ಉಪನ್ಯಾಸಕರು ಕೇಂದ್ರ ಸ್ಥಾನದಲ್ಲಿ ವಾಸಿಸದಿದ್ದರೆ ಕ್ರಮ: ಶಾಸಕ ಆರ್‌.ವಿ. ದೇಶಪಾಂಡೆ

KannadaprabhaNewsNetwork | Published : Apr 22, 2025 1:54 AM

ಸಾರಾಂಶ

ಪದವಿ ವಿದ್ಯಾರ್ಥಿ ವೃಂದದಲ್ಲಿ ಉಪನ್ಯಾಸಕರ ಬಗ್ಗೆ ಗೌರವ ಮತ್ತು ಭಕ್ತಿಯ ಭಾವನೆಯು ಮೂಡಿಸುವ ಹಾಗೆ ಇಂದು ಪದವಿ ಕಾಲೇಜಿನ ಗುರುವೃಂದವು ತಮ್ಮ ಸೇವಾ ಮತ್ತು ಭೋದನಾ ವಿಧಾನದಲ್ಲಿ ಬದಲಾವಣೆ ತರಬೇಕಾಗಿದೆ

ಹಳಿಯಾಳ: ಪದವಿ ವಿದ್ಯಾರ್ಥಿ ವೃಂದದಲ್ಲಿ ಉಪನ್ಯಾಸಕರ ಬಗ್ಗೆ ಗೌರವ ಮತ್ತು ಭಕ್ತಿಯ ಭಾವನೆಯು ಮೂಡಿಸುವ ಹಾಗೆ ಇಂದು ಪದವಿ ಕಾಲೇಜಿನ ಗುರುವೃಂದವು ತಮ್ಮ ಸೇವಾ ಮತ್ತು ಭೋದನಾ ವಿಧಾನದಲ್ಲಿ ಬದಲಾವಣೆ ತರಬೇಕಾಗಿದೆ ಎಂದು ರಾಜ್ಯ ಆಡಳಿತ ಸುಧಾರಣಾ ಆಯೋಗದ ಅಧ್ಯಕ್ಷ, ಹಿರಿಯ ಶಾಸಕ ಆರ್.ವಿ.ದೇಶಪಾಂಡೆ ಕರೆನೀಡಿದರು.

ತಾಲೂಕಿನ ಹವಗಿ ಗ್ರಾಮದಲ್ಲಿ ಸರ್ಕಾರಿ ಪ್ರಥಮ ದರ್ಜೆ ಮಹಾವಿದ್ಯಾಲಯದಲ್ಲಿ 2023-24ನೇ ಸಾಲಿನ ಸಾಮಾನ್ಯ ಯೋಜನೆಯ, ಕ್ರಿಯಾ ಯೋಜನೆಯಡಿಯಲ್ಲಿ ಮಂಜೂರಾದ ₹1 ಕೋಟಿ ವೆಚ್ಚದ ಗ್ರಂಥಾಲಯ ಕಟ್ಟಡ ನಿರ್ಮಾಣ ಕಾಮಗಾರಿಗಳಿಗೆ ಶಿಲಾನ್ಯಾಸ ನೆರವೇರಿಸಿ ಅವರು ಮಾತನಾಡಿದರು.ಶಿಸ್ತಿನ ಕ್ರಮ ಗ್ಯಾರಂಟಿ:

ಗುರುವೃಂದದವರಿಗೆ ಗೌರವ ಕೊಡುವ ಕಾಲ ಈಗಿಲ್ಲ. ಗುರುವೃಂದದವರು ತಮ್ಮ ಘನತೆ ಗೌರವಕ್ಕೆ ತಕ್ಕಂತೆ ಸೇವೆಯನ್ನು ನೀಡುವುದನ್ನು ಮರೆತಿರುವಂತಿದೆ ಎಂದು ದುಖಃದಿಂದ ಹೇಳುತ್ತಿದ್ದೇನೆ. ಸರ್ಕಾರವು ನಿಮ್ಮ ಸೇವೆಗೆ ಉತ್ತಮ ವೇತನವನ್ನು ನೀಡುತ್ತಿದ್ದು, ಅದಕ್ಕೆ ತಕ್ಕಂತೆ ನಿಮ್ಮಿಂದ ಸೇವೆಯನ್ನು ಸರ್ಕಾರ ನಿರೀಕ್ಷಿಸಿದೆ. ಕಾಲೇಜಿನ ಉಪನ್ಯಾಸಕರು ಹಳಿಯಾಳದಲ್ಲಿ ನೆಲೆಸದೇ ಪ್ರತಿನಿತ್ಯ ಬೇರೆಡೆಯಿಂದ ಬಂದು ಸೇವೆ ಸಲ್ಲಿಸುತ್ತಿರುವ ದೂರುಗಳು ಬರುತ್ತಿವೆ. ಕಾಲೇಜಿನ ಗುರುವೃಂದವು ಆದಷ್ಟು ಕೇಂದ್ರ ಸ್ಥಾನದಲ್ಲಿಯೇ ವಾಸಿಸಬೇಕು. ಗುರುವೃಂದ ಬಯಸಿದಲ್ಲಿ ಹಳಿಯಾಳದಲ್ಲಿ ವಸತಿ ಸೌಲಭ್ಯವನ್ನು ಕಲ್ಪಿಸುವ ಭರವಸೆಯನ್ನು ನೀಡಿದರು. ನನ್ನ ಸಲಹೆಯನ್ನು ಹಗುರುವಾಗಿ ತೆಗೆದು ಕೊಳ್ಳಬೇಡಿ ಎಂದು ಎಚ್ಚರಿಸಿದ ದೇಶಪಾಂಡೆ, ಯಾರೂ ಕೇಂದ್ರ ಸ್ಥಾನದಲ್ಲಿ ನೆಲೆಸುವುದಿಲ್ಲ ಅಂತಹ ಉಪನ್ಯಾಸಕರ ಮೇಲೆ ಶಿಸ್ತಿನ ಕ್ರಮ ಕೈಗೊಳ್ಳುವಂತೆ ನಾನು ಸರ್ಕಾರಕ್ಕೆ ಶಿಪಾರಸ್ಸು ಮಾಡುತ್ತೆನೆ ಎಂದರು.

