ಡಿಸಿ ಮನ್ನಾ ಭೂಮಿ ಹಂಚಿಕೆಗೆ ನಿಯಮಾನುಸಾರ ಕ್ರಮ: ದರ್ಶನ್‌

KannadaprabhaNewsNetwork |  
Published : Aug 25, 2026, 03:15 AM IST
ಜಿಲ್ಲಾಧಿಕಾರಿ ದರ್ಶನ್‌ ಎಚ್.ವಿ. | Kannada Prabha

ಸಾರಾಂಶ

ದ.ಕ. ಜಿಲ್ಲೆಯಲ್ಲಿ ಡಿಸಿ ಮನ್ನಾ ಜಮೀನು ಹಂಚಿಕೆಗೆ ನಿಯಮಾಣುಸಾರ ಕ್ರಮ ಕೈಗೊಳ್ಳಲಾಗುವುದು ಎಂದು ಜಿಲ್ಲಾಧಿಕಾರಿ ದರ್ಶನ್‌ ತಿಳಿಸಿದರು.

ಮಂಗಳೂರು: ದ.ಕ. ಜಿಲ್ಲೆಯಲ್ಲಿ ಡಿಸಿ ಮನ್ನಾ ಜಮೀನು ಹಂಚಿಕೆಗೆ ನಿಯಮಾನುಸಾರ ಕ್ರಮ ಕೈಗೊಳ್ಳಲಾಗುವುದು ಎಂದು ಜಿಲ್ಲಾಧಿಕಾರಿ ದರ್ಶನ್‌ ತಿಳಿಸಿದರು.ಸೋಮವಾರ ಪತ್ರಕರ್ತರ ಪ್ರಶ್ನೆಗೆ ಉತ್ತರಿಸಿದ ಅವರು, ಡಿಸಿ ಮನ್ನಾ ಜಮೀನು ಹಂಚಿಕೆಗೆ ಸಂಬಂಧಿಸಿ ಜಿಲ್ಲೆಯಲ್ಲಿ ಲಭ್ಯವಿದ್ದ ಅಂದಾಜು 8,800 ಎಕರೆ ಭೂಮಿಯಲ್ಲಿ 7,400 ಎಕರೆಯಷ್ಟು ಜಿಲ್ಲೆಯಲ್ಲಿ ಹಂಚಿಕೆಯಾಗಿದೆ. ಉಳಿಕೆಯಾಗಿರುವ ಡಿಸಿ ಮನ್ನಾ ಹಾಗೂ ಇತರ ಸರ್ಕಾರಿ ಭೂಮಿಯನ್ನು ಹಂಚಿಕೆ ಮಾಡುವ ನಿಟ್ಟಿನಲ್ಲಿ ಉಳುಮೆ ಮಾಡಲು ಒಂದು ಅಥವಾ 2 ಎಕರೆ ಭೂಮಿ ನೀಡಲು ನಮ್ಮಲ್ಲಿ ಸಾಧ್ಯವಿಲ್ಲ. ಅಷ್ಟು ಪ್ರಮಾಣದಲ್ಲಿ ಕಂದಾಯ ಭೂಮಿ ಲಭ್ಯವಿಲ್ಲ ಎಂದರು.ಈ ಬಗ್ಗೆ ಸರ್ಕಾರದ ಹಂತದಲ್ಲಿ ಚರ್ಚೆಯಲ್ಲಿದ್ದು, ಕನಿಷ್ಟ ನಿವೇಶನವನ್ನಾದರೂ ಒದಗಿಸುವ ನಿಟ್ಟಿನಲ್ಲಿ ಕ್ರಮ ಆಗಬೇಕಾಗಿದೆ. ಕಂದಾಯ ಇಲಾಖೆಯಿಂದ ಪಂಚಾಯಿತಿಗೆ ಹಸ್ತಾಂತರ ಮಾಡಿದ ಭೂಮಿಯನ್ನು ಅಭಿವೃದ್ಧಿಪಡಿಸಲು ಅನುದಾನ ಬೇಕು. ರಾಜೀವ್‌ ಗಾಂಧಿ ಗ್ರಾಮೀಣ ವಸತಿ ನಿಗಮದಿಂದ ಮಾರ್ಗಸೂಚಿ ಆಗಬೇಕಾಗಿದೆ. ಡಿಸಿ ಮನ್ನಾ ಭೂಮಿಯನ್ನು ಯಾವ ರೀತಿ ಹಂಚಿಕೆ ಮಾಡಬೇಕೆಂಬ ಬಗ್ಗೆಯೂ ಸರ್ಕಾರವನ್ನು ಕೋರಲಾಗಿದ್ದು, ಮಾಜಿ ಸೈನಿಕರಿಗೂ ಕಡ್ಡಾಯವಾಗಿ ಭೂಮಿ ನೀಡಬೇಕು. ಇದಕ್ಕೆಲ್ಲಾ ಸಂಬಂಧಿಸಿ ಹಂಚಿಕೆ ಕುರಿತಂತೆ ಮಾರ್ಗಸೂಚಿ ಬಂದು, ಅನುದಾನದ ನಿಗದಿಯಾದ ತಕ್ಷಣ ಹಂಚಿಕೆಗೆ ನಿಯಮಾನುಸಾರ ಮಾಡಲಾಗುವುದು ಎಂದರು.

