ವಿಜಯಪುರದಲ್ಲಿ ಕಳೆದ ಹತ್ತು ವರ್ಷಗಳಲ್ಲಿ ಹಮ್ಮಿಕೊಂಡ ಕೋಟಿ ವೃಕ್ಷ ಅಭಿಯಾನದ ಪರಿಣಾಮವಾಗಿ, ಅರಣ್ಯ ಪ್ರದೇಶ ಶೇ.0.17 ರಿಂದ ಶೇ.2.4ಕ್ಕೆ ಏರಿಕೆಯಾಗಿದೆ ಎಂದು ಕೆ.ಎಸ್.ಡಿ.ಎಲ್. ವ್ಯವಸ್ಥಾಪಕ ನಿರ್ದೇಶಕ ಪ್ರಶಾಂತ.ಪಿ.ಕೆ.ಎಂ ಹೇಳಿದರು.

ಕನ್ನಡಪ್ರಭ ವಾರ್ತೆ ವಿಜಯಪುರ

ವಿಜಯಪುರದಲ್ಲಿ ಕಳೆದ ಹತ್ತು ವರ್ಷಗಳಲ್ಲಿ ಹಮ್ಮಿಕೊಂಡ ಕೋಟಿ ವೃಕ್ಷ ಅಭಿಯಾನದ ಪರಿಣಾಮವಾಗಿ, ಅರಣ್ಯ ಪ್ರದೇಶ ಶೇ.0.17 ರಿಂದ ಶೇ.2.4ಕ್ಕೆ ಏರಿಕೆಯಾಗಿದೆ ಎಂದು ಕೆ.ಎಸ್.ಡಿ.ಎಲ್. ವ್ಯವಸ್ಥಾಪಕ ನಿರ್ದೇಶಕ ಪ್ರಶಾಂತ.ಪಿ.ಕೆ.ಎಂ ಹೇಳಿದರು.

ಬೆಂಗಳೂರು ಕರ್ನಾಟಕ ಟೆನ್ನಿಸ್ ಕ್ಲಬ್ ಸಭಾಂಗಣದಲ್ಲಿ ವಿಜಯಪುರ ವೃಕ್ಷೋಥಾನ್‌ ಕುರಿತು ಬೆಂಗಳೂರು ಓಟಗಾರರಿಗೆ ಹಮ್ಮಿಕೊಂಡ ಸಭೆಯಲ್ಲಿ ಮಾತನಾಡಿದ ಅವರು, ಈ ಭಾಗದಲ್ಲಿ ನೀರಾವರಿ ಜೊತೆಗೆ ಅರಣ್ಯೀಕರಣಕ್ಕೂ ಆದ್ಯತೆ ನೀಡಿದ ಸಚಿವ ಎಂ.ಬಿ.ಪಾಟೀಲರ ವಿಶೇಷ ಪ್ರಯತ್ನದಿಂದ ಆರಂಭಗೊಂಡ ಕೋಟಿವೃಕ್ಷ ಅಭಿಯಾನ ಪರಿಣಾಮ ಇಲ್ಲಿ ಅರಣ್ಯೀಕರಣ ಹೆಚ್ಚಳವಾಗಿದೆ. ವೃಕ್ಷೋಥಾನ್ ಹೆರಿಟೇಜ್ ರನ್ ಕೇವಲ ಓಟವಲ್ಲದೇ ಅದು ಚಿಕ್ಕ ಮಕ್ಕಳು, ಸ್ವಾಮೀಜಿಗಳು ಸೇರಿದಂತೆ ಎಲ್ಲಾ ವಯೋಮಾನದ ನಾಗರಿಕರು ಸೇರಿ ಆಚರಿಸುವ ಹಸಿರು ಹಬ್ಬವಾಗಿದೆ ಎಂದು ಬಣ್ಣಿಸಿದರು.

