ಬ್ಯಾಡಗಿ: ಕುಲಪತಿಗಳ ಮಾರ್ಗದರ್ಶನದಲ್ಲಿ ಹಾವೇರಿ ವಿಶ್ವವಿದ್ಯಾಲಯದ ವ್ಯಾಪ್ತಿಯಲ್ಲಿ ಕ್ರೀಡೆಗಳ ಅಭಿವೃದ್ಧಿಗೆ ಕ್ರೀಡಾಂಗಣ ನಿರ್ಮಾಣ ಮಾಡುವುದೂ ಸೇರಿದಂತೆ ಕ್ರೀಡಾಪಟುಗಳ ವೈಯಕ್ತಿಕ ಸಾಮರ್ಥ್ಯ ಹೆಚ್ಚಿಸುವ ಕುರಿತು ಅಗತ್ಯ ಕ್ರಮಗಳನ್ನು ಕೈಗೊಳ್ಳಲು ಪ್ರಸಕ್ತ ವರ್ಷದಿಂದಲೇ ಆರಂಭಿಸಿದ್ದಾಗಿ ಹಾವೇರಿ ವಿವಿ ಕ್ರೀಡಾ ವಿಭಾಗದ ನಿರ್ದೇಶಕ ಸಿ.ಎನ್. ಸೊರಟೂರ ಹೇಳಿದರು.
ಪಾರದರ್ಶಕ ಆಯ್ಕೆಗೆ ಒತ್ತು: ಹಾವೇರಿ ವಿವಿ ವ್ಯಾಪ್ತಿಯಲ್ಲಿ ಸಾಕಷ್ಟು ಕ್ರೀಡಾ ಪ್ರತಿಭೆಗಳಿವೆ. ಆದರೆ ಕಳೆದ ಆರೇಳು ದಶಕಗಳಿಂದಲೂ ಜಿಲ್ಲೆಯ ಕ್ರೀಡಾಪಟುಗಳು ಅವಕಾಶ ವಂಚಿತರಾಗಿದ್ದರು. ಯಾವುದೇ ಶಿಫಾರಸುಗಳಿಗೆ ಅವಕಾಶ ನೀಡದಂತೆ ಪಾರದರ್ಶಕ ಹಾಗೂ ನ್ಯಾಯುಸಮ್ಮತ ಆಯ್ಕೆ ಪ್ರಕ್ರಿಯೆ ನಡೆಸುವ ಮೂಲಕ ಅವರೆಲ್ಲರಿಗೂ ಅವಕಾಶ ನೀಡುವ ನಿಟ್ಟಿನಲ್ಲಿ ಹಾವೇರಿ ವಿಶ್ವವಿದ್ಯಾಲಯ ಬಹಳಷ್ಟು ದಿಟ್ಟ ನಿಲುವುಗಳನ್ನು ತೆಗೆದುಕೊಳ್ಳುತ್ತಿದೆ ಎಂದರು.
ಭತ್ಯೆಗಳಲ್ಲಿ ಬದಲಾವಣೆಗೆ ಚಿಂತನೆ:ಹಾವೇರಿ ವಿಶ್ವವಿದ್ಯಾಲಯದ ಕ್ರೀಡಾಪಟುಗಳು ಕಬಡ್ಡಿ, ಖೊಖೋ, ವಾಲಿಬಾಲ್, ಬ್ಯಾಡ್ಮಿಂಟನ್ ಹಾಗೂ ಅಥ್ಲೆಟಿಕ್ಸ್ ಸೇರಿದಂತೆ ಒಟ್ಟು 12 ಕ್ರೀಡೆಗಳಲ್ಲಿ ಅಂತರ ವಿವಿ ಪಂದ್ಯಾವಳಿಯಲ್ಲಿ ಪಾಲ್ಗೊಂಡಿದ್ದು ತರಬೇತಿ ಶಿಬಿರ ಸೇರಿದಂತೆ ಅಂತರ ವಿಶ್ವವಿದ್ಯಾಲಯ ಪಂದ್ಯಾವಳಿಗಳಲ್ಲಿ ಪಾಲ್ಗೊಳ್ಳುವ ಕ್ರೀಡಾಪಟುಗಳಿಗೆ ದಿನಭತ್ಯೆ ಪರಿಷ್ಕರಿಸುವ ಕುರಿತು ಚಿಂತನೆ ನಡೆಸುವುದಾಗಿ ತಿಳಿಸಿದರು.ಬಿಇಎಸ್ ಕಾಲೇಜು ಪ್ರಾಚಾರ್ಯ ಡಾ.ಎನ್.ಎಸ್. ಪ್ರಶಾಂತ ಅಧ್ಯಕ್ಷತೆ ವಹಿಸಿದ್ದರು. ಅತಿಥಿಗಳಾಗಿ, ಸರ್ಕಾರಿ ಪ್ರಥಮ ದರ್ಜೆ ಕಾಲೇಜು ಪ್ರಾಚಾರ್ಯ ಡಾ. ಮಲ್ಲಿಕಾರ್ಜುನ ಕಡ್ಡಿಪುಡಿ, ಉಪನ್ಯಾಸಕರಾದ ದೇವೆಂದ್ರಪ್ಪ, ಡಾ. ಸುರೇಶಕುಮಾರ ಪಾಂಗಿ, ಡಾ. ಪ್ರಭು ದೊಡ್ಡಮನಿ, ರಾಷ್ಟ್ರೀಯ ತೀರ್ಪುಗಾರ ಮಲ್ಲಿಕಾರ್ಜುನ ಕೋಡಿಹಳ್ಳಿ, ತಂಡದ ಕೋಚ್ ಡಾ. ಬಸನಗೌಡ ಲಕ್ಷ್ಮೇಶ್ವರ, ವ್ಯವಸ್ಥಾಪಕ ಶಶಿಧರ ಮಾಗೋಡ ಸೇರಿದಂತೆ ಇನ್ನಿತರರಿದ್ದರು.
ತಂಡದ ಇಂತಿದೆ: ಕೃಷ್ಣ ನಡುವಿನಮನಿ (ನಾಯಕ), (ರಂಭಾಪುರಿ ಪದವಿ ಕಾಲೇಜು ಶಿಗ್ಗಾಂವಿ) ಆದರ್ಶ ಹೊತಗಿ, ಸುದೀಪ ಗೋಡಿ, ದೇವೇಂದ್ರ ವಡ್ಡರ, ಪ್ರಶಾಂತ ಬೋವಿವಡ್ಡರ (ಕುಮಾರೇಶ್ವರ ಪದವಿ ಕಾಲೇಜು ಹಾನಗಲ್ಲ) ಕುಮಾರೇಶ ಮೋಟೆಬೆನ್ನೂರ, ಲೋಹಿತ ಮೂಲಂಗಿ (ಜಿ.ಎಚ್. ಪದವಿ ಕಾಲೇಜು ಹಾವೇರಿ) ಭರತ ಬೊಮ್ಮನಹಳ್ಳಿ, ಮನು ಮೈಲಾರ (ಟಿಎಂಇಎಎಸ್ ಬಿಪಿಇಡಿ ಕಾಲೇಜು ಹಾವೇರಿ) ವಿಜಯಕುಮಾರಸಿಂಗ್ ಮೌನೇಶ ಕಮ್ಮಾರ (ಪ್ರಿಯದರ್ಶಿನಿ ಪದವಿ ಕಾಲೇಜು ರಟ್ಟೀಹಳ್ಳಿ) ಮಾಲತೇಶ ಮಲಗುಂದ (ಬಿಇಎಸ್ ಪದವಿ ಕಾಲೇಜು ಬ್ಯಾಡಗಿ) ಸುದೀಪ ಡೊಂಕಣ್ಣನವರ (ಸರ್ಕಾರಿ ಪದವಿ ಕಾಲೇಜು ಗಾಂಧಿಪುರ) ಮಲ್ಲಿಕಾರ್ಜುನ ಲಮಾಣಿ (ಸರ್ಕಾರಿ ಪದವಿ ಕಾಲೇಜು ಬ್ಯಾಡಗಿ), ಡಾ. ಬಸನಗೌಡ ಲಕ್ಷ್ಮೇಶ್ವರ (ಕುಮಾರೇಶ್ವರ ಕಾಲೇಜು ಹಾನಗಲ್ಲ), ವ್ಯವಸ್ಥಾಪಕ: ಶಶಿಧರ ಮಾಗೋಡ (ಬಿಇಎಸ್ ಕಾಲೇಜು ಬ್ಯಾಡಗಿ).