ಗೌರಿಬಿದನೂರು: ಧರ್ಮಸ್ಥಳ ಕ್ಷೇತ್ರ ಮತ್ತು ಧರ್ಮಾಧಿಕಾರಿ ಡಿ. ವೀರೇಂದ್ರ ಹೆಗ್ಗಡೆ ಅವರ ವಿರುದ್ಧ ಸಾಮಾಜಿಕ ಜಾಲತಾಣಗಳಲ್ಲಿ ಅಪಪ್ರಚಾರ ನಡೆಸಲಾಗುತ್ತಿದೆ ಎಂದು ಕೆ.ಎಚ್.ಪದ್ಮರಾಜ್ ಜೈನ್ ಆಕ್ರೋಶ ವ್ಯಕ್ತಪಡಿಸಿದರು.
ನಗರದ ಪಚ್ಚೆ ಜೈನ್ ಸಮುದಾಯ ಭವನದಲ್ಲಿ ಶನಿವಾರ ಜೈನ್ ಸಮುದಾಯದ ವತಿಯಿಂದ ಪತ್ರಿಕಾಗೋಷ್ಠಿ ಆಯೋಜಿಸಿದ್ದರು.ಈ ವೇಳೆ ಮಾತನಾಡಿ, ಶ್ರೀಕ್ಷೇತ್ರ ಧರ್ಮಸ್ಥಳಕ್ಕೆ ಆರು ಶತಮಾನಗಳ ಧಾರ್ಮಿಕ ಇತಿಹಾಸವಿದೆ. ಇಲ್ಲಿನ ಪಾವಿತ್ರ್ಯತೆಯು ಇಡೀ ದೇಶದ ಮನೆಮಾತಾಗಿದೆ. ಆದರೆ ಇತ್ತೀಚೆಗೆ ಕೆಲವು ದಿನಗಳಿಂದ ಅನಾಮಿಕ ವ್ಯಕ್ತಿಗಳ ಆರೋಪದ ಮೇರೆಗೆ ಎಸ್ ಐ ಟಿ ತಂಡವು ಕ್ಷೇತ್ರದಲ್ಲಿ ಶವಗಳ ಶೋಧ ಕಾರ್ಯ ಮಾಡುತ್ತಿರುವುದು ನಿಜಕ್ಕೂ ನೋವಿನ ಸಂಗತಿಯಾಗಿದೆ. ಕೆಲವು ಕಾಣದ ಕೈಗಳು ಪಿತೂರಿ ಮಾಡುವ ಮೂಲಕ ಕ್ಷೇತ್ರಕ್ಕೆ ಅಪಮಾನ ಮಾಡುವ ಪ್ರಯತ್ನ ನಡೆಸುತ್ತಿರುವುದು ತೀವ್ರ ಖಂಡನೀಯವಾಗಿದೆ ಎಂದರು.
ಶ್ರೀ ಕ್ಷೇತ್ರ ಧರ್ಮಸ್ಥಳದಿಂದ ಸಮಾಜಕ್ಕೆ ಹಾಗೂ ಬಡವರ ಉದ್ಧಾರಕ್ಕೆ ಧರ್ಮಾಧಿಕಾರಿಗಳಾದ ವೀರೇಂದ್ರ ಹೆಗ್ಗಡೆ ಅವರು ಹಲವಾರು ಕಾರ್ಯಕ್ರಮಗಳನ್ನು ಹಮ್ಮಿಕೊಂಡು ಜನರ ಸೇವೆ ಮಾಡುತ್ತಿದ್ದಾರೆ. ಇದನ್ನು ಸಹಿಸದ ಧರ್ಮವಿರೋದಿಗಳ ಗುಂಪು ಷಡ್ಯಂತರ ರೂಪಿಸಿ ಸಂಬಂಧ ಇಲ್ಲದ ಯಾವುದೋ ಪ್ರಕರಣಗಳನ್ನು ಕೆದಕುತ್ತಿದ್ದಾರೆ. ಅಲ್ಲದೆ ಯಾವುದೇ ರೀತಿಯ ಸಾಕ್ಷ್ಯಾಧಾರ ಇಲ್ಲದೆ ಇದ್ದರೂ ಶ್ರೀ ಕ್ಷೇತ್ರ ಧರ್ಮಸ್ಥಳ ಹಾಗೂ ವೀರೇಂದ್ರ ಹೆಗ್ಗಡೆ ಅವರ ವಿರುದ್ಧ ಅಪಪ್ರಚಾರ ನಡೆಸುತ್ತಿದ್ದು, ಇದರಿಂದ ಶ್ರೀ ಕ್ಷೇತ್ರದ ಭಕ್ತರಿಗೆ ಅಪಾರ ನೋವು ಉಂಟಾಗಿದೆ. ಶ್ರೀ ಕ್ಷೇತ್ರ ಧರ್ಮಸ್ಥಳ ಹಾಗೂ ವೀರೇಂದ್ರ ಹೆಗ್ಗಡೆ ಅವರ ವಿರುದ್ಧ ಅಪಪ್ರಚಾರ ನಡೆಸುತ್ತಿರುವವರ ವಿರುದ್ಧ ಸರ್ಕಾರ ಕೂಡಲೇ ಸೂಕ್ತ ಕಾನೂನು ಕ್ರಮ ಕೈಗೊಳ್ಳಬೇಕು ಎಂದು ಆಗ್ರಹಿಸಿದರು.ಸಮುದಾಯದ ತಾಲೂಕು ಅಧ್ಯಕ್ಷ ದೇವಕುಮಾರ್, ಕರ್ನಾಟಕ ಜೈನ್ ಅಸೋಸಿಯೇಷನ್ ಸದಸ್ಯರಾದ ಎಂ.ಎಸ್.ದೇವರಾಜ್ , ಜೈನ್ ಸಮುದಾಯದ ಮುಖಂಡರಾದ ಎಂ.ಎನ್.ಸುರೇಶ್, ಮಹಾವೀರ್, ಪ್ರಭು, ನಂದಿನಿ ಬಾಬು, ಪಾರ್ಶ್ವನಾಥ್, ಸುರೇಶ್ ಬಾಬು, ಉಜ್ವಲ್ ಸೇರಿದಂತೆ ಇತರರು ಭಾಗವಹಿಸಿದ್ದರು.