ಸಿಂದಗಿ ನಗರದ ಗುಂದಗಿ ಫಂಕ್ಷನ್ ಹಾಲನಲ್ಲಿ ಕ್ರಾಂತಿವೀರ ಸಂಗೊಳ್ಳಿ ರಾಯಣ್ಣ ನೌಕರರ ಸಂಘದ ವತಿಯಿಂದ ಹಮ್ಮಿಕೊಂಡ ಜಯಂತ್ಯುತ್ಸವ ಹಾಗೂ ಪ್ರತಿಭಾ ಪುರಷ್ಕಾರ ಕಾರ್ಯಕ್ರಮವನ್ನು ಸಚಿವ ಡಾ.ಯತೀಂದ್ರ ಸಿದ್ದರಾಮಯ್ಯ ಉದ್ಘಾಟಿಸಿದರು.

ಕನ್ನಡಪ್ರಭ ವಾರ್ತೆ ಸಿಂದಗಿ

ಮಾಜಿ ಮುಖ್ಯಮಂತ್ರಿ ಸಿದ್ದರಾಮಯ್ಯನವರು, ಹಾಲುಮತ ಸಮಾಜಕ್ಕೆ ಎಸ್‌ಟಿ ಮಿಸಲಾತಿ ಕಲ್ಪಿಸಬೇಕೆನ್ನುವ ನಿಟ್ಟಿನಲ್ಲಿ ಕುಲಶಾಸ್ತ್ರೀಯ ಅಧ್ಯಯನ ಮಾಡಿಸಿ ಸರ್ಕಾರದಿಂದ ಕೇಂದ್ರ ಸರ್ಕಾರಕ್ಕೆ ಶಿಫಾರಸ್ಸು ಮಾಡಿದ್ದಾರೆ. ನಾನು ಅದಕ್ಕೆ ರೂಪ ಕೊಡುವ ಕೆಲಸ ಮಾಡುತ್ತೇನೆ. ಅಲ್ಲದೆ ಹೋರಾಟ ಮಾಡುವುದಾದರೆ ಬೆಂಬಲಕ್ಕೆ ಸದಾಸಿದ್ಧ ಎಂದು ಸಚಿವ ಯತಿಂದ್ರ ಸಿದ್ದರಾಮಯ್ಯ ಹೇಳಿದರು.

ನಗರದ ಗುಂದಗಿ ಫಂಕ್ಷನ್ ಹಾಲ್‌ನಲ್ಲಿ ತಾಲೂಕು ಕ್ರಾಂತಿವೀರ ಸಂಗೊಳ್ಳಿ ರಾಯಣ್ಣ ನೌಕರರ ಸಂಘದ ವತಿಯಿಂದ ಹಮ್ಮಿಕೊಂಡ ಸಂಗೊಳ್ಳಿ ರಾಯಣ್ಣ ಜಯಂತ್ಯೋತ್ಸವ ಹಾಗೂ ಪ್ರತಿಭಾ ಪುರಷ್ಕಾರ ಕಾರ್ಯಕ್ರಮ ಉದ್ಘಾಟಿಸಿ ಮಾತನಾಡಿ, ಹಿಂದೂಳಿದವರು, ಅಲ್ಪಸಂಖ್ಯಾತರು, ದಲಿತರು ಮುಖ್ಯಮಂತ್ರಿಯಾಗುವುದು ವಿರಳ. ಸಿದ್ದರಾಮಯ್ಯನವರು ಸಮ ಸಮಾಜಗಳ ಪ್ರೀತಿಗೆ ಪಾತ್ರರಾಗಿ ಕಾರ್ಯನಿರ್ವಹಿಸಿದ್ದರಿಂದ 2 ಬಾರಿ ಮುಖ್ಯಮಂತ್ರಿ ಸ್ಥಾನ ದೊರೆಯಿತು. ಅವರಂತೆ ಆಗುವುದು ವಿರಳ, ಆದರೆ ನಿಮ್ಮೆಲರ ಆಶೆಯದಂತೆ ನಾನೂ ಕೂಡ ಎಲ್ಲ ಸಮುದಾಯಗಳಿಗೆ ಮನ ಮೆಚ್ಚುವ ಕಾರ್ಯಕ್ರಮ ರೂಪಿಸುವ ಮೂಲಕ ಅವರ ಹಾದಿಯಲ್ಲಿ ಸಾಗುತ್ತೇನೆ. ನಿಮ್ಮೆಲ್ಲರ ಸಹಕಾರ ಅತ್ಯಗತ್ಯ ಎಂದರು.

ಸಂಗೊಳ್ಳಿ ರಾಯಣ್ಣನವರು ಈ ದೇಶಕ್ಕೆ ಕೊಟ್ಟ ಕೊಡುಗೆ ಅಪಾರವಾಗಿದೆ. ಅವರ ತತ್ವಾದರ್ಶ ಮೈಗೂಡಿಸಿಕೊಳ್ಳಬೇಕು. ಬಂಡೆಪ್ಪ ಕಾಶಂಪೂರ ಅವರ ಬೇಡಿಕೆಯಂತೆ ಕೂರಿಗಾಯಿಗಳಿಗೆ ಹಲವಾರು ಸೌಲಭ್ಯ ರೂಪಿಸಿದ್ದು, ಸಮಾಜ ಪ್ರಗತಿ ಪತದತ್ತ ಸಾಗಬೇಕಾದರೆ ಶೈಕ್ಷಣಿಕ, ಆರ್ಥಿಕವಾಗಿ ಮುಂದುವರೆದಾಗ ಮಾತ್ರ ಸರ್ಕಾರದ ಎಲ್ಲ ಸೌಲಭ್ಯ ಪಡೆದುಕೊಳ್ಳಲು ಸಾಧ್ಯವಾಗುತ್ತದೆ ಎಂದು ಹೇಳಿದರು.

