ರಾಮನಗರ: ಬೆಂಗಳೂರು ಹಾಲು ಒಕ್ಕೂಟ(ಬಮೂಲ್) ಅಧ್ಯಕ್ಷ ಸ್ಥಾನಕ್ಕೆ ಜೂನ್ 19ರಂದು ಚುನಾವಣೆ ನಿಗದಿಯಾಗಿದ್ದು, ಕಾಂಗ್ರೆಸ್ ಬೆಂಬಲಿತ ನಿರ್ದೇಶಕರಲ್ಲಿ ಗದ್ದುಗೆ ಹಿಡಿಯಲು ಪೈಪೋಟಿ ತೀವ್ರಗೊಂಡಿದೆ.
ರಾಮನಗರ ಕ್ಷೇತ್ರದಿಂದ ಆಯ್ಕೆಯಾಗಿರುವ ಮಾಜಿ ಕೆಎಂಎಫ್ ಅಧ್ಯಕ್ಷ ಪಿ.ನಾಗರಾಜು, ಚನ್ನಪಟ್ಟಣದಿಂದ ಗೆಲುವು ಸಾಧಿಸಿರುವ ಎಸ್.ಲಿಂಗೇಶ್‌ಕುಮಾರ್, ಮಾಗಡಿಯಿಂದ ಗೆಲುವು ಸಾಧಿಸಿರುವ ಎಚ್.ಎನ್.ಅಶೋಕ್, ಕುದೂರಿನ ರಾಜಣ್ಣ ಮತ್ತು ಹಾರೋಹಳ್ಳಿ ಆನಂದ್‌ಕುಮಾರ್ ಅಧ್ಯಕ್ಷ ಸ್ಥಾನದ ಮೇಲೆ ಕಣ್ಣಿಟ್ಟಿದ್ದಾರೆ. ಈ ಐವರ ಪೈಕಿ ನೂತನ ನಿರ್ದೇಶಕರಾಗಿರುವ ಮಾಜಿ ಸಂಸದ ಡಿ.ಕೆ.ಸುರೇಶ್ ಹೆಸರು ಕೂಡ ಕೇಳಿ ಬರುತ್ತಿದೆ.
ಹಾಗೊಂದು ವೇಳೆ ಡಿ.ಕೆ.ಸುರೇಶ್ ಅಧ್ಯಕ್ಷ ಸ್ಥಾನ ಅಲಂಕರಿಸಲು ನಿರಾಕರಿಸಿದರಷ್ಟೇ ಬೇರೆಯವರಿಗೆ ಅವಕಾಶ ಸಿಗುವ ಸಾಧ್ಯತೆಗಳಿವೆ. ಅದನ್ನು ಸಹ ಡಿ.ಕೆ.ಸುರೇಶ್ ಅವರೇ ತೀರ್ಮಾನ ಮಾಡುವ ಸಾಧ್ಯತೆಗಳಿವೆ. ಬೆಂಗಳೂರು ಹಾಲು ಉತ್ಪಾದಕರ ಸಹಕಾರ ಸಂಘಕ್ಕೆ ಇದೀಗ ಆಯ್ಕೆಯಾಗಿರುವ ಸದಸ್ಯರ ಪೈಕಿ ರಾಮನಗರದ ನಿರ್ದೇಶಕ ಪಿ.ನಾಗರಾಜು ಬಮೂಲ್‌ಗೆ ಅತಿಹೆಚ್ಚು ಬಾರಿ ಆಯ್ಕೆಯಾಗಿರುವ ನಿರ್ದೇಶಕ ಎನಿಸಿಕೊಂಡಿದ್ದಾರೆ. 6 ಬಾರಿ ಬಮೂಲ್ ನಿರ್ದೇಶಕರಾಗಿ ಆಯ್ಕೆಯಾಗಿರುವ ಇವರು ಎರಡು ಬಾರಿ ಬಮೂಲ್ ಅಧ್ಯಕ್ಷರಾಗಿ, ಒಂದು ಬಾರಿ ಕೆಎಂಎಫ್ ಅಧ್ಯಕ್ಷರಾಗಿ, ಎರಡು ಬಾರಿ ಬಮೂಲ್‌ನಿಂದ ಕೆಎಂಎಫ್ ಪ್ರತಿನಿಧಿಯಾಗಿ ಸೇವೆ ಸಲ್ಲಿಸಿದ್ದಾರೆ. ಇದೀಗ ಅವರಿಗೆ ಮತ್ತೊಮ್ಮೆ ಅವಕಾಶ ಸಿಗುವುದಾ ಕಾದು ನೋಡಬೇಕಿದೆ.ಚನ್ನಪಟ್ಟಣದಿಂದ ಆಯ್ಕೆಯಾಗಿರುವ ಎಸ್.