ಹೊಸಪೇಟೆ: ವಿಜಯನಗರ ಜಿಲ್ಲೆಯಲ್ಲಿ ಮಳೆಯಿಂದ ಉಂಟಾಗಿರುವ ಬೆಳೆ ಹಾನಿ ಸರ್ವೆ ಕಾರ್ಯವನ್ನು ಕಂದಾಯ ಮತ್ತು ಕೃಷಿ ಇಲಾಖೆಯಿಂದ ಜಂಟಿಯಾಗಿ ನಡೆಸಲಾಗುತ್ತಿದೆ. ಹೊಸಪೇಟೆ ತಾಲೂಕಿನಲ್ಲಿ 30.5 ಹೆಕ್ಟೇರ್‌ನಷ್ಟು ಭತ್ತದ ಬೆಳೆ ಹಾನಿಯಾಗಿದ್ದು, ಇನ್ನೂ ಸರ್ವೆ ಕಾರ್ಯ ಮುಂದುವರೆದಿದೆ.
ಹೊಸಪೇಟೆ ತಾಲೂಕಿನ ಹೊಸೂರು, ಬೆಳಗೋಡು, ನಾಗೇನಹಳ್ಳಿ ಸೇರಿದಂತೆ ವಿವಿಧ ಮಾಗಾಣಿಗಳಲ್ಲಿ 30.5 ಹೆಕ್ಟೇರ್‌ನಷ್ಟು ಭತ್ತದ ಬೆಳೆಗೆ ಹಾನಿಯಾಗಿದೆ. ಇನ್ನೂ ಸರ್ವೆ ಕಾರ್ಯ ನಡೆಯುತ್ತಿದೆ.
ಕಮಲಾಪುರ, ಮರಿಯಮ್ಮನಹಳ್ಳಿ ಹೋಬಳಿಗಳಲ್ಲಿ ಮೆಕ್ಕೆಜೋಳ, ಹತ್ತಿ, ಸಜ್ಜೆ, ರಾಗಿ ಬೆಳೆಗಳಿಗೂ ಹಾನಿಯಾಗಿದೆ. ಈ ಪ್ರಾಥಮಿಕ ಸರ್ವೆಯಲ್ಲಿ ಮೆಕ್ಕೆಜೋಳ 19 ಹೆ., ಹತ್ತಿ 13 ಹೆ., ಸಜ್ಜೆ ಮತ್ತು ರಾಗಿ ಬೆಳೆಗಳು ತಲಾ 2 ಹೆಕ್ಟೇರ್‌ನಷ್ಟು ಹಾಳಾಗಿರುವುದು ಕಂಡು ಬಂದಿದೆ.ಕಮಲಾಪುರ ಹೋಬಳಿಯ ಬೈಲುವದ್ದಿಗೇರಿ, ಕಾಕುಬಾಳು, ಗುಂಡ್ಲವದ್ದಿಗೇರಿ ಭಾಗದಲ್ಲಿ ಇನ್ನೂ ಸರ್ವೆ ಕಾರ್ಯ ನಡೆಯಬೇಕಿದೆ. ಹಳ್ಳ ಬಂದಿರುವ ಹಿನ್ನೆಲೆಯಲ್ಲಿ ಹೊಲ-ಗದ್ದೆಗಳಿಗೆ ತೆರಳಲು ಕೃಷಿ ಮತ್ತು ಕಂದಾಯ ಇಲಾಖೆಗಳ ಅಧಿಕಾರಿಗಳಿಗೆ ತೊಂದರೆಯಾಗುತ್ತಿದೆ. ಹಳ್ಳ, ಕೊಳ್ಳ ತುಂಬಿ ಹರಿಯುತ್ತಿರುವುದು ತಗ್ಗಿದ ಬಳಿಕ ಮತ್ತೆ ಸರ್ವೆ ಕಾರ್ಯ ಆರಂಭಗೊಳ್ಳಲಿದೆ. ಜಿಲ್ಲೆಯ ಎಲ್ಲಾ ತಾಲೂಕುಗಳಲ್ಲೂ ಬೆಳೆ ಹಾನಿ ಸರ್ವೆ ನಡೆಯಲಿದೆ ಎಂದು ಕೃಷಿ ಮತ್ತು ಕಂದಾಯ ಇಲಾಖೆಗಳ ಅಧಿಕಾರಿಗಳು ತಿಳಿಸಿದ್ದಾರೆ.
ಈಗ ಅಧಿಕಾರಿಗಳು ಕಂದಾಯ ಮತ್ತು ಕೃಷಿ ಇಲಾಖೆಯ ಜಂಟಿ ತಂಡದೊಂದಿಗೆ ಸರ್ವೆ ನಡೆಸುತ್ತಿದ್ದು, ಈ ವರದಿ ಆಯಾ ತಹಸೀಲ್ದಾರ್ ಮೂಲಕ ಜಿಲ್ಲಾಧಿಕಾರಿಗೆ ಸಲ್ಲಿಕೆಯಾಗಲಿದೆ ಎಂದು ಮೂಲಗಳು ತಿಳಿಸಿವೆ.
ಜಿಲ್ಲೆಯಲ್ಲಿ ಮಳೆಗೆ 65ಕ್ಕೂ ಅಧಿಕ ಮನೆಗಳು ಕೂಡ ಉರುಳಿ ಬಿದ್ದಿವೆ. ಸರ್ವೆ ಕಾರ್ಯ ನಡೆಸಿ ಸೂಕ್ತ ಪರಿಹಾರ ಒದಗಿಸಬೇಕು. ಬಡವರು ಸಂಕಷ್ಟದಲ್ಲಿದ್ದು, ಜನಪ್ರತಿನಿಧಿಗಳು ಹಾಗೂ ಅಧಿಕಾರಿಗಳು ಈ ಕುರಿತು ಕ್ರಮವಹಿಸಬೇಕು ಎಂದು ಸಾರ್ವಜನಿಕರು ಒತ್ತಾಯಿಸಿದ್ದಾರೆ.