ಬೆಳ್ಳೂರು ಪಟ್ಟಣ ವ್ಯಾಪ್ತಿ ಅಭಿವೃದ್ಧಿಗೆ ಕ್ರಮ: ಸಚಿವ ಚಲುವರಾಯಸ್ವಾಮಿ

KannadaprabhaNewsNetwork | Published : Jan 16, 2025 12:48 AM

ಸಾರಾಂಶ

ಬೆಳ್ಳೂರಿನ ಸಮಗ್ರ ಅಭಿವೃದ್ಧಿಗೆ ಆದ್ಯತೆ ನೀಡುವ ಸಲುವಾಗಿ ಮುಂದಿನ 15 ದಿನದಲ್ಲಿ 35 ಕೋಟಿ ರು.ವೆಚ್ಚದ ಕುಡಿಯುವ ನೀರಿನ ಯೋಜನೆಗೆ ಚಾಲನೆ ನೀಡಲಾಗುವುದು. ಹಾಸ್ಟೆಲ್ ಕಟ್ಟಡ ನಿಮಾರ್ಣಕ್ಕೆ ಎದುರಾಗಿರುವ ಸಣ್ಣ ಪುಟ್ಟ ಅಡಚಣೆ ಸರಿಪಡಿಸಿ ಶೀಘ್ರ ಶಂಕು ಸ್ಥಾಪನೆ ನೆರವೇರಿಸಲಾಗುವುದು.

ಕನ್ನಡಪ್ರಭ ವಾರ್ತೆ ನಾಗಮಂಗಲ

ಮುಂದಿನ ಬಜೆಟ್ ನಂತರ ಬೆಳ್ಳೂರು ಪಟ್ಟಣ ವ್ಯಾಪ್ತಿಯಲ್ಲಿ 70 ಕೋಟಿ ರು. ವೆಚ್ಚದಲ್ಲಿ ಒಳಚರಂಡಿ ಕಾಮಗಾರಿ ಸೇರಿದಂತೆ ಸಮಗ್ರ ಅಭಿವೃದ್ಧಿಗೆ ಅಗತ್ಯ ಕ್ರಮವಹಿಸಲಾಗುವುದು ಎಂದು ಕೃಷಿ ಹಾಗೂ ಜಿಲ್ಲಾ ಉಸ್ತುವಾರಿ ಸಚಿವ ಎನ್.ಚಲುವರಾಯಸ್ವಾಮಿ ಹೇಳಿದರು.

ತಾಲೂಕಿನ ಬೆಳ್ಳೂರು ಪಟ್ಟಣದ ನಾಗಲಾಪುರ ರಸ್ತೆಯಲ್ಲಿ ಆರೋಗ್ಯ ಇಲಾಖೆಯಿಂದ ನೂತನವಾಗಿ ಸ್ಥಾಪಿಸಿರುವ ನಮ್ಮ ಕ್ಲಿನಿಕ್ ಉದ್ಘಾಟಿಸಿ ಮಾತನಾಡಿ, ಜನರಿಗೆ ಆರೋಗ್ಯ ಸುರಕ್ಷತೆ ಬಹುಮುಖ್ಯಗಿರುವ ಹಿನ್ನೆಲೆಯಲ್ಲಿ ಈ ಭಾಗದ ಜನರ ಅನುಕೂಲಕ್ಕಾಗಿ ನಮ್ಮ ಕ್ಲಿನಿಕ್ ತೆರೆಯಲಾಗಿದೆ ಎಂದರು.

ಕಾಂಗ್ರೆಸ್ ಸರ್ಕಾರ ಬಂದ ನಂತರ ಜಿಲ್ಲೆಯಲ್ಲಿ ಆರೋಗ್ಯ ಇಲಾಖೆಯಿಂದ 13 ನಮ್ಮ ಕ್ಲಿನಿಕ್‌ಗಳನ್ನು ತೆರೆಯಲಾಗಿದೆ. ಈ ಕ್ಲಿನಿಕ್‌ನಲ್ಲಿ ಬೆಳಗ್ಗೆಯಿಂದ ಸಂಜೆವರೆಗೂ ವೈದ್ಯರು, ಪ್ರಯೋಗಾಲಯದ ತಜ್ಞರು ಮತ್ತು ಸಿಬ್ಬಂದಿ ಕರ್ತವ್ಯ ನಿರ್ವಹಿಸಿ ಜನರಿಗೆ ಉತ್ತಮ ಚಿಕಿತ್ಸೆ ನೀಡಲಿದ್ದಾರೆ ಎಂದರು.

