ಸಮೀಕ್ಷೆಯಲ್ಲಿ ಹೊಲೆಯ- ಮಾದಿಗ ಉಪಜಾತಿಗಳನ್ನು ಕಡ್ಡಾಯವಾಗಿ ನಮೂದಿಸಿ : ಕೃಷ್ಣ ದಾಸ್

KannadaprabhaNewsNetwork | Updated : Apr 22 2025, 11:47 AM IST

ಸಾರಾಂಶ

ಹೊಸದಾಗಿ ಪರಿಶಿಷ್ಟ ಜಾತಿಗಳ ಸಮೀಕ್ಷೆ ನಡೆಸಲು ಬಂದಾಗ ಉಪಜಾತಿ ಹೆಸರನ್ನು ಹೊಲೆಯ ಮತ್ತು ಮಾದಿಗ ಎಂದು ಕಡ್ಡಾಯವಾಗಿ ನಮೂದಿಸುವಂತೆ ಹೊಲೆಯ, ಮಾದಿಗ ಸಂಘಟನೆಗಳ ಸಮನ್ವಯ ಸಮಿತಿ ಜಿಲ್ಲಾಧ್ಯಕ್ಷ ಕೃಷ್ಣ ದಾಸ್ ಮನವಿ ಮಾಡಿದರು.

 ಹಾಸನ :  ಹೊಸದಾಗಿ ಪರಿಶಿಷ್ಟ ಜಾತಿಗಳ ಸಮೀಕ್ಷೆ ನಡೆಸಲು ಬಂದಾಗ ಉಪಜಾತಿ ಹೆಸರನ್ನು ಹೊಲೆಯ ಮತ್ತು ಮಾದಿಗ ಎಂದು ಕಡ್ಡಾಯವಾಗಿ ನಮೂದಿಸುವಂತೆ ಹೊಲೆಯ, ಮಾದಿಗ ಸಂಘಟನೆಗಳ ಸಮನ್ವಯ ಸಮಿತಿ ಜಿಲ್ಲಾಧ್ಯಕ್ಷ ಕೃಷ್ಣ ದಾಸ್ ಮನವಿ ಮಾಡಿದರು.

ಪತ್ರಿಕಾಗೋಷ್ಠಿಯಲ್ಲಿ ಸೋಮವಾರ ಮಾತನಾಡಿ, ಕರ್ನಾಟಕದಲ್ಲಿ ಒಳಮೀಸಲಾತಿ ಕಲ್ಪಿಸಲು ಲಭ್ಯವಿರುವ ದತ್ತಾಂಶ ಆಧರಿಸಿ ಹೊಸದಾಗಿ ಪರಿಶಿಷ್ಟ ಜಾತಿಗಳ ಸಮೀಕ್ಷೆ ನಡೆಸಲು ರಾಜ್ಯ ಸರ್ಕಾರ ತೀರ್ಮಾನಿಸಿದೆ. ಇದಕ್ಕಾಗಿ ನ್ಯಾಯಮೂರ್ತಿ ನಾಗಮೋಹನದಾಸ್ ಸಮಿತಿಗೆ ಎರಡು ತಿಂಗಳ ಕಾಲಾವಕಾಶ ನೀಡಲಾಗಿದೆ. ಈಗ ಆಯೋಗ ಪರಿಶಿಷ್ಟ ಜಾತಿಗಳ ಸಮೀಕ್ಷೆ ನಡೆಸಲು ತಯಾರಿ ನಡೆಸುತ್ತಿದೆ. ಇದಕ್ಕಾಗಿ ಆಯೋಗ ಅಗತ್ಯ ಗಣತಿದಾರರನ್ನು ನೇಮಕ ಮಾಡಿಕೊಳ್ಳುತ್ತಿದೆ. ಗಣತಿದಾರರು ಮನೆಗಳಿಗೆ ಬಂದಾಗ ಈ ಕುಟುಂಬಗಳು ನಿಖರವಾಗಿ ತಮ್ಮ ಉಪಜಾತಿಯನ್ನು ಗಣತಿದಾರರಿಗೆ ತಿಳಿಸಬೇಕು. ಯಾವುದೇ ಕಾರಣಕ್ಕೂ ತಮ್ಮ ಉಪಜಾತಿಯ ಹೆಸರನ್ನು ಮರೆಮಾಚಬಾರದು ಎಂದು ಮನವಿ ಮಾಡಿದರು.

ಅದರಲ್ಲೂ ಪರಿಶಿಷ್ಟ ಜಾತಿಗೆ ಸೇರಿದ ಹೊಲೆಯ ಮತ್ತು ಮಾದಿಗ ಉಪಜಾತಿಯ ಕುಟುಂಬಗಳು ಸ್ಪಷ್ಟವಾಗಿ ತಮ್ಮ ಉಪಜಾತಿ ಹೆಸರನ್ನು ನಮೂದಿಸುವಂತೆ ಗಣತಿದಾರರಿಗೆ ತಿಳಿಸಬೇಕು. ಏಕೆಂದರೆ ಸುಮಾರು 7 - 8  ಜಿಲ್ಲೆಗಳಲ್ಲಿ ಹೊಲೆಯ ಮತ್ತು ಮಾದಿಗ ಜಾತಿಗೆ ಸೇರಿದ ಉಪಜಾತಿಗಳಲ್ಲಿ ಗೊಂದಲ ಉಂಟಾಗಿದೆ. ಉದಾಹರಣೆಗೆ ಹಾಸನ ಜಿಲ್ಲೆ ಸೇರಿದಂತೆ ಕೆಲವು ಜಿಲ್ಲೆಗಳಲ್ಲಿ ಹೊಲೆಯರನ್ನು ಆದಿಕರ್ನಾಟಕ ವೆಂದೂ, ತುಮಕೂರು ಜಿಲ್ಲೆ ಸೇರಿದಂತೆ ಕೆಲವು ಜಿಲ್ಲೆಗಳಲ್ಲಿ ಮಾದಿಗರನ್ನು ಆದಿಕರ್ನಾಟಕ ವೆಂತಲೂ ಜಾತಿಪ್ರಮಾಣ ಪತ್ರ ನೀಡಲಾಗಿರುವುದು ಈ ಎರಡು ಉಪಜಾತಿಗಳ ಜನಸಂಖ್ಯೆ ಪ್ರಮಾಣವನ್ನು ನಿರ್ಧರಿಸಲು ಸಾಧ್ಯವಾಗುತ್ತಿಲ್ಲ.

 ಈ ಗೊಂದಲಗಳಿಗೆ ಪರಿಹಾರ ಈ ಎರಡು ಉಪಜಾತಿಗೆ ಸೇರಿದ ಕುಟುಂಬಗಳು ನಿಖರವಾಗಿ ಗಣತಿದಾರರಿಗೆ ತಮ್ಮ ಉಪಜಾತಿಯ ಹೆಸರುಗಳಾದ ಹೊಲಯ, ಮಾದಿಗ ಎಂದು ಮರೆಮಾಚದೆ ತಿಳಿಸಬೇಕು. ಯಾವುದೇ ಕಾರಣಕ್ಕೂ (ಆದಿಕರ್ನಾಟಕ ) ಅಥವಾ (ಆದಿದ್ರಾವಿಡ )ಅಥವಾ ಂಂ(ಆದಿ ಆಂಧ್ರ) ಎಂದು ಬರೆಸಬಾರದು. ಅಲ್ಲದೆ ಹರಿಜನ ಎಂಬ ಹೆಸರನ್ನು ಬರೆಸಲೇಬಾರದು. ಈ ಹೆಸರು ಪರಿಶಿಷ್ಟ ಜಾತಿಯ ಉಪಜಾತಿಯ ಪಟ್ಟಿಯಲ್ಲಿ ಇಲ್ಲ. ಮತ್ತೊಂದು ವಿಷಯವೇನೆಂದರೆ ನಗರ ಪ್ರದೇಶದಲ್ಲಿ ಬಾಡಿಗೆ ಮನೆ ಪಡೆಯಲು ಹೊಲೆಯರು ಮತ್ತು ಮಾದಿಗರು ತಮ್ಮ ಉಪ ಜಾತಿ ಹೆಸರನ್ನು ಮುಚ್ಚಿಟ್ಟು ಕ್ರಿಶ್ಚಿಯನ್, ಗೌಡ ಅಥವಾ ಬೇರೊಂದು ಹೆಸರು ಹೇಳಿ ವಾಸಿಸುತ್ತಿದ್ದಾರೆ. 

ಇಂತವರು ಯಾವುದೇ ಕಾರಣಕ್ಕೂ ತಮ್ಮ ಉಪಜಾತಿ ಹೆಸರನ್ನು ಮರೆಮಾಚಬಾರದು ಅಥವಾ ಮನೆಗೆ ಬೀಗ ಹಾಕಿಕೊಂಡು ಯಾವುದೊ ಜಾತ್ರೆ, ಹಬ್ಬಗಳಿಗೆ ಹೋಗಬಾರದು. ಹಾಗೇನಾದರು ಮಾಡಿದರೆ ನಿಮ್ಮ ಮಕ್ಕಳ ಭವಿಷ್ಯಕ್ಕೆ ತೊಂದರೆಯಾಗುತ್ತದೆ ಎಂದು ಈ ಮೂಲಕ ಮನವಿ ಮಾಡುತ್ತೇವೆ ಎಂದರು. ಆದ್ದರಿಂದ ಈ ಎರಡು ಉಪಜಾತಿಗೆ ಸೇರಿದ ಸಂಘ ಸಂಸ್ಥೆಗಳ ಮುಖಂಡರು, ಈ ಸಮುದಾಯಗಳಿಗೆ ಸೇರಿದ ನೌಕರರು, ವಿದ್ಯಾವಂತರು ನಿಮ್ಮನಿಮ್ಮ ಗ್ರಾಮ ಪಂಚಾಯಿತಿ ವ್ಯಾಪ್ತಿಯಲ್ಲಿ ಬರುವ ಗ್ರಾಮಗಳಿಗೆ, ನಗರ ಪ್ರದೇಶದಲ್ಲಿ ವಾಸ ಮಾಡುತ್ತಿರುವ ವಾರ್ಡ್ ಗಳಿಗೆ ತೆರಳಿ ತಮ್ಮ ತಮ್ಮ ಉಪಜಾತಿಗಳನ್ನು ಗಣತಿದಾರರಿಗೆ ತಿಳಿಸುವಂತೆ ಜಾಗೃತಿ ಮೂಡಿಸಬೇಕೆಂದು ಹೇಳಿದರು.

ಪತ್ರಿಕಾಗೋಷ್ಠಿಯಲ್ಲಿ ಹೊಲೆಯ ಮಾದಿಗ ಸಂಘಟನೆಗಳ ಸಮನ್ವಯ ಸಮಿತಿ ಜಿಲ್ಲಾ ಪ್ರಧಾನ ಕಾರ್ಯದರ್ಶಿ ಶಂಕರರಾಜು, ಕಾರ್ಯದರ್ಶಿ ನಾಗರಾಜು ಹೆತ್ತೂರ್, ಉಪಾಧ್ಯಕ್ಷ ಅಂಬೂಗ ಮಲ್ಲೇಶ್, ಸತೀಶ್, ಸಹ ಕಾರ್ಯದರ್ಶಿ ಪ್ರಕಾಶ್, ಖಜಾಂಚಿ ಕುಮಾರಸ್ವಾಮಿ ಇತರರು ಉಪಸ್ಥಿತರಿದ್ದರು.

Share this article