ಕೊರಗ ಸಮುದಾಯ ಜನರಿಗೆ ಜಿಲ್ಲೆಯ ಯಾವುದೇ ಭಾಗದಲ್ಲಾದರೂ ಕನಿಷ್ಟ 500 ಎಕರೆ ಭೂಮಿಯನ್ನು ಒಂದೆಡೆ ಒದಗಿಸಿದರೆ ಅದನ್ನು ಹಂಚಿಕೊಳ್ಳುವುದಾಗಿ ಸಮುದಾಯದ ನಾಯಕರು ನೀಡಿರುವ ಬೇಡಿಕೆಯನ್ನು ಸರ್ಕಾರದ ಗಮನಕ್ಕೆ ತರಲಾಗಿದೆ. ಕೊರಗ ಸಮುದಾಯದ ಮುಖಂಡರ ಜತೆ ಪ್ರತ್ಯೇಕವಾಗಿ ಈಗಾಗಲೇ ಸಭೆ ನಡೆಸಲಾಗಿದೆ. ಹಿಂದಿನ ಕಂದಾಯ ಸಚಿವರ ಮಟ್ಟದಲ್ಲಿಯೂ ನಾಯಕರ ಸಭೆ ನಡೆದಿದೆ. ಅವರ ಬೇಡಿಕೆಯ ಬಗ್ಗೆ ಪ್ರತ್ಯೇಕವಾಗಿ ಉನ್ನತ ಮಟ್ಟದ ಚರ್ಚೆಯೂ ನಡೆದಿದೆ. ಭೂಮಿ ಲಭ್ಯತೆ ಕುರಿತಂತೆ ಕೆಲವೊಂದು ತಾಲೂಕುಗಳಲ್ಲಿ ಈಗಾಗಲೇ ಈ ಬಗ್ಗೆ ಪರಿಶೀಲನೆ ನಡೆಯುತ್ತಿದೆ ಎಂದು ದರ್ಶನ್‌ ಎಚ್‌.ವಿ. ತಿಳಿಸಿದರು.

PREV
Get the latest news from across Karnataka (ಕರ್ನಾಟಕ ನ್ಯೂಸ್)— breaking headlines, politics, local developments, crime reports, district updates, civic issues and more. Stay informed with Kannada Prabha’s real‑time Karnataka news coverage.

Recommended Stories

ಕೋಟಿ ವೃಕ್ಷ ಅಭಿಯಾನದಿಂದ ಅರಣ್ಯ ಪ್ರದೇಶ ಶೇ.2.4ಕ್ಕೆ ಏರಿಕೆ: ಪ್ರಶಾಂತ.ಪಿ.ಕೆ.ಎಂ
ಸಾಧನೆಗೆ ಆತ್ಮವಿಶ್ವಾಸವೇ ಶಿಖರ: ಮಂಗಳಾನಾಥನಂದಜೀ ಮಹಾರಾಜ್