ಈ ಹಿಂದೆ ನಾನು ಆರೋಗ್ಯ ಸಚಿವನಾಗಿದ್ದ ಅವಧಿಯಲ್ಲಿ ಬೆಳ್ಳೂರಿನ ಪ್ರಾಥಮಿಕ ಆರೋಗ್ಯ ಕೇಂದ್ರವನ್ನು ಸಮುದಾಯ ಆರೋಗ್ಯ ಕೇಂದ್ರವನ್ನಾಗಿ ಮೇಲ್ದರ್ಜೆಗೇರಿಸಿದ ನಂತರ ಅದಿಚುಂಚನಗಿರಿ ಆಸ್ಪತ್ರೆಗೆ ವಹಿಸಲಾಗಿತ್ತು. ಕೆಲ ನಿಯಮಗಳ ಮಾರ್ಪಾಡು ನಡೆಯುತ್ತಿರುವುದರಿಂದ ಆದಿಚುಂಚನಗಿರಿ ಆಸ್ಪತ್ರೆಯವರೇ ಈ ಸಮುದಾಯ ಕೇಂದ್ರವನ್ನು ಮುಂದುವರಿಸುತ್ತಿದ್ದರೂ ಕೂಡ ಸರ್ಕಾರದ ಸೌಲಭ್ಯಗಳೆಲ್ಲವೂ ಸಿಗುತ್ತದೆ ಎಂದರು.

ಬೆಳ್ಳೂರಿನ ಸಮಗ್ರ ಅಭಿವೃದ್ಧಿಗೆ ಆದ್ಯತೆ ನೀಡುವ ಸಲುವಾಗಿ ಮುಂದಿನ 15 ದಿನದಲ್ಲಿ 35 ಕೋಟಿ ರು.ವೆಚ್ಚದ ಕುಡಿಯುವ ನೀರಿನ ಯೋಜನೆಗೆ ಚಾಲನೆ ನೀಡಲಾಗುವುದು. ಹಾಸ್ಟೆಲ್ ಕಟ್ಟಡ ನಿಮಾರ್ಣಕ್ಕೆ ಎದುರಾಗಿರುವ ಸಣ್ಣ ಪುಟ್ಟ ಅಡಚಣೆ ಸರಿಪಡಿಸಿ ಶೀಘ್ರ ಶಂಕು ಸ್ಥಾಪನೆ ನೆರವೇರಿಸಲಾಗುವುದು. ನಿರ್ಮಾಣಗೊಂಡಿರುವ ಕಾಲೇಜು ಕಟ್ಟಡವನ್ನು ಉದ್ಘಾಟಿಸಲಾಗುವುದು. ಬೆಳ್ಳೂರಿನಲ್ಲಿ ಸೂಕ್ತ ಜಾಗವನ್ನು ಗುರುತಿಸಿ ಕೆಎಸ್‌ಆರ್‌ಟಿಸಿ ನಿಗಮಕ್ಕೆ ಹಸ್ತಾಂತರಿಸಿದರೆ ಸಾರಿಗೆ ಬಸ್ ನಿಲ್ದಾಣವನ್ನೂ ಸಹ ಮಾಡಿಸಿಕೊಡುವುದಾಗಿ ಭರವಸೆ ನೀಡಿದರು.

ಈ ವೇಳೆ ಬೆಳ್ಳೂರು ಪಪಂ ಅಧ್ಯಕ್ಷೆ ಲಕ್ಷ್ಮಮ್ಮ, ಉಪಾಧ್ಯಕ್ಷ ಮಹಮ್ಮದ್ ಯಾಸಿನ್, ಜಿಲ್ಲಾ ಆರೋಗ್ಯಾಧಿಕಾರಿ ಡಾ.ಮೋಹನ್, ತಹಸೀಲ್ದಾರ್ ಜಿ.ಆದರ್ಶ, ತಾಲೂಕು ಆರೋಗ್ಯಾಧಿಕಾರಿ ಡಾ.ರಮೇಶ್, ತಾಪಂ ಮಾಜಿ ಸದಸ್ಯ ವೆಂಕಟೇಶ್, ಮುಖಂಡರಾದ ರವಿಕುಮಾರ್, ಪದ್ಮನಾಭ, ತಾಲೂಕು ಕಸಾಪ ಮಾಜಿ ಅಧ್ಯಕ್ಷ ಸಿ.ಆರ್.ಚಂದ್ರಶೇಖರ್ ಸೇರಿದಂತೆ ಹಲವರು ಇದ್ದರು.

Share this article