ಆರೋಗ್ಯ ಸೇವೆಗಳ ಉನ್ನತೀಕರಣಕ್ಕೆ ಕ್ರಮ

KannadaprabhaNewsNetwork |  
Published : Jan 07, 2024, 01:30 AM IST
ಜಿಲ್ಲಾಸ್ಪತ್ರೆಗೆ ಭೇಟಿ | Kannada Prabha

ಸಾರಾಂಶ

ಜಿಲ್ಲಾಸ್ಪತ್ರೆಗೆ ಶನಿವಾರ ಭೇಟಿ ನೀಡಿದ ಆರೋಗ್ಯ ಮತ್ತು ಕುಟುಂಬ ಕಲ್ಯಾಣ ಸಚಿವ ದಿನೇಶ್ ಗುಂಡೂರಾವ್, ವಿವಿಧ ವಾರ್ಡ್‌ ಸೌಲಭ್ಯಗಳ ಪರಿಶೀಲನೆ ಮಾಡಿದರು.

- ಜಿಲ್ಲಾಸ್ಪತ್ರೆ ಪರಿಶೀಲಿಸಿದ ಸಚಿವ ದಿನೇಶ ಗುಂಡೂರಾವ್‌ಕನ್ನಡಪ್ರಭ ವಾರ್ತೆ ಧಾರವಾಡ

ಸರ್ಕಾರಿ ಆಸ್ಪತ್ರೆಗಳಲ್ಲಿ ಲಭ್ಯವಿರುವ ಆರೋಗ್ಯ ಸೇವೆಗಳ ಉನ್ನತೀಕರಣಗೊಳಿಸಲು ಮತ್ತು ಎಲ್ಲ ಆಸ್ಪತ್ರೆಗಳನ್ನು ವಿವಿಧ ಹಂತಗಳಲ್ಲಿ ಮೇಲ್ದರ್ಜೆಗೆ ಏರಿಸಲು ಆದ್ಯತೆ ನೀಡಲಾಗುತ್ತದೆ ಎಂದು ಆರೋಗ್ಯ ಮತ್ತು ಕುಟುಂಬ ಕಲ್ಯಾಣ ಸಚಿವ ದಿನೇಶ್ ಗುಂಡೂರಾವ್ ಹೇಳಿದರು.

ಜಿಲ್ಲಾಸ್ಪತ್ರೆಗೆ ಶನಿವಾರ ಭೇಟಿ ನೀಡಿ, ವಿವಿಧ ವಾರ್ಡ್‌ ಸೌಲಭ್ಯಗಳ ಪರಿಶೀಲನೆ ನಂತರ ಮಾತನಾಡಿದರು.

ಜಿಲ್ಲಾಸ್ಪತ್ರೆ ಮೂಲಭೂತ ಸೌಕರ್ಯ ಹಾಗೂ ಆರೋಗ್ಯ ಪರಿಕರಗಳ ಸೌಲಭ್ಯಕ್ಕಾಗಿ ₹9.9 ಕೋಟಿ ಅನುದಾನ ಬಿಡುಗಡೆ ಮಾಡಲು ಅನುಮೊದನೆ ನೀಡಲಾಗಿದೆ ಎಂದು ಅವರು ಹೇಳಿದರು.

ರಾಜ್ಯದ ವಿವಿಧ ಆಸ್ಪತ್ರೆಗಳಲ್ಲಿ ವೈದ್ಯರ ಮತ್ತು ವೈದ್ಯಕೀಯ ಸಿಬ್ಬಂದಿ ಕೊರತೆ ಇದೆ. ತಿಂಗಳೊಳಗೆ 800 ಜನ ಆರೋಗ್ಯ ಸಿಬ್ಬಂದಿ ನೇಮಕಾತಿ ಮಾಡಲಾಗುವುದು. 1500 ವೈದ್ಯರ ಮತ್ತು 1500 ತಜ್ಞ ವೈದ್ಯರ ಹುದ್ದೆ ಖಾಲಿ ಇದ್ದು, ಎಂಬಿಬಿಎಸ್, ಎಂಡಿ ಆಗಿರುವ ಪದವೀಧರರ ನೇಮಕಾತಿಗೆ ಕೌನ್ಸೆಲಿಂಗ್ ಆರಂಭಿಸಲಾಗಿದೆ. ಸದ್ಯದಲ್ಲಿ ಅವರನ್ನು ಗ್ರಾಮೀಣ ಭಾಗದ ಎಲ್ಲ ಆಸ್ಪತ್ರೆಗಳಿಗೆ ನೇಮಕ ಮಾಡಲಾಗುವುದು ಎಂದರು.

ಜಿಲ್ಲಾಸ್ಪತ್ರೆ ಜೊತೆಗೆ ವೈದ್ಯಕೀಯ ಕಾಲೇಜು ಮಂಜೂರು ಮಾಡಿದರೆ ಅಗತ್ಯ ಸೌಲಭ್ಯವಿರುವ ವಿಸ್ತಾರವಾದ ಜಾಗೆ ಬೇಕಾಗುತ್ತದೆ. ಅದಕ್ಕಾಗಿ ಹೆಚ್ಚಿನ ಭೂಮಿ ಇರುವ ಪ್ರದೇಶವನ್ನು ಗುರುತಿಸಿ ಮುಂದಿನ ದಿನಗಳಲ್ಲಿ ಕ್ರಮ ಕೈಗೊಳ್ಳಲಾಗುತ್ತದೆ. ಈ ವರೆಗೆ ಈ ಆಸ್ಪತ್ರೆಯ ಸುಧಾರಣೆಗೆ ಅಗತ್ಯವಿರುವ ಅನುದಾನವನ್ನು ಪೂರೈಸಲಾಗುವುದು ಎಂದರು. ಜಿಲ್ಲಾಸ್ಪತ್ರೆಯ ವಿವಿಧ ವಿಭಾಗಗಳಿಗೆ ಭೇಟಿ ನೀಡಿ, ಉಪಕರಣಗಳ ಸುಸ್ಥಿತಿ, ಆಸ್ಪತ್ರೆಗೆ ಬಂದ ರೋಗಿಗಳ ಅಭಿಪ್ರಾಯ ತಿಳಿದರು.

ಆಕ್ಸಿಜನ್ ಪ್ಲಾಂಟ್‌ಗೆ ಭೇಟಿ ನೀಡಿ ಮಾಹಿತಿ ಪಡೆದರು. ವಾರದಲ್ಲಿ ಒಂದು ಸಲ ಅಥವಾ ಅಗತ್ಯವಿದ್ದಾಗ ಪ್ಲಾಂಟ್ ಆಕ್ಸಿಜನ್ ಬಳಸಬೇಕು ಎಂದು ತಿಳಿಸಿದರು.

ಜಿಲ್ಲಾಸ್ಪತ್ರೆಯ ಜಿಲ್ಲಾ ಶಸ್ತ್ರ ಚಿಕಿತ್ಸಕ ಡಾ. ಸಂಗಪ್ಪ ಗಾಬಿ ಜಿಲ್ಲಾ ಆಸ್ಪತ್ರೆಯ ವಿವಿಧ ವಿಭಾಗಗಳ ಸೌಲಭ್ಯಗಳು, ಕಾರ್ಯಚಟುವಟಿಕೆಗಳ ಕುರಿತು ಸಚಿವರಿಗೆ ವಿವರಿಸಿದರು.

ಜಿಲ್ಲಾ ಉಸ್ತುವಾರಿ ಸಚಿವ ಸಂತೋಷ ಲಾಡ್, ಶಾಸಕ ಪ್ರಸಾದ ಅಬ್ಬಯ್ಯ, ಆರೋಗ್ಯ ಮತ್ತು ಕುಟುಂಬ ಕಲ್ಯಾಣ ಇಲಾಖೆಯ ಆಯುಕ್ತ ರಣದೀಪ, ಜಿಲ್ಲಾಧಿಕಾರಿ ಗುರುದತ್ತ ಹೆಗಡೆ, ಜಿಲ್ಲಾ ಆರೋಗ್ಯ ಅಧಿಕಾರಿ ಡಾ. ಶಶಿ ಪಾಟೀಲ, ಆರ್‌ಸಿಎಚ್‌ಒ ಅಧಿಕಾರಿ ಡಾ.ಸುಜಾತಾ ಹಸವಿಮಠ ಉಪಸ್ಥಿತರಿದ್ದರು.

ಪ್ರಗತಿ ಪರಿಶೀಲನಾ ಸಭೆ:

ನಂತರ ಸಚಿವರು, ಆರೋಗ್ಯ ಇಲಾಖೆಯ ಪ್ರಗತಿ ಪರಿಶೀಲನಾ ಸಭೆ ನಡೆಸಿದರು. ಅಧಿಕ ರಕ್ತದೊತ್ತಡ, ಮಧುಮೇಹ ಹಾಗೂ ಕ್ಷಯರೋಗದ ಕುರಿತು ಸರಿಯಾದ ಕ್ರಮದಲ್ಲಿ ಸ್ಕ್ಯಾನಿಂಗ್ ಮಾಡಬೇಕು. ರಾಜ್ಯ ಸರ್ಕಾರದ ಮಹತ್ವಾಕಾಂಕ್ಷಿ ಯೋಜನೆ ಪರಿಣಾಮಕಾರಿಯಾಗಿ ಅನುಷ್ಠಾನಗೊಳಿಸಲು ಕ್ರಮ ಕೈಗೊಳ್ಳಬೇಕು ಎಂದು ತಿಳಿಸಿದರು.

ಈ ವೇಳೆ ಶಾಸಕ ಪ್ರಸಾದ ಅಬ್ಬಯ್ಯ, ಆರೋಗ್ಯ ಮತ್ತು ಕುಟುಂಬ ಕಲ್ಯಾಣ ಇಲಾಖೆಯ ಆಯುಕ್ತ ರಣದೀಪ, ಜಿಲ್ಲಾಧಿಕಾರಿ ಗುರುದತ್ತ ಹೆಗಡೆ, ಆರೋಗ್ಯ ಮತ್ತು ಕುಟುಂಬ ಕಲ್ಯಾಣ ನಿರ್ದೇಶಕಿ ಡಾ. ಪುಷ್ಪಲತಾ, ಆರ್‌ಸಿಎಚ್ ಯೋಜನಾ ನಿರ್ದೇಶಕ ಡಾ.ಜಿ.ಎನ್.ಶ್ರೀನಿವಾಸ ಇದ್ದರು. ಜಿಲ್ಲಾ ಆರೋಗ್ಯ ಅಧಿಕಾರಿ ಡಾ.ಶಶಿ ಪಾಟೀಲ ಇಲಾಖೆಯ ಪ್ರಗತಿವರದಿ ಮಂಡಿಸಿದರು.

ರೋಗಿಗಳ ಜತೆಗೆ ಊಟ:

ಜಿಲ್ಲಾ ಆಸ್ಪತ್ರೆಯ ಭೇಟಿ ಸಂದರ್ಭದಲ್ಲಿ ಮಗಳ ಹೆರಿಗೆಗಾಗಿ ತಾಯಿ ಮಕ್ಕಳ ಆಸ್ಪತ್ರೆಗೆ ಆಗಮಿಸಿದ್ದ ತಡಕೋಡ ಗ್ರಾಮದ ಮಂಜವ್ವ ಕಾದ್ರೋಳಿ ಮತ್ತು ಲಕ್ಷ್ಮವ್ವ ಕಾದ್ರೋಳಿ ಅವರೊಂದಿಗೆ ಉತ್ತರ ಕರ್ನಾಟಕ ಶೈಲಿಯ ಊಟವನ್ನು ಸಚಿವದ್ವಯರು ಸವಿದಿದ್ದು ವಿಶೇಷ. ಜೋಳದ ರೊಟ್ಟಿ, ಬದನೆಕಾಯಿ ಪಲ್ಯ, ಬಿನ್ಸ್ ಪಲ್ಯ ಮತ್ತು ಕೆಂಪುಖಾರದ ಚಟ್ನಿಯ ರುಚಿಯನ್ನು ಸಚಿವದ್ವಯರು ಸವಿದರು.

PREV
Get the latest news from across Karnataka (ಕರ್ನಾಟಕ ನ್ಯೂಸ್)— breaking headlines, politics, local developments, crime reports, district updates, civic issues and more. Stay informed with Kannada Prabha’s real‑time Karnataka news coverage.

Recommended Stories

ಮಾನಸಿಕ ಖಿನ್ನತೆ ಸ್ವಯಂ ಮೌಲ್ಯಮಾಪನಕ್ಕೆ ನಿಮ್ಹಾನ್ಸ್‌ ಆ್ಯಪ್‌
ಒಂದೇ ದಿನ ಜಡ್ಜ್‌ ಮುಂದೆ 60 ಪರೋಲ್‌ ಅರ್ಜಿ!