ಕನ್ನಡಪ್ರಭ ವಾರ್ತೆ ಕುಂದಾಪುರ
ಪ್ರತಿಯೊಂದು ಠಾಣೆಗಳಲ್ಲಿ ಸಿಬ್ಬಂದಿ ಕೊರತೆ ಇದ್ದು, ಈ ಬಗ್ಗೆ ಸೂಕ್ತ ಕ್ರಮ ಕೈಗೊಳ್ಳಲಾಗುವುದು. ಕೋಟ ಠಾಣೆಯಲ್ಲಿ ವಾಹನದ ಕೊರತೆ, ಟೋಲ್ ಸಮಸ್ಯೆ, ಕರಾವಳಿ ತೀರ ಭದ್ರತೆ, ದಲಿತ ಸಮಸ್ಯೆಗಳ ನಿರ್ಮೂಲನೆ, ಕಂದಾಯ ಇಲಾಖೆಯ ವ್ಯಾಜ್ಯಗಳು ಸೇರಿದಂತೆ ಅನೇಕ ಸಮಸ್ಯೆಗಳ ನಿವಾರಣೆಗೆ ಆದಷ್ಟು ಬೇಗ ನೇಮಕಾತಿ ಪಕ್ರಿಯೆ ನಡೆಯಲಿದೆ ಎಂದರು.
ಠಾಣೆಗೆ ಬಂದು ದೂರು ನೀಡಿದವರ ಯೋಗ ಕ್ಷೇಮ ವಿಚಾರಿಸಿ, ಠಾಣೆಯ ಕುರಿತು ಅಭಿಪ್ರಾಯ ಪಡೆದುಕೊಂಡು, ಕೆಲವು ಸಲಹೆ, ಸೂಚನೆ ನೀಡಿದರು. ಅಪಘಾತ, ಕ್ರೂರ ಪ್ರಕರಣಗಳು, ಅಧಿಕೃತ ರಕ್ಷಣಾ ಆಯುಧಗಳ ಪರವಾನಗಿ ಹೊಂದಿರುವವರ ಕುರಿತು ಮಾಹಿತಿ ಪಡೆದರು.ಠಾಣಾ ವ್ಯಾಪ್ತಿಯಲ್ಲಿ ಹೆಚ್ಚುತ್ತಿರುವ ಸಿವಿಲ್ ವ್ಯಾಜ್ಯಗಳ ಕುರಿತು ಠಾಣಾ ಉಪನಿರೀಕ್ಷಕ ರಾಘವೇಂದ್ರ ಸಿ. ಗಮನ ಸೆಳೆದರು. ದಲಿತ ಕುಂದುಕೊರತೆ ಸಭೆಗಳನ್ನು ಪ್ರತಿ ತಿಂಗಳು ನಡೆಸುತ್ತಿದ್ದೇವೆ ಎಂದು ಸಚಿವರಿಗೆ ಮಾಹಿತಿ ನೀಡಿದರು.
ಎಲ್ಲ ಜಾತಿ, ಸಮುದಾಯದ ಸಣ್ಣ, ದೊಡ್ಡ ಪ್ರಾರ್ಥನಾ ಮಂದಿರಗಳಿಗೆ ರಾತ್ರಿ ಬೆಳಕಿನ ಸೌಲಭ್ಯ ಹಾಗೂ ಸಿಸಿಟಿವಿ ಅಳವಡಿಸಿ, ಅದರ ಮಾಹಿತಿ ಪ್ರತಿದಿನ ಠಾಣಾ ವ್ಯಾಪ್ತಿಯಲ್ಲಿ ಬರುವಂತೆಯೂ ಗೃಹಸಚಿವರು ಸಲಹೆ ನೀಡಿದರು.ಈ ಸಂದರ್ಭ ಜಿಲ್ಲೆಯ ಹಿರಿಯ ಪೊಲೀಸ್ ಅಧಿಕಾರಿಗಳಾದ ಪಶ್ಚಿಮ ವಲಯ ಐಜಿಪಿ ಅಮಿತ್ ಸಿಂಗ್, ಎಸ್ಪಿ ಹರಿರಾಮ್ ಶಂಕರ್, ಎಎಸ್ಪಿ ಪರಮೇಶ್ವರ್, ಉಡುಪಿ ಡಿವೈಎಸ್ಪಿ ಡಿ.ಟಿ. ಪ್ರಭು, ಕುಂದಾಪುರ ಡಿವೈಎಸ್ಪಿ ಎಚ್.ಡಿ. ಕುಲಕರ್ಣಿ, ಬ್ರಹ್ಮಾವರ ಇನ್‌ಸ್ಪೆಕ್ಟರ್ ಗೋಪಿಕೃಷ್ಣ, ಕೋಟ ಉಪನಿರೀಕ್ಷಕ ರಾಘವೇಂದ್ರ ಸಿ., ಕ್ರೈಂ ಪಿಎಸ್ಐ ಸುಧಾ ಪ್ರಭು ಮತ್ತು ಸಿಬ್ಬಂದಿ, ಮಾಜಿ ಶಾಸಕ ಕೆ. ಗೋಪಾಲ ಪೂಜಾರಿ, ಕಾಂಗ್ರೆಸ್ ಮುಖಂಡರಾದ ಎಂ.ಎ. ಗಫೂರ್, ರಾಜು ಪೂಜಾರಿ, ಮುನಿಯಾಲು ಉದಯ್ ಕುಮಾರ್ ಶೆಟ್ಟಿ, ಮಲ್ಯಾಡಿ ಶಿವರಾಮ್ ಶೆಟ್ಟಿ ಹಾಗೂ ಇತರರು ಉಪಸ್ಥಿತರಿದ್ದರು.