ಕನ್ನಡಪ್ರಭ ವಾರ್ತೆ ತುಮಕೂರು
ತಮ್ಮ ಕಚೇರಿಯಲ್ಲಿ ಅಧಿಕಾರಿಗಳು ಹಾಗೂ ಧರ್ಮಾಧಿಕಾರಿಗಳೊಂದಿಗೆ ಬ್ರಹ್ಮೋತ್ಸವ ಪೂರ್ವಭಾವಿ ಸಭೆ ನಡೆಸಿ ಮಾತನಾಡಿದ ಅವರು, ಜಾತ್ರಾ ಪ್ರಯುಕ್ತ ಮಾರ್ಚ್ 24 ರಂದು ಜರುಗಲಿರುವ ಬ್ರಹ್ಮರಥೋತ್ಸವಕ್ಕೆ ಸುಮಾರು 50 ಸಾವಿರ ಭಕ್ತಾದಿಗಳು ಆಗಮಿಸುವ ನಿರೀಕ್ಷೆಯಿದೆ. ಬ್ರಹ್ಮರಥೋತ್ಸವ ದಿನದಂದು ವಾಹನದ ಸಂಚಾರಕ್ಕೆ ಯಾವುದೇ ತೊಂದರೆಯಾಗದಂತೆ ನಿಗಧಿಪಡಿಸಿದ ಸ್ಥಳಗಳಲ್ಲಿ ವಾಹನ ನಿಲುಗಡೆಗೆ ಕ್ರಮವಹಿಸಬೇಕು. ಜಾತ್ರೆ ಮುಕ್ತಾಯವಾಗುವವರೆಗೆ ಕ್ಷೇತ್ರಕ್ಕೆ ಆಗಮಿಸುವ ಯಾವುದೇ ವಾಹನಗಳಿಗೆ ಶುಲ್ಕ ವಿಧಿಸಿ ವಸೂಲಿ ಮಾಡಿದರೆ ಅಂಥವರನ್ನು ದಸ್ತಗಿರಿ ಮಾಡಲು ಪೊಲೀಸ್ ಇಲಾಖೆಗೆ ಸೂಚಿಸಿದರು.
ಕಳೆದ 2023 ರಲ್ಲಿ ಬ್ರಹ್ಮರಥೋತ್ಸವದ ದಿನದಂದು ಜರುಗಿದ ಆಕಸ್ಮಿಕ ಬೆಂಕಿ ಅವಘಡದಿಂದ ಒಬ್ಬರು ಮೃತಪಟ್ಟಿದ್ದು, ಇಂತಹ ಅವಘಡಗಳು ಮತ್ತೊಮ್ಮೆ ಮರುಕಳಿಸದಂತೆ ಎಚ್ಚರಿಕೆ ವಹಿಸಬೇಕೆಂದು ದೇವಾಲಯ, ಅರಣ್ಯ ಇಲಾಖೆ, ಪಂಚಾಯತಿ ಅಧಿಕಾರಿಗಳಿಗೆ ಸೂಚನೆ ನೀಡಿದರಲ್ಲದೆ, ಬೆಂಕಿ ಅವಘಡ, ಕಾಡ್ಗಿಚ್ಚಿನ ಕುರಿತು ಸಾರ್ವಜನಿಕರಿಗೆ ಅರಿವು ಮೂಡಿಸುವ ಭಿತ್ತಿಪತ್ರಗಳನ್ನು ವಿತರಿಸಬೇಕು. ದೇವಾಯಲಕ್ಕೆ ಹೋಗುವ ಮಾರ್ಗದಲ್ಲಿ ಎಚ್ಚರಿಕೆ ಫಲಕಗಳನ್ನು ಅಳವಡಿಸಬೇಕು. ಪೊಲೀಸ್ ಇಲಾಖೆ ಮಾರ್ಗದರ್ಶನದಲ್ಲಿ ಅವಶ್ಯವಿರುವ ಸ್ಥಳಗಳಲ್ಲಿ ಸೈನ್ ಬರ್ಡ್ , ತಾತ್ಕಾಲಿಕ ಸಿಸಿ ಕ್ಯಾಮೆರಾಗಳನ್ನು ಅಳವಡಿಸಲು ಕ್ರಮಕೈಗೊಳ್ಳಬೇಕು ಎಂದು ಸೂಚಿಸಿದರು.ಜಾತ್ರೆಗೆ ಆಗಮಿಸುವ ಮಹಿಳೆಯರು, ವಯೋವೃದ್ಧರು ಹಾಗೂ ಮಕ್ಕಳಿಗೆ ಯಾವುದೇ ತೊಂದರೆಯಾಗದಂತೆ ವ್ಯವಸ್ಥೆ ಕಲ್ಪಿಸಬೇಕು. ಶ್ರೀ ಕ್ಷೇತ್ರಕ್ಕೆ ಅರಣ್ಯ ಪ್ರದೇಶದ ಕಾಲುದಾರಿಯಲ್ಲಿ ಭಕ್ತರು ಬರುವುದನ್ನು ಸಂಪೂರ್ಣವಾಗಿ ನಿಷೇಧಿಸಲಾಗಿದೆ ಎಂದರು.
ಬ್ರಹ್ಮ ರಥೋತ್ಸವವು ಭಾನುವಾರ ಜರುಗಲಿರುವುದರಿಂದ ಭಕ್ತಾದಿಗಳ ಸಂಖ್ಯೆ ಹೆಚ್ಚುವ ಸಾಧ್ಯತೆ ಇದ್ದು, ಸುಸ್ಥಿತಿಯಲ್ಲಿರುವ ಬಸ್‌ಗಳನ್ನು ನಿಯೋಜಿಸಲು ಕೆಎಸ್‌ಆರ್‌ಟಿಸಿಗೆ ಸೂಚನೆ ನೀಡಿದ ಅವರು, ಬಸ್ ಚಾಲಕರು ಮತ್ತು ನಿರ್ವಾಹಕರು ಭಕ್ತಾದಿಗಳೊಂದಿಗೆ ಸೌಜನ್ಯತೆಯಿಂದ ನಡೆದುಕೊಳ್ಳಬೇಕು. ಖಾಸಗಿ ಬಸ್‌ಗಳನ್ನು ಸಂಪೂರ್ಣವಾಗಿ ನಿಷೇಧಿಸಲಾಗಿದೆ ಎಂದು ತಿಳಿಸಿದರು.