ಎತ್ತಿನಹೊಳೆ ರಸ್ತೆ ಕಾಮಗಾರಿಗೆ ಕ್ರಿಯಾಯೋಜನೆ ಸಿದ್ಧ: ಶಾಸಕ ಶ್ರೀನಿವಾಸ್

KannadaprabhaNewsNetwork |  
Published : May 18, 2025, 01:06 AM IST
ಗುಬ್ಬಿತಾಲ್ಲೂಕಿನ ಚಿಕ್ಕೋನಹಳ್ಳಿ ಜ್ಯೋತಿನಗರ ಗ್ರಾಮದಲ್ಲಿ ಗ್ರಾಮೀಣಾಭಿವೃದ್ಧಿ ಮತ್ತು ಪಂಚಾಯತ್ ರಾಜ್ ಇಲಾಖೆ ಆಯೋಜಿಸಿದ್ದ ಒಟ್ಟು 1.85 ಕೋಟಿ ರೂಗಳ ಐದು ಗ್ರಾಮದ ಸಿಸಿ ರಸ್ತೆ ಕಾಮಗಾರಿಗೆ ಗುದ್ದಲಿಪೂಜೆ ನೆರವೇರಿಸಿದ ಶಾಸಕ ಎಸ್ ಆರ್ ಶ್ರೀನಿವಾಸ್ | Kannada Prabha

ಸಾರಾಂಶ

ಸ್ಥಳೀಯ ಚುನಾವಣೆ ನಡೆಸಲು ಕಾಂಗ್ರೆಸ್ ಸಿದ್ಧವಿದೆ. ಈ ಹಿಂದೆ ಬಿಜೆಪಿ ಸರ್ಕಾರ ಸ್ಥಳೀಯ ಚುನಾವಣೆಯನ್ನು ಎರಡು ವರ್ಷ ಮುಂದೂಡಿತ್ತು. ಆಗ ಮಾತನಾಡದ ಶಾಸಕ ಕೃಷ್ಣಪ್ಪ ಅವರು, ಇಂದು ತಾಕತ್ತಿಲ್ಲ ಎಂದು ಕಾಂಗ್ರೆಸ್ ಅನ್ನು ಟೀಕಿಸುತ್ತಾರೆ. ಮೈತ್ರಿ ಮಾಡಿಕೊಂಡ ಹಿನ್ನೆಲೆ ಬಿಜೆಪಿ ಮಾಡಿದ ತಪ್ಪಿನ ಬಗ್ಗೆ ಮಾತನಾಡುತ್ತಿಲ್ಲ ಎಂದು ಟಾಂಗ್ ನೀಡಿದರು.

ಕನ್ನಡಪ್ರಭ ವಾರ್ತೆ ಗುಬ್ಬಿ

ಎತ್ತಿನಹೊಳೆ ರಸ್ತೆ ಕಾಮಗಾರಿಗೆ 30 ಕೋಟಿ ರು. ಕೇಳಿದ್ದು, ಕ್ರಿಯಾಯೋಜನೆ ಸಿದ್ಧವಾಗಿದೆ. ಮುಂದಿನ ದಿನಗಳಲ್ಲಿ ರಸ್ತೆ ಕಾಮಗಾರಿ ಪ್ರಾರಂಭವಾಗುತ್ತದೆ ಎಂದು ಶಾಸಕ ಎಸ್. ಆರ್. ಶ್ರೀನಿವಾಸ್ ತಿಳಿಸಿದರು.

