ಕಾಫಿ ಮಂಡಳಿಯಿಂದ ಕೇಂದ್ರಕ್ಕೆ ಕ್ರಿಯಾ ಯೋಜನೆ ಸಲ್ಲಿಕೆ: ದಿನೇಶ್‌

KannadaprabhaNewsNetwork | Published : Jan 26, 2024 1:46 AM

ಸಾರಾಂಶ

ದೇಶದ ಎಲ್ಲಾ ಕಾಫಿ ಬೆಳೆಯುವ ಪ್ರದೇಶಗಳನ್ನು ಒಳಗೊಂಡಂತೆ ಕಾಫಿ ಬೆಳೆ ಅಭಿವೃದ್ಧಿ ಹಾಗೂ ಅದಕ್ಕೊಂದು ವ್ಯವಸ್ಥಿತ ಮಾರುಕಟ್ಟೆ ಒದಗಿಸುವ ಹಿನ್ನೆಲೆಯಲ್ಲಿ ಮುಂದಿನ ಒಂದು ದಶಕದ ಕ್ರಿಯಾಯೋಜನೆಯೊಂದನ್ನು ಕೇಂದ್ರ ವಾಣಿಜ್ಯ ಸಚಿವರಿಗೆ ಸಲ್ಲಿಸಲಾಗಿದೆ ಎಂದು ಕಾಫಿ ಮಂಡಳಿ ಅಧ್ಯಕ್ಷ ಎಂ.ಜೆ. ದಿನೇಶ್‌ ದೇವವೃಂದ ಹೇಳಿದ್ದಾರೆ.

- ಒಂದು ದಶಕದ ಕ್ರಿಯಾ ಯೋಜನೆ, ಕಾಫಿ ಬೆಳೆ ಅಭಿವೃದ್ಧಿ ಹಾಗೂ ವ್ಯವಸ್ಥಿತ ಮಾರುಕಟ್ಟೆ ಕಲ್ಪಿಸುವುದು,

---

-ಇಲಾಖೆ ಹೆಚ್ಚುವರಿ ಕಾರ್ಯದರ್ಶಿ ಅಮರ್‌ದೀಪ್ ಸಿಂಗ್ ಭಾಟಿಯಾ ಅವರೊಂದಿಗೆ ದಶ ವಾರ್ಷಿಕ ಯೋಜನೆ ಚರ್ಚೆ

- ಮುಂದಿನ ಹತ್ತು ವರ್ಷಗಳಲ್ಲಿ ಕಾಫಿ ಬೆಳೆಗಾರರ ಆದಾಯ ಹಾಗೂ ರಫ್ತು ಪ್ರಮಾಣ ದ್ವಿಗುಣಗೊಳಿಸುವ ಪೂರಕ ಅಂಶ ಒಳಗೊಂಡ ಕ್ರಿಯಾಯೋಜನೆ ಸಲ್ಲಿಕೆ

- ಅತ್ಯಂತ ಮಾರಕವಾದ ಸರ್ಫೈಸಿ ಕಾಯ್ದೆಯಿಂದ ಕಾಫಿ ಬೆಳೆಗಾರರನ್ನು ಹೊರಗಿಡಲು ಮನವಿಕನ್ನಡಪ್ರಭ ವಾರ್ತೆ, ಚಿಕ್ಕಮಗಳೂರು

ದೇಶದ ಎಲ್ಲಾ ಕಾಫಿ ಬೆಳೆಯುವ ಪ್ರದೇಶಗಳನ್ನು ಒಳಗೊಂಡಂತೆ ಕಾಫಿ ಬೆಳೆ ಅಭಿವೃದ್ಧಿ ಹಾಗೂ ಅದಕ್ಕೊಂದು ವ್ಯವಸ್ಥಿತ ಮಾರುಕಟ್ಟೆ ಒದಗಿಸುವ ಹಿನ್ನೆಲೆಯಲ್ಲಿ ಮುಂದಿನ ಒಂದು ದಶಕದ ಕ್ರಿಯಾಯೋಜನೆಯೊಂದನ್ನು ಕೇಂದ್ರ ವಾಣಿಜ್ಯ ಸಚಿವರಿಗೆ ಸಲ್ಲಿಸಲಾಗಿದೆ ಎಂದು ಕಾಫಿ ಮಂಡಳಿ ಅಧ್ಯಕ್ಷ ಎಂ.ಜೆ. ದಿನೇಶ್‌ ದೇವವೃಂದ ಹೇಳಿದ್ದಾರೆ.