ಲಿಂಗೇಶ್‌ಕುಮಾರ್ ಸಹ 4ನೇ ಬಾರಿಗೆ ಬಮುಲ್ ನಿರ್ದೇಶಕರಾಗಿ ಆಯ್ಕೆಯಾಗಿದ್ದಾರೆ. ಈ ಬಾರಿ ಬಮುಲ್ ಅಧ್ಯಕ್ಷ ಸ್ಥಾನದ ಪ್ರಬಲ ಆಕಾಂಕ್ಷಿಗಳಲ್ಲಿ ಇವರು ಒಬ್ಬರೆನಿಸಿದ್ದು, ಅಧ್ಯಕ್ಷ ಸ್ಥಾನಕ್ಕಾಗಿ ಕಾಂಗ್ರೆಸ್ ಪಾಳಯದಲ್ಲಿ ಪ್ರಯತ್ನ ನಡೆಸುತ್ತಿದ್ದಾರೆ. ಕಳೆದ 30 ವರ್ಷಗಳಿಂದ ಬಮುಲ್ ಅಧ್ಯಕ್ಷ ಸ್ಥಾನ ಚನ್ನಪಟ್ಟಣಕ್ಕೆ ಸಿಕ್ಕಿಲ್ಲ. ಹೀಗಾಗಿ ಈ ಬಾರಿ ಲಿಂಗೇಶ್ ಕುಮಾರ್ ಅವರಿಗೆ ಅವಕಾಶ ಮಾಡಿಕೊಡಬೇಕು ಎಂದು ಲಿಂಗೇಶ್‌ಕುಮಾರ್ ಪರವಾಗಿರುವ ಕೆಲ ಕೈ ಮುಖಂಡರು ಪಕ್ಷದ ವರಿಷ್ಠರ ಮೇಲೆ ಒತ್ತಡ ಹಾಕಲು ಮುಂದಾಗಿದ್ದಾರೆ. ಇನ್ನು ಕೆಲ ವರ್ಷಗಳಿಂದ ರಾಮನಗರ ಜಿಲ್ಲೆಯ ಮೂರು ತಾಲೂಕಿನವರು ಅಧ್ಯಕ್ಷರಾಗಿ ಅಧಿಕಾರ ಅನುಭವಿಸಿದ್ದಾರೆ. ಈ ಬಾರಿ ಲಿಂಗೇಶ್‌ಕುಮಾರ್ ಗೆ ಅವಕಾಶ ನೀಡುವ ಮೂಲಕ ಚನ್ನಪಟ್ಟಣಕ್ಕೂ ಪ್ರಾಧಾನ್ಯತೆ ನೀಡಿ ಎಂದು ವರಿಷ್ಠರಿಗೆ ಮನವಿ ಮಾಡುತ್ತಿದ್ದಾರೆ.
ಅಧಿಕಾರ ಹಂಚಿಕೆ ಸೂತ್ರ:
ಇನ್ನು ಬಮೂಲ್ ಅಧ್ಯಕ್ಷ ಸ್ಥಾನದ ಆಕಾಂಕ್ಷಿಗಳಿಗೆ ಪರ್ಯಾಯ ಅಧಿಕಾರಗಳನ್ನು ನೀಡಿ ಸಮಾಧಾನ ಮಾಡುವ ಪ್ರಯತ್ನಕ್ಕೆ ಕಾಂಗ್ರೆಸ್ ನಾಯಕರು ಚಿಂತಿಸಿದ್ದು, ಉಪಾಧ್ಯಕ್ಷ ಸ್ಥಾನ, ಬಮೂಲ್ ಆಡಳಿತ ಮಂಡಳಿಯಲ್ಲಿ ಪ್ರಮುಖ ತೀರ್ಮಾನವನ್ನು ಕೈಗೊಳ್ಳುವ ಇಪಿಸಿ(ಎಕ್ಸ್ಪರ್ಟ್ ಪ್ಯಾನಲ್ ಕಮಿಟಿ) ಸದಸ್ಯ ಸ್ಥಾನ ನೀಡುವ ಮೂಲಕ ಆಕಾಂಕ್ಷಿತರನ್ನು ಸಮಾಧಾನಪಡಿಸುವ ಸೂತ್ರವನ್ನು ಕೈ ನಾಯಕರು ಹೊಂದಿದ್ದಾರೆ.
ಕೆಎಂಎಫ್‌ಗೆ ಒಬ್ಬ ನಿರ್ದೇಶಕರನ್ನು ನಾಮನಿರ್ದೇಶಕ ಮಾಡಲು ಅವಕಾಶವಿದೆಯಾದರೂ, ಈ ಸ್ಥಾನಕ್ಕೆ ಮಾಜಿ ಸಂಸದ ಡಿ.ಕೆ.ಸುರೇಶ್ ಬಹುತೇಕ ಖಚಿತವಾಗಿರುವ ಕಾರಣ ಉಳಿದ ಮೂರು ಅಧಿಕಾರಗಳನ್ನು ಪಕ್ಷದ ಎಲ್ಲಾ ನಿರ್ದೇಶಕರಿಗೆ ಹಂಚಿಕೆ ಮಾಡಲು ಕೈ ನಾಯಕರು ಸಿದ್ದತೆ ಮಾಡಿಕೊಂಡಿದ್ದಾರೆ ಎಂದು ತಿಳಿದು ಬಂದಿದೆ.
ಅಧ್ಯಕ್ಷ ಸ್ಥಾನದ ಮೇಲೆ ಡಿಕೆಸುರೇಶ್ ಕಣ್ಣು
------------------------------------------
ಬಮೂಲ್ ಕಚೇರಿ
----------------------------------------