ಭಟ್ಕಳ: ಕಚೇರಿಗೆ ಬರುವ ಜನರಿಗೆ ಅಧಿಕಾರಿಗಳು ಕೆಲಸಗಳನ್ನು ಮಾಡಿಕೊಡಲು ಸತಾಯಿಸಿದರೆ ಯಾವುದೇ ಕಾರಣಕ್ಕೂ ಸುಮ್ಮನಿರುವುದಿಲ್ಲ ಎಂದು ಜಿಲ್ಲಾ ಉಸ್ತುವಾರಿ ಸಚಿವ ಮಂಕಾಳ ಎಸ್. ವೈದ್ಯ ಎಚ್ಚರಿಸಿದರು.
ಮಾರ್ಚ್ 15ರೊಳಗೆ ಸರ್ಕಾರದ ಎಲ್ಲ ಅನುದಾನಗಳನ್ನೂ ಬಳಸಿಕೊಳ್ಳಬೇಕು. ಅನುದಾನ ಬಳಕೆಯಾಗದೇ ವಾಪಸ್ ಹೋದರೆ ಯಾವುದೇ ಕಾರಣಕ್ಕೂ ಸಹಿಸುವುದಿಲ್ಲ. ಇದಕ್ಕೆ ಅಧಿಕಾರಿಗಳನ್ನೇ ಹೊಣೆಗಾರರನ್ನಾಗಿ ಮಾಡಲಾಗುವುದು. ಹೀಗಾಗಿ ಅಧಿಕಾರಿಗಳು ಜವಾಬ್ದಾರಿಯುತವಾಗಿ ಕರ್ತವ್ಯ ನಿರ್ವಹಿಸಬೇಕು ಎಂದು ಸೂಚಿಸಿದರು.
ಕಂದಾಯ ಇಲಾಖೆಯಲ್ಲಿ ಏಜೆಂಟರ ಹಾವಳಿ ಸಂಪೂರ್ಣ ಬಂದ್ ಆಗಬೇಕು. ಜನರ ಕೆಲಸವನ್ನು ಏಜೆಂಟರಿಲ್ಲದೇ ಮಾಡಿಕೊಡಬೇಕು ಎಂದು ತಾಕೀತು ಮಾಡಿದ ಸಚಿವರು, ಏಜೆಂಟರ ಹಾವಳಿ ಬಗ್ಗೆ ನಿಗಾ ವಹಿಸಿ ಇದಕ್ಕೆ ಅವಕಾಶ ಮಾಡಿ ಕೊಡಬೇಡಿ ಎಂದು ತಹಸೀಲ್ದಾರರಿಗೆ ಸೂಚಿಸಿದರು.ತಹಸೀಲ್ದಾರ್ ಕಚೇರಿಯಲ್ಲಿ ಜನನ ಮತ್ತು ಮರಣ ಪ್ರಮಾಣಪತ್ರ ನೀಡಲು ಸತಾಯಿಸಲಾಗುತ್ತದೆ ಎಂದು ಕೆಡಿಪಿ ನಾಮನಿರ್ದೇಶಿತ ಸದಸ್ಯರಾದ ಭಾಸ್ಕರ ನಾಯ್ಕ ಮತ್ತು ತಾಲೂಕು ಗ್ಯಾರಂಟಿ ಪ್ರಾಧಿಕಾರದ ಅಧ್ಯಕ್ಷ ರಾಜು ನಾಯ್ಕ ಅವರು ಸಚಿವರ ಗಮನಕ್ಕೆ ತಂದಾಗ, ಸಚಿವರು ತಹಸೀಲ್ದಾರರ ಬಳಿ ಈ ಬಗ್ಗೆ ಚರ್ಚಿಸಿ, ಕೇಸ್ ವರ್ಕರ್ ಕರೆಸುವಂತೆ ಸೂಚಿಸಿದರು.
ಪುರಸಭೆ ವ್ಯಾಪ್ತಿಯಲ್ಲಿ ನಗರೋತ್ಥಾನ ಯೋಜನೆಯಡಿ ರಸ್ತೆ ಮತ್ತಿತರ ಕಾಮಗಾರಿ ವಿಳಂಬಗತಿಯಿಂದ ಸಾಗುತ್ತಿರುವುದರಿಂದ ಕೆಲಸ ಪೂರ್ಣಗೊಳ್ಳುವ ವರೆಗೆ ಗುತ್ತಿಗೆದಾರರಿಗೆ ಬಿಲ್ ಪಾವತಿಸಬೇಡಿ ಎಂದು ಪುರಸಭೆ ಮುಖ್ಯಾಧಿಕಾರಿಗೆ ಸಚಿವರು ಸೂಚಿಸಿದರು. ಅಂಗನವಾಡಿ ಕೇಂದ್ರವನ್ನು ಸ್ವಂತ ಕಟ್ಟಡದಲ್ಲಿ ಮಾಡಬೇಕಾಗಿದೆ. ಅಂಗನವಾಡಿಗಳು ಬಾಡಿಗೆ ಕಟ್ಟಡದಲ್ಲಿ ಕಾರ್ಯನಿರ್ವಹಿಸುವುದು ಸರಿಯಲ್ಲ ಎಂದು ಸಚಿವರು ಹೇಳಿದರು.
ಸಮಯಕ್ಕೆ ಸರಿಯಾಗಿ ಬಸ್ಸುನ್ನು ಓಡಿಸಲು ನಿಮಗೆ ಏನು ತೊಂದರೆ ಆಗಿದೆ ಎಂದು ಸಚಿವರು ಡಿಪೋ ವ್ಯವಸ್ಥಾಪಕರಲ್ಲಿ ಪ್ರಶ್ನಿಸಿದರು. ವಿದ್ಯುತ್ ಇಲ್ಲದ ಮನೆಗಳಿಗೆ ವಿದ್ಯುತ್ ಕೊಡಬೇಕು. ಮಾರ್ಚ್ ಅಂತ್ಯದೊಳಗೆ ಕ್ಷೇತ್ರದಲ್ಲಿ ಯಾವುದೇ ಮನೆಗೆ ವಿದ್ಯುತ್ ಇಲ್ಲ ಎಂದು ಹೇಳಬಾರದು ಎಂದ ಸಚಿವರು, 110 ಕೆವಿ ಕಾಮಗಾರಿ ಮಾರ್ಚ್ ಅಂತ್ಯದೊಳಗೆ ಮುಗಿಸಬೇಕು. ಕೆಲಸವನ್ನು ಶೀಘ್ರಗತಿಯಲ್ಲಿ ಮುಗಿಸಲು ನಿಗಾ ವಹಿಸಿ ಎಂದು ಹೆಸ್ಕಾಂ ಸಹಾಯಕ ಕಾರ್ಯನಿರ್ವಾಹಕ ಅಭಿಯಂತರರಿಗೆ ಸೂಚಿಸಿದರು.