ಕೂಡ್ಲಿಗಿ: ಕಲ್ಯಾಣ ಕ್ರಾಂತಿ ಆನಂತರ ವಿಜಯನಗರ ಸಾಮ್ರಾಜ್ಯ ಕೇಂದ್ರ ಸ್ಥಾನವಾದ ಹಂಪಿಯು ವಚನ ಸಾಹಿತ್ಯಕ್ಕೆ ಪುನರ್ ರಚನೆ ಮತ್ತು ಅಧ್ಯಯನಕ್ಕೆ ನೆಲೆಯಾಗಿತ್ತು. ಅಲ್ಲದೇ ಪ್ರಾಚೀನ ಸಾಹಿತ್ಯಕ್ಕೆ ಹಂಪಿ ಪರಿಸರ ಮರುವ್ಯಾಖ್ಯಾನ ನೀಡಿತ್ತು ಎಂದು ಹಂಪಿ ವಿವಿ ವಿಶ್ರಾಂತ ಪ್ರಾಧ್ಯಾಪಕ ಡಾ.ಕೆ. ರವೀಂದ್ರನಾಥ ಅಭಿಪ್ರಾಯವ್ಯಕ್ತಪಡಿಸಿದರು.
ಸಮ್ಮೇಳನದ ಅಧ್ಯಕ್ಷತೆ ವಹಿಸಿದ್ದ ಹಿರಿಯ ಸಾಹಿತಿ ಕೂಡ್ಲಿಗಿ ತಾಲೂಕಿನ ಹಿರಿಯ ಸಾಹಿತಿ ಎನ್.ಎಂ. ರವಿಕುಮಾರ್ ಮಾತನಾಡಿ, ವಿಜಯನಗರ ಜಿಲ್ಲೆಯ ಸಾಹಿತ್ಯ, ಸಾಂಸ್ಕೃತಿಕವಾಗಿ ಶ್ರೀಮಂತ ಪರಂಪರೆ ಹೊಂದಿದೆ. ಅದರಲ್ಲೂ ಅಖಂಡ ಕೂಡ್ಲಿಗಿ ತಾಲೂಕು ಪರಿಸರದಲ್ಲಿನ ಬೆಳೆದ ಅನೇಕ ಸಾಹಿತಿಗಳು ಕನ್ನಡ ಸಾಹಿತ್ಯ ನೀಡಿದ ಕೊಡುಗೆ ಆಪಾರ. ಪಂಡಿತ ಪರಂಪರೆ ಮಾತ್ರವಲ್ಲ, ಹಿ.ಮ. ನಾಗಯ್ಯ, ಡಾ.ಬಿ.ಎಂ. ವೃಷಭೇಂದ್ರಯ್ಯ, ಕೋಚೆ ಮುಂತಾದವರ ನವೋದಯ ಸಾಹಿತ್ಯ ಮತ್ತು ಕುಂವೀ, ಅರುಣಜೋಳದ ಕೂಡ್ಲಿಗಿ ಅವರಂತಹ ಬಂಡಾಯ ಮತ್ತು ದಲಿತ ಸಾಹಿತ್ಯ ಹಾಗೂ ಡಾ. ವಿರೂಪಾಕ್ಷಿ ಪೂಜಾರಹಳ್ಳಿ, ಡಾ.ಎಚ್. ತಿಪ್ಪೇಸ್ವಾಮಿ ಮುಂತಾದವರು ಸಂಶೋಧನಾ ಕ್ಷೇತ್ರಕ್ಕೆ ನೀಡಿದ ಕೊಡುಗೆ ಸ್ಮರಣೀಯವಾಗಿದೆ ಎಂದರು.
ಸಮ್ಮೇಳನಾಧ್ಯಕ್ಷರ ಕುರಿತು ಲೇಖಕ ಭೀಮಣ್ಣ ಗಜಾಪುರ ಮಾತನಾಡಿ, ಬರಪೀಡಿತ ತಾಲೂಕಿನಲ್ಲಿ ಓರ್ವ ಶಿಕ್ಷಕರಾಗಿ 30 ವರ್ಷ ಸಾಹಿತ್ಯ ಕೃಷಿ ಮಾಡುವ ಮೂಲಕ ಸಾಹಿತ್ಯ ಬಳಗ ಕಟ್ಟಿದವರು ಎನ್.ಎಂ. ರವಿಕುಮಾರ್, ಅವರಿಗೆ ಸಮ್ಮೇಳನಾಧ್ಯಕ್ಷ ಸ್ಥಾನ ಸಿಕ್ಕಿರುವುದು ಸೂಕ್ತವಾಗಿದೆ ಎಂದರು.ಕೊಟ್ಟೂರಿನ ಡೊಣೂರು ಚಾನುಕೋಟಿ ಮಠದ ಶ್ರೀ ಸಿದ್ದಲಿಂಗ ಶಿವಾಚಾರ್ಯ ಸ್ವಾಮೀಜಿ, ಕಾನಾಮಡಗು ದಾಸೋಹಮಠದ ಶ್ರೀ ಐಮಡಿ ಶರಣಾರ್ಯರು ಸಾನ್ನಿಧ್ಯ ವಹಿಸಿದ್ದರು. ಸಾಹಿತಿಗಳಾದ ಡಾ.ಚಂದ್ರಶೇಖರ ಮಾಡಲಗೇರಿ, ಯು. ಜಗನ್ನಾಥ, ಪ್ರೇಮಾ ಭಜಂತ್ರಿ, ಕೂಡ್ಲಿಗಿ ಕಸಾಪ ಅಧ್ಯಕ್ಷ ಅಂಗಡಿ ವೀರೇಶ್, ಜಗಳೂರು ಕಸಾಪ ಅಧ್ಯಕ್ಷೆ ಸುಜಾತಾ ಲಕ್ಕಮ್ಮನವರು, ಡಾ. ಪುಷ್ಪಾ ಹಾಗೂ ಸುಭಾಶ್ಚಂದ್ರ, ಕೆ.ಎಸ್. ವೀರೇಶ್ ಉಪಸ್ಥಿತರಿದ್ದರು.
ಸಾಹಿತಿ ಸುರೇಶ ಕೋರಕೊಪ್ಪ ಅಧ್ಯಕ್ಷತೆಯಲ್ಲಿ ಕವಿಗೋಷ್ಠಿ ನಡೆಯಿತು. ಅಂಜಲಿ ಬೆಳಗಲ್ ಮತ್ತು ಡಾ.ಎ. ಕರಿಬಸಪ್ಪ ವಿಶೇಷ ಉಪನ್ಯಾಸ ನೀಡಿದರು. ಜಿಲ್ಲೆಯ ಅನೇಕ ಯುವ ಸಾಹಿತಿಗಳು ಕವಿಗೋಷ್ಠಿಯಲ್ಲಿ ಭಾಗವಹಿಸಿ ತಮ್ಮ ಕವನಗಳನ್ನು ವಾಚಿಸಿದರು. ಬೆಂಗಳೂರಿನ ಎಚ್‌ಎಎಲ್ ನಿವೃತ್ತ ಅಧಿಕಾರಿ ಹಾಗೂ ಸಾಹಿತಿ ಕೆ.ರವೀಂದ್ರನಾಥ ಸಮಾರೋಪ ಸಮಾರಂಭದಲ್ಲಿ ಮಾತನಾಡಿದರು. ಆನಂತರ ಸಾಧಕರಿಗೆ ಸನ್ಮಾನ ನಡೆಯಿತು.