ಕರ್ನಾಟಕ ಅರಣ್ಯ ಇಲಾಖೆಯ ಕೊಡಗು ಅರಣ್ಯ ವೃತ್ತ ಹಾಗೂ ಮಡಿಕೇರಿ ವನ್ಯಜೀವಿ ವಿಭಾಗದ ವತಿಯಿಂದ ಶುಕ್ರವಾರ ಆವಾಸಸ್ಥಾನಗಳ ಸಂಪರ್ಕ, ವನ್ಯಜೀವಿಗಳ ಅಭಿವೃದ್ಧಿ ಎಂಬ ಘೋಷವಾಕ್ಯದೊಂದಿಗೆ 72 ನೇ ವನ್ಯಜೀವಿ ಸಪ್ತಾಹದ ಅಂಗವಾಗಿ ಏರ್ಪಡಿಸಿದ್ದ ವನ್ಯಜೀವಿ ಸಂರಕ್ಷಣೆ ಕುರಿತು ಜಾಗೃತಿ ಮೂಡಿಸಲು ಮಡಿಕೇರಿ ನಗರದ ಅರಣ್ಯ ಭವನದಲ್ಲಿ ಏರ್ಪಡಿಸಿದ್ದ ಬೈಸಿಕಲ್ ಮತ್ತು ಬೈಕ್ ಜಾಥಾಗೆ ಹಸಿರು ನಿಶಾನೆ

ಮಡಿಕೇರಿ: ಉತ್ತಮ ಭವಿಷ್ಯಕ್ಕಾಗಿ ಪ್ರಕೃತಿ, ಪರಿಸರ ಸಂರಕ್ಷಣೆ ಅಗತ್ಯ ಎಂದು ಪ್ರಧಾನ ಜಿಲ್ಲಾ ಮತ್ತು ಸತ್ರ ನ್ಯಾಯಾಧೀಶ ಮಾರುತಿ ಎಸ್.ಬಾಗಡೆ ಹೇಳಿದರು.ಕರ್ನಾಟಕ ಅರಣ್ಯ ಇಲಾಖೆಯ ಕೊಡಗು ಅರಣ್ಯ ವೃತ್ತ ಹಾಗೂ ಮಡಿಕೇರಿ ವನ್ಯಜೀವಿ ವಿಭಾಗದ ವತಿಯಿಂದ ಶುಕ್ರವಾರ ಆವಾಸಸ್ಥಾನಗಳ ಸಂಪರ್ಕ, ವನ್ಯಜೀವಿಗಳ ಅಭಿವೃದ್ಧಿ ಎಂಬ ಘೋಷವಾಕ್ಯದೊಂದಿಗೆ 72 ನೇ ವನ್ಯಜೀವಿ ಸಪ್ತಾಹದ ಅಂಗವಾಗಿ ಏರ್ಪಡಿಸಿದ್ದ ವನ್ಯಜೀವಿ ಸಂರಕ್ಷಣೆ ಕುರಿತು ಜಾಗೃತಿ ಮೂಡಿಸಲು ಮಡಿಕೇರಿ ನಗರದ ಅರಣ್ಯ ಭವನದಲ್ಲಿ ಏರ್ಪಡಿಸಿದ್ದ ಬೈಸಿಕಲ್ ಮತ್ತು ಬೈಕ್ ಜಾಥಾಗೆ ಹಸಿರು ನಿಶಾನೆ ತೋರಿ ಮಾತನಾಡಿದರು.

ಜಿಲ್ಲಾ ಪ್ರವಾಸೋದ್ಯಮ ಇಲಾಖೆ, ಶಾಲಾ ಶಿಕ್ಷಣ ಇಲಾಖೆ, ಗ್ರೀನ್ ಸಿಟಿ ಫೋರಂ, ಕ್ಲೀನ್ ಕೂರ್ಗ್ ಇನಿಷಿಯೇಟಿವ್, ರಾಜ್ಯ ವಿಜ್ಞಾನ ಪರಿಷತ್ತಿನ ಜಿಲ್ಲಾ ಸಮಿತಿ, ಇಕೋ ಕ್ಲಬ್ ಘಟಕ ಹಾಗೂ ವಿವಿಧ ಸಂಘ- ಸಂಸ್ಥೆ ಶಾಲಾ-ಕಾಲೇಜು ಸಹಯೋಗದೊಂದಿಗೆ ಕಾರ್ಯಕ್ರಮ ಏರ್ಪಡಿಸಲಾಯಿತು.ವನ್ಯಜೀವಿ ಸಪ್ತಾಹ ಜಾಗೃತಿ ಅಭಿಯಾನದ ಕರಪತ್ರ ಬಿಡುಗಡೆಗೊಳಿಸಿ ಮಾತನಾಡಿದ ಜಿಲ್ಲಾಧಿಕಾರಿ ಎಸ್.ಜೆ.ಸೋಮಶೇಖರ್, ಅರಣ್ಯ ಮತ್ತು ವನ್ಯಜೀವಿ ಸಂರಕ್ಷಣೆಯು ಕೇವಲ ಅಕ್ಟೋಬರ್ ಮಾಹೆಗೆ ಸೀಮಿತಗೊಳ್ಳದೇ ಇದನ್ನು ನಿರಂತರವಾಗಿ ಹಮ್ಮಿಕೊಳ್ಳುವ ಮೂಲಕ ಜನರಲ್ಲಿ ಜಾಗೃತಿ ಮೂಡಿಸಬೇಕು ಎಂದರು.