ಭಾರತದ ಪ್ರಮುಖ ಮ್ಯಾರಥಾನ್ ಆಯೋಜಿಸುವ ಎನ್.ಇ.ಬಿ. ಸ್ಪೋರ್ಟ್ಸ್ ಮುಖ್ಯಸ್ಥ ನಾಗರಾಜ ಅಡಿಗ ಮಾತನಾಡಿ, ಮ್ಯಾರಥಾನ್ ಅಂದರೆ 42 ಕಿ.ಮೀ ಓಟ. ವಿಜಯಪುರದಲ್ಲಿ ಮುಂದಿನ ದಿನಗಳಲ್ಲಿ 42ಕಿ.ಮೀ ಪುಲ್ ಮ್ಯಾರಥಾನ್ ಆಯೋಜಿಸಿದರೆ ನಮ್ಮ ಸಂಸ್ಥೆಯಿಂದ ಎಲ್ಲ ಅಗತ್ಯ ನೆರವು ನೀಡಲಾಗುವುದು ಎಂದರು.

ಕೈಗಾರಿಕೆ ಸಚಿವರ ಆಪ್ತಕಾರ್ಯದರ್ಶಿ ನರೇಂದ್ರ ಮಾತನಾಡಿ, ಬೆಳಗಿನ ಜಾವ ನಗರದ ಸುತ್ತಲಿನ ಯಾವುದೇ ರಸ್ತೆಗಳಿಗೂ ಹೋದರೂ ಜನರು ಸೈಕಲ್ ತುಳಿಯುತ್ತಿದ್ದು, ಹಾಗೂ ಓಡುತ್ತಿದ್ದು ಇಲ್ಲಿ ಬದಲಾವಣೆ ಬಂದಿದೆ ಎಂದರು. ಬೆಂಗಳೂರಿನ ಓಟಗಾರರಾದ ಸಿದ್ದೇಶ ಹಣಮಂತಪ್ಪ, ರವಿ ಪಾಟೀಲ, ವೃಕ್ಷೋಥಾನ್ ಕುರಿತು ತಮ್ಮ ಅನುಭವ ಹಂಚಿಕೊಂಡರು.

ವಿಜಯಪುರ ಸೈಕ್ಲಿಂಗ್ ಗ್ರುಪ್ ಅಧ್ಯಕ್ಷ ಡಾ.ಮಹಾಂತೇಶ ಬಿರಾದಾರ ಸ್ವಾಗತಿಸಿದರು. ಕೋಟಿವೃಕ್ಷ ಅಭಿಯಾನ ಸಂಚಾಲಕ ಡಾ.ಮುರುಗೇಶ ಪಟ್ಟಣಶೆಟ್ಟಿ ವಂದಿಸಿದರು. ಪರಿಸರ ಪ್ರೇಮಿ ಪ್ರಕೃತಿ ಪ್ರಸನ್ನ, ನಮ್ಮ ಜೀವನದಲ್ಲಿ ಒಂದಾದರೂ ಸಸಿ ನೆಟ್ಟು, ಪೋಷಿಸುತ್ತೇವೆ ಎಂಬ ಪ್ರತಿಜ್ಞೆ ಬೋಧಿಸಿದರು. ಬೆಂಗಳೂರು ರನ್ನಿಂಗ್, ಫಿಟ್ ಬಿಜ್, ಕಬ್ಬನ್ ಪಾರ್ಕ್ ರನ್ನರ್ಸ್ ಸೇರಿದಂತೆ ಹಲವು ರನ್ನಿಂಗ್ ಗ್ರುಪ್ ಸದಸ್ಯರು ಭಾಗವಹಿಸಿ, ವಿಜಯಪುರ ನಗರದಲ್ಲಿ 2026 ಡಿಸೆಂಬರ್ 13ರಂದು ಆಯೋಜಿಸಿದ ವೃಕ್ಷೋಥಾನ್ ಹೆರಿಟೇಜ್ ರನ್ ನಲ್ಲಿ ಭಾಗವಹಿಸುವುದಾಗಿ ತಿಳಿಸಿದರು.