ಕನ್ನಡಪ್ರಭ ವಾರ್ತೆ ವಿಜಯಪುರ
ನಗರದ ಜಿಲ್ಲಾ ಕನ್ನಡ ಸಾಹಿತ್ಯ ಪರಿಷತ್ ಭವನದಲ್ಲಿ ನಡೆದ ಸುದ್ದಿಗೋಷ್ಠಿಯಲ್ಲಿ ವಿವಿಧ ಬೇಡಿಕೆಗೆ ಈಡೇರಿಕೆಗೆ ರೈತ ಸಂಘಟನೆಗಳ ಪ್ರಮುಖರು ಹಕ್ಕೊತ್ತಾಯ ಮಂಡಿಸಿದರು. ಈ ವೇಳೆ ನೇತೃತ್ವ ವಹಿಸಿದ್ದ ಮುಖಂಡ ಅರವಿಂದ ಕುಲಕರ್ಣಿ ಮಾತನಾಡಿ, ಈ ಎಲ್ಲ ಬೇಡಿಕೆಗಳನ್ನು ಸರ್ಕಾರ ಕೂಡಲೇ ಈಡೇರಿಸಬೇಕು. ಈ ವಿಷಯವನ್ನು ಸರ್ಕಾರದ ಗಮನ ಸೆಳೆಯುವ ದೃಷ್ಟಿಯಿಂದ ಜೂ.೩೦ರಂದು ನಿಡಗುಂದಿ ರಾಷ್ಟ್ರೀಯ ಹೆದ್ದಾರಿ ಬಳಿ ಸಾವಿರಾರು ರೈತರ ಸಮ್ಮುಖದಲ್ಲಿ ಬೃಹತ್ ಧರಣಿ ನಡೆಸಲಾಗುವುದು ಎಂದು ತಿಳಿಸಿದ್ದಾರೆ.
ಮಹಾರಾಷ್ಟ್ರ ಸರ್ಕಾರ ದುರುದ್ದೇಶದಿಂದ ಉತ್ತರ ಕರ್ನಾಟಕದ ರೈತರನ್ನು ಬಲಿ ತೆಗೆದುಕೊಳ್ಳಲು ಹೊರಟಿದೆ. ಆಲಮಟ್ಟಿ ಜಲಾಶಯದ ನೀರಿನ ಮಟ್ಟವನ್ನು ೫೨೪, ೨೫೬ಕ್ಕೆ ನಿಲ್ಲಿಸಿದರೆ ಮಹಾರಾಷ್ಟ್ರ ವ್ಯಾಪ್ತಿಯ ಸಾಂಗ್ಲಿ, ಸಾತಾರ, ಮಿರಜ ಸೇರಿದಂತೆ ಕೆಲವು ಜಿಲ್ಲೆಗಳು ಪ್ರವಾಹಕ್ಕೆ ತುತ್ತಾಗುತ್ತವೆ ಎಂದು ತಪ್ಪು ತಿಳುವಳಿಕೆಯಿಂದಲೋ ಅಥವಾ ಉದ್ದೇಶ ಪೂರ್ವಕವಾಗಿಯೋ ಹೋರಾಟಕ್ಕಿಳಿದು ಉತ್ತರ ಕರ್ನಾಟಕದ ರೈತರ ವಿರೋಧಿ ಎಂಬುದನ್ನು ಸಾಬೀತುಪಡಿಸಿದ್ದಾರೆ ಎಂದು ಆರೋಪಿಸಿದ್ದಾರೆ.೨೦೧೯ರಲ್ಲಿ ಮಹಾರಾಷ್ಟ್ರ ವ್ಯಾಪ್ತಿಯಲ್ಲಿ ಪ್ರವಾಹ ಬಂದಾಗ ಆಲಮಟ್ಟಿ ಜಲಾಶಯದ ೫೧೯.