ಜನರ ಸಮಸ್ಯೆಗೆ ಸ್ಪಂದಿಸದಿದ್ದರೆ ಕ್ರಮ

KannadaprabhaNewsNetwork |  
Published : Nov 20, 2023, 12:45 AM IST
ಕೂಡ್ಲಿಗಿ ಪಟ್ಟಣದ ಪ್ರವಾಸಿ ಮಂದಿರದ ಆವರಣದಲ್ಲಿ ನಡೆದ ತಾಲೂಕು ಮಟ್ಟದ ಜನತಾ ದರ್ಶನ ಕಾರ್ಯಕ್ರಮದಲ್ಲಿ ನೊಂದವರ ಸಮಸ್ಯೆಗಳನ್ನು ಕೂಡ್ಲಿಗಿ ಶಾಸಕ ಡಾ.ಎನ್.ಟಿ.ಶ್ರೀನಿವಾಸ್ ಹಾಗೂ ಜಿಲ್ಲಾಧಿಕಾರಿ ದಿವಾಕರ ಆಲಿಸಿ ಸಮಸ್ಯೆ ಪರಿಹರಿಸಲು ಮುಂದಾದರು. | Kannada Prabha

ಸಾರಾಂಶ

ನನ್ನನ್ನು ಶಾಸಕರಾಗಿ ಆಯ್ಕೆ ಮಾಡಿದ ಜನರ ಸಂಪರ್ಕದಲ್ಲಿ ನಾನು ಸದಾ ಇರುತ್ತಿದ್ದು, ಅವರ ಕಷ್ಟ, ಸುಖಗಳನ್ನು ಆಲಿಸುತ್ತಿದ್ದೇನೆ. ಇನ್ಮುಂದೆ ಅಧಿಕಾರಿಗಳು ಜನರ ಸಮಸ್ಯೆಗಳನ್ನು ಪರಿಹರಿಸದಿದ್ದರೆ ಸ್ಪಂದಿಸದ ಅಧಿಕಾರಿಗಳ ವಿರುದ್ಧ ಕ್ರಮ ಕೈಗೊಳ್ಳಲಾಗುವುದು ಎಂದು ಡಾ. ಎನ್.ಟಿ. ಶ್ರೀನಿವಾಸ್ ತಿಳಿಸಿದರು.

ಕನ್ನಡಪ್ರಭ ವಾರ್ತೆ ಕೂಡ್ಲಿಗಿ

ಕೂಡ್ಲಿಗಿ ರಾಜ್ಯದಲ್ಲಿ ಅತ್ಯಂತ ಹಿಂದುಳಿದ ತಾಲೂಕಾಗಿದ್ದು, ಇಲ್ಲಿ ಕೂಲಿಕಾರ್ಮಿಕರು, ಬಡವರೇ ಹೆಚ್ಚಿದ್ದಾರೆ. ಜನತಾ ದರ್ಶನ ಕಾರ್ಯಕ್ರಮ ಮುಖ್ಯಮಂತ್ರಿ ಸಿದ್ದರಾಮಯ್ಯ ಅವರ ಕಾಳಜಿಯಾಗಿದ್ದು, ಇಲ್ಲಿನ ಜನರ ಸಮಸ್ಯೆಗಳಿಗಾಗಿ ಸಲ್ಲಿಸಿದ ಅರ್ಜಿಗಳಿಗೆ ಅಧಿಕಾರಿಗಳು ಕಾಲಮಿತಿಯಲ್ಲಿ ಸ್ಪಂದಿಸಿ ನ್ಯಾಯ ನೀಡದೇ ಹೋದರೆ ಅಂಥವರ ವಿರುದ್ಧ ಸೂಕ್ತ ಕ್ರಮ ಕೈಗೊಳ್ಳಲಾಗುವುದು ಎಂದು ಶಾಸಕ ಡಾ. ಎನ್.ಟಿ. ಶ್ರೀನಿವಾಸ್ ಅಧಿಕಾರಿಗಳಿಗೆ ಎಚ್ಚರಿಕೆ ನೀಡಿದರು.

