ಹಾಸ್ಟೆಲ್ ಕಾರ್ಮಿಕರ ವೇತನ ಪಾವತಿಗೆ ಕ್ರಮ: ಪೋತೆದಾರ್

KannadaprabhaNewsNetwork |  
Published : Apr 04, 2024, 01:05 AM IST
ಫೋಟೋ:3ಕೆಪಿಎಸ್ಎನ್ಡಿ3: | Kannada Prabha

ಸಾರಾಂಶ

2024ರಲ್ಲಿ ರು.10.50 ಕೋಟಿ ರಾಯಚೂರು ಜಿಲ್ಲೆಗೆ ಬಿಡುಗಡೆಯಾಗಿದೆ. ಈ ವರ್ಷದ ಏಪ್ರಿಲ್‌ನಿಂದ ಮಾರ್ಚ್‌ವರೆಗೆ ವೇತನ ನೀಡಬಹುದು. ಆದರೆ ಈ ಹಣವೂ ನಾಲ್ಕು ಹಂತದಲ್ಲಿ ಬಿಡುಗಡೆಯಾಗಲಿದ್ದು ಇನ್ನು 15 ರಿಂದ 20 ದಿನಗಳಲ್ಲಿ ಮೊದಲ ಹಂತದ ಅನುದಾನ ಬಿಡುಗಡೆಯಾಗಲಿದೆ ಎಂದು ಮಹೇಶ ಪೋತೆದಾರ್‌ ತಿಳಿಸಿದರು.

ಕನ್ನಡಪ್ರಭ ವಾರ್ತೆ ಸಿಂಧನೂರು

ತಾಲೂಕು ವ್ಯಾಪ್ತಿಯಲ್ಲಿ ಬರುವ ಸಮಾಜ ಕಲ್ಯಾಣ ಇಲಾಖೆಯ ಎಲ್ಲ ವಸತಿ ನಿಲಯಗಳಲ್ಲಿ ಕಾರ್ಯನಿರ್ವಹಿಸುವ ಸಿಬ್ಬಂದಿಯ 9 ತಿಂಗಳ ಬಾಕಿ ವೇತನ ಪಾವತಿಸುವಂತೆ ಒತ್ತಾಯಿಸಿ ಮಹಾಶಕ್ತಿ ಮಹಿಳಾ ಸಂಘಟನೆ ಹಾಗೂ ದಲಿತ ವಿದ್ಯಾರ್ಥಿ ಪರಿಷತ್ ಜಂಟಿಯಾಗಿ ಧರಣಿ ನಡೆಸಿದ ಹಿನ್ನೆಲೆಯಲ್ಲಿ ಬುಧವಾರ ನಗರದ ಗಂಗಾವತಿ ರಸ್ತೆಯಲ್ಲಿರುವ ಮೆಟ್ರಿಕ್ ಪೂರ್ವ ಬಾಲಕರ ವಸತಿ ನಿಲಯದಲ್ಲಿ ಇಲಾಖೆಯ ಜಿಲ್ಲಾ ಉಪನಿರ್ದೇಶಕ ಮಹೇಶ ಪೋತೆದಾರ್ ಅವರ ಅಧ್ಯಕ್ಷತೆಯಲ್ಲಿ ತಾಲೂಕು ಮಟ್ಟದ ಅಧಿಕಾರಿಗಳ ಸಭೆ ನಡೆಸಲಾಯಿತು.

ಮಹಾಶಕ್ತಿ ಮಹಿಳಾ ಸಬಲೀಕರಣ ಸಂಘಟನೆಯ ರಾಜ್ಯ ಘಟಕದ ಅಧ್ಯಕ್ಷೆ ವಿಜಯರಾಣಿ ಮಾತನಾಡಿ, ವಸತಿ ನಿಲಯದಲ್ಲಿ ಕಾರ್ಯನಿರ್ವಹಿಸುವ ಸಿಬ್ಬಂದಿಯ ಬಾಕಿ ವೇತನವು 11 ತಿಂಗಳು ಹಾಗೂ ಕೆಲವರ 9 ತಿಂಗಳು ವೇತನ ಬಾಕಿಯಿದ್ದು, ಇದನ್ನು ಪಾವತಿ ಮಾಡುಲು ವಿಳಂಬ ಮಾಡುತ್ತಿರುವುದೇಕೆ ಎಂದು ಪ್ರಶ್ನೆ ಮಾಡಿದರು.

ನಂತರ ಸಮಾಜ ಕಲ್ಯಾಣ ಇಲಾಖೆಯ ಜಿಲ್ಲಾ ಉಪನಿರ್ದೇಶಕ ಮಹೇಶ ಪೋತೆದಾರ್‌ ಮಾತನಾಡಿ, ರಾಯಚೂರು ಜಿಲ್ಲೆಯ ಸಮಾಜ ಕಲ್ಯಾಣ ಇಲಾಖೆಯ ಎಲ್ಲ ವಸತಿ ನಿಲಯದ ಕಾರ್ಮಿಕರಿಗೆ ಪ್ರತಿ ತಿಂಗಳು ವೇತನ ಪಾವತಿಸಬೇಕಾದರೆ ಒಂದು ಕೋಟಿಯ ಅಗತ್ಯತೆ ಇದೆ. ವರ್ಷಕ್ಕೆ ರು.12 ಕೋಟಿ ಬೇಕಾಗುತ್ತದೆ. ಆದರೆ ಕಳೆದ ವರ್ಷ ರು.6 ರಿಂದ ರೂ.7 ಬಿಡುಗಡೆಯಾಗಿರುವುದೇ ಕಾರ್ಮಿಕರ ವೇತನ ಬಾಕಿ ಉಳಿಯಲು ಮೂಲ ಕಾರಣವಾಗಿದೆ ಎಂದು ಹೇಳಿದರು.

