ಬಯೋಮೆಡಿಕಲ್‌ ತ್ಯಾಜ್ಯ ಎಲ್ಲೆಂದರಲ್ಲಿ ಎಸೆದರೆ ಕ್ರಮ

KannadaprabhaNewsNetwork | Published : Oct 21, 2024 12:38 AM

ಸಾರಾಂಶ

ಆಸ್ಪತ್ರೆ, ಕ್ಲಿನಿಕ್‌ಗಳಲ್ಲಿ ರೋಗಿಗಳ ಚಿಕಿತ್ಸೆಗೆ ಬಳಸುವ ಇಂಜೆಕ್ಷನ್ ಸಿರೆಂಜ್‌ಗಳು ಸೇರಿದಂತೆ ಬಯೋಮೆಡಿಕಲ್ ತ್ಯಾಜ್ಯವನ್ನು ಜನ ಓಡಾಡುವ ರಸ್ತೆಗಳಲ್ಲಿ ವಿಲೇವಾರಿ ಮಾಡಬಾರದು. ಈ ಸೂಚನೆ ಉಲ್ಲಂಘಿಸಿದರೆ ಅಂಥವರ ವಿರುದ್ಧ ಕಾನೂನು ಕ್ರಮ ಜರುಗಿಸಲಾಗುವುದು ಎಂದು ತಾಲೂಕು ಆರೋಗ್ಯಾಧಿಕಾರಿ ಡಾ.ಗಿರೀಶ್ ಹೊನ್ನಾಳಿಯಲ್ಲಿ ಎಚ್ಚರಿಕೆ ನೀಡಿದ್ದಾರೆ.

- ಹೊನ್ನಾಳಿ ಮರಳೋಣಿ ರಸ್ತೆಯಲ್ಲಿ ತ್ಯಾಜ್ಯ ಪತ್ತೆ: ಆರೋಗ್ಯಾಧಿಕಾರಿ ಎಚ್ಚರಿಕೆ - - - ಕನ್ನಡಪ್ರಭ ವಾರ್ತೆ ಹೊನ್ನಾಳಿ

ಆಸ್ಪತ್ರೆ, ಕ್ಲಿನಿಕ್‌ಗಳಲ್ಲಿ ರೋಗಿಗಳ ಚಿಕಿತ್ಸೆಗೆ ಬಳಸುವ ಇಂಜೆಕ್ಷನ್ ಸಿರೆಂಜ್‌ಗಳು ಸೇರಿದಂತೆ ಬಯೋಮೆಡಿಕಲ್ ತ್ಯಾಜ್ಯವನ್ನು ಜನ ಓಡಾಡುವ ರಸ್ತೆಗಳಲ್ಲಿ ವಿಲೇವಾರಿ ಮಾಡಬಾರದು. ಈ ಸೂಚನೆ ಉಲ್ಲಂಘಿಸಿದರೆ ಅಂಥವರ ವಿರುದ್ಧ ಕಾನೂನು ಕ್ರಮ ಜರುಗಿಸಲಾಗುವುದು ಎಂದು ತಾಲೂಕು ಆರೋಗ್ಯಾಧಿಕಾರಿ ಡಾ.ಗಿರೀಶ್ ಎಚ್ಚರಿಕೆ ನೀಡಿದರು.

ಪಟ್ಟಣದ ದುರ್ಗಿಗುಡಿ ಸಮೀಪದ ಮರಳೋಣಿ ರಸ್ತೆಯಲ್ಲಿ ಉಪಯೋಗಿಸಿದ ಸಿರೆಂಜ್ ಸೇರಿ ಇತರೆ ಬಯೋಮೆಡಿಕಲ್ ತ್ಯಾಜ್ಯಗಳನ್ನು ರಸ್ತೆಗಳ ಪಕ್ಕದಲ್ಲೇ ಬಿಸಾಡಲಾಗಿದೆ. ಇದರಿಂದ ಸಾರ್ವಜನಿಕರಲ್ಲಿ ಕಾಯಿಲೆಗಳನ್ನು ಹರಡುವ ಭೀತಿ ಎದುರಾಗಿದೆ. ಈ ಬಗ್ಗೆ ಸಾರ್ವಜನಿಕರಿಂದ ಮಾಹಿತಿ ಪಡೆದ ಪುರಸಭೆ ಮುಖ್ಯಾಧಿಕಾರಿ ಟಿ.ಲೀಲಾವತಿ ಅವರು ತಾಲೂಕು ಆರೋಗ್ಯಾಧಿಕಾರಿಗಳ ಗಮನಕ್ಕೆ ತಂದರು. ಜೊತೆಗೆ ಕೂಡಲೇ ಸ್ಥಳಕ್ಕೆ ಭೇಟಿ ನೀಡಿ ಪರಿಶೀಲನೆ ನಡೆಸಿದರು. ಪೌರ ಕಾರ್ಮಿಕರ ಸಹಾಯದಿಂದ ಬಯೋಮೆಡಿಕಲ್ ತ್ಯಾಜ್ಯಗಳನ್ನು ವಿಲೇವಾರಿ ಮಾಡಲಾಗಿದೆ ಎಂದು ಹೇಳಿದರು.