ತಾಲೂಕಿನ ಚಿಕ್ಕೋನಹಳ್ಳಿ ಜ್ಯೋತಿನಗರ ಗ್ರಾಮದಲ್ಲಿ ಗ್ರಾಮೀಣಾಭಿವೃದ್ಧಿ ಮತ್ತು ಪಂಚಾಯತ್ ರಾಜ್ ಇಲಾಖೆ ಆಯೋಜಿಸಿದ್ದ ಒಟ್ಟು 1.85 ಕೋಟಿ ರು. ಗಳ ಐದು ಗ್ರಾಮಗಳ ಸಿಸಿ ರಸ್ತೆ ಕಾಮಗಾರಿಗೆ ಗುದ್ದಲಿ ಪೂಜೆ ನೆರವೇರಿಸಿ ಮಾತನಾಡಿದ ಅವರು, ಭಯೋತ್ಪಾದನೆಗೆ ಕುಮ್ಮಕ್ಕು ನೀಡುತ್ತಿದ್ದ ಪಾಕಿಸ್ತಾನದಲ್ಲಿ ಹತ ಭಯೋತ್ಪಾದಕರಿಗೆ ಒಂದು ಕೋಟಿ ರು. ಪರಿಹಾರ ನೀಡಿದ್ದು ಸಾಕ್ಷಿಯಾಗಿದೆ. ಕೇಂದ್ರ ಸರ್ಕಾರವು ಟ್ರೇಲರ್ ಅಂತ ಹೇಳುತ್ತಲೇ ಯುದ್ಧ ವಿರಾಮ ನೀಡಿ ನಮ್ಮ ಅಮಾಯಕ ಪ್ರವಾಸಿಗರ ಸಾವಿಗೆ ಪ್ರತೀಕಾರ ತೀರಿಸಿಕೊಳ್ಳುವ ಉತ್ತಮ ಅವಕಾಶ ಕಳೆದುಕೊಂಡಿದ್ದು ವಿಷಾದನೀಯ, ಟ್ರಂಪ್ ಹೇಳಿಕೆಗೆ ಯುದ್ಧ ವಿರಾಮ ಕೊಟ್ಟಿದ್ದು ಉತ್ತಮ ಅವಕಾಶವೊಂದು ಕಳೆದು ಹೋಯಿತು. ನಮ್ಮ ವಿರುದ್ಧ ಪಾಕಿಸ್ತಾನ ಸರ್ಕಾರ ಹೇಳಿಕೆ ನೀಡಲೂ ಸಹ ಸಮಯ ನೀಡದೇ ಮುಂದುವರಿದಿದ್ದ ನಮ್ಮ ಸೇನೆಗೆ ಮೂರು ದಿನ ಸಮಯ ನೀಡಿದ್ದರೆ ಸಾಕಿತ್ತು, ಪಾಕಿಸ್ತಾನ ಭೂಪಟದಲ್ಲೆ ಇರುತ್ತಿರಲಿಲ್ಲ ಎಂದು ಯುದ್ಧ ವಿರಾಮದ ಬಗ್ಗೆ ಶ್ರೀನಿವಾಸ್ ಅಭಿಪ್ರಾಯಪಟ್ಟರು.

ಸ್ಥಳೀಯ ಚುನಾವಣೆ ನಡೆಸಲು ಕಾಂಗ್ರೆಸ್ ಸಿದ್ಧವಿದೆ. ಈ ಹಿಂದೆ ಬಿಜೆಪಿ ಸರ್ಕಾರ ಸ್ಥಳೀಯ ಚುನಾವಣೆಯನ್ನು ಎರಡು ವರ್ಷ ಮುಂದೂಡಿತ್ತು. ಆಗ ಮಾತನಾಡದ ಶಾಸಕ ಕೃಷ್ಣಪ್ಪ ಅವರು, ಇಂದು ತಾಕತ್ತಿಲ್ಲ ಎಂದು ಕಾಂಗ್ರೆಸ್ ಅನ್ನು ಟೀಕಿಸುತ್ತಾರೆ. ಮೈತ್ರಿ ಮಾಡಿಕೊಂಡ ಹಿನ್ನೆಲೆ ಬಿಜೆಪಿ ಮಾಡಿದ ತಪ್ಪಿನ ಬಗ್ಗೆ ಮಾತನಾಡುತ್ತಿಲ್ಲ ಎಂದು ಟಾಂಗ್ ನೀಡಿದರು.

ಈಗ 5 ಕೋಟಿ ರು. ಗಳ ಸಿಸಿ ರಸ್ತೆಗಳ ಕಾಮಗಾರಿ ಎಲ್ಲೆಡೆ ನಡೆದಿದೆ. ಬೆಲವತ್ತ ಗ್ರಾಮಕ್ಕೆ 1 ಕೋಟಿ ರು., ನಿಟ್ಟೂರು 60 ಲಕ್ಷ ರು., ತ್ಯಾಗಟೂರು 90 ಲಕ್ಷ ರು.ಗಳ ರಸ್ತೆ ಕಾಮಗಾರಿ ಕೆಲಸ ಆರಂಭವಾಗಲಿದೆ. ಜೊತೆಗೆ ಎತ್ತಿನಹೊಳೆ ಯೋಜನೆಯ 30 ಕೋಟಿ ರು. ಹಾಗೂ ಹೇಮಾವತಿ ಇಲಾಖೆಯ 100 ಕೋಟಿ ರು. ಗಳಲ್ಲಿ ಗ್ರಾಮೀಣ ರಸ್ತೆ ಅಭಿವೃದ್ಧಿಗೆ ಶೀಘ್ರ ಪೂಜೆ ನಡೆಯಲಿದೆ ಎಂದರು.

