ಹರಪನಹಳ್ಳಿ: ಪ್ರಜಾ ಸೇವೆ ಆಂದೋಲನದಲ್ಲಿ ಸಾರ್ವಜನಿಕರು ಸಲ್ಲಿಸಿದ ಅರ್ಜಿಗಳಿಗೆ 15 ದಿನದಲ್ಲಿ ಸ್ಪಂದನೆ ಸಿಗದ ಬಗ್ಗೆ ದೂರು ಬಂದರೆ ಸಂಬಂಧ ಪಟ್ಟ ಅಧಿಕಾರಿಗಳ ವಿರುದ್ಧ ಶಿಸ್ತು ಕ್ರಮ ಖಂಡಿತ ಎಂದು ಮುಜರಾಯಿ, ಮೀನುಗಾರಿಗೆ, ಬಂದರು ಹಾಗೂ ಒಳನಾಡು ಸಾರಿಗೆ ಇಲಾಖೆಯ ಸಚಿವ ಕೆ.ಎಸ್. ಬಸವಂತಪ್ಪ ತಿಳಿಸಿದ್ದಾರೆ.
ಜನರ ಸಮಸ್ಯೆ ಬಗೆಹರಿಸಲು ನಮ್ಮ ಹಿಂದೆ ಬಡವರು ಕೆಲಸ ಕಾರ್ಯಗಳಿಗೆ ಎಲ್ಲೆಲ್ಲೊ ಅರ್ಜಿ ಕೊಟ್ಟು ಹೋಗುತ್ತಿದ್ದರು, ಅರ್ಜಿ ವಿಲೇವಾರಿ ಆಗುತ್ತಿರಲಿಲ್ಲ, ಆದರಿಂದ ನೊಂದುಕೊಳ್ಳುತ್ತಿದ್ದರು, ಆದ್ದರಿಂದ ಸಿಎಂ ಅವರು ಈ ಪ್ರತ್ಯೇಕ ಇಲಾಖೆ ಹುಟ್ಟು ಹಾಕಿದ್ದಾರೆ ಎಂದು ಹೇಳಿದರು.
ಪ್ರಜಾಸೇವೆ ಜನರ ಹೃದಯಕ್ಕೆ ಮುಟ್ಟಬೇಕು, ಜನರು ನಮ್ಮ ಅರ್ಜಿಗೆ ಸ್ಪಂದನೆ ಸಿಕ್ಕಿತು ಎಂದು ಖುಷಿ ಪಡಬೇಕು, ಕಾನೂನಾತ್ಮಕ ತೊಡಕು ಇರುವ ಅರ್ಜಿ ಹೊರತು ಪಡಿಸಿ ಉಳಿದ ಅರ್ಜಿಗಳಿಗೆ ಪರಿಹಾರ ನೀಡಬೇಕು, ಕೆಲವೊಂದನ್ನು ಸ್ಥಳದಲ್ಲಿಯೇ ಬಗೆಹರಿಸಬೇಕು ಎಂದು ಅಧಿಕಾರಿಗಳಿಗೆ ತಾಕೀತು ಮಾಡಿದರು.ಶಾಸಕಿ ಎಂ.ಪಿ.ಲತಾ, ಜಿಲ್ಲಾಧಿಕಾರಿ ಕವಿತಾ ಮನ್ನಿಕೇರಿ, ಜಿಪಂ ಸಿಇಒ ಗರೀಮಾ ಪನ್ವರ್, ಉಪವಿಭಾಗಾಧಿಕಾರಿ ಸುರೇಶಕುಮಾರ, ತಹಸೀಲ್ದಾರ ಬಿ.ವಿ. ಗಿರೀಶಬಾಬು, ಗ್ಯಾರಂಟಿ ಯೋಜನೆಗಳ ಅನುಷ್ಠಾನ ಸಮಿತಿ ಅಧ್ಯಕ್ಷ ಉದಯಶಂಕರ ಹಾಗೂ ಜಿಲ್ಲಾ ಅರಣ್ಯಾಧಿಕಾರಿ, ಜಿಲ್ಲಾ ಮಟ್ಟ, ತಾಲೂಕು ಮಟ್ಟದ ಅಧಿಕಾರಿಗಳು, ಸಾರ್ವಜನಿಕರು ಹಾಜರಿದ್ದರು.