ಬಿಡಾಡಿ ದನಗಳಿಂದ ನಿತ್ಯ ಅಪಘಾತ-ಗ್ರಾಮಸಭೆಯಲ್ಲಿ ಚರ್ಚೆ
ಇಲ್ಲಿನ ಗ್ರಾಪಂ ಗ್ರಾಮ ಸಭೆ ಕಡಿಮೆ ಸಂಖ್ಯೆಯ ಸಾರ್ವಜನಿಕರ ಉಪಸ್ಥಿತಿಯಲ್ಲಿ ನಡೆಯಿತು.
ಬಿಡಾಡಿ ದನಗಳ ದಾಳಿಯಿಂದ ಓರ್ವ ಪ್ರಾಣ ಕಳೆದುಕೊಂಡಿದ್ದು, ನಿತ್ಯ ದನಗಳಿಂದ ಅಪಘಾತ ಮತ್ತಿತರ ಘಟನೆಯ ಬಗ್ಗೆ ಗ್ರಾಪಂ ಸದಸ್ಯ ಶೇಖರ ನಾಯ್ಕ ಪ್ರಸ್ತಾಪಿಸಿದರು. ಪಿ.ಐ. ಶ್ರೀಧರ ಎಸ್.ಆರ್. ಮಾತನಾಡಿ, ಬೀದಿಯಲ್ಲಿರುವ ದನಗಳಿಗೆ ಕಿವಿ ಟ್ಯಾಗ್ ಇದ್ದರೆ ಅಂತಹ ಜಾನುವಾರುಗಳ ಮಾಲೀಕರಿಗೆ ತೆಗೆದುಕೊಂಡು ಹೋಗಲು ಸೂಚಿಸಿ, ಇಲ್ಲವಾದಲ್ಲಿ ಬೀದಿ ದನ ಹಾಗೂ ಮಾಲೀಕರು ಸಿಗದ ದನಗಳನ್ನು ಒಟ್ಟಿಗೆ ಸರ್ಕಾರಿ ಗೋಶಾಲೆಗೆ ಸೇರಿಸುವ ಕಾರ್ಯವಾಗಲಿ. ಇದಕ್ಕೆ ಪೊಲೀಸ್ ಇಲಾಖೆ ಸಹಕಾರ ನೀಡುತ್ತದೆ. ಇದರಿಂದ ದನಕಳ್ಳತನ ಹಾಗೂ ಅಪಘಾತಗಳು ಎರಡು ತಪ್ಪುತ್ತದೆ ಎಂದರು. ಇದರಂತೆ ಕ್ರಮ ಜರುಗಿಸಲು ಸಭೆ ನಿರ್ಣಯಿಸಿತು.ವಾಹನ ದಟ್ಟಣೆ ತಡೆಯಲು ಪ್ರಸ್ತುತ ಅನುಸರಿಸುತ್ತಿರುವ ರಥಬೀದಿಯ ಬಸ್ ನಿಲ್ದಾಣ ಕ್ರಾಸ್‌ನವರೆಗೆ ಮಾತ್ರ ವಾಹನ ಸಂಚಾರಕ್ಕೆ ಅವಕಾಶ ನೀಡಿ ಮಹಾಗಣಪತಿ, ಮಹಾಬಲೇಶ್ವರ ಮಂದಿರದಿಂದ ಮುಖ್ಯ ಕಡಲತೀರದ ವರೆಗೆ ವಾಹನ ಸಂಚಾರ ನಿಷೇಧಿಸಿದ್ದನ್ನು ಮುಂದುವರಿಸುವಂತೆ ಆಗ್ರಹಿಸಲಾಯಿತು. ಇದರಂತೆ ಏಕಮುಖ ಸಂಚಾರ ನಿಯಮ ಮತ್ತಷ್ಟು ಕಠಿಣಗೊಳಿಸುವಂತೆ ವಿನಂತಿಸಲಾಯಿತು.
ಸಂಚಾರ ವಾಹನ ದಟ್ಟಣೆಗೆ ತೆಗೆದುಕೊಂಡ ಅಗತ್ಯ ಕ್ರಮ ವಿವರಿಸಿದ ಪಿಐ, ಇದಕ್ಕೆ ಗ್ರಾಪಂ ಹಾಗೂ ಸಾರ್ವಜನಿಕರ ಸಹಕಾರ ಕೋರಿದರು.ಗ್ರಾಪಂ ಸದಸ್ಯರಾದ ಗಣಪತಿ ನಾಯ್ಕ, ರವಿಕಿರಣ ನಾಯ್ಕ, ಪ್ರಭಾಕರ ಪ್ರಸಾದ, ಸುಜಯ ಶೆಟ್ಟಿ, ಮಂಜುನಾಥ ಜನ್ನು, ರವಿಕಿರಣ ನಾಯ್ಕ, ಸತೀಶ ದೇಶಭಂಡಾರಿ, ಮೋಹನ ಮೂಡಂಗಿ, ಊರ ನಾಗರಿಕರಾದ ವಿನಾಯಕ ಸಭಾಹಿತ, ನಾಗೇಶ ಸೂರಿ, ನಾಗೇಶ ಗೌಡ ಮತ್ತಿತರರು ಹಲವು ಸಮಸ್ಯೆಗಳ ಬಗ್ಗೆ ವಿವರಿಸಿ ಕ್ರಮಕ್ಕೆ ಆಗ್ರಹಿಸಿದರು.
ಸಭೆಯಲ್ಲಿ ಗ್ರಾಪಂ ಅಧ್ಯಕ್ಷೆ ಸುಮನಾ ಗೌಡ, ಉಪತಹಸೀಲ್ದಾರ್ ಟಿ.ಎಸ್. ಗಾಣಿಗೇರ, ನೋಡೆಲ್ ಅಧಿಕಾರಿ ನಿತ್ಯಾನಂದ ಭಂಡಾರಿ ಇತರರಿದ್ದರು. ಗ್ರಾಪಂ ಅಭಿವೃದ್ಧಿ ಅಧಿಕಾರಿ ವಿ.ಎ. ಪಟಗಾರ ನಿರ್ವಹಿಸಿದರು. ಕಾರ್ಯದರ್ಶಿ ಮಂಜುನಾಥ ಮತ್ತು ಸಿಬ್ಬಂದಿ ಸಹಕರಿಸಿದರು.ಅಂಗನವಾಡಿ, ಆಶಾ ಕಾರ್ಯಕರ್ತೆಯರು ಹಾಗೂ ವಿವಿಧ ಇಲಾಖೆಯವರು ಹಾಗೂ ಅತಿ ಕಡಿಮೆ ಸಂಖ್ಯೆಯಲ್ಲಿ ಸಾರ್ವಜನಿಕರು ಪಾಲ್ಗೊಂಡಿದ್ದರು.