ಅಧ್ಯಕ್ಷತೆ ವಹಿಸಿದ್ದ ಕೊಡಗು ಅರಣ್ಯ ವೃತ್ತದ ಅರಣ್ಯ ಸಂರಕ್ಷಣಾಧಿಕಾರಿ ಸೋನಲ್ ವೃಷ್ಣಿ, ಅರಣ್ಯ, ವನ್ಯಜೀವಿಗಳ ಸಂರಕ್ಷಣೆಗೆ ನಾಗರಿಕರ ಸಹಭಾಗಿತ್ವ ಅಗತ್ಯ ಎಂದರು.

ಅರಣ್ಯ ಮತ್ತು ವನ್ಯಜೀವಿಗಳ ಸಂರಕ್ಷಣೆಯ ಮಹತ್ವ ಕುರಿತು ಮಾಹಿತಿ ನೀಡಿ ಪ್ರತಿಜ್ಞಾ ವಿಧಿ ಬೋಧಿಸಿದ ರಾಜ್ಯ ಪರಿಸರ ಪ್ರಶಸ್ತಿ ಪುರಸ್ಕೃತ ಶಿಕ್ಷಕರೂ ಆದ ಜಿಲ್ಲಾ ಪರಿಸರ ಜಾಗೃತಿ ಆಂದೋಲನದ ಸಂಚಾಲಕ ಟಿ.ಜಿ.ಪ್ರೇಮಕುಮಾರ್, ‘ಉತ್ತಮ ಭವಿಷ್ಯಕ್ಕಾಗಿ ಅರಣ್ಯ ಮತ್ತು ವನ್ಯಜೀವಿಗಳ ಸಂರಕ್ಷಣೆಗೆ ನಾವು ಪಣತೊಡಬೇಕುಎಂದರು.ಜಿಲ್ಲಾ ಪೋಲಿಸ್ ವರಿಷ್ಠಾಧಿಕಾರಿ ಆರ್.ಎನ್.ಬಿಂದುಮಣಿ, ಡಿಸಿಎಫ್ ವಿ.ಅಭಿಷೇಕ್ (ಮಡಿಕೇರಿ ಟೆರ್ರಿಟರಿ ವಿಭಾಗ), ತೆಹಸೀನ್ ಬಾನು ದವಡಿ (ವನ್ಯಜೀವಿ ವಿಭಾಗ), ಶ್ರೀನಿವಾಸ್ ನಾಯಕ್( ಆನೆ ಕಾರ್ಯಪಡೆ), ಕೆ.ಪಿ.ಗೋಪಾಲ್( ಸಂಚಾರಿ ದಳ ವಿಭಾಗ), ಸಂದೀಪ್ ಪಿ.ಅಭಯಂಕರ್( ಸಾಮಾಜಿಕ ಅರಣ್ಯ ವಿಭಾಗ), ಎಸಿಎಫ್ ಗಳಾದ ವಿ.ಸೆಂದಿಲ್ ಕುಮಾರ್, ಜೆ. ಅನನ್ಯಕುಮಾರ್, ನವೀನ್ ಕುಮಾರ್, ಪ್ರವಾಸೋದ್ಯಮ ಇಲಾಖೆಯ ಉಪ ನಿರ್ದೇಶಕ ಎಚ್.ಶಶಿಧರ್, ಲಯನ್ಸ್ ಕ್ಲಬ್ ಟ್ರಸ್ಟ್ ನ ಅಧ್ಯಕ್ಷ ಅಂಬೇಕಲ್ ನವೀನ್, ಕೊಡಗು ಟ್ರಾವೆಲ್ ಅಸೋಸಿಯೇಶನ್ ನ ಅಧ್ಯಕ್ಷ ಕುಪ್ಪಂಡ ವಸಂತ್, ಗ್ರೀನ್ ಸಿಟಿ ಫೋರಂ ನ ಮಾಜಿ ಅಧ್ಯಕ್ಷ ಜಯ ಚಿಣ್ಣಪ್ಪ, ವನ್ಯಜೀವಿ ವಿಭಾಗದ ಎಸಿಎಫ್ ಅನನ್ಯಕುಮಾರ್ ಹಾಗೂ ಪುಷ್ಪಗಿರಿ ವನ್ಯಜೀವಿ ವಲಯದ ಆರ್.ಎಫ್.ಓ. ಕೆ.ದಿನೇಶ್, ಗ್ರೀನ್ ಸಿಟಿ ಫೋರಂ ನ ಅಧ್ಯಕ್ಷ ಚೆಯ್ಯಂಡ ಜಿ.ಸತ್ಯ ಹಾಗೂ ಕ್ಲೀನ್ ಕೂರ್ಗ್ ಇನಿಷಿಯೇಟಿವ್‌ನ ಸಂಚಾಲಕ ಅರುಣ್ ಅಪ್ಪಚ್ಚು ಅವರ ನೇತೃತ್ವದಲ್ಲಿ ಬೈಸಿಕಲ್ ಹಾಗೂ ಬೈಕ್ ಜಾಥಾ ನಡೆಯಿತು.