೬೦ಕ್ಕೆ ನೀರು ನಿಲ್ಲಿಸಿದಾಗ ಆಲಮಟ್ಟಿ ಹಿನ್ನೀರಿನಿಂದಲೇ ಪ್ರವಾಹ ಉಂಟಾಗಿದೆ ಎಂದು ಬೊಬ್ಬೆಹೊಡೆದಿದ್ದರು. ಆಗಿನ ವೇಳೆ ಮಹಾರಾಷ್ಟ್ರ ಸರ್ಕಾರ ಅಧಿಕಾರಿಗಳ ತಂಡ ರಚಿಸಿ ಆಲಮಟ್ಟಿ ಅಧ್ಯಯನ ಮಾಡಿ ವರದಿ ಸಲ್ಲಿಸಲು ಕಳುಹಿಸಿತ್ತು. ಇಲ್ಲಿನ ಪರಿಸ್ಥಿತಿಯನ್ನು ಸಂಪೂರ್ಣ ಅಧ್ಯಯನ ಮಾಡಿದ ತಂಡ, ನಂತರ ಮಹಾರಾಷ್ಟ್ರದಲ್ಲಿ ಪ್ರವಾಹ ಬಂದಿರುವುದು ಆಲಮಟ್ಟಿ ಜಲಾಶಯದ ಹಿನ್ನೀರಿನಿಂದ ಅಲ್ಲ ಎಂದು ಮಹಾ ಸರ್ಕಾರಕ್ಕೆ ಸ್ಪಷ್ಟ ವರದಿ ನೀಡಿದೆ. ಆದರೂ ವರದಿ ಗಣನೆಗೆ ತೆಗೆದುಕೊಳ್ಳದ ಸರ್ಕಾರ ಉದ್ದೇಶ ಪೂರ್ವಕವಾಗಿ ಅಲ್ಲಿಯ ರೈತರನ್ನು ಎತ್ತಿಕಟ್ಟಿ ಬೀದಿಗಿಳಿದು ಹೋರಾಟ ಮಾಡಿ ತಮ್ಮ ಬಂಡತನ ಪ್ರದರ್ಶಿಸುತ್ತಿದೆ ಎಂದು ಕುಲಕರ್ಣಿ ಆಕ್ರೋಶ ವ್ಯಕ್ತಪಡಿಸಿದರು.
ಮಹಾರಾಷ್ಟ್ರ ಸರ್ಕಾರ ತೆಗೆದಿರುವ ಕ್ಯಾತೆಗೆ, ಕೇಂದ್ರ ಸರ್ಕಾರ ಮಧ್ಯ ಪ್ರವೇಶಿಸಬೇಕು. ಈ ನಿಟ್ಟಿನಲ್ಲಿ ರಾಜ್ಯ ಸರ್ಕಾರ ಕೇಂದ್ರ ಸರ್ಕಾರದ ಮೇಲೆ ಒತ್ತಡ ತರಬೇಕು ಮತ್ತು ಕೇಂದ್ರ ಸರ್ಕಾರವು ಕೂಡಾ ಆಲಮಟ್ಟಿ ಜಲಾಶಯದ ನೀರಿನ ಮಟ್ಟವನ್ನು ೫೨೪.೨೫೬ಕ್ಕೆ ನಿಲ್ಲಿಸಲು ಕೂಡಲೇ ಅಧಿಸೂಚನೆ ಹೊರಡಿಸಬೇಕು. ಕೃಷ್ಣ ಮೇಲ್ದಂಡೆ ಯೋಜನೆಯನ್ನು ರಾಷ್ಟ್ರೀಯ ಯೋಜನೆಯೆಂದು ಘೋಷಿಸಬೇಕು ಎಂದು ರೈತ ಮುಖಂಡರು ಜಂಟಿಯಾಗಿ ಹಕ್ಕೊತ್ತಾಯ ಮಂಡಿಸಿದರು.
ರೈತ ಮುಖಂಡರಾದ ಶ್ರೀವಿಜಯ ಪೂಜಾರ, ಶಂಕರ ಹಿರೇಗೌಡರ, ಶಾರದಾ ಕಾಳಮ್ಮನವರ, ಸುಜಾತ ಬಂಡಿವಡ್ಡರ, ಗುಡುಮಾ ವಾಲೀಕಾರ, ಮಂಜುಳಾ ಹನುಮದ, ನಿಂಗವ್ವ ಸಿಂಗಾನವರ, ಆರ್.ಕೆ. ಕಲಬುರಗಿ, ಬಸವರಾಜ ಗೋನಾಳ ಮುಂತಾದವರು ಇದ್ದರು.