ನಾನು ಮಂತ್ರಿಯಾಗಿರೋದಕ್ಕೆ ಶ್ರೀರಾಮುಲುಗೆ ಸಹಿಸಲಾಗುತ್ತಿಲ್ಲ, ಬರೀ ಹೊಟ್ಟೆಕಿಚ್ಚು. ಹೀಗಾಗಿಯೇ ಅವರು ನನ್ನ ರಾಜೀನಾಮೆಗೆ ಒತ್ತಾಯಿಸುತ್ತಾರೆ ಎಂದು ಜಿಲ್ಲಾ ಉಸ್ತುವಾರಿ ಸಚಿವ ಬಿ. ನಾಗೇಂದ್ರ ಹೇಳಿದರು.

ಬಳ್ಳಾರಿ: ನಾನು ಮಂತ್ರಿಯಾಗಿರೋದಕ್ಕೆ ಶ್ರೀರಾಮುಲುಗೆ ಸಹಿಸಲಾಗುತ್ತಿಲ್ಲ, ಬರೀ ಹೊಟ್ಟೆಕಿಚ್ಚು. ಹೀಗಾಗಿಯೇ ಅವರು ನನ್ನ ರಾಜೀನಾಮೆಗೆ ಒತ್ತಾಯಿಸುತ್ತಾರೆ ಎಂದು ಜಿಲ್ಲಾ ಉಸ್ತುವಾರಿ ಸಚಿವ ಬಿ. ನಾಗೇಂದ್ರ ಹೇಳಿದರು.

ಸ್ವಾತಂತ್ರ್ಯ ದಿನಾಚರಣೆ ಸಮಾರಂಭದಲ್ಲಿ ಧ್ವಜಾರೋಹಣ ಬಳಿಕ ಸುದ್ದಿಗೋಷ್ಠಿಯಲ್ಲಿ ಮಾತನಾಡಿದ ಅವರು, ನಾನು ಆರೋಪಿಯೇ ಹೊರತು, ಅಪರಾಧಿಯಲ್ಲ. ಬಿಜೆಪಿಯ ಅನೇಕ ನಾಯಕರ ಮೇಲೂ ಅನೇಕ ಆರೋಪಗಳಿವೆ, ಪ್ರಕರಣಗಳಿವೆ. ಹಾಗಂತ ಅವರು ರಾಜೀನಾಮೆ ನೀಡಿದ್ದಾರಾ? ಈ ಬಗ್ಗೆ ಸದನದಲ್ಲಿ ಪ್ರತಿಪಕ್ಷದ ಪ್ರಶ್ನೆಗೆ ಉತ್ತರಿಸುತ್ತೇವೆ. ಈ ಕುರಿತು ಅವರು ಚರ್ಚೆ ಮಾಡಲಿ, ತಪ್ಪೇನಿಲ್ಲ. ಆದರೆ, ಹೊಟ್ಟೆಕಿಚ್ಚಿನ ಮಾತುಗಳನ್ನಾಡಬಾರದು. ನಾನು ದಲಿತ ಎಂಬ ಕಾರಣಕ್ಕಾಗಿ ತುಳಿಯುವ ಪ್ರಯತ್ನ ನಡೆಯುತ್ತಿದೆ. ನಾನು ದಲಿತ ಎಂಬ ಹೆಮ್ಮೆ ನನಗಿದೆ ಎಂದರು.

ಬಳ್ಳಾರಿ ಜೀನ್ಸ್‌ ಪಾರ್ಕ್ ಸ್ಥಾಪನೆಗೆ ಸಂಬಂಧಿಸಿದಂತೆ ಈಗಾಗಲೇ 664 ಎಕರೆ ಸ್ವಾದೀನ ಮಾಡಿಕೊಳ್ಳಲಾಗಿದೆ. ಒಂದು ಸಾವಿರ ಎಕರೆ ಪ್ರದೇಶದಲ್ಲಿ ಪಾರ್ಕ್ ನಿರ್ಮಿಸುವ ಯೋಜನೆ ಇದಾಗಿದೆ. ತಾಂತ್ರಿಕ ಸಮಸ್ಯೆಯಿಂದ ವಿಳಂಬವಾಗಿತ್ತು, ಸರಿಪಡಿಸುತ್ತೇವೆ. ಬಳ್ಳಾರಿಯ ಜನಸಂಖ್ಯೆ ಬೆಳೆಯುತ್ತಿರುವುದರಿಂದ ಕುಡಿಯುವ ನೀರಿನ ಸಮಸ್ಯೆ ನೀಗಿಸಲು ₹1200 ಕೋಟಿ ವೆಚ್ಚದಲ್ಲಿ ಜಲಾಶಯದಿಂದ ನೇರವಾಗಿ ಬಳ್ಳಾರಿಗೆ ನೀರು ತರುವ ಯೋಜನೆ ಕಾರ್ಯರೂಪ ಪಡೆದುಕೊಂಡಿದೆ. ರಾಜ್ಯದ ಅಭಿವೃದ್ಧಿಗೆ ಮುಖ್ಯಮಂತ್ರಿ ಡಿ.ಕೆ. ಶಿವಕುಮಾರ್ ಅವರು ನೀಲನಕ್ಷೆ ಸಿದ್ಧಪಡಿಸಿಕೊಂಡಿದ್ದು, ಬಳ್ಳಾರಿಯ ಸಮಗ್ರ ಅಭಿವೃದ್ದಿಗೆ ಸಹ ಒತ್ತು ನೀಡುತ್ತೇವೆ. ಇನ್ನು ಬರೀ 20 ತಿಂಗಳು ಮಾತ್ರ ಅಧಿಕಾರದ ಅವಧಿಯಿದೆ. ಈ ಅವಧಿಯನ್ನು ಸರಿಯಾಗಿ ಬಳಸಿಕೊಂಡು ಈ ವರೆಗೆ ಬಾಕಿ ಇರುವ ಎಲ್ಲ ಯೋಜನೆಗಳನ್ನು ಪೂರ್ಣಗೊಳಿಸುವ ಕೆಲಸ ಮಾಡಲಾಗುವುದು ಎಂದು ತಿಳಿಸಿದರು.

ಮೇಯರ್ ಪಿ. ಗಾದೆಪ್ಪ, ಲಿಡ್ಕರ್ ನಿಗಮದ ಅಧ್ಯಕ್ಷ ಮುಂಡರಗಿ ನಾಗರಾಜ್ ಸುದ್ದಿಗೋಷ್ಠಿಯಲ್ಲಿದ್ದರು.