ಶಾಸಕ ಅಶೋಕ ಮನಗೂಳಿ, ಸಾನ್ನಿಧ್ಯ ವಹಿಸಿದ್ದ ಧಾರವಾಡ ರೇವಣಸಿದ್ದೇಶ್ಡರ ಮಠದ ಬಸವರಾಜ ದೇವರು ಮನಸೂರು, ಕೆ.ಈ ಕಾಂತೇಶ, ಮಾಜಿ ಸಚಿವ ಬಂಡೆಪ್ಪ ಕಾಶೆಂಪೂರ, ಮಾಜಿ ಶಾಸಕ ಶರಣಪ್ಪ ಸುಣಗಾರ, ಬೆಂಗಳೂರು ಕುವೆಂಪು ಬಾಷಾ ಪ್ರಾಧಿಕಾರ ಅಧ್ಯಕ್ಷ ಡಾ.ಚನ್ನಪ್ಪ ಕಟ್ಟಿ, ಬಿಜೆಪಿ ರಾಜ್ಯ ಕಾರ್ಯದರ್ಶಿ ಶರಣು ತಳಕೇರಿ, ಡಾ.ಮಹಾಂತೇಶ ತಡಲಗಿ ಮಾತನಾಡಿದರು.

ಸಾಗೊಳ್ಳಿ ರಾಯಣ್ಣ ನೌಕರರ ಸಂಘದ ಅಧ್ಯಕ್ಷ ರಾಯಣ್ಣ ಇವಣಗಿ ಅಧ್ಯಕ್ಷತೆ ವಹಿಸಿದ್ದರು. ಸಾನ್ನಿಧ್ಯ ವಹಿಸಿದ್ದ ಗೊಳಸಾರ ಶ್ರೀ ಮಠದ ಅಭಿನವ ಪುಂಡಲಿಂಗ ಮಹಾಶಿವಯೋಗಿಗಳು ಹಾಗೂ ಗುಬ್ಬೇವಾಡ ಸೋಮೇಶ್ವರ ಆಶ್ರಮದ ಕನ್ನಯ್ಯ ಮಹಾರಾಜರು, ಗೌರ.ಬಿ. ಭಕ್ತಿಮಂದಿರದ ಅಭಿನವ ಯಲ್ಲಾಲಿಂಗ ಮಹಾರಾಜರು, ಮಲ್ಲಣ್ಣ ಸಾಲಿ, ತಹಶೀಲ್ದಾರ ಕರೇಪ್ಪ ಬೆಳ್ಳಿ, ನಾಗಪ್ಪ ಶಿವೂರ, ರವಿ ನಾಯ್ಕೋಡಿ, ಸಿದ್ದು ಬುಳ್ಳಾ, ವೈ.ಸಿ.ಮಯೂರ, ಮಲ್ಲಿಕಾರ್ಜುನ ಸಾವಳಸಂಗ ಸೇರಿದಂತೆ ಅನೇಕರು ಇದ್ದರು.

ಪ್ರಾಚಾರ್ಯ ಎ.ಆರ್.ಹೆಗ್ಗಣದೊಡ್ಡಿ, ಶಿಕ್ಷಕ ಮಾಳಪ್ಪ ಕೆರಕಿ ನಿರೂಪಿಸಿದರು. ಶಿಕ್ಷಕ ಎಸ್.ಎಸ್.ಸಾತಿಹಾಳ ಸ್ವಾಗತಿಸಿದರು. ಶಿಕ್ಷಕ ಪಿ.ಎಸ್.ಅಗ್ನಿ ವಂದಿಸಿದರು.

ಭಾವಚಿತ್ರ ಮೆರವಣಿಗೆ:

ಕಾರ್ಯಕ್ರಮಕ್ಕೂ ಮುನ್ನ ಸಂಗೊಳ್ಳಿ ರಾಯಣ್ಣ ಭಾವಚಿತ್ರ ಮೆರವಣಿಗೆಗೆ ಬಸವೇಶ್ವರ ವೃತ್ತದಲ್ಲಿ ಮಾಜಿ ಶಾಸಕ ರಮೇಶ ಬೂಸನೂರ ಚಾಲನೆ ನೀಡಿದರು. ಅಲ್ಲಿಂದ ಪ್ರಾರಂಭಗೊಂಡು ಕುಂಭಮೇಳ, ಡೋಳಿನ ವಾಲಗ, ಗೊಂಬೆಗಳ ಕುಣಿತ ಹಾಗೂ ವಾಧ್ಯ ವೈಭವಗಳೊಂದಿಗೆ ಸಂಗೊಳ್ಳಿ ರಾಯಣ್ಣ ವೃತ್ತ ಪತ್ರಿಕಾ ಭೀಷ್ಮ ರೇ.ಚ.ರೇವಡಿಗಾರ ರಸ್ತೆ, ಅಂಬಿಗರ ಚೌಡಯ್ಯ ವೃತ್ತ, ಡಾ.ಅಂಬೇಡ್ಕರ ವೃತ್ತದ ಮಾರ್ಗವಾಗಿ ತೆರಳಿ ಟಿಪ್ಪು ಸುಲ್ತಾನ ವೃತ್ತದಿಂದ ಗುಂದಗಿ ಫಂಕ್ಷನ್ ಹಾಲ್‌ಗೆ ತಲುಪಿತು.