ಗುರುವಾರ ಸುದ್ದಿಗೋಷ್ಠಿಯಲ್ಲಿ ಮಾತನಾಡಿದ ಅವರು, ಈ ಸಂಬಂಧ ಕೇಂದ್ರದ ವಾಣಿಜ್ಯ ಸಚಿವ ಪೀಯೂಷ್‌ ಗೋಯಲ್‌ ಅವರನ್ನು ಭೇಟಿಯಾಗಿ ಕಾಫಿ ಬೆಳೆ ಹಾಗೂ ಕಾಫಿ ಬೆಳೆಗಾರರು ಅನುಭವಿಸುತ್ತಿರುವ ಸಮಸ್ಯೆಗಳ ಬಗ್ಗೆ ಚರ್ಚಿಸಿ ಅನಂತರ ಮುಂದಿನ ಹತ್ತು ವರ್ಷಗಳಲ್ಲಿ ಕಾಫಿ ಬೆಳೆಗಾರರ ಆದಾಯವನ್ನು ದ್ವಿಗುಣಗೊಳಿಸುವ ಹಾಗೂ ಕಾಫಿ ರಫ್ತು ಪ್ರಮಾಣದಲ್ಲಿ ದ್ವಿಗುಣಗೊಳಿಸುವ ಪೂರಕ ಅಂಶಗಳನ್ನು ಒಳಗೊಂಡಿರುವ ವಿವರವಾದ ಕ್ರಿಯಾಯೋಜನೆಯನ್ನು ಸಚಿವರಿಗೆ ನೀಡಲಾಗಿದೆ ಎಂದರು.

ಸಚಿವರಿಂದ ಕ್ರಿಯಾಯೋಜನೆ ಬಗ್ಗೆ ಅತ್ಯಂತ ಸಕಾರಾತ್ಮಕವಾದ ಸ್ಪಂದನೆ ದೊರೆತಿದ್ದು, ಅದರಲ್ಲಿರುವ ಅನೇಕ ಅಂಶಗಳನ್ನು ಮೆಚ್ಚಿಕೊಂಡ ಅವರು, ಕೇಂದ್ರ ವಾಣಿಜ್ಯ ಮತ್ತು ಕೈಗಾರಿಕಾ ಇಲಾಖೆ ಹೆಚ್ಚುವರಿ ಕಾರ್ಯದರ್ಶಿ ಅಮರ್‌ ದೀಪ್ ಸಿಂಗ್ ಭಾಟಿಯಾ ಅವರನ್ನು ಕರೆದು ಈ ಬಗ್ಗೆ ಚರ್ಚಿಸಿ ಮುಂದೆ ಕೈಗೊಳ್ಳಬೇಕಾದ ರೂಪು-ರೇಷೆಗಳನ್ನು ಸಿದ್ಧ ಪಡಿಸಲು ಸೂಚಿಸಿದರು.

ಸಚಿವರೊಂದಿಗೆ ಮಾತನಾಡುವಾಗ ಪ್ರಸ್ತುತ ಕಾಫಿ ಬೆಳೆಗಾರರು ಎದುರಿಸುತ್ತಿರುವ ಸಮಸ್ಯೆಗಳನ್ನು ಸಹ ವಿವರಿಸಿ, ಅದರ ನಿವಾರಣೆಗೆ ಅಗತ್ಯ ಕ್ರಮ ಕೈಗೊಳ್ಳಲು ಮನವಿ ಮಾಡಲಾಯಿತು. ಪ್ರಮುಖವಾಗಿ ಬೆಳೆ ಸಾಲಕ್ಕೆ ಬಡ್ಡಿ ಸಹಾಯ ಧನ ನೀಡಲು, ಹವಾಮಾನ ಆಧಾರಿತ ವಿಮಾ ಯೋಜನೆಯನ್ನು ಕಾಫಿ ಬೆಳೆಗೂ ವಿಸ್ತರಿಸಲು ಹಾಗೂ ಬೆಳೆಗಾರರಿಗೆ ಅತ್ಯಂತ ಮಾರಕವಾಗಿರುವ ಸರ್ಫೈಸಿ ಕಾಯ್ದೆಯಿಂದ ಕಾಫಿ ಬೆಳೆಗಾರರನ್ನು ಹೊರಗಿಡಲು ಮನವಿ ಮಾಡಲಾಯಿತು ಎಂದು ಹೇಳಿದರು.

