದಾಗಿದೆ. ಈ ನಿಟ್ಟಿಯಲ್ಲಿ ಎಲ್ಲರೂ ಒಟ್ಟಾಗಿ ಶ್ರಮಿಸೋಣ ಎಂದರು.


ಕಾರ್ಯಕ್ರಮದಲ್ಲಿ ಎಸ್‌ಎಸ್‌ಎಲ್‌ಸಿ, ಪಿಯುಸಿಯಲ್ಲಿ ತಾಲೂಕಿಗೆ ಅತಿಹೆಚ್ಚು ಅಂಕಗಳಿಸಿದ ವಿದ್ಯಾರ್ಥಿಗಳನ್ನು, ನನ್ನ ಕನಸಿನ ಭಾರತ ಎಂಬ ವಿಷಯ ಕುರಿತು ಏರ್ಪಡಿಸಲಾಗಿದ್ದ ಪ್ರಬಂಧ ಸ್ಪರ್ಧೆಯಲ್ಲಿ, ಪರಿಸರ ಕುರಿತಾದ ಚಿತ್ರಕಲಾ ಸ್ಪರ್ಧೆಗಳಲ್ಲಿ ವಿಜೇತರಾದವರನ್ನು, ವಿವಿಧ ಕ್ಷೇತ್ರಗಳಲ್ಲಿ ಉತ್ತಮ ಸೇವೆ ಸಲ್ಲಿಸಿದವರನ್ನು ಸನ್ಮಾನಿಸಲಾಯಿತು. ಪೊಲೀಸ್, ಗೃಹ ರಕ್ಷಕ ದಳ, ಎನ್‌ಸಿಸಿ, ಸ್ಕೌಟ್ ಮತ್ತು ಗೈಡ್ಸ್ ಸೇರಿದಂತೆ ವಿವಿಧ ಶಾಲೆಗಳ ವಿದ್ಯಾರ್ಥಿಗಳಿಂದ ಆಕರ್ಷಕ ಪಥ ಸಂಚಲನ ಜರುಗಿತು. ಪುರಸಭೆ ಸಿಬ್ಬಂದಿಯಿಂದ ತ್ಯಾಜ್ಯ ವಿಂಗಡಣೆ, ಸ್ವಚ್ಛತೆ ಕುರಿತು ಜಾಗೃತಿ ಮೂಡಿಸುವ ರೂಪಕವನ್ನು ಪ್ರದರ್ಶಿಸಲಾಯಿತು. ವಿವಿಧ ಶಾಲೆಗಳ ವಿದ್ಯಾರ್ಥಿಗಳಿಂದ ಸಾಂಸ್ಕೃತಿಕ ಕಾರ್ಯಕ್ರಮಗಳು ಜರುಗಿದವು.

ಕ್ಷೇತ್ರ ಶಿಕ್ಷಣಾಧಿಕಾರಿ ಡಾ. ಐ.ಆರ್. ಅಕ್ಕಿ ಸ್ವಾಗತಿಸಿದರು. ಶಿಕ್ಷಣ ಸಂಯೋಜಕ ಗೂಳೆಪ್ಪ ನಿರೂಪಿಸಿದರು. ತಾಲೂಕು ಪಂಚಾಯ್ತಿ ಇಒ ಮಡಗಿನ ಬಸಪ್ಪ, ಸರ್ಕಲ್ ಇನ್‌ಸ್ಪೆಕ್ಟರ್ ಮಹೇಶ್‌ಗೌಡ ಬಿ., ಪುರಸಭೆ ಮುಖ್ಯಾಧಿಕಾರಿ ಬಿ. ವಿನಯ್‌ಕುಮಾರ್ ಗೌಡ, ವಿವಿಧ ಇಲಾಖೆ ಅಧಿಕಾರಿಗಳು, ವಾಡಾ ಅಧ್ಯಕ್ಷ ಅಕ್ಷಯ್ ಲಾಡ್, ಗ್ಯಾರಂಟಿ ಯೋಜನೆಗಳ ಅನುಷ್ಠಾನ ಸಮಿತಿ ಜಿಲ್ಲಾ ಉಪಾಧ್ಯಕ್ಷೆ ಆಶಾಲತಾ ಸೋಮಪ್ಪ, ತಾಲೂಕು ಅಧ್ಯಕ್ಷ ನೂರುದ್ದೀನ್, ವಿವಿಧ ಸಂಘ ಸಂಸ್ಥೆಗಳ ಮುಖಂಡರು ಕಾರ್ಯಕ್ರಮದಲ್ಲಿ ಭಾಗವಹಿಸಿದ್ದರು.