ಬೆಳಗಾವಿ : ಸಿಇಟಿ ಪರೀಕ್ಷೆ ವೇಳೆ ಜನಿವಾರ ತೆಗೆಸಿ ಅವಮಾನ ಮಾಡಿದ ಪ್ರಕರಣಕ್ಕೆ ಸರ್ಕಾರವನ್ನು ದೂಷಿಸುವುದು ಸರಿಯಲ್ಲ. ಆ ಘಟನೆ ಖಾಸಗಿ ಕಾಲೇಜಿನಲ್ಲಿ ನಡೆದಿದೆ. ಹೀಗಾಗಿ ಸರ್ಕಾರದ ಮೇಲೆ ಗೂಬೆ ಕೂರಿಸುವುದು ತಪ್ಪು ಎಂದು ಲೋಕೋಪಯೋಗಿ ಸಚಿವ ಸತೀಶ ಜಾರಕಿಹೊಳಿ ಹೇಳಿದರು.
ನಗರದಲ್ಲಿ ಸೋಮವಾರ ಸುದ್ದಿಗಾರರೊಂದಿಗೆ ಮಾತನಾಡಿದ ಅವರು, ಬ್ರಾಹ್ಮಣ ಸಮಾಜ ಹಮ್ಮಿಕೊಂಡಿದ್ದ ಪ್ರತಿಭಟನೆಯಲ್ಲಿ ಶಾಸಕ ಅಭಯ ಪಾಟೀಲ ರಾಜಕೀಯ ಉದ್ದೇಶದಿಂದ ಪಾಲ್ಗೊಂಡಿದ್ದಾರೆ. ಅಭಯ ಪಾಟೀಲ ಅವರು ಹಲವು ಸಮಸ್ಯೆಗಳಿದ್ದರೂ ಪ್ರತಿಭಟಿಸಲ್ಲ. ಶಾಲೆ ಬೇಕೆಂದು ಪ್ರತಿಭಟನೆ ನಡೆಸಲ್ಲ ಎಂದು ಕಿಡಿಕಾರಿದರು.ಪ್ರತಿ ಬಾರಿ ಕೊಯ್ನಾ ಜಲಾಶಯದಿಂದ ಕರ್ನಾಟಕಕ್ಕೆ ನೀರು ಬಿಡಬೇಕೆಂದು ಮಹಾರಾಷ್ಟ್ರ ಸರ್ಕಾರಕ್ಕೆ ಮನವಿ ಮಾಡುತ್ತೇವೆ. ಆದರೆ ಇದುವರೆಗೆ ಮಹಾರಾಷ್ಟ್ರ ಸರ್ಕಾರ ರಾಜ್ಯಕ್ಕೆ ನೀರು ಬಿಟ್ಟಿಲ್ಲ.
ಮಳೆಗಾಲದಲ್ಲಿ ನಮ್ಮ ರಾಜ್ಯದಿಂದ ಮಹಾರಾಷ್ಟ್ರದ ಜತ್ತ ತಾಲೂಕಿಗೆ ನೀರು ಹರಿಸಿದರೆ ಅವರು ನಮಗೆ ಬೇಸಿಗೆಯಲ್ಲಿ ಕೃಷ್ಣಾ ನದಿಗೆ ನೀರು ಬಿಡಲು ಒಪ್ಪುತ್ತಾರೆ. ಇದಕ್ಕಾಗಿ ಸರ್ಕಾರದ ಮಟ್ಟದಲ್ಲಿ ಯೋಜನೆ ರೂಪಿಸಬೇಕು ಎಂದರು.ಜಿಲ್ಲೆಯಲ್ಲಿ ಪ್ರಮುಖ ಯೋಜನೆಗಳನ್ನು ಅನುಷ್ಠಾನಗೊಳಿಸಬೇಕೆಂದು ಸಚಿವನಾದ ಮೊದಲ ದಿನವೇ ಪಣತೊಟ್ಟಿದ್ದು, ನನ್ನ ಪ್ರಯತ್ನದ ಫಲವಾಗಿಯೇ ಬರುವ ನವೆಂಬರ್ ತಿಂಗಳಲ್ಲಿ ನೂತನ ಜಿಲ್ಲಾಧಿಕಾರಿ ಕಚೇರಿಯ ನಿರ್ಮಾಣ ಕಾರ್ಯ ಆರಂಭವಾಗಲಿದೆ. ಜಿಲ್ಲೆಯ ಅಭಿವೃದ್ಧಿಗಾಗಿ ನಾನು ಸಚಿವನಾದ ಮೊದಲ ದಿನದಿಂದಲೇ ಕಾರ್ಯಪ್ರವೃತ್ತನಾಗಿದ್ದೇನೆ.