ಬಳಸಿ ಬಿಸಾಡಿರುವ ಸೂಜಿ ಸಹಿತ ಸಿರೆಂಜ್‌ಗಳು ರಸ್ತೆಯಲ್ಲಿ ಸಾಗುವ ಮಕ್ಕಳು ಅಥವಾ ಸಾರ್ವಜನಿಕರು ಆಕಸ್ಮಿಕವಾಗಿ ಮುಟ್ಟಿದರೆ ಅವರಲ್ಲಿ ನಂಜು ಉಂಟಾಗುವ ಸಾಧ್ಯತೆ ಇರುತ್ತದೆ. ಒಂದುವೇಳೆ ಎಚ್.ಐ.ವಿ. ರೋಗಿಗಳಿಗೆ ನೀಡಿದ ಸಿರೇಂಜ್‌ಗಳಾಗಿದ್ದರೆ ಅವುಗಳನ್ನು ಮುಟ್ಟಿದವರಿಗೆ, ಚುಚ್ಚಿದವರಿಗೆ ಕೂಡ ರೋಗ ಹರಡುವ ಸಂಭವ ಹೆಚ್ಚಾಗಿರುತ್ತದೆ. ಬಯೋಮೆಡಿಕಲ್ ತ್ಯಾಜ್ಯಗಳು ಅಪಾಯಕಾರಿ ವಸ್ತುಗಳಾಗಿವೆ. ಎಲ್ಲೆಂದರಲ್ಲಿ ಅವುಗಳನ್ನು ಬಿಸಾಡುವಂತಿಲ್ಲ. ಇವುಗಳನ್ನು ವೈಜ್ಞಾನಿಕ ರೀತಿಯಲ್ಲಿ ನಾಶಪಡಿಸಬೇಕಾಗುತ್ತದೆ. ಇಂತಹ ತ್ಯಾಜ್ಯಗಳನ್ನು ಸಂಗ್ರಹಿಸಲೆಂದೇ ಕೆಲವೊಂದು ಆಧುನಿಕ ವ್ಯವಸ್ಥೆಗಳಿವೆ. ಈ ಸೌಲಭ್ಯಗಳನ್ನು ಬಳಸಿಕೊಳ್ಳಬೇಕಾಗುತ್ತದೆ ಎಂದರು.

ಪುರಸಭೆ ವ್ಯಾಪ್ತಿಯಲ್ಲಿ ಹಾಗೂ ಸಾರ್ವಜನಿಕರು ಓಡಾಡುವ ರಸ್ತೆ ಪಕ್ಕದಲ್ಲಿ ಬಯೋಮೆಡಿಕಲ್ ತ್ಯಾಜ್ಯವನ್ನು ಬಿಸಾಡದಂತೆ ಸೂಚನೆಗಳನ್ನು ಆಸ್ಪತ್ರೆ ಹಾಗೂ ಕ್ಲಿನಿಕ್ ನಡೆಸುವವರಿಗೆ ನೀಡಲಾಗಿದೆ. ಇನ್ನು ಮುಂದೆ ಮತ್ತೆ ಇಂತಹ ಕೃತ್ಯಗಳ ಎಸಗಿದಲ್ಲಿ ಅಂಥವರನ್ನು ಪತ್ತೆ ಹಚ್ಚಿ, ಅವರ ವಿರುದ್ಧ ಕಾನೂನು ಕ್ರಮ ಜರುಗಿಸಲಾಗುವುದು ಎಂದು ಪುರಸಭೆ ಮುಖ್ಯಾಧಿಕಾರಿ ಟಿ. ಲೀಲಾವತಿ ಎಚ್ಚರಿಸಿದ್ದಾರೆ.

- - - -15ಎಚ್.ಎಲ್.ಐ1:

ಹೊನ್ನಾಳಿ ಪಟ್ಟಣದ ದುರ್ಗಿಗುಡಿ ಬಡಾವಣೆ ಸಮೀಪದ ಮರಳೋಣಿ ರಸ್ತೆಯಲ್ಲಿ ಬಿಸಾಡಿರುವ ಬಯೋಮೆಡಿಕಲ್ ತ್ಯಾಜ್ಯಗಳನ್ನು ಪುರಸಭೆ ಪೌರ ಕಾರ್ಮಿಕರು ತೆರವುಗೊಳಿಸಿ, ಸ್ವಚ್ಛಗೊಳಿಸಿದರು. ಪುರಸಭೆ ಆರೋಗ್ಯ ನಿರೀಕ್ಷಕ ಪರಮೇಶ್ವರ ನಾಯ್ಕ ಮತ್ತಿತರರು ಈ ಸಂದರ್ಭ ಇದ್ದರು.

Share this article