ಜಿಲ್ಲೆಯಲ್ಲಿ 64 ಸಾವಿರ ಹೆಕ್ಟೇರ್ ಅರಣ್ಯ ಭೂಮಿಯನ್ನು ರಾಷ್ಟ್ರೀಯ ಯೋಜನೆಗಳಿಗೆ ನೀಡಿರುವ ಸರ್ಕಾರ ೮೦ ಸಾವಿರ ಕುಟುಂಬವು ಜೀವನ ಮತ್ತು ವಾಸ್ತವ್ಯಕ್ಕಾಗಿ ಅತಿಕ್ರಮಿಸಿರುವ ಸುಮಾರು ೧೮ ಸಾವಿರ ಹೆಕ್ಟೇರ್ ಅರಣ್ಯ ಭೂಮಿಯನ್ನು ಸಾಗುವಳಿ ಭೂಮಿಯಾಗಿ ನೀಡಬೇಕು.
ಕನ್ನಡಪ್ರಭ ವಾರ್ತೆ ಶಿರಸಿ
ಇದೇ 21ರಿಂದ 23 ರ ವರೆಗೆ ನಡೆಯಲಿರುವ ವಿಧಾನ ಮಂಡಳದ ವಿಶೇಷ ಅಧಿವೇಶನದಲ್ಲಿ ರೈತರ ಪರವಾಗಿ 5 ಅಂಶಗಳ ಮಾರ್ಗಸೂಚಿಗೆ ಸ್ಥಳೀಯ ಶಾಸಕರು ಧ್ವನಿಯಾಗಬೇಕೆಂದು ಅರಣ್ಯ ಭೂಮಿ ಹಕ್ಕು ಹೋರಾಟಗಾರರ ವೇದಿಕೆ ಅಧ್ಯಕ್ಷ ರವೀಂದ್ರ ನಾಯ್ಕ ಆಗ್ರಹಿಸಿದ್ದಾರೆ.ಅವರು ನಗರದ ಜಿಲ್ಲಾ ಅರಣ್ಯ ಭೂಮಿ ಹಕ್ಕು ಹೋರಾಟಗಾರರ ವೇದಿಕೆಯ ಕಾರ್ಯಾಲಯದಲ್ಲಿ ವೇದಿಕೆಯ ಕಾರ್ಯಕಾರಿ ಸಮಿತಿಯಲ್ಲಿ ಮಾರ್ಗಸೂಚಿ ಪಟ್ಟಿಯನ್ನ ಶನಿವಾರ ಬಿಡುಗಡೆಗೊಳಿಸಿ ಮಾತನಾಡಿದರು.
ಜಿಲ್ಲೆಯಲ್ಲಿ 64 ಸಾವಿರ ಹೆಕ್ಟೇರ್ ಅರಣ್ಯ ಭೂಮಿಯನ್ನು ರಾಷ್ಟ್ರೀಯ ಯೋಜನೆಗಳಿಗೆ ನೀಡಿರುವ ಸರ್ಕಾರ ೮೦ ಸಾವಿರ ಕುಟುಂಬವು ಜೀವನ ಮತ್ತು ವಾಸ್ತವ್ಯಕ್ಕಾಗಿ ಅತಿಕ್ರಮಿಸಿರುವ ಸುಮಾರು ೧೮ ಸಾವಿರ ಹೆಕ್ಟೇರ್ ಅರಣ್ಯ ಭೂಮಿಯನ್ನು ಸಾಗುವಳಿ ಭೂಮಿಯಾಗಿ ನೀಡಬೇಕು.ಜಿಲ್ಲೆಯಲ್ಲಿ ೧೯೭೮ ರ ಪೂರ್ವ ಅರಣ್ಯ ಭೂಮಿ ಸಾಗುವಳಿದಾರರಿಗೆ ಕೇಂದ್ರ ಸರ್ಕಾರವು ಮಂಜೂರಿಗೆ ಅನುಮೋದನೆ ನೀಡಿದರೂ, ಅರಣ್ಯಕ್ಕೆ ಬದಲಿ ಕಂದಾಯ ಭೂಮಿ ಅರಣ್ಯಕ್ಕೆ ವರ್ಗಾಯಿಸದೇ ಇರುವುದು, ಜಿಲ್ಲೆಯಲ್ಲಿ ಸಾವಿರಕ್ಕೂ ಮಿಕ್ಕಿ ಅರಣ್ಯ ಭೂಮಿ ಹಂಗಾಮಿ ಭೂಮಿ ಖಾಯಂ ಲಾಗಣಿ ಮಾಡದೇ ಇರುವ ಕುರಿತು ತೀರ್ಮಾನಿಸದೇ ಇರುವುದು, ಪಂಚಾಯತ್ ರಾಜ್ ಇಲಾಖೆಯಲ್ಲಿ ಅನಧಿಕೃತ ಕಟ್ಟಡಗಳಿಗೆ ತೆರಿಗೆ ರದ್ದು ಪಡಿಸುವ ಕುರಿತು ತಿರ್ಮಾನಿಸುವುದು, ಇವುಗಳನ್ನು ಸರ್ಕಾರದ ಗಮನಕ್ಕೆ ತರಬೇಕೆಂದು ಕೋರಿದ್ದಾರೆ.