ನೂತನ ಜಿಲ್ಲಾಧಿಕಾರಿ ಕಚೇರಿ ನಿರ್ಮಾಣವಾಗಬೇಕೆಂಬುವುದು ನನ್ನ ಕನಸಾಗಿತ್ತು. ಇಂದು ಅದು ಸಾಕಾರಗೊಂಡಿದೆ. ಈ ಕಟ್ಟಡ ಕಾಮಗಾರಿ ಪೂರ್ಣಗೊಳ್ಳಲು ಮೂರು ವರ್ಷ ಅವಧಿ ಬೇಕಾಗುತ್ತದೆ. ಇನ್ನು ಮೇಲ್ಸೇತುವೆ ನಿರ್ಮಾಣಕ್ಕೆ ಎರಡು ವರ್ಷ ಸಮಯ ಬೇಕಾಗುತ್ತದೆ ಎಂದು ತಿಳಿಸಿದರು.ಇನ್ನು ಸ್ಮಾರ್ಟ್ ಸಿಟಿ ಯೋಜನೆಯಡಿ ನಿರ್ಮಾಣಗೊಂಡ ಕೆಲ ಕಟ್ಟಡಗಳನ್ನು ಭಾನುವಾರವಷ್ಟೇ ಸಿಎಂ ಸಿದ್ದರಾಮಯ್ಯನವರು ಲೋಕಾರ್ಪಣೆಗೊಳಿಸಿದ್ದಾರೆ. ಇನ್ನು ಕೆಲವು ಕಾಮಗಾರಿಗಳು ಪೂರ್ಣಗೊಂಡಿದ್ದು ಶೀಘ್ರದಲ್ಲೇ ಉದ್ಘಾಟನೆ ಮಾಡಲಾಗುವುದು ಎಂದರು.
ರಾಹುಲ್ ಜಾರಕಿಹೊಳಿ ಡಿಸಿಸಿ ಬ್ಯಾಂಕ್ ನಿರ್ದೇಶಕರ ಸ್ಥಾನಕ್ಕೆ ಸ್ಫರ್ಧೆ ಮಾಡುತ್ತಾರಾ ಎಂಬ ಪ್ರಶ್ನೆಗೆ ಪ್ರತಿಕ್ರಿಯಿಸಿ, ರಾಹುಲ್ ಜಾರಕಿಹೊಳಿ ಇತ್ತೀಚೆಗೆ ನಡೆದ ಕೆಪಿಸಿಸಿ ಯುವ ಘಟಕದ ಪ್ರಧಾನ ಕಾರ್ಯದರ್ಶಿ ಸ್ಥಾನಕ್ಕೆ ಸ್ಪರ್ಧಿಸಿ ಗೆಲುವು ಸಾಧಿಸಿದ್ದಾರೆ. ಡಿಸಿಸಿ ಬ್ಯಾಂಕ್ ನಿರ್ದೇಶಕರ ಸ್ಥಾನಕ್ಕೆ ಸ್ಫರ್ಧೆ ಮಾಡುವ ಕುರಿತು ಇನ್ನು ಮುಖಂಡರ ಜತೆ ಚರ್ಚಿಸಿಲ್ಲ. ಈ ಕುರಿತು ಮುಖಂಡರ ಮತ್ತು ಸೊಸೈಟಿ ಸದಸ್ಯರೊಂದಿಗೆ ಚರ್ಚಿಸಿ ಅಂತಿಮ ನಿರ್ಧಾರ ತೆಗೆದುಕೊಳ್ಳಲಾಗುವುದು ಎಂದು ತಿಳಿಸಿದರು.
ಈ ಸಂರ್ಭದಲ್ಲಿ ಶಾಸಕ ಆಸೀಫ್ ಸೇಠ್, ಬುಡಾ ಅಧ್ಯಕ್ಷ ಲಕ್ಷಣರಾವ್ ಚಿಂಗಳೆ ಇದ್ದರು.
ದಕ್ಷಿಣ ಆಫ್ರಿಕಾದಲ್ಲಿ ಜಾಗವನ್ನು ಖರೀದಿಸಿದ್ದು, ಅಲ್ಲಿ ಕ್ರೀಡಾ ಶಾಲೆಯನ್ನು ನಿರ್ಮಾಣಗೊಳಿಸಬೇಕೆಂದು ನಿರ್ಧರಿಸಿದ್ದೇನೆ. ಶೀಘ್ರದಲ್ಲಿ ದ.ಆಫ್ರಿಕಾದಲ್ಲಿ ಕ್ರೀಡಾ ಶಾಲೆ ನಿರ್ಮಿಸಲಾಗುವುದು.
-ಸತೀಶ ಜಾರಕಿಹೊಳಿ, ಸಚಿವ.