ಕನ್ನಡಪ್ರಭ ವಾರ್ತೆ ವಿಧಾನಸಭೆ
ಪ್ರಶ್ನೋತ್ತರ ಕಲಾಪದಲ್ಲಿ ಬಿಜೆಪಿಯ ಸಿದ್ದು ಸವದಿ ಕೇಳಿದ ಪ್ರಶ್ನೆಗೆ ಉಪಮುಖ್ಯಮಂತ್ರಿ ಡಿ.ಕೆ. ಶಿವಕುಮಾರ್ ಪರವಾಗಿ ಉತ್ತರಿಸಿದ ಕೃಷ್ಣ ಬೈರೇಗೌಡ, ಹಿಪ್ಪರಗಿ ಬ್ಯಾರೇಜ್‌ನ ಗೇಟ್ ನಂ. 22ರ 2ನೇ ಎಲಿಮೆಂಟ್ ಜ.6ರಂದು ನೀರಿನ ಒತ್ತಡಕ್ಕೆ ಕಿತ್ತು ಹೋಗಿದೆ. ನಂತರ ಜ. 9 ರಂದು ತಾತ್ಕಾಲಿಕವಾಗಿ ತುರ್ತು ತಡೆ ಗೇಟ್ ಅನ್ನು ಅಳವಡಿಸಲಾಗಿದೆ. ಅದರ ಜತೆಗೆ ಜ.12ರಂದು ಹೊಸ ಗೇಟ್ ಅಳವಡಿಕೆಗೆ 1.40 ಕೋಟಿ ರು. ಅನುಮೋದನೆ ನೀಡಿ, ಜ. 17ರಂದು ಟೆಂಡರ್ ಪ್ರಕ್ರಿಯೆಗೆ ಚಾಲನೆ ನೀಡಲಾಗಿದೆ. ಇನ್ನುಳಿದ ಗೇಟುಗಳನ್ನು ಅಣೆಕಟ್ಟು ಪುನಶ್ಚೇತನ ಮತ್ತು ಅಭಿವೃದ್ಧಿ ಯೋಜನೆ ಅಡಿಯಲ್ಲಿ ಕೈಗೆತ್ತಿಕೊಳ್ಳಲು ನಿರ್ಧರಿಸಲಾಗಿದ್ದು, ಅದಕ್ಕೆ ಸಂಬಂಧಿಸಿದ ತಾಂತ್ರಿಕ ವರದಿಯನ್ನು ಕೇಂದ್ರ ಸರ್ಕಾರಕ್ಕೆ ಕಳುಹಿಸಲಾಗಿದೆ ಎಂದು ವಿವರಿಸಿದರು.
ಈ ವೇಳೆ ಮಧ್ಯಪ್ರವೇಶಿಸಿದ ಕಾಂಗ್ರೆಸ್‌ನ ರಾಜು ಕಾಗೆ, ಗೇಟ್ ಮುರಿದ ಪರಿಣಾಮ ಹೆಚ್ಚಿನ ನೀರು ಪೋಲಾಗಿದೆ. ಇದರ ಬಗ್ಗೆ ಸರ್ಕಾರ ಹೆಚ್ಚಿನ ಗಮನ ಹರಿಸಬೇಕು. ಜತೆಗೆ ಮಹಾರಾಷ್ಟ್ರದಿಂದ ಬರಬೇಕಿರುವ 2 ಟಿಎಂಸಿ ನೀರನ್ನು ಕೃಷ್ಣಾ ನದಿಗೆ ಹರಿಸಿ ನಂತರ ಬ್ಯಾರೇಜ್‌ಗೆ ಹರಿಬಿಡಬೇಕು ಎಂದು ಕೋರಿದರು.ಅದಕ್ಕೆ ಪ್ರತಿಕ್ರಿಯಿಸಿದ ಕೃಷ್ಣ ಬೈರೇಗೌಡ, ಸದ್ಯ ಬ್ಯಾರೇಜ್‌ನಲ್ಲಿ 3.90 ಟಿಎಂಸಿ ನೀರು ಸಂಗ್ರಹವಿದೆ. ಅದರ ಜತೆಗೆ ಪ್ರಸ್ತುತ 550 ಕ್ಯೂಸೆಕ್ಸ್ ಒಳ ಹರಿವಿದೆ. ಹೀಗಾಗಿ ಈ ಬಾರಿಯ ಬೇಸಿಗೆಗೆ ನೀರಿನ ಸಮಸ್ಯೆಯಾಗುವುದಿಲ್ಲ. ಜತೆಗೆ ಜ. 9ರಂದು ಬಾಗಲಕೋಟೆ ಜಿಲ್ಲಾಧಿಕಾರಿಗಳ ಅಧ್ಯಕ್ಷತೆಯಲ್ಲಿ ನಡೆದ ಜಿಲ್ಲಾ ವಿಪತ್ತು ನಿರ್ವಹಣಾ ಪ್ರಾಧಿಕಾರದ ಸಭೆಯಲ್ಲಿ ಬೇಸಿಗೆ ಮುಗಿಯುವವರೆಗೆ ಬ್ಯಾರೇಜ್‌ನಲ್ಲಿ ಸಂಗ್ರಹವಾಗಿರುವ ನೀರನ್ನು ಸಮರ್ಪಕ ಮತ್ತು ನಿಯಂತ್ರಣ ಬಳಕೆಗೆ ಸೂಚಿಸಲಾಗಿದೆ. ಒಂದು ವೇಳೆ ನೀರಿನ ಕೊರತೆ ಉಂಟಾದಲ್ಲಿ ಮಹಾರಾಷ್ಟ್ರದ ವರಣಾ ಅಥವಾ ಕೋಯ್ನಾ ಜಲಾಶಯಗಳಿಂದ ನೀರನ್ನು ಕೃಷ್ಣಾ ನದಿ ಪಾತ್ರದಲ್ಲಿನ ಹಿಪ್ಪರಗಿ ಬ್ಯಾರೇಜಿಗೆ ಹರಿಸುವಂತೆ ಮುಖ್ಯಮಂತ್ರಿ ಅವರಿಂದ ಪತ್ರ ಬರೆಸಲಾಗುವುದು ಅದರೊಂದಿಗೆ ಮುಖ್ಯಮಂತ್ರಿ ಅವರೇ ಖುದ್ದಾಗಿ ಮಾತನಾಡುವಂತೆಯೂ ನೋಡಿಕೊಳ್ಳಲಾಗುವುದು ಎಂದು ಸ್ಪಷ್ಟಪಡಿಸಿದರು.