ದೇಸಿ ತಳಿ ಹಸುಗಳನ್ನು ಸಾಕಿದರೆ ರೈತನಿಗೆ ಅನುಕೂಲ-ಡಾ. ನಾಗರಾಜ

KannadaprabhaNewsNetwork |  
Published : Jan 07, 2025, 12:30 AM IST
6ಎಚ್‌ವಿಆರ್2 | Kannada Prabha

ಸಾರಾಂಶ

ದೇಶದಲ್ಲಿ ಹಾಲಿನ ಉತ್ಪಾದನೆ ಹೆಚ್ಚಾಗಿದ್ದರೂ, ಸಗಣಿ ಮತ್ತು ಗಂಜಲದ ಕೊರತೆ ಉಂಟಾಗಿದೆ. ಇದಕ್ಕೆ ದೇಸಿ ತಳಿಗಳ ದನಗಳನ್ನು ಸಾಕದೇ ಇರುವುದು ಕಾರಣ. ಅದಕ್ಕಾಗಿ ದೇಸಿ ತಳಿ ಹಸುಗಳನ್ನು ಹೆಚ್ಚು ಸಾಕಿದರೆ ಅದು ರೈತನಿಗೆ ಹಾಗೂ ದೇಶಕ್ಕೂ ಅನುಕೂಲಕರ ಎಂದು ಅಪರ ಜಿಲ್ಲಾಧಿಕಾರಿ ಡಾ. ನಾಗರಾಜ ಎಲ್. ಹೇಳಿದರು.