ಕೃಷಿ-ಬೇಸಾಯದಿಂದ ಯುವಸಮೂಹ ದೂರ:

ನಮ್ಮ ದೇಶದ ಅರ್ಥ ವ್ಯವಸ್ಥೆಯು ಕೃಷಿಯ ಮೇಲೆ ಅವಲಂಬಿತವಾಗಿದೆ, ಕೃಷಿ-ತೋಟಗಾರಿಕೆ, ರೇಷ್ಮೆ, ಹೈನುಗಾರಿಕೆಯ ಬಗ್ಗೆ ಈಗಿನ ಯುವಸಮೂಹವು ನಿರಾಸಕ್ತಿಯನ್ನು ತಾಳುತ್ತಿರುವುದು ದೇಶದ ಹಿತದೃಷ್ಟಿಯಿಂದ ಶುಭ ಸಂಕೇತವಲ್ಲ ಎಂದರು.

ಕಾಲೇಜು ವಿದ್ಯಾರ್ಥಿಗಳು ರಜೆಯ ಸಮಯದಲ್ಲಿ ವಾರದ ಬಿಡುವಿನಲ್ಲಿ ತಮ್ಮ ಹೊಲ ಗದ್ದೆಗಳಿಗೆ ಭೇಟಿ ನೀಡಿ ಕೃಷಿ ಬೇಸಾಯದಲ್ಲಿ ತೊಡಗಿಕೊಳ್ಳಬೇಕು ಎಂದರು.

ಹಾಗೇಯೆ ಡಿಗ್ರಿ ಕಾಲೇಜಿನಲ್ಲಿಯೂ ವಾರಕ್ಕೊಮ್ಮೆ ಕೃಷಿ, ತೋಟಗಾರಿಕೆ, ಹೈನುಗಾರಿಕೆ ಇತ್ಯಾದಿಗಳ ಬಗ್ಗೆ ಸಂಬಂಧಿತ ಇಲಾಖೆಗಳಿಂದ ಅಥವಾ ಪರಿಣಿತರಿಂದ ಉಪನ್ಯಾಸ, ಪ್ರಾಯೋಗಿಕ ತರಬೇತಿ ಶಿಬಿರ ಕಾರ್ಯಾಗಾರವನ್ನು ಹಮ್ಮಿಕೊಳ್ಳಲು ಯೋಜನೆಯನ್ನು ರೂಪಿಸಬೇಕು ಎಂದರು.

ಉಪನ್ಯಾಸಕರು ಟೈಮ್ ಟೇಬಲ್ ಆದಾರಿತ ಬೋಧನೆಯೊಂದಿಗೆ ತಮಗೆ ದೊರೆಯುವ ಬಿಡುವಿನ ಸಮಯವನ್ನು ವಿದ್ಯಾರ್ಥಿ ವೃಂದದೊಂದಿಗೆ ಕಳೆಯಿರಿ ಎಂದರು.

ಕಾಲೇಜು ಪ್ರಾಚಾರ್ಯೆ ಡಾ.ಸಂಗೀತಾ ಕಟ್ಟಿಮನಿ, ಪ್ರಾಧ್ಯಾಪಕರು ಮತ್ತು ಗ್ರಂಥಪಾಲಕ ಪ್ರೊ.ಮಂಜುನಾಥ ಲಮಾಣಿ, ತಹಸೀಲ್ದಾರ ಪ್ರವೀಣ ಹುಚ್ಚಣ್ಣನವರ, ತಾಪಂ ಇಒ ವಿಲಾಸರಾಜ್ ಪ್ರಸನ್ನ, ಬಿಇಒ ಪ್ರಮೋದ ಮಹಾಲೆ, ಕಾಲೇಜು ಅಭಿವೃದ್ಧಿ ಸಮಿತಿಯ ಸದಸ್ಯರು ಹಾಗೂ ಇತರರು ಇದ್ದರು.

Share this article