ಹೆಣ್ಣು ಮಕ್ಕಳ ಶಿಕ್ಷಣಕ್ಕೆ ಆದ್ಯತೆ ನೀಡಿ: ಜಾಧವ

KannadaprabhaNewsNetwork | Published : Jan 7, 2025 12:30 AM

ಸಾರಾಂಶ

ಸಮಾಜದಲ್ಲಿ ಹೆಣ್ಣು ಮಗು ಎದುರಿಸುತ್ತಿರುವ ಎಲ್ಲ ತಾರತಮ್ಯ ತೊಡೆದು ಹಾಕಬೇಕಾಗಿದೆ. ಅದರಲ್ಲೂ ಬಾಲ್ಯ ವಿವಾಹ ತಡೆಯಬೇಕಿದೆ.

ಮೊರಾರ್ಜಿ ದೇಸಾಯಿ ವಸತಿ ಶಾಲೆಯಲ್ಲಿ ನಾಯಕತ್ವ ಹಾಗೂ ಸಂವಹನ ಶಿಬಿರಕ್ಕೆ ಚಾಲನೆ

ಕನ್ನಡಪ್ರಭ ವಾರ್ತೆ ಕೊಪ್ಪಳ

ಸಮಾಜದಲ್ಲಿ ಹೆಣ್ಣು ಮಗು ಎದುರಿಸುತ್ತಿರುವ ಎಲ್ಲ ತಾರತಮ್ಯ ತೊಡೆದು ಹಾಕಬೇಕಾಗಿದೆ. ಅದರಲ್ಲೂ ಬಾಲ್ಯ ವಿವಾಹ ತಡೆಯಬೇಕಿದೆ. ಹೆಣ್ಣು ಮಕ್ಕಳ ಶಿಕ್ಷಣಕ್ಕೆ ಆದ್ಯತೆ ನೀಡಬೇಕು ಹಾಗೂ ಸಮಾಜ ಹೆಣ್ಣು ಮಕ್ಕಳ ಸಾಧನೆಯನ್ನು ಗುರುತಿಸಿ, ಪ್ರೋತ್ಸಾಹಿಸಬೇಕು ಎಂದು ಪ್ರಾಚಾರ್ಯ ಎನ್.ಎಸ್. ಜಾಧವ ತಿಳಿಸಿದರು.

ತಾಲೂಕಿನ ಹನಕುಂಟಿ ಗ್ರಾಮದ ಹಿಂದುಳಿದ ವರ್ಗಗಳ ಮೊರಾರ್ಜಿ ದೇಸಾಯಿ ವಸತಿ ಶಾಲೆಯಲ್ಲಿ ಕರ್ನಾಟಕ ಆರೋಗ್ಯ ಸಂವರ್ಧನಾ ಪ್ರತಿಷ್ಠಾನ ಸಂಸ್ಥೆ (ಕೆಎಚ್‌ಪಿಟಿ)ಯ ಸ್ಫೂರ್ತಿ ಯೋಜನೆಯಿಂದ ನಡೆದ ನಾಯಕತ್ವ ಹಾಗೂ ಸಂವಹನ ಶಿಬಿರಕ್ಕೆ ಚಾಲನೆ ನೀಡಿ ಮಾತನಾಡಿದರು,

ಹೆಣ್ಣು ಮಗುವಿಗೆ ದೊರೆಯಬೇಕಾದ ಗೌರವ, ಮೌಲ್ಯಗಳನ್ನು ಖಾತ್ರಿಗೊಳಿಸುವುದು, ಹಕ್ಕುಗಳ ಬಗ್ಗೆ ಅರಿವು ಮೂಡಿಸುವುದು ಎಲ್ಲರ ಜವಾಬ್ದಾರಿಯಾಗಿದೆ. ಉತ್ತಮ ಶಿಕ್ಷಣದಿಂದ ಮಾತ್ರ ಸಾಧನೆ ಮಾಡಲು ಸಾಧ್ಯ. ಕಾರಣ ಮಕ್ಕಳು ಓದುವ ವಯಸ್ಸಿನಲ್ಲಿ ವಿದ್ಯೆಗೆ ಪ್ರಾಶಸ್ತ್ಯ ನೀಡಬೇಕು ಎಂದರು.

ಕ್ಷೇತ್ರ ಸಂಯೋಜಕಿ ಸುಷ್ಮಾ ಸಂಗರಡ್ಡಿ ಮಾತನಾಡಿ, ಹದಿಹರೆಯದ ಹೆಣ್ಣು ಮಕ್ಕಳಲ್ಲಿ ನಾಯಕತ್ವ ಗುಣ, ಧೈರ್ಯ ಹಾಗೂ ಇತರ ಗುಣಗಳನ್ನು ಬೆಳೆಸಿಕೊಳ್ಳಲು ಕೆಎಚ್‌ಪಿಟಿ ಅನೇಕ ಯೋಜನೆ ಜಾರಿಗೊಳಿಸಿದೆ. ಹದಿ ಹರೆಯದ ಹೆಣ್ಣು ಮಕ್ಕಳನ್ನು ಪಠ್ಯದ ಓದಿನ ಜೊತೆಗೆ ಪಠ್ಯೇತರ ಚಟುವಟಿಕೆಯಲ್ಲಿ ಪಾಲ್ಗೊಳ್ಳುವಂತೆ ಮಾಡಲಾಗುತ್ತಿದೆ. ಓದು, ಬರಹ, ಗುಂಪು ಚಟುವಟಿಕೆ, ಸಂವಾದ, ಕ್ರೀಡೆ ಮುಂತಾದ ಚಟುವಟಿಕೆಯಲ್ಲಿ ಪಾಲ್ಗೊಳ್ಳುವಂತೆ ಮಾಡಲಾಗುತ್ತಿದೆ. ಇದು ಅವರ ಬೆಳವಣಿಗೆಗೆ ಸಹಕಾರಿಯಾಗಲಿದೆ ಎಂದರು.

ನಿಲಯ ಮೇಲ್ವಿಚಾರಕ ಎಸ್.ಎಫ್‌. ಪಾಟೀಲ, ಶಿಕ್ಷಕ ಸಿದ್ದಯ್ಯ ಹಿರೇಮಠ, ಸಮುದಾಯ ಸಂಘಟಕರಾದ ಅರುಣ, ಜುನಾಬೀ, ಅಕ್ಕಮ್ಮ, ಕಲ್ಪನಾ, ಪ್ರಿಯಾಂಕಾ, ಶಿವಮ್ಮ, ಸುನಂದಾ, ಫಕೀರಮ್ಮ, ಆರ್‌ಜಿಗಳಾದ ರೇಣುಕಾ, ಹೇಮಾ, ಮಂಜುಳಾ, ರಾಧಿಕಾ ಇತರರು ಇದ್ದರು.

Share this article