ಕಂದಾಯ ಗ್ರಾಮಗಳ ಪಟ್ಟಿಗೆ ಹೊಸದಾಗಿ 9 ಗ್ರಾಮಗಳನ್ನು ಸೇರಿಸಲಾಗಿದೆ. ಈಗಾಗಲೇ ಕಂದಾಯ ಗ್ರಾಮದ ನಿವಾಸಿಗಳಿಗೆ ಹಕ್ಕುಪತ್ರ ನೋಂದಣಿ ಕಾರ್ಯ ನಡೆಸಲಾಗಿದೆ ಎಂದರು.

ಗಣಿಭಾದಿತ ಗ್ರಾಮಗಳ ಅಭಿವೃದ್ಧಿಗೆ 75 ಕೋಟಿ ರು. ಮಂಜೂರು ಆಗಿದೆ. ಗ್ರಾಮಗಳ ಪಟ್ಟಿ ಸಿದ್ಧಗೊಳಿಸಿ ಟೆಂಡರ್ ಪ್ರಕ್ರಿಯೆ ನಡೆಸಲಾಗುವುದು. ಶಾಲೆಗಳ ಅಭಿವೃದ್ಧಿಗೆ ನಾನು ಸಚಿವನಾಗಿದ್ದ ಸಮಯದಲ್ಲಿ 10 ಕೋಟಿ ರು.ಗಳನ್ನು ಬಿಡುಗಡೆ ಮಾಡಿ ಕೆಲಸ ಮಾಡಲಾಗಿದೆ. ಈಗ ಹೊಸದಾಗಿ 35 ಕೊಠಡಿಗಳಿಗೆ ಬೇಡಿಕೆ ಇದೆ. ನಮ್ಮಲ್ಲಿನ ಎಚ್ಎಎಲ್ ಘಟಕದಿಂದ ಬರುವ ಅನುದಾನವನ್ನು ಶಾಲೆಗಳಿಗೆ ಬಳಸಲಾಗಿದೆ ಎಂದ ಅವರು, ಕಾಂಗ್ರೆಸ್ ಸರ್ಕಾರ ಎರಡು ವರ್ಷ ಪೂರ್ಣಗೊಳಿಸಿದೆ. ಕೊಟ್ಟ ಮಾತಿನಂತೆ ನಡೆದು ಐದು ಗ್ಯಾರಂಟಿ ಯೋಜನೆ ಸಫಲತೆ ಕಂಡಿವೆ. ಮುಂದಿನ ಮೂರು ವರ್ಷ ಸಹ ಇದೇ ರೀತಿ ಜನಪರ ಕೆಲಸ ನಡೆಸಲಿದೆ ಎಂದು ವಿಶ್ವಾಸ ವ್ಯಕ್ತಪಡಿಸಿದರು.

ಮುಖಂಡರಾದ ಉಂಡೆ ರಾಮಣ್ಣ, ಸಿ.ಜಿ.ಲೋಕೇಶ್, ಯು.ರಾಜಣ್ಣ, ಸತ್ತಿಗಪ್ಪ, ಬೆಲವತ್ತ ಶಿವಕುಮಾರ್, ಪಣಗಾರ್ ವೆಂಕಟೇಶ್, ಗಳಗ ದಿವಾಕರ್, ಗುತ್ತಿಗೆದಾರರಾದ ನಟರಾಜ್, ರವಿ, ಸಿದ್ದರಾಜು, ಪಂಚಾಯತ್ ರಾಜ್ ಎಇಇ ಚಂದ್ರಶೇಖರ್ ಇತರರು ಇದ್ದರು.

PREV
Get the latest news from across Karnataka (ಕರ್ನಾಟಕ ನ್ಯೂಸ್)— breaking headlines, politics, local developments, crime reports, district updates, civic issues and more. Stay informed with Kannada Prabha’s real‑time Karnataka news coverage.

Recommended Stories

ಭಗವಂತನ ಶಕ್ತಿ ಪಡೆದವರಿಂದ ಡಿಕೆಶಿ ಸಿಎಂ ಆಗುವ ದಿನಾಂಕ ನಿಗದಿ : ಇಕ್ಬಾಲ್
ಜನ ನಂಗೆ ಇನ್ನೊಂದು ಅವಕಾಶ ಕೊಡಲಿ : ಎಚ್ಡಿಕೆ