ಬ್ಯಾಡಗಿ: ಮುಖ್ಯಮಂತ್ರಿ ಹಾಗೂ ಗೃಹ ಸಚಿವರೊಂದಿಗೆ ಚರ್ಚಿಸಿ ಕ್ರೀಡಾ ಕೋಟಾದಡಿ ಕರ್ನಾಟಕ ಸ್ಟೇಟ್ ಪೊಲೀಸ್ ಮಹಿಳಾ ಕಬಡ್ಡಿ ತಂಡಕ್ಕೆ ಕ್ರೀಡಾಪಟುಗಳ ಆಯ್ಕೆಗೆ ಕ್ರಮಕೈಗೊಳ್ಳುವುದಾಗಿ ಶಾಸಕ ಬಸವರಾಜ ಶಿವಣ್ಣನವರ ಭರವಸೆ ನೀಡಿದರು.
ಪಟ್ಟಣದ ಸರ್ಕಾರಿ ಪ್ರಥಮ ದರ್ಜೆ ಕಾಲೇಜು ಆಶ್ರಯದಲ್ಲಿ ಹಾವೇರಿ ಜಿಲ್ಲಾ ಅಮೆಚೂರ ಕಬಡ್ಡಿ ಅಸೋಸಿಯೇಶನ್ ಹಾಗೂ ತೀರ್ಪುಗಾರರ ಮಂಡಳಿ ಸಹಯೋಗದೊಂದಿಗೆ ಎರಡು ದಿನಗಳ ಕಾಲ ನಡೆಯಲಿರುವ ಹಾವೇರಿ ವಿಶ್ವವಿದ್ಯಾಲಯ ಮಹಿಳಾ (ಬ್ಲೂ ಸೆಲೆಕ್ಷನ್) ತಂಡದ ಆಯ್ಕೆ ಪ್ರಕ್ರಿಯೆಗೆ ಚಾಲನೆ ನೀಡಿ ಅವರು ಮಾತನಾಡಿದರು. ಕಳೆದೊಂದು ದಶಕದಿಂದ ಕ್ರೀಡಾ ಕೋಟಾದಡಿ ಕರ್ನಾಟಕ ಸ್ಟೇಟ್ ಪೊಲೀಸ್ ಕಬಡ್ಡಿ ತಂಡಕ್ಕೆ ಮಹಿಳಾ ಕ್ರೀಡಾಪಟುಗಳ ಆಯ್ಕೆ ನಡೆದಿಲ್ಲ. ಈ ಹಂತದಲ್ಲಿ ಅತ್ಯುತ್ತಮ ಪ್ರತಿಭೆಗಳು ತಮ್ಮ ವಯೋಮಿತಿ ಕಳೆದುಕೊಂಡು ಅವಕಾಶ ವಂಚಿತರಾಗಿರುವುದು ಅತ್ಯಂತ ನೋವಿನ ಸಂಗತಿ. ಕೂಡಲೇ ಸಿಎಂ ಹಾಗೂ ಗೃಹ ಸಚಿವರೊಂದಿಗೆ ಚರ್ಚಿಸಿ ಕ್ರೀಡಾಪಟುಗಳ ಭರ್ತಿಗೆ ಅಗತ್ಯ ಕ್ರಮಕೈಗೊಳ್ಳುವುದಾಗಿ ತಿಳಿಸಿದರು.ಸಾಗರದಾಚೆಗೆ ಕಬಡ್ಡಿ: ಇತ್ತೀಚಿನ ದಿನಗಳಲ್ಲಿ ಕಬಡ್ಡಿ ಅಂತಾರಾಷ್ಟ್ರೀಯ ಮಟ್ಟದಲ್ಲಿ ಗುರ್ತಿಸಿಕೊಳ್ಳುತ್ತಿದೆ, ನಮ್ಮದೇ ಪ್ರತಿಭೆ ರವೀಂದ್ರ ಶೆಟ್ಟಿ ಈಗಾಗಲೇ ಥೈಲ್ಯಾಂಡ ದೇಶಕ್ಕೆ ತೆರಳಿ ತರಬೇತಿ ನೀಡುವ ಮೂಲಕ ಸಾಗರದಾಚೆಗೂ ಕಬಡ್ಡಿ ಕ್ರೀಡೆಯನ್ನುತೆಗೆದುಕೊಂಡು ಹೋಗಿದ್ದಾರೆ. ಹೀಗಿರುವಾಗ ಸ್ಥಳೀಯ ಪ್ರತಿಭೆಗಳು ಕಬಡ್ಡಿ ಅಸೋಸಿಯೇಶನ್ ಮೂಲಕ ತರಬೇತಿ ಪಡೆದು ತಮ್ಮ ಬದುಕನ್ನು ಕಟ್ಟಿಕೊಳ್ಳುವಂತೆ ಸಲಹೆ ನೀಡಿದರು.ಹಾವೇರಿ ವಿವಿ ಪ್ರಯತ್ನ ಶ್ಲಾಘನೀಯ: ಮಣ್ಣಿನ ಕ್ರೀಡೆ ಕಬಡ್ಡಿಯನ್ನು ಮುಖ್ಯವಾಹಿನಿಗೆ ತರುವ ನಿಟ್ಟಿನಲ್ಲಿ ಹಾವೇರಿ ವಿಶ್ವವಿದ್ಯಾಲಯ ತನ್ನೆಲ್ಲ ಪ್ರಯತ್ನ ನಡೆಸುತ್ತಿದೆ, ಇದರಿಂದ ಯೂನಿವರ್ಸಿಟಿ ಸರ್ಟಿಫಿಕೇಟ್ ಪಡೆದ ಕ್ರೀಡಾಪಟುಗಳು ಸರ್ಕಾರಿ ಕೆಲಸಕ್ಕೆ ಅರ್ಹತೆ ಪಡೆದಿಕೊಳ್ಳುತ್ತಿದ್ದಾರೆ ಪ್ರಮುಖವಾಗಿ ಕಬಡ್ಡಿ ಕ್ರೀಡಾ ಸಾಧಕರಿಗೆ ಉದ್ಯೋಗಾವಕಾಶಗಳು ಸಿಗಲಿದ್ದು ಕ್ರೀಡಾಪಟುಗಳು ಇದರ ಪ್ರಯೋಜನ ಪಡೆದುಕೊಳ್ಳುವಂತೆ ಕರೆ ನೀಡಿದರು.