ಪಟ್ಟಣದ ಪ್ರವಾಸಿ ಮಂದಿರದಲ್ಲಿ ಆಯೋಜಿಸಿದ್ದ ತಾಲೂಕು ಮಟ್ಟದ ಜನತಾ ದರ್ಶನ ಕಾರ್ಯಕ್ರಮಕ್ಕೆ ಚಾಲನೆ ನೀಡಿ ಮಾತನಾಡಿ, ತಾಲೂಕಿನಲ್ಲಿ ರಾಜಕಾರಣಿಗಳು ಹಾಗೂ ಅಧಿಕಾರಿಗಳ ದರ್ಶನವಿಲ್ಲದೆ ಅನಾಥಭಾವ ಕಾಡುತ್ತಿತ್ತು. ಈಗ ಕಾಲ ಬದಲಾಗಿದ್ದು, ನನ್ನನ್ನು ಶಾಸಕರಾಗಿ ಆಯ್ಕೆ ಮಾಡಿದ ಜನರ ಸಂಪರ್ಕದಲ್ಲಿ ನಾನು ಸದಾ ಇರುತ್ತಿದ್ದು, ಅವರ ಕಷ್ಟ, ಸುಖಗಳನ್ನು ಆಲಿಸುತ್ತಿದ್ದೇನೆ. ಇನ್ಮುಂದೆ ಅಧಿಕಾರಿಗಳು ಜನರ ಸಮಸ್ಯೆಗಳನ್ನು ಪರಿಹರಿಸದಿದ್ದರೆ ಸ್ಪಂದಿಸದ ಅಧಿಕಾರಿಗಳ ವಿರುದ್ಧ ಕ್ರಮ ಕೈಗೊಳ್ಳಲಾಗುವುದು ಎಂದರು.

ಜಿಲ್ಲಾಧಿಕಾರಿ ಎಂ.ಎಸ್. ದಿವಾಕರ ಮಾತನಾಡಿ, ಪ್ರತಿ ೧೫ ದಿನಕ್ಕೊಮ್ಮೆ ತಾಲೂಕು ಮಟ್ಟದ ಜನತಾ ದರ್ಶನ ಕಾರ್ಯಕ್ರಮ ನಡೆಯುತ್ತಿದ್ದು, ಮುಂದಿನ ದಿನಗಳಲ್ಲಿ ಶಾಸಕರ ಸಮ್ಮುಖದಲ್ಲಿ ಹೋಬಳಿ ಮಟ್ಟದಲ್ಲೂ ಜನತಾ ದರ್ಶನ ನಡೆಸಲಾಗುವುದು. ಜನತಾ ದರ್ಶನದಲ್ಲಿ ವಸತಿ, ನಿವೇಶನ, ಪಡಿತರ ಚೀಟಿ ಸೇರಿ ನಾನಾ ಸಮಸ್ಯೆಗಳ ಕುರಿತು ಅರ್ಜಿಗಳು ಸಂದಾಯವಾಗಿದ್ದು, ಆಯಾ ಇಲಾಖೆ ಅಧಿಕಾರಿಗಳು ಅರ್ಜಿಗಳಿಗೆ ತ್ವರಿತವಾಗಿ ಪರಿಹಾರ ಕಲ್ಪಿಸಬೇಕು ಎಂದರು.

ಕುಡಿಯುವ ನೀರಿನ ಸಮಸ್ಯೆಯಾಗದಂತೆ ಮುಂಜಾಗ್ರತಾ ಕ್ರಮಗಳನ್ನು ಕೈಗೊಳ್ಳಬೇಕು. ೧೫ನೇ ಹಣಕಾಸು ಯೋಜನೆಯಲ್ಲಿ ಗ್ರಾಪಂಗಳಲ್ಲಿ ಈಗಾಗಲೇ ₹೧೦ರಿಂದ ₹೧೫ ಲಕ್ಷ ಕ್ರಿಯಾಯೋಜನೆ ರೂಪಿಸಲಾಗಿದೆ ಎಂದರು.