ಜಾಥಾದಲ್ಲಿ ಆರ್.ಎಫ್.ಓ.ಗಳಾದ ಕೋಟ್ರೇಶ್, ಎಚ್.ಎಸ್.ತ್ಯಾಗರಾಜ್, ವಿವೇಕ್, ಅರವಿಂದ್, ಶಿವಶಂಕರ್, ಪರಿಸರ ಕಾರ್ಯಕರ್ತರಾದ ಎಂ.ಎನ್. ವೆಂಕಟನಾಯಕ್, ಟಿ.ವಿ.ಶೈಲಾ, ಹರ್ಷಿತ ಶೆಟ್ಟಿ, ಕೆ.ವಿ.ಉಮೇಶ್, ಸಿ.ಡಿ.ಲೋಕೇಶ್, ಸಾಹುಲ್, ಅಶ್ವತ್, ಬನೀತ್ ಭೋಜಣ್ಣ, ಡಿಆರ್ ಎಫ್ ಗಳು, ಗ್ರೀನ್ ಸಿಟಿ ಫೋರಂ, ರಾಜ್ಯ ವಿಜ್ಞಾನ ಪರಿಷತ್, ಕನ್ನಡ ಸಾಹಿತ್ಯ ಪರಿಷತ್, ಕ್ಲೀನ್ ಕೂರ್ಗ್ ಇನಿಷಿಯೇಟಿವ್‌ನ ಸದಸ್ಯರು, ಅರಣ್ಯ ಸಿಬ್ಬಂದಿ, ಕೊಡಗು ವಿದ್ಯಾಲಯದ ವಿದ್ಯಾರ್ಥಿಗಳು , ವಿವಿಧ ಸಂಘ- ಸಂಸ್ಥೆಯ ಪದಾಧಿಕಾರಿಗಳು ಹಾಗೂ ನಾಗರಿಕರು ಪಾಲ್ಗೊಂಡಿದ್ದರು. ವಿರಾಜಪೇಟೆಯ ಲೀಟಲ್ ಕಾಲರ್ಸ್ ಅಕಾಡೆಮಿ ಶಾಲೆಯ 4ನೇ ತರಗತಿಯ ವಿದ್ಯಾರ್ಥಿನಿ ಟಿ.ಎಂ.ಹಸ್ಮಿತ, ಅರಣ್ಯ, ವನ್ಯಜೀವಿಗಳು ಮತ್ತು ಪರಿಸರ ಸ್ವಚ್ಛತೆ ಕುರಿತು ಮಾತನಾಡಿ ಗಮನ ಸೆಳೆದರು. ಜಾಥಾ: ಬೈಸಿಕಲ್ ಮತ್ತು ರ‍್ಯಾಲಿಯಲ್ಲಿ 100 ಕ್ಕೂ ಹೆಚ್ಚು ಉತ್ಸಾಹಿಗಳು ಭಾಗವಹಿಸಿ ವನ್ಯಜೀವಿಗಳ ಸಂರಕ್ಷಣೆ ಕುರಿತು ಜನಜಾಗೃತಿ ಮೂಡಿಸಿದರು. ಕುಶಾಲನಗರದ ಕೊಡಗು ಜಿಲ್ಲಾ ವಿದ್ಯಾಸಾಗರ ಕಲಾವೇದಿಕೆಯ ಇ.ರಾಜು ಮತ್ತು ತಂಡದವರು ಪರಿಸರ ಗೀತೆ ಹಾಡುವ ಮೂಲಕ ಜಾಥಾಕ್ಕೆ ಮೆರಗು ನೀಡಿದರು. ಬೈಸಿಕಲ್ ಜಾಥಾವು ಮಡಿಕೇರಿ ನಗರದ ಅರಣ್ಯ ಭವನದಿಂದ ಆರಂಭಗೊಂಡು ಮಡಿಕೇರಿ ನಗರದ ಮುಖ್ಯ ರಸ್ತೆಯ ಮೂಲಕ ಟೌನ್‌ಹಾಲ್, ಚೌಕಿ ಮತ್ತು ಮಹದೇವಪೇಟೆ ಮಾರ್ಗವಾಗಿ 4.5 ಕಿ.ಮೀ.ನಷ್ಟು ದೂರ ಕ್ರಮಿಸಿ ಸ್ವಾಗತಬೆಟ್ಟದ ಸಾಲುಮರದ ತಿಮ್ಮಕ್ಕ ಟ್ರೀ ಪಾರ್ಕ್ ನಲ್ಲಿ ಸಮಾಪನಗೊಂಡಿತು.