ಹೊಸಪೇಟೆ: ವಸತಿ ಅಥವಾ ಕೃಷಿ ಉದ್ದೇಶಕ್ಕೆ ಅನುಮತಿ ಪಡೆದು ವಾಣಿಜ್ಯ ರೂಪದಲ್ಲಿ ಹೋಂ ಸ್ಟೇ ನಡೆಸುವುದು ಕಾನೂನು ಬಾಹಿರವಾಗಿದೆ. ಪರವಾನಗಿ ಇದ್ದರೂ ಸರ್ಕಾರದ ನಿಯಮಾವಳಿಗಳನ್ನು ಉಲ್ಲಂಘಿಸಿದ್ದರೆ ಅಂತಹ ಹೋಂಸ್ಟೇಗಳ ವಿರುದ್ಧ ಕ್ರಮ ಕೈಗೊಳ್ಳಲಾಗುವುದು ಎಂದು ಹಂಪಿ ಅಭಿವೃದ್ಧಿ ಪ್ರಾಧಿಕಾರದ ಆಯುಕ್ತ ಹೇಳಿದರು.
ಹಂಪಿ ಮತ್ತು ಹೊಸಹಂಪಿ, ಜನತಾ ಬಜಾರ್ ಹಾಗೂ ಕಡ್ಡಿರಾಂಪುರ, ಕಮಲಾಪುರ ವ್ಯಾಪ್ತಿಯಲ್ಲಿ ಸೂಕ್ತ ಪರವಾನಗಿ ಇಲ್ಲದೆ ನಡೆಯುತ್ತಿರುವ ಹೋಂಸ್ಟೇ, ಗೆಸ್ಟ್‌ಹೌಸ್, ಲಾಡ್ಜ್‌ಗಳನ್ನು ತಕ್ಷಣವೇ ಬಂದ್ ಮಾಡಬೇಕು. ನೇರ ಬುಕಿಂಗ್ ಹಾಗೂ ಆನ್‌ಲೈನ್ ಬುಕಿಂಗ್‌ಗಳನ್ನು ಇಂದಿನಿಂದಲೇ ಸಂಪೂರ್ಣವಾಗಿ ನಿಲ್ಲಿಸಬೇಕು. ಒಂದು ವೇಳೆ ನಿಯಮ ಉಲ್ಲಂಘಿಸಿದರೆ ನಿರ್ದಾಕ್ಷಿಣ್ಯವಾಗಿ ಕಾನೂನು ಕ್ರಮ ಕೈಗೊಳ್ಳಲಾಗುವುದು ಎಂದು ಎಚ್ಚರಿಕೆ ನೀಡಿದರು.
ಕಡ್ಡಿರಾಂಪುರ ಬಳಿ ಜಮೀನಿನಲ್ಲಿ ಅನಧಿಕೃತವಾಗಿ ನಿರ್ಮಿಸಿದ್ದ ಹೋಂ ಸ್ಟೇ ತಕ್ಷಣ ಬಂದ್ ಮಾಡಬೇಕು. ಕೃಷಿ ಚಟುವಟಿಕೆಗೆ ಪಡೆದಿದ್ದ ವಿದ್ಯುತ್ ಸಂಪರ್ಕವನ್ನು, ಹೋಂ ಸ್ಟೇಗೆ ಅನಧಿಕೃತವಾಗಿ ಪಡೆದಿರುವುದನ್ನು ಅಧಿಕಾರಿಗಳ ತಂಡ ಪತ್ತೆ ಹಚ್ಚಿ ಜೆಸ್ಕಾಂ ಸಿಬ್ಬಂದಿ ಮೂಲಕ ವಿದ್ಯುತ್ ಪೂರೈಕೆ ಸ್ಥಗಿತಗೊಳಿಸಿ ಸ್ಥಳದಲ್ಲಿಯೇ ನೋಟೀಸ್ ಜಾರಿ ಮಾಡಲಾಯಿತು.ನಿಯಮ ಪಾಲಿಸದಿದ್ದರೆ ವಿದ್ಯುತ್ ನೀರು ಸಂಪರ್ಕ ಕಡಿತಗೊಳಿಸುವುದಲ್ಲದೆ, ಅನಧಿಕೃತ ಹೋಂಸ್ಟೇಗಳನ್ನು ಪೂರ್ಣವಾಗಿ ಸೀಜ್ ಮಾಡಲಾಗುವುದು ಎಂದರು.
ಹೊಸಪೇಟೆ ಉಪವಿಭಾಗಾಧಿಕಾರಿ ವಿವೇಕಾನಂದ, ಪ್ರವಾಸೋದ್ಯಮ ಇಲಾಖೆ ಉಪನಿರ್ದೇಶಕ ಪ್ರಭುಲಿಂಗ ತಳಕೇರಿ, ತಾಲೂಕು ಪಂಚಾಯತ್ ಕಾರ್ಯನಿರ್ವಾಹಕಾಧಿಕಾರಿ ಆಲಂ ಪಾಷಾ ಸೇರಿದಂತೆ ವಿವಿಧ ಇಲಾಖೆ ಅಧಿಕಾರಿಗಳು ಕಾರ್ಯಾಚರಣೆಯಲ್ಲಿ ಭಾಗವಹಿಸಿದ್ದರು.