ಉಪ ವಲಯ ಅರಣ್ಯ ಸಂರಕ್ಷಣಾಧಿಕಾರಿ ರ‍್ಸಾಲನ್, ತಹಸೀಲ್ದಾರ್ ಎಂ. ರೇಣುಕಾ, ಜಿಪಂ ಮುಖ್ಯ ಯೋಜನಾಧಿಕಾರಿ ಜೆ.ಎಂ. ಅನ್ನದಾನಯ್ಯ, ಡಿಡಿಎಲ್‌ಆರ್ ಮಂಜುನಾಥ ಸೇರಿ ಜಿಲ್ಲಾ ಹಾಗೂ ತಾಲೂಕು ಮಟ್ಟದ ಅಧಿಕಾರಿಗಳು ಇದ್ದರು. ಸತತ ನಾಲ್ಕು ಗಂಟೆಗಳ ಕಾಲ ಸಾರ್ವಜನಿಕರಿಂದ ಶಾಸಕ ಹಾಗೂ ಜಿಲ್ಲಾಧಿಕಾರಿಯವರು ಅರ್ಜಿಗಳನ್ನು ಸ್ವೀಕರಿಸಿದರು. ಕೆಲ ಸಮಸ್ಯೆಗಳಿಗೆ ಸ್ಥಳದಲ್ಲೇ ಪರಿಹಾರ ಒದಗಿಸಿದರು. ತಾಲೂಕಿನ ರಾಯಾಪುರ ಗ್ರಾಮದ ೩೦ ಫಲಾನುಭವಿಗಳಿಗೆ ನಿವೇಶನ ಹಕ್ಕುಪತ್ರಗಳು ಹಾಗೂ ವೈದ್ಯಕೀಯ ಸೌಲಭ್ಯಕ್ಕಾಗಿ ಮೂವರಿಗೆ ಪಡಿತರ ಚೀಟಿಗಳನ್ನು ವಿತರಿಸಲಾಯಿತು.

274 ಅರ್ಜಿ ಸಲ್ಲಿಕೆ:

ಜನತಾ ದರ್ಶನದಲ್ಲಿ ಕಂದಾಯ- ೮೬, ಆರ್‌ಡಿಪಿಆರ್‌- ೪೮, ಮಹಿಳಾ ಮತ್ತು ಮಕ್ಕಳ ಅಭಿವೃದ್ಧಿ- ೩೩, ಜೆಸ್ಕಾಂ- ೨೦, ಪೌರಾಡಳಿತ(ಪಪಂ) ಮತ್ತು ಆಹಾರ ಇಲಾಖೆಗೆ ತಲಾ- ೧೬, ಕೃಷಿ- ೧೩, ಶಿಕ್ಷಣ- ೧೦, ಗ್ರಾಮೀಣ ಕುಡಿಯುವ ನೀರು- ೫ ಸೇರಿ ನಾನಾ ಇಲಾಖೆಗಳಿಗೆ ಒಟ್ಟು ೨೭೪ ಅರ್ಜಿಗಳು ಸಲ್ಲಿಕೆಯಾಗಿದ್ದು, ಆ ಪೈಕೆ ೯೬ ಅರ್ಜಿಗಳಿಗೆ ಸ್ಥಳದಲ್ಲೇ ಪರಿಹಾರ ನೀಡಲಾಯಿತು. ೧೭೮ ಅರ್ಜಿಗಳು ಬಾಕಿ ಉಳಿದಿವೆ ಎಂದು ತಹಸೀಲ್ದಾರ್ ಎಂ. ರೇಣುಕಾ ತಿಳಿಸಿದರು.

PREV

Recommended Stories

ಸಂಪುಟ ಪುನಾರಚನೆಗಾಗಿ ನ.15ರಂದು ದೆಹಲಿಗೆ : ಸಿಎಂ ಸಿದ್ದರಾಮಯ್ಯ
ಸರ್ಕಾರದ ಪ್ರತಿ ಇಲಾಖೆಯ ಮೇಲೂ ಲೋಕಾಯುಕ್ತ ಕಣ್ಣು