ದಶ ವಾರ್ಷಿಕ ಕ್ರಿಯಾಯೋಜನೆಯಲ್ಲಿದ್ದ ಭಾರತದ ಕಾಫಿ ರಫ್ತನ್ನು ದ್ವಿಗುಣಗೊಳಿಸುವ ಬಗ್ಗೆ ಇದ್ದ ವಿವರ ಓದಿದ ಸಚಿವರು, ಅದನ್ನು ಯಶಸ್ವಿಯಾಗಿ ಕಾರ್ಯಗತಗೊಳಿಸಲು ಯಾವ ಕ್ರಮ ಕೈಗೊಳ್ಳಬೇಕೆಂದು ಪ್ರಶ್ನಿಸಿದಾಗ ಆ ಬಗ್ಗೆ ವಿವರ ನೀಡಿ, ಕಾಫಿ ತೋಟಗಳಲ್ಲಿ ಕಾಫಿ ಬೆಳೆ ಪ್ರಮಾಣ ಹೆಚ್ಚಿಸಲು ಅತ್ಯಂತ ಅವಶ್ಯಕವಾದ ಮಣ್ಣು ಪರೀಕ್ಷೆ, ಕಾಫಿ ತೋಟಗಳ ಯಾಂತ್ರೀಕರಣ, ಬೆಳೆ ಪ್ರಮಾಣ ಹೆಚ್ಚಿಸಲು ತದ್ರೂಪಿ ತಳಿಗಳ ಅಭಿವೃದ್ಧಿಗೆ ಅಂಗಾಂಶ ಕೃಷಿ ಮೂಲಕ ಹೆಚ್ಚಿನ ಪ್ರಮಾಣ ದಲ್ಲಿ ಗಿಡಗಳನ್ನು ಅಭಿವೃದ್ಧಿಪಡಿಸುವ ಬಗ್ಗೆ ತಿಳಿಸಲಾಯಿತು. ಇದಕ್ಕೆ ತಮ್ಮ ಇಲಾಖೆಯಿಂದ ಅಗತ್ಯ ನೆರವು ನೀಡುವ ಭರವಸೆ ನೀಡಿದರು.

ಕಾಫಿ ಆಧಾರಿತ ರಾಸಾಯನಿಕ ಗೊಬ್ಬರ ತಯಾರಿಸಿ ಬೆಳೆಗಾರರಿಗೆ ಒದಗಿಸಲು ಸಂಬಂಧಿಸಿದ ಇಲಾಖಾ ಸಚಿವ ರೊಂದಿಗೆ ಚರ್ಚಿಸುವ ವಿಶ್ವಾಸ ವ್ಯಕ್ತಪಡಿಸಿದರು. ಕಾಫಿ ಮಂಡಳಿ ಸಹ ಇದಕ್ಕೆ ಪೂರಕವಾದ ವಿವರವಾದ ಯೋಜನಾ ವರದಿ ಸಿದ್ಧಗೊಳಿಸುತ್ತಿದೆ. ಕೇಂದ್ರ ವಾಣಿಜ್ಯ ಸಚಿವಾಲಯಕ್ಕೆ ನೀಡುವ ಸಲುವಾಗಿ ಕಾಫಿ ಬೆಳೆಗಾರರು ಪಡೆದಿರುವ ಬೆಳೆ ಸಾಲದ ಪ್ರಮಾಣದ ಮಾಹಿತಿ ಕಲೆ ಹಾಕಲಾಗುತ್ತಿದೆ. ಸಚಿವರ ಭೇಟಿ ನಂತರ ಇಲಾಖೆ ಹೆಚ್ಚುವರಿ ಕಾರ್ಯದರ್ಶಿ ಅಮರ್‌ದೀಪ್ ಸಿಂಗ್ ಭಾಟಿಯಾ ಅವರೊಂದಿಗೆ ದಶ ವಾರ್ಷಿಕ ಯೋಜನೆ ಬಗ್ಗೆ ವಿವರವಾಗಿ ಚರ್ಚಿಸಲಾಯಿತು ಎಂದು ಹೇಳಿದರು. 25 ಕೆಸಿಕೆಎಂ 1

ಒಂದು ದಶಕದ ಕ್ರಿಯಾ ಯೋಜನೆಯೊಂದನ್ನು ಕೇಂದ್ರ ವಾಣಿಜ್ಯ ಸಚಿವ ಪೀಯೂಷ್‌ ಗೋಯಲ್‌ ಅವರಿಗೆ ಕಾಫಿ ಮಂಡಳಿ ಅಧ್ಯಕ್ಷ ಎಂ.ಜೆ. ದಿನೇಶ್‌ ದೇವವೃಂದ ಸಲ್ಲಿಸಿದರು.

Share this article