2024ರಲ್ಲಿ ರು.10.50 ಕೋಟಿ ರಾಯಚೂರು ಜಿಲ್ಲೆಗೆ ಬಿಡುಗಡೆಯಾಗಿದೆ. ಈ ವರ್ಷದ ಏಪ್ರಿಲ್‌ನಿಂದ ಮಾರ್ಚ್‌ವರೆಗೆ ವೇತನ ನೀಡಬಹುದು. ಆದರೆ ಈ ಹಣವೂ ನಾಲ್ಕು ಹಂತದಲ್ಲಿ ಬಿಡುಗಡೆಯಾಗಲಿದ್ದು ಇನ್ನು 15 ರಿಂದ 20 ದಿನಗಳಲ್ಲಿ ಮೊದಲ ಹಂತದ ಅನುದಾನ ಬಿಡುಗಡೆಯಾಗಲಿದೆ. ಮೆಟ್ರಿಕ್ ಪೂರ್ವ ಮತ್ತು ಮೆಟ್ರಿಕ್ ನಂತರದ ವಸತಿ ನಿಲಯದ ಕಾರ್ಮಿಕರ ನಾಲ್ಕು ತಿಂಗಳ ಬಾಕಿ ವೇತನ ಜಮೆಯಾಗುತ್ತದೆ. ಬಾಕಿ ಉಳಿಯುವ ಕಳೆದ ವರ್ಷದ ಆರು ತಿಂಗಳ ವೇತನಕ್ಕೆ ಈಗಾಗಲೇ ಆಯುಕ್ತರ ಕಚೇರಿಯಿಂದ ತಪಾಸಣೆಗೆ ಬಂದಿದ್ದ ಅಧಿಕಾರಿಗಳಿಗೆ ರು.6 ಕೋಟಿ ಅನುದಾನ ಕೊರತೆಯ ಬಗ್ಗೆ ಪತ್ರದ ಮೂಲಕ ಒತ್ತಡ ಹೇರಲಾಗಿದೆ ಎಂದು ತಿಳಿಸಿದರು.

ತದನಂತರ ತಾಲೂಕು ಸಹಾಯಕ ನಿರ್ದೇಶಕ ಉಮೇಶ ಸಿದ್ನಾಳ ಅವರು ಪಿಎಫ್, ಇಎಸ್ಐ ಹಾಗೂ ಪಿಂಚಣಿ ಸೌಲಭ್ಯ ವಂಚಿತ ಕಾರ್ಮಿಕರು ಕೂಡಲೇ ಅಗತ್ಯ ದಾಖಲೆಗಳನ್ನು ವಾರದೊಳಗೆ ತಾಲೂಕು ಸಮಾಜ ಕಲ್ಯಾಣ ಇಲಾಖೆ ಕಚೇರಿಗೆ ಸಲ್ಲಿಸಿದರೆ, ಈ ಸೌಲಭ್ಯಗಳನ್ನು ಕೊಡಿಸಲು ಅಗತ್ಯ ಕ್ರಮ ಕೈಗೊಳ್ಳಲಾಗುವುದು ಎಂದು ಭರವಸೆ ನೀಡಿದರು.

ದಲಿತ ವಿದ್ಯಾರ್ಥಿ ಪರಿಷತ್ ಜಿಲ್ಲಾ ಸಂಚಾಲಕ ಮೌನೇಶ ಜಾಲವಾಡಗಿ, ಎಂಎಂಎಸ್ ಸಂಘಟನೆಯ ರಾಜ್ಯ ಗೌರವ ಸಲಹೆಗಾರರಾದ ಕರಿಯಪ್ಪ ತೋರಣದಿನ್ನಿ, ಗುರುಲಿಂಗಪ್ಪ ತೋರಣದಿನ್ನಿ, ಮೌನೇಶ ತುಗ್ಗಲದಿನ್ನಿ, ಡಿವಿಪಿ ಸದಸ್ಯ ಸುರೇಶ ಎಲೆಕೂಡ್ಲಿಗಿ ಮತ್ತು ಇಲಾಖೆಯ ಎಲ್ಲ ಮೇಲ್ವಿಚಾರಕರು ಹಾಗೂ ಎಲ್ಲ ವಸತಿ ನಿಲಯದ ಕಾರ್ಮಿಕರು ಇದ್ದರು.

PREV
Get the latest news from across Karnataka (ಕರ್ನಾಟಕ ನ್ಯೂಸ್)— breaking headlines, politics, local developments, crime reports, district updates, civic issues and more. Stay informed with Kannada Prabha’s real‑time Karnataka news coverage.

Recommended Stories

ಪಲ್ಸ್‌ ಪೋಲಿಯೋ ಹಾಕಿಸಿ, ಅಂಗವಿಕತೆ ತಪ್ಪಿಸಿ
ಪುಷ್ಪಗಿರಿ ಜೇಸಿಗೆ 50 ವರ್ಷ: ಸಂಭ್ರಮ ಆಚರಣೆ