ಬ್ಯಾಡಗಿ ಪಟ್ಟಣ ಕಬಡ್ಡಿಗೆ ಮೀಸಲು: ಹಾವೇರಿ ಜಿಲ್ಲಾ ಅಮೆಚೂರ ಕಬಡ್ಡಿ ಅಸೋಸಿಯೇಶನ್ ಗೌರವಾಧ್ಯಕ್ಷ ಗಂಗಣ್ಣ ಎಲಿ ಮಾತನಾಡಿ, ಬ್ಯಾಡಗಿ ಪಟ್ಟಣ ಕಬಡ್ಡಿ ಕ್ರೀಡೆಗೆ ಮೊದಲಿನಿಂದಲೂ ಪ್ರಸಿದ್ದ, ನವರಂಗ, ನ್ಯಾಷನಲ್ ಯುಥ ಕ್ಲಬ್ ಇನ್ನಿತರ ಸಂಘಗಳು ಕಬಡ್ಡಿಯಲ್ಲಿ ಉತ್ತಮ ಹೆಸರು ಪಡೆದಿದ್ದವು, ಅದಾದ ಬಳಿಕ ಪಟ್ಟಣದಲ್ಲಿ ಸ್ಥಾಪನೆಯಾದ ಹಾವೇರಿ ಜಿಲ್ಲಾ ಅಮೆಚೂರ ಕಬಡ್ಡಿ ಅಸೋಸಿಯೇಶನ್ 1999ರಿಂದ ಜಿಲ್ಲೆಯಲ್ಲಿ ಕಬಡ್ಡಿ ಮುಂದುವರೆಸುವ ಹೊಣೆಗಾರಿಕೆ ತೆಗೆದುಕೊಂಡು ಯಶಸ್ವಿಯಾಗಿ ಮುನ್ನಡೆಸಿಕೊಂಡು ಬಂದಿದ್ದೇವೆ ಎಂದರು.
ಪ್ರಾಚಾರ್ಯ ಡಾ.ಮಲ್ಲಿಕಾರ್ಜುನ ಕಡ್ಡೀಪುಡಿ ಅಧ್ಯಕ್ಷತೆ ವಹಿಸಿದ್ದರು. ವೇದಿಕೆಯಲ್ಲಿ ಮುಖಂಡರಾದ ಶಿವಪುತ್ರಪ್ಪ ಅಗಡಿ, ಬೀರಣ್ಣ ಬಣಕಾರ, ಹಾವೇರಿ ವಿವಿ ಕ್ರೀಡಾ ವಿಭಾಗದ ಮುಖ್ಯಸ್ಥ ಸಿ.ಎನ್.ಸೊರಟೂರು, ಹಾವೇರಿ ವಿವಿ ಕ್ರೀಡಾ ಮಂಡಳಿ ಸದಸ್ಯ ಶಿವಾನಂದ ಮಲ್ಲನಗೌಡ್ರ, ಡಾ.ಎನ್.ಎನ್.ಅರಬಗೊಂಡ, ಡಾ.ಬಸನಗೌಡ ಲಕ್ಷ್ಮೇಶ್ವರ, ಕೋಚ ಮಂಜುಳ ಭಜಂತ್ರಿ, ಶಿವಣ್ಣ ರಡ್ಡೇರ, ರವೀಂದ್ರ ಶೆಟ್ಟರ (ಕರ್ಜಗಿ) ತೀರ್ಪುಗಾರರಾದ ಎಂ.ಆರ್.ಕೋಡಿಹಳ್ಳಿ, ಕಿರಣ ನಾಯಕ್, ಕುಮಾರಸ್ವಾಮಿ ಹಿರೇಮಠ, ಬಸವರಾಜ ಹಾಗೂ ಇನ್ನಿತರರಿದ್ದರು. ಉಪನ್ಯಾಸಕಾದ ಡಾ.ದೇವೇಂದ್ರಪ್ಪ ಸ್ವಾಗತಿಸಿದರು, ಎಚ್.ಜಿ.ಸಣ್ಣಗೌಡ್ರ ನಿರೂಪಿಸಿ ವಂದಿಸಿದರು.ತಾಲ್ಲೂಕಾ ಕ್ರೀಡಾಂಗಣ ಶೀಘ್ರ ಪೂರ್ಣ: ತಾಲೂಕು ಕ್ರೀಡಾಂಗಣದಲ್ಲಿರುವ ಒಳಾಂಗಣ ಕ್ರೀಡಾಂಗಣಕ್ಕೆ ಅಗತ್ಯವಿರುವ ಅನುದಾನ ಬಿಡುಗಡೆಯಾಗಿದ್ದು ಶೀಘ್ರದಲ್ಲೇ ಪೂರ್ಣಗೊಳಿಸುವ ಮೂಲಕ ಕ್ರೀಡಾಪಟುಗಳಿಗೆ ಅನುಕೂಲ ಕಲ್ಪಿಸಲಾಗುವುದು ಎಂದು ಶಾಸಕ ಬಸವರಾಜ ಶಿವಣ್ಣನವರ ಹೇಳಿದರು.