ರಾಮನಗರ: ಮಂಚನಬೆಲೆ, ಬೈರಮಂಗಲ, ತಿಪ್ಪಗೊಂಡನಹಳ್ಳಿ ಮತ್ತು ಅರ್ಕಾವತಿ ಅಣೆಕಟ್ಟುಗಳಿಗೆ ಹರಿಯುವ ನೀರು ಕಲುಷಿತಗೊಳ್ಳುವುದನ್ನು ತಡೆಗಟ್ಟುವ ಹಾಗೂ ವೃಷಭಾವತಿ - ಅರ್ಕಾವತಿ ಕಣಿವೆಗಳ ಮಾಲಿನ್ಯ ನಿಯಂತ್ರಣ ಕುರಿತು ಪರಿಹಾರ ಮಾರ್ಗೋಪಾಯಗಳ ತಾಂತ್ರಿಕ ವರದಿಯನ್ನು ಶೀಘ್ರದಲ್ಲಿ ರಾಜ್ಯಸರ್ಕಾರಕ್ಕೆ ಸಲ್ಲಿಸಲಾಗುವುದು ಎಂದು ತಾಂತ್ರಿಕ ಅಧ್ಯಯನ ಸಮಿತಿ ಅಧ್ಯಕ್ಷ ಕೆ.ಜೈಪ್ರಕಾಶ್ ತಿಳಿಸಿದರು.
ಕಲುಷಿತ ನೀರು ಕಣಿವೆಗಳಲ್ಲಿ ಸೇರುತ್ತಿರುವುದರಿಂದ ಜನ ಜಾನುವಾರುಗಳ ಆರೋಗ್ಯ ಸಂಬಂಧಿ ಸಮಸ್ಯೆಗಳು ಹಾಗೂ ಬೆಳೆಗಳ ಮೇಲೂ ಪರಿಣಾಮ ಬೀರುತ್ತಿದೆ. ಹೀಗಾಗಿ ಅಣೆಕಟ್ಟುಗಳು/ಕೆರೆಗಳು ಮತ್ತು ನದಿ ಕಣಿವೆಗಳ ಪರಿವೀಕ್ಷಣೆ ಮಾಡುವುದರ ಜೊತೆಗೆ ಈಗಾಗಲೇ ಕೆಲ ಇಲಾಖೆಗಳು ಕಾಲಾನುಕಾಲಕ್ಕೆ ಮಾಲಿನ್ಯ ಸುಧಾರಿಸಲು ಕೆಲವು ಕ್ರಮಗಳನ್ನು ವಹಿಸಿವೆ. ಅದರ ಬಗ್ಗೆಯೂ ಮಾಹಿತಿ ಕಲೆ ಹಾಕಿದ್ದೇವೆ. ರಾಜ್ಯ ಸರ್ಕಾರಕ್ಕೆ ನೈಜ ವರದಿಯನ್ನು ಸಿದ್ಧಪಡಿಸಿ ನೀಡುತ್ತೇವೆ ಎಂದು ಹೇಳಿದರು.
ನೀರಿನ ಗುಣಮಟ್ಟ ಪರೀಕ್ಷೆ ಮಾಡುವುದರ ಜೊತೆಗೆ ನೀರಿನ ಸದ್ಬಳಕೆಗೆ ಸಂಬಂಧಿಸಿದ ಮಾಹಿತಿಯನ್ನು ಸಂಗ್ರಹಿಸಲಾಗುತ್ತಿದೆ. ಮಾಲಿನ್ಯ ನಿಯಂತ್ರಣ ಹಾಗೂ ನದಿಯ ನೀರಿನ ಗುಣಮಟ್ಟವನ್ನು ಸುಧಾರಿಸಲು ತೆಗೆದುಕೊಳ್ಳಬೇಕಾದ ಮಾರ್ಗೋಪಾಯಗಳನ್ನು ವರದಿಯಲ್ಲಿ ಶಿಫಾರಸ್ಸು ಮಾಡುತ್ತೇವೆ ಎಂದು ಜೈ ಪ್ರಕಾಶ್ ಪ್ರಶ್ನೆಯೊಂದಕ್ಕೆ ಉತ್ತರಿಸಿದರು.ಕಳೆದ ಮಾರ್ಚ್ 6ರಂದು ರಚನೆಗೊಂಡ ಅಧ್ಯಯನ ಸಮಿತಿಯು 2 ಸಭೆಗಳನ್ನು ನಡೆಸಿದೆ. ಹೆಸರಘಟ್ಟ ಟ್ಯಾಂಕ್‌ನಿಂದ ಬೆಂಗಳೂರು ರಸ್ತೆಯಲ್ಲಿರುವ ರಾಷ್ಟ್ರೀಯ ಹೆದ್ದಾರಿ ಸೇತುವೆಯವರೆಗೆ ಮಾರನಾಯಕನಹಳ್ಳಿಯಲ್ಲಿನ ಅರ್ಕಾವತಿ ಕಣಿವೆಯ ಪರಿಶೀಲನೆ ನಡೆಸಲಾಗಿದೆ. ಗುರುವಾರ ಅಥವಾ ಶುಕ್ರವಾರ ಅರ್ಕಾವತಿ ಡ್ಯಾಂ ನಿಂದ ಕನಕಪುರ, ಸಂಗಮದವರೆಗೆ ಪರಿವೀಕ್ಷಣೆ ಮಾಡಲಿದ್ದೇವೆ ಎಂದು ಹೇಳಿದರು.
ಸುದ್ದಿಗೋಷ್ಠಿಯಲ್ಲಿ ಸಮಿತಿ ಸದಸ್ಯರಾದ ಜಲಸಂಪನ್ಮೂಲ ಇಲಾಖೆ ಜಂಟಿ ಕಾರ್ಯದರ್ಶಿ, ಬಿಬಿಎಂಪಿ ಸ್ಟಾರ್ಮ್ ವಾಟರ್ ಡ್ರೇನ್ ವಲಯ ಮುಖ್ಯ ಎಂಜಿನಿಯರ್ , ಬೆಂಗಳೂರು ನೀರು ಸರಬರಾಜು ಮತ್ತು ಒಳಚರಂಡಿ ಮಂಡಳಿ , ಕರ್ನಾಟಕ ಕೈಗಾರಿಕಾ ಪ್ರದೇಶಾಭಿವೃದ್ಧಿ ಮಂಡಳಿ, ಗ್ರಾಮೀಣಾಭಿವೃದ್ಧಿ ಮತ್ತು ಪಂಚಾಯತ್ ರಾಜ್ಇಲಾಖೆ , ಸಣ್ಣ ನೀರಾವರಿ ಇಲಾಖೆ ದಕ್ಷಿಣ ವಲಯ ಹಾಗೂ ಪೌರಾಡಳಿತ ನಿರ್ದೇಶನಾಲಯದ ಮುಖ್ಯಎಂಜಿನಿಯರ್ ಇದ್ದರು.
19ಕೆಆರ್ ಎಂಎನ್ 4.ಜೆಪಿಜಿರಾಮನಗರದಲ್ಲಿ ತಾಂತ್ರಿಕ ಅಧ್ಯಯನ ಸಮಿತಿ ಅಧ್ಯಕ್ಷ ಕೆ.ಜೈಪ್ರಕಾಶ್ ಸುದ್ದಿಗೋಷ್ಠಿಯಲ್ಲಿ ಮಾತನಾಡಿದರು.