ಹಾವೇರಿ: ದೇಶದಲ್ಲಿ ಹಾಲಿನ ಉತ್ಪಾದನೆ ಹೆಚ್ಚಾಗಿದ್ದರೂ, ಸಗಣಿ ಮತ್ತು ಗಂಜಲದ ಕೊರತೆ ಉಂಟಾಗಿದೆ. ಇದಕ್ಕೆ ದೇಸಿ ತಳಿಗಳ ದನಗಳನ್ನು ಸಾಕದೇ ಇರುವುದು ಕಾರಣ. ಅದಕ್ಕಾಗಿ ದೇಸಿ ತಳಿ ಹಸುಗಳನ್ನು ಹೆಚ್ಚು ಸಾಕಿದರೆ ಅದು ರೈತನಿಗೆ ಹಾಗೂ ದೇಶಕ್ಕೂ ಅನುಕೂಲಕರ ಎಂದು ಅಪರ ಜಿಲ್ಲಾಧಿಕಾರಿ ಡಾ. ನಾಗರಾಜ ಎಲ್. ಹೇಳಿದರು.ನಗರದ ಶಿವಬಸವೇಶ್ವರ ಉಪಮಾರುಕಟ್ಟೆ ಪ್ರಾಂಗಣದಲ್ಲಿ ಹುಕ್ಕೇರಿಮಠದ ಲಿಂ. ಶಿವಬಸವ ಶ್ರೀಗಳ 79ನೇ ಮತ್ತು ಲಿಂ. ಶಿವಲಿಂಗ ಶ್ರೀಗಳ 16ನೇ ಪುಣ್ಯ ಸ್ಮರಣೋತ್ಸವ ಅಂಗವಾಗಿ ಸೋಮವಾರ ಹಮ್ಮಿಕೊಂಡಿದ್ದ ಜಾನುವಾರು ಜಾತ್ರೆ, ಚರ್ಮಗಂಟುರೋಗ ಲಸಿಕೆ ಹಾಗೂ ಉತ್ತಮ ತಳಿ ರಾಸು ಪ್ರದರ್ಶನ ಉದ್ಘಾಟಿಸಿ ಅವರು ಮಾತನಾಡಿದರು.ಮುಖ್ಯ ಅತಿಥಿಯಾಗಿದ್ದ ಪಶು ಸಂಗೋಪನಾ ಇಲಾಖೆಯ ಉಪನಿರ್ದೇಶಕ ಡಾ. ಎಸ್.ವಿ. ಸಂತಿ ಮಾತನಾಡಿ, ಎಲ್ಲಾ ರೀತಿಯ ಜಾನುವಾರುಗಳು ಒಂದೇ ಕಡೆ ಸಿಗಲಿ ಎನ್ನುವ ಉದ್ದೇಶದಿಂದ ಜಾನುವಾರು ಜಾತ್ರೆ ಮಾಡುತ್ತಿದ್ದು, ದನಗಳ ಆರೋಗ್ಯ, ಲಕ್ಷಣಗಳು ಮತ್ತು ಉತ್ಪಾದನೆ ಆಧಾರದ ಮೇಲೆ ಉತ್ತಮ ರಾಸುಗಳನ್ನು ಆಯ್ಕೆ ಮಾಡಲಾಗುತ್ತದೆ. ಇತ್ತೀಚಿಗೆ ಜಾನುವಾರುಗಳ ಸಂಖ್ಯೆ ಕಡಿಮೆಯಾಗುತ್ತಿರುವುದು ಕಳವಳಕಾರಿಯಾಗಿದೆ ಎಂದು ಹೇಳಿದರು.ಎಪಿಎಂಸಿಯ ಮಾಜಿ ಆಧ್ಯಕ್ಷ ಮಲ್ಲಿಕಾರ್ಜುನ ಹಾವೇರಿ ಮಾತನಾಡಿ, ತರಕಾರಿ ಮಾರುಕಟ್ಟೆಯನ್ನು ಶೀಘ್ರವಾಗಿ ಜಾನುವಾರು ಮಾರುಕಟ್ಟೆಗೆ ಸ್ಥಳಾಂತರಿಸುವ ಕಾರ್ಯವಾಗಬೇಕು. ವಿಶಾಲವಾದ ಮಾರುಕಟ್ಟೆಯು ಜನರಿಗೆ ಲಭ್ಯವಾಗಬೇಕು. ಹೋರಿ ಹಬ್ಬಕ್ಕೆ ಇರುವ ಆಸಕ್ತಿಯು ಹಸುಗಳ ಸಾಕಾಣಿಕೆಗೂ ಇದ್ದರೆ ರೈತರ ಬದುಕು ಹಸನಾಗುತ್ತದೆ ಎಂದು ಹೇಳಿದರು. ಸಾನಿಧ್ಯ ವಹಿಸಿದ್ದ ಹುಕ್ಕೇರಿಮಠದ ಸದಾಶಿವ ಸ್ವಾಮೀಜಿ ಮಾತನಾಡಿ, ಹಿಂದೆ ರೈತ ಮನೆಯ ಮಧ್ಯ ಭಾಗದಲ್ಲಿಯೇ ದನಗಳ ಕೊಟ್ಟೆಗೆ ಇರುತ್ತಿತ್ತು. ಇದರಿಂದ ಆ ಮನೆಯ ಸದಸ್ಯರ ಆರೋಗ್ಯವೂ ಉತ್ತಮವಾಗಿರುತ್ತಿತ್ತು. ಆದರೆ ಈಗ ನಗರ ಜೀವನ ಹಳ್ಳಿಗೂ ಬಂದು ದನ ಕೊಟ್ಟಿಗೆಯೂ ಮಾಯವಾಗಿದ್ದು, ಹಳ್ಳಿ ಜನರಲ್ಲಿಯೂ ರೋಗಗಳು ಆವರಿಸುತ್ತಿವೆ. ಗೋವುಗಳ ಸಾಕಾಣಿಕೆಯೂ ಕೇವಲ ಹಣ ಸಂಪಾದನೆ ಅಲ್ಲ, ಜೊತೆಗೆ ಆರೋಗ್ಯ ಸಂಪಾದನೆಯೂ ಹೌದು ಎಂದು ಹೇಳಿದರು.ವಿಧಾನಸಭೆ ಉಪಾಧ್ಯಕ್ಷ ರುದ್ರಪ್ಪ ಲಮಾಣಿ ಆಗಮಿಸಿ ಶುಭ ಕೋರಿದರು. ಎಪಿಎಂಸಿ ಮಾಜಿ ನಿರ್ದೇಶಕ ರುದ್ರೇಶ ಚಿನ್ನಣ್ಣನವರ ಮಾತನಾಡಿದರು. ದುಂಡಸಿಯ ಕುಮಾರ ಸ್ವಾಮೀಜಿ, ಎಪಿಎಂಸಿ ಕಾರ್ಯದರ್ಶಿ ಜಿ.ಬಿ. ಕಬ್ಬೇರಹಳ್ಳಿ, ಡಾ. ಪರಮೇಶ ಹುಬ್ಬಳ್ಳಿ, ಧರ್ಮಸ್ಥಳ ಮಹಿಳಾ ಸಂಘದ ಜಿ. ನಾಗರಾಜ್, ಶಂಕರಗೌಡ ಗಾಜೀಗೌಡ್ರ, ರಮೇಶ ಚಾವಡಿ, ಸಿದ್ದಣ್ಣ ಕಡೇಮನಿ, ಅಶೋಕ ಮಾಗನೂರ, ತಮ್ಮಣ್ಣ ಮುದ್ದಿ, ಸಿ.ಜಿ. ತೋಟಣ್ಣನವರ, ಆನಂದ ಅಟವಾಳಗಿ, ನಟರಾಜ ಮತ್ತೀಹಳ್ಳಿ, ಸುರೇಶ ಮುಡಣ್ಣನವರ, ರವಿ ಕರಲಿಂಗಣ್ಣನವರ, ಮಲ್ಲಿಕಾರ್ಜುನ ಹಂದ್ರಾಳ ಇದ್ದರು. ಉತ್ತಮ ತಳಿಯ ಜಾನುವಾರುಗಳಿಗೆ ಬಹುಮಾನ ನೀಡಲಾಯಿತು. ಬಿ. ಬಸವರಾಜ ಸ್ವಾಗತಿಸಿದರು. ಎಸ್.ಎನ್. ಮಳೆಪ್ಪನವರ ನಿರೂಪಿಸಿದರು. ಶಿವಬಸವ ಮರಳಿಹಳ್ಳಿ ವಂದಿಸಿದರು.

PREV
Get the latest news from across Karnataka (ಕರ್ನಾಟಕ ನ್ಯೂಸ್)— breaking headlines, politics, local developments, crime reports, district updates, civic issues and more. Stay informed with Kannada Prabha’s real‑time Karnataka news coverage.

Recommended Stories

ಸರ್ಕಾರಿ ವಕೀಲರಿಗೆ ಮಾಹಿತಿ ನೀಡದಿದ್ರೆ ಕ್ರಮ : ಹೈ!
ಉತ್ತರ ಕರ್ನಾಟಕಕ್ಕೆ ₹15,000 ಕೋಟಿ : ಅಜಯ್‌