ಮೂಡಿಗೆರೆ : ಮೊಬೈಲ್ ಗ್ರಾಹಕರಿಗೆ ಅಡೆತಡೆಗಳಿಲ್ಲದೇ ಸುಲಲಿತವಾಗಿ ಸಿಗ್ನಲ್ ಲಭಿಸುವ ಸದುದ್ದೇಶದಿಂದ ನೂತನವಾಗಿ ಬಿ.ಎಸ್.ಎನ್.ಎಲ್. ಟವರ್ ನಿರ್ಮಿಸಿ ಗ್ರಾಮಸ್ಥರಿಗೆ ಅನುಕೂಲ ಮಾಡಲಾಗಿದೆ ಎಂದು ಉಡುಪಿ - ಚಿಕ್ಕಮಗಳೂರು ಸಂಸದ ಕೋಟಾ ಶ್ರೀನಿವಾಸ್ ಪೂಜಾರಿ ಹೇಳಿದರು.
ಬಾಳೂರು ಹೋಬಳಿ ಆಲೇಖಾನ್ ಹೊರಟ್ಟಿ ಗ್ರಾಮದಲ್ಲಿ ₹80 ಲಕ್ಷ ವೆಚ್ಚದಲ್ಲಿ ನೂತನವಾಗಿ ನಿರ್ಮಿಸಿರುವ ಬಿಎಸ್‌ಎನ್‌ಎಲ್ ಸಂಸ್ಥೆಯ ಸೆಟಲೈಟ್ ಬೇಸಿಕ್ ಮೊಬೈಲ್ ಟವರ್‌ವನ್ನು ಸೋಮವಾರ ಸಾರ್ವಜನಿಕರಿಗೆ ಸಮರ್ಪಣೆಗೊಳಿಸಿ ಮಾತನಾಡಿದರು.ರಾಜ್ಯದಲ್ಲಿ ಮೊಟ್ಟ ಮೊದಲ ಬಾರಿಗೆ ಹೊರಟ್ಟಿ ಗ್ರಾಮದಲ್ಲಿ ಸೆಟಲೈಟ್ ಟವರ್ ನಿರ್ಮಾಣವಾಗಿದೆ. ಇದರಿಂದ ಮೊಬೈಲ್ ಗ್ರಾಹಕರಿಗೆ ಸಿಗ್ನಲ್‌ಗಳು ಅಡೆತಡೆಗಳಿಲ್ಲದೇ ಸಿಗಲಿದೆ.
ಈ ಹಿಂದಿನ ಸಂಸದರು ಈ ಕಾಮಗಾರಿಗೆ ಚಾಲನೆ ನೀಡಿದ್ದು, ಇದೀಗ ಪೂರ್ಣಗೊಳಿಸಿ ಸಮರ್ಪಿಸಿದ್ದೇವೆ ಎಂದು ತಿಳಿಸಿದರು.ಹೊರಟ್ಟಿ ಬೆಟ್ಟದ ತುದಿಯಲ್ಲಿರುವ ಗ್ರಾಮವಾದ ಹಿನ್ನೆಲೆಯಲ್ಲಿ ಮಾಲಿನ್ಯ ರಹಿತ ಪರಿಸರ ಹೊಂದಿದೆ. ಆಧುನಿಕತೆ ಕಡಿಮೆ ಯಿದ್ದರೂ ಹಚ್ಚಹಸಿರಿನಿಂದ ಸ್ವರ್ಗದಂತೆ ಕಂಗೊಳಿಸುತ್ತಿದ್ದು ಮುಂದಿನ ದಿನಗಳಲ್ಲಿ ಆದ್ಯತೆಗನುಸಾರ ಮೂಲಭೂತ ಸೌಕರ್ಯಕ್ಕೆ ಪ್ರಾಮಾಣಿಕವಾಗಿ ಪ್ರಯತ್ನಿಸುತ್ತೇನೆ ಎಂಬ ಭರವಸೆ ನೀಡಿದರು.ಬಿಜೆಪಿ ಮುಖಂಡ ದೀಪಕ್ ದೊಡ್ಡಯ್ಯ ಮಾತನಾಡಿ, ಚುನಾವಣೆಯಲ್ಲಿ ಒಂದು ಪಕ್ಷಕ್ಕೆ ಸೀಮಿತರಾಗಿರುತ್ತೇವೆ.
ಗೆಲುವಿನ ಬಳಿಕ ಸರ್ವಜನರ ಅಭಿವೃದ್ಧಿಗೆ ಶ್ರಮಿಸಬೇಕು. ಆ ಸಾಲಿನಲ್ಲಿ ಸಂಸದರು ಜಿಲ್ಲೆಯಾದ್ಯಂತ ಪ್ರವಾಸ ಕೈಗೊಂಡು ಕೇಂದ್ರ ಸರ್ಕಾರದ ಸವಲತ್ತನ್ನು ಭೇದಭಾವವಿಲ್ಲದೇ ಪೂರೈಸುತ್ತಿದ್ದಾರೆ ಎಂದು ತಿಳಿಸಿದರು.ಈ ಸಂದರ್ಭದಲ್ಲಿ ಬಾಳೂರು ಗ್ರಾಪಂ ಅಧ್ಯಕ್ಷ ಮಂಜುನಾಥ್, ಸದಸ್ಯ ಸಂದೀಪ್, ಮೂಡಿಗೆರೆ ಬಿಜೆಪಿ ಮಂಡಲ ಅಧ್ಯಕ್ಷ ಗಜೇಂದ್ರ, ಕಡವಂತಿ ಗ್ರಾಪಂ ಸದಸ್ಯ ವಿನೋದ್ ಬೊಗಸೆ, ಮುಖಂಡರಾದ ಪರೀಕ್ಷಿತ್‌ಗೌಡ, ಭರತ್, ಮಂಜು ಹಾಗೂ ಗ್ರಾಮಸ್ಥರು ಹಾಜರಿದ್ದರು.