ಅರಣ್ಯ ಹಕ್ಕು ಕಾಯಿದೆ ಅನುಷ್ಠಾನದಲ್ಲಿ ಕಾನೂನುಬಾಹಿರವಾಗಿ ತಿರಸ್ಕರಿಸುವ ಕುರಿತು ಚರ್ಚಿಸಿ ಸಾಂದರ್ಭಿಕ ಅಥವಾ ನಿರ್ದಿಷ್ಟ ದಾಖಲೆಗಳಿಗೆ ಒತ್ತಾಯಿಸತಕ್ಕದ್ದಲ್ಲ ಎಂಬ ತಿದ್ದುಪಡಿ ಅಂಶದ ಮೇಲೆ ಅರಣ್ಯವಾಸಿಗಳ ಪರ ನಿರ್ಣಯ ತೆಗೆದುಕೊಳ್ಳುವುದು. ಉತ್ತರ ಕನ್ನಡ ಜಿಲ್ಲೆಯಲ್ಲಿ ಅರಣ್ಯ ಸಾಗುವಳಿಯ 74234 ಅರ್ಜಿಗಳು ತಿರಸ್ಕರಿಸಲ್ಪಟ್ಟಿದೆ ಎಂದು ಕಳೆದ ಫೆ.28 ರಂದು ಸಂಸತ್ತಿನಲ್ಲಿ ವರದಿ ಸಲ್ಲಿಸಿದ್ದು, ಈ ತಿರಸ್ಕೃತಗೊಂಡ ಅರ್ಜಿಗಳ ಪುನರ್ ಪರಿಶೀಲನೆಗೆ ಕ್ರಮ ಕೈಗೊಳ್ಳಬೇಕೆಂದು ಕೋರಿದ್ದಾರೆ.ಈ ಸಭೆಯಲ್ಲಿ ಸಂಚಾಲಕ ಇಬ್ರಾಹಿಂ ಸಾಬ ಗೌಡಳ್ಳಿ, ನೆಹರು ನಾಯ್ಕ ಬಿಳೂರು, ರಫೀಕ್ ಗೌಡಳ್ಳಿ, ಚಂದ್ರಣ್ಣ ಮರಗುಂಡಿ, ಕೃಷ್ಣ ಮರಾಠಿ ಸವಲೆ, ಪರಮೇಶ್ವರ ದೇಶಭಂಡಾರಿ ವಾನಳ್ಳಿ, ರಾಜು ಪೂಜಾರಿ, ನಾರಾಯಣ ನಾಯ್ಕ ನೆಗ್ಗು, ಕೃಷ್ಣ ಮಾದೇವ ನಾಯ್ಕ ಬಂಡಲ, ಸ್ವಾತಿ ಜೈನ್ , ಯಶೋದಾ ನೌಟೂರು, ಈಶ್ವರ ನಾಯ್ಕ ಬಂಕನಾಳ , ಮಂಜು ಲಕ್ಷ್ಮಯ್ಯ ನಾಯ್ಕ , ನಾರಾಯಣ ಉಮ್ಮುಡಿ, ಪಂಪಾವತಿ ಮುಂತಾದವರು ಉಪಸ್ಥಿತರಿದ್ದರು.ಕಸ್ತೂರಿ ರಂಗನ್ ವರದಿ:
ಕೇಂದ್ರ ಸರ್ಕಾರವು ಕಸ್ತೂರಿ ರಂಗನ್ ವರದಿಯ 7 ನೇ ಅಧಿಸೂಚನೆ ಪ್ರಕಟಿಸಿರುವ ಹಿನ್ನಲೆಯಲ್ಲಿ ಉತ್ತರಕನ್ನಡ ಜಿಲ್ಲೆ 9 ತಾಲೂಕಿನಿಂದ 132 ಗ್ರಾಮ ಪಂಚಾಯತ್ ವ್ಯಾಪ್ತಿಯನ್ನು ಗುರುತಿಸಿರುವುದರಿಂದ ಜನ ಜೀವನ ಮತ್ತು ಅರಣ್ಯವಾಸಿಗಳ ಮೇಲೆ ಆಗುವ ಪರಿಣಾಮಗಳನ್ನು ಸರ್ಕಾರದ ಗಮನಕ್ಕೆ ತರುವುದು. ಅವೈಜ್ಞಾನಿಕ ಕಸ್ತೂರಿ ರಂಗನ್ ವರದಿಯನ್ನು ಉನ್ನತ ಮಟ್ಟದ ಸಮಿತಿಯನ್ನ ರಚಿಸಿ ಬೌಗೋಳಿಕ ಸಮಿಕ್ಷೇ (ಸರ್ವೆ) ಮೂಲಕ ಗ್ರಾಮ ಸಭೆಯಲ್ಲಿ ನಿರ್ಣಯಿಸುವುದನ್ನು ಸರ್ಕಾರದ ಗಮನಕ್ಕೆ ತರಲು ಪ್ರಯತ್ನಿಸಬೇಕು ಎಂದು ರವೀಂದ್ರ ನಾಯ್ಕ ತಿಳಿಸಿದ್ದಾರೆ.