ಯಾದಗಿರಿ ಸಮೀಪದ ಸೈದಾಪುರ ಪಟ್ಟಣದ ವಿವಿಧ ರಸಗೊಬ್ಬರ, ಕ್ರಿಮಿನಾಶಕ, ಬಿತ್ತನೆ ಬೀಜ ಮಾರಾಟ ಅಂಗಡಿಗಳಿಗೆ ಸಹಾಯಕ ಕೃಷಿ ನಿರ್ದೇಶಕ ಸುರೇಶ ಬಿ. ಮತ್ತು ಕೃಷಿ ತಾಂತ್ರಿಕ ವ್ಯವಸ್ಥಾಪಕ ರವೀಂದ್ರ ತಂಡ ಭೇಟಿ ನೀಡಿ ಪರಿಶೀಲಿಸಿತು.
ಕನ್ನಡಪ್ರಭ ವಾರ್ತೆ ಯಾದಗಿರಿ
ಸಮೀಪದ ಸೈದಾಪುರ ಪಟ್ಟಣದ ವಿವಿಧ ರಸಗೊಬ್ಬರ, ಕ್ರಿಮಿನಾಶಕ, ಬಿತ್ತನೆ ಬೀಜ ಮಾರಾಟ ಅಂಗಡಿಗಳಿಗೆ ಸಹಾಯಕ ಕೃಷಿ ನಿರ್ದೇಶಕ ಸುರೇಶ ಮತ್ತು ಕೃಷಿ ತಾಂತ್ರಿಕ ವ್ಯವಸ್ಥಾಪಕ ರವೀಂದ್ರ ಮತ್ತು ಇತರ ಅಧಿಕಾರಿಗಳೊಂದಿಗೆ ಭೇಟಿ ನೀಡಿ ಪರಿಶೀಲಿಸಿದರು.
ಈ ವೇಳೆ ಮಾತನಾಡಿದ ಸುರೇಶ ಅವರು, ಬಿತ್ತನೆ ಬೀಜ, ರಸಗೊಬ್ಬರಕ್ಕೆ ರೈತರಿಂದ ಹೆಚ್ಚಿನ ಹಣ ಪಡೆದರೆ ಅಂಗಡಿ ಪರವಾನಿಗೆ ರದ್ದು ಮಾಡುವುದಲ್ಲದೆ ಕಠಿಣ ಕಾನೂನಿನ ಕ್ರಮ ಕೈಗೊಳ್ಳಲಾಗುವುದು ಎಂದು ಮಾರಾಟಗಾರರಿಗೆ ಎಚ್ಚರಿಕೆ ನೀಡಿದರು.
ರಸಗೊಬ್ಬರ ದಾಸ್ತಾನು, ಮಾರಾಟ ಪರವಾನಗಿ, ಮಾರಾಟ ರಸೀದಿ, ದಾಸ್ತಾನು ಫಲಕದಲ್ಲಿನ ವಿವರ ಮತ್ತು ಕಂಪ್ಯೂಟರೈಸಡ್ ಆನ್‌ಲೈನ್ ದಾಸ್ತಾನು ವಿವರಗಳ ತಾಳೆಯಾಗುವ ಕುರಿತು ಪರಿಶೀಲಿಸಿದ ಅವರು, ಮುಂಬರುವ ಬಿತ್ತನೆ ಸಮಯದಲ್ಲಿ ರೈತರಿಂದ ಬೇಡಿಕೆ ಹೆಚ್ಚಾದ ವೇಳೆ ಕೃತಕ ಅಭಾವ ಸೃಷ್ಟಿಸಿ ಹೆಚ್ಚಿನ ದರಕ್ಕೆ ಗೊಬ್ಬರ, ಬೀಜ ಮಾರಾಟ ಮಾಡಿದರೆ ಸಹಿಸುವುದಿಲ್ಲ ಎಂದು ಕಟ್ಟುನಿಟ್ಟಿನ ಸೂಚನೆ ನೀಡಿದರು.
ಎಂಆರ್‌ಪಿ ದರದಲ್ಲಿ ಬೀಜ ಮಾರಾಟ ಮಾಡಬೇಕು. ರೈತರಿಗೆ ಡಿಎಪಿ, ಯೂರಿಯಾ ರಸಗೊಬ್ಬರ ಮಾರಾಟ ನಿಗದಿತ ದರದಲ್ಲಿಯೇ ಮಾಡಬೇಕು. ರೈತನಿಗೆ ಅಧಿಕೃತ ಬಿಲ್ ನೀಡುವುದು, ಆಧಾರ್ ನೋಂದಣಿ ಜತೆಗೆ ಬಿಲ್ ರಸೀದಿ ಪ್ರತಿ ಮೇಲೆ ರೈತರ ಸಹಿ ಪಡೆಯುವುದು ಕಡ್ಡಾಯ ಎಂದು ತಿಳಿಸಿದರು.
ದಾಸ್ತಾನು ರಸಗೊಬ್ಬರ ವಿವರ ಮತ್ತು ದರ ಫಲಕದಲ್ಲಿ ಸ್ಪಷ್ಟವಾಗಿ ಕಾಣುವಂತೆ ಪ್ರದರ್ಶಿಸಿ, ಮಾರಾಟ ಪರವಾನಗಿ ಅಂಗಡಿಯಲ್ಲಿ ಕಾಣುವಂತೆ ಅಳವಡಿಸಬೇಕೆಂದು ಸೂಚಿಸಿದ ಅವರು, ರೈತರೊಂದಿಗೆ ಸ್ನೇಹಪೂರ್ವಕವಾಗಿ ವ್ಯವಹರಿಸುವಂತೆ ಸಲಹೆ ನೀಡಿದರು. ಈ ವಿವಿಧ ಅಂಗಡಿಗಳಲ್ಲಿ ಅನಧಿಕೃತವಾಗಿ ಮಾರಾಟ ಮಾಡುತ್ತಿದ್ದ 690 ಪ್ಯಾಕೇಟ್ ಹತ್ತಿ ಬೀಜ ಜಪ್ತಿ ಮಾಡಿ, ಕಾರಣ ಕೇಳಿ ನೋಟಿಸ್ ಜಾರಿಗೊಳಿಸಿದರು. ಉತ್ತಮ ಗುಣಮಟ್ಟದ ಬೀಜ, ರಸಗೊಬ್ಬರ ಹಾಗೂ ಕೃಷಿ ಸಾಮಗ್ರಿಗಳು ರೈತರಿಗೆ ಸುಲಭದಲ್ಲಿ ಎಟುಕುವಂತಾಗಲಿ. ನಿಗದಿತ ದರದಲ್ಲಿ ಮಾರಾಟ ಮಾಡುವ ಜತೆಗೆ ರಶೀದಿ ನೀಡುವುದು ಕಡ್ಡಾಯ. ರೈತರು ಅಧಿಕೃತ ಬೀಜ ಮಾರಾಟಗಾರರಿಂದಲೇ ಖರೀದಿಸಿ, ಬೆಳೆ ಕಟಾವಿನವರೆಗೆ ರಸೀದಿ ಕಾದಿಟ್ಟುಕೊಳ್ಳಿ.
Get the latest news from across Karnataka (ಕರ್ನಾಟಕ ನ್ಯೂಸ್)— breaking headlines, politics, local developments, crime reports, district updates, civic issues and more. Stay informed with Kannada Prabha’s real